‘ವಿಷ್ಣು ಸಹಸ್ರನಾಮ’ ಕವನ – ಸಂಧ್ಯಾ ಟಿ

ಸಹಸ್ರನಾಮ ಪಠಣದಿಂದ ಹೊರ ಬಂದ ಶಬ್ದಗಳ ಕಂಪನದಿಂದ ದೇಹದ ಒಳಗೂ ಹೊರಗೂ ಸಾತ್ವಿಕ ಶಕ್ತಿ ಜಾಗ್ರತೆಗೊಳ್ಳುವದರಿಂದ ಪಾಪ ಪರಿಹಾರವಾಗಿ ನಮ್ಮಿಂದ ಅಧರ್ಮ ನಡೆಯದಂತೆ ರಕ್ಷಿಸುತ್ತದೆ.ನಮ್ಮಕರ್ಮಗಳಿಗನುಸಾರವಾಗಿಯೆ ನಮಗೆ ಸಂಸಾರ ಬಂಧನ ಬರುವುದು. ಕವಿ ಸಂಧ್ಯಾ ಟಿ ಅವರು ‘ವಿಷ್ಣು ಸಹಸ್ರನಾಮ’ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಓಂ ಶ್ರೀ ಪರಮಾತ್ಮನೇ ನಮಃ
ಶ್ರೀ ಹರಿ:ಓಂ
ಶ್ರೀ ಗುರುಭ್ಯೋ ನಮಃ

ನಮ್ಮ ಮನೆಗೆ ಲೈಟ ಬೇಕೆಂದರೆ ವಿದ್ಯುತ್ತ ಆಫೀಸಿನಿಂದ ರಸ್ತೆಯ ಕಂಬಕ್ಕೆ ಆ ಕಂಬದಿಂದ ಮನೆಗೆ ವಿದ್ಯುತ್ ತಂತಿಗಳನ್ನು ಜೋಡಿಸಬೇಕು.ನಂತರ ಬಲ್ಬ ಜೋಡಿಸಬೇಕು.ಮುಖ್ಯ ಸ್ವಿಚ್ಚನ್ನು ಪ್ರಾರಂಭಿಸಬೇಕು. ನಂತರ ನಮಗೆ ಬೇಕಾದಲ್ಲಿಯ ಸ್ವಿಚ್ಚನ್ನು ಒತ್ತಿದರೆ ಬೆಳಕು ಬರುವುದು. ಆದರೆ ಇಷ್ಟಕ್ಕೆ ಸುಮ್ಮನೆ ಕೂಡುವುದಿಲ್ಲ.ಪ್ರತಿ ತಿಂಗಳು ನಾವು ಉಪಯೋಗಿಸಿದ ಬಿಲ್ಲನ್ನು ಕಟ್ಟಲೇ ಬೇಕು. ಇಲ್ಲದಿದ್ದರೆ ಕರೆಂಟ ಕಟ್ ಮನೆ ಕತ್ತಲು.ಇದು ಲೌಕಿಕ ವ್ಯವಹಾರ. ಅದರಂತೆ ಪರಮಾತ್ಮನು ನಮಗೆ ಎಪ್ಪತ್ತೆರಡು ಸಾವಿರ ನಾಡಿಗಳಿಂದ ಒಡಗೂಡಿ ಪಂಚ ಭೂತ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ಪಂಚ ತನ್ಮಾತ್ರ ಹಾಗೂ ಒಂದು ವಿಶಿಷ್ಟವಾದ ಮನಸ್ಸು ಎಂಬ ಇಂದ್ರಿಯನ್ನು ಕೊಟ್ಟು ಚೇತನವನ್ನು ತುಂಬಿ ಈ ಸಾಧನ ಶರೀರವನ್ನು ಭೂಮಿಗೆ ಕಳಿಸಿರುವನು. ಅಲ್ಲದೆ ನಮ್ಮ ಶರೀರ ಬೆಳವಣಿಗೆಗೆ ಸಹಾಯವಾಗಲೆಂದು ಪಂಚ ಭೂತಗಳಿಂದ ಪ್ರಕೃತಿಯನ್ನು ಸೃಷ್ಟಿಸಿದ್ದಾನೆ.ನಮ್ಮಿಂದ ಪ್ರಕೃತಿಗೆ, ಪರಮಾತ್ಮನಿಗೆ ಯಾವ ಲಾಭವೂ ಇಲ್ಲ.

ಅವರಿಂದಲೆ ನಾವು ಮೋಕ್ಷಾನಂದವನ್ನು ಹೊಂದಬೇಕು. ಕಾರಣ ಅಧ್ಯಾತ್ಮಿಕವಾಗಿ ಅವರಿಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಇವತ್ತು ನಾವು ಆಹಾರ, ನೀರು, ಚಲನೆ, ಆರೋಗ್ಯ ಎಲ್ಲವೂ ಪರಮಾತ್ಮನಿಂದ.ಅದಕ್ಕೆ ವಿಷ್ಣು ಸಹಸ್ರನಾಮ ಪಠಣ ಮಾಡಬೇಕು. ವಿಷ್ಣು ಸಹಸ್ರನಾಮದಲ್ಲಿ ಮೊದಲನೆಯ ಶ್ಲೋಕದಲ್ಲಿ “ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭು: “ಆರು ಗುಣಗಳಿಂದ ವಿಶ್ವವನ್ನು ಸೃಷ್ಟಿಸಿ, ಸತ್ವ ಗುಣದ ಮಹತ್ತತ್ವಗಳಿಂದ ಭೂತಗಳಿಗೆ ಆಧಾರವಾಗಿ ಅವರನ್ನು ಸಲಹುವನು. ಯಜ್ಞಭೃತ್, ಯಜ್ಞಗುಹ್ಯ ಎಂಬ ಶಬ್ದಗಳಿವೆ.

ಫೋಟೋ ಕೃಪೆ : google

ನಾವು ಯಾವುದೇ ಕಾರ್ಯ ಮಾಡಿದರೂ ಫಲದ ಆಶೆ ಇಲ್ಲದೆ ಕಾರಣ ಯೋಚಿಸಿ ಕಾರ್ಯ ಮಾಡಿದರೆ ಎಲ್ಲರಿಗೂ ಆಧಾರವಾಗಿರುವ ವಿಷ್ಣು ಅದನ್ನು ಯಜ್ಞರೂಪವಾಗಿ ಸ್ವೀಕರಿಸಿ ರಕ್ಷಿಸುವನು.ಬ್ರಹ್ಮಕೆ ಯಜ್ಞ ಗುಹ್ಯ ಎನ್ನುವರು.ಜ್ಞಾನಯಜ್ಞಗಳ ರಹಸ್ಯವೆ ಯಜ್ಞಗುಹ್ಯ.ಸತ್ವಜೀವವಿತ್ತ ಮೇಲೆ ಬ್ರಹ್ಮದೇವರಾದರು. ಭಕ್ತಿ ಸತ್ವದಿಂದ ಚೇತನಸಿಕ್ಕ ಮೇಲೆ ವಾಯುದೇವರೆಂದೆನಿಸಿದರು. ಜ್ಞಾನ ಯಜ್ಞಕ್ಕೆ ಸಮಾನರು.ಜ್ಞಾನ ಯಜ್ಞಕ್ಕೆ ಮನಸ್ಸು ಬೇಕು. ಅಂದಮೇಲೆ ಮನೋಭಿಮಾನಿಯಾದ ಶಿವನು ಬೇಕು. ಮೂರು ಶಕ್ತಿ ಒಂದುಗೂಡಿದ ನಾಮವೆ ಕೇಶವ.ಶಿವನೆಂಬ ಸತ್ವ ಶಕ್ತಿಯಿಂದ ಮನಸ್ಸು ಶುದ್ಧ ಮಾಡಿಕೂಂಡು ಮಾಡುವ ಯಜ್ಞವೇ ವಿಷ್ಣು ಸಹಸ್ರನಾಮ ಪಠಣ. ಬ್ರಹ್ಮಾದಿದೇವತೆಗಳ ಸಹಿತ ಇಂದ್ರಿಯಾಭಿಮಾನಿಗಳಿಂದ ಒಡಗೂಡಿ ಶರೀರದಲ್ಲಿ ನೆಲೆಸಿ ಸಲಹುವನೆಂದು ಅನುಸಂಧಾನ ಪೂರ್ವಕ ವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಮಾಡಿ ಜ್ಞಾನವನ್ನು ಜಾಗ್ರತಗೊಳಿಸಬೇಕು. ಇದರಲ್ಲಿ ಪರಿಪೂರ್ಣತೆ ತುಂಬಿರುವುದರಿಂದ ಪಠಿಸಲು ಯಾವ ನಿರ್ಭಂಧನೆ ಇಲ್ಲ.

ಸಹಸ್ರನಾಮ ಪಠಣದಿಂದ ಹೊರ ಬಂದ ಶಬ್ದಗಳ ಕಂಪನದಿಂದ ದೇಹದ ಒಳಗೂ ಹೊರಗೂ ಸಾತ್ವಿಕ ಶಕ್ತಿ ಜಾಗ್ರತೆಗೊಳ್ಳುವದರಿಂದ ಪಾಪ ಪರಿಹಾರವಾಗಿ ನಮ್ಮಿಂದ ಅಧರ್ಮ ನಡೆಯದಂತೆ ರಕ್ಷಿಸುತ್ತದೆ.ನಮ್ಮಕರ್ಮಗಳಿಗನುಸಾರವಾಗಿಯೆ ನಮಗೆ ಸಂಸಾರ ಬಂಧನ ಬರುವುದು.

ನಮ್ಮ ಆತ್ಮವನ್ನು ಪಾಪದಿಂದ ಮುಕ್ತಿ ಗೊಳಿಸುವ ಸಹಸ್ರಮೂರ್ತಿಯಾದ ಪುರುಷೋತ್ತಮನ ಸಹಸ್ರನಾಮವು ಮಹಾಭಾರತದ ಅನುಶಾಸನ ಪರ್ವದಲ್ಲಿ ಅದು ಶ್ರೀ ಕೃಷ್ಣನ ಎದುರಿನಲ್ಲಿ ಇಚ್ಛಾ ಮರಣದ ವರವನ್ನು ಪಡೆದ ಭೀಷ್ಮಾಚಾರ್ಯರು ಧರ್ಮರಾಜನಿಗೆ ಉಪದೇಶ ವಾಗಿ ಈ ಸ್ತೋತ್ರವನ್ನು ಹೇಳಿದರು.ಇದರ ವಿಶಿಷ್ಟವಾದ ವೈಶಿಷ್ಟ್ಯ ವೇನೆಂದರೆ ಯುದ್ಧ ಮುಗಿದು ಧರ್ಮರಾಜನು ಸಿಂಹಾಸನವನ್ನು ಅಲಂಕರಿಸುವ ಯಾಗದಸಮಯ ಶ್ರೀ ಕೃಷ್ಣನು ಧರ್ಮರಾಜನಿಗೆ ಪಿತಾಮಹರಾದ ಭೀಷ್ಮರ ಉಪದೇಶ ಹಾಗೂ ಅನುಗ್ರಹ ಪಡೆದು ಮುಂದಿನ ಕಾರ್ಯ ಮಾಡು.ಅಂದರೆ ನಿಮಗೂ ರಾಜ್ಯಕ್ಕೂ,ಪ್ರಜೆಗಳಿಗೂ ಕ್ಷ್ಮೇಮವೆಂದು ತಿಳಿಸುವನು. ಎಲ್ಲ ತೃಣ ಜೀವಿಗಳ, ಬ್ರಹ್ಮಾದಿ ದೇವತೆಗಳ ಸಕಲರ ಪಿತಾಮಹ ತಾನಿರುವಾಗ ಭೀಷ್ಮರಲ್ಲಿ ಕಳಿಸುವ ಸಂದೇಶದಲ್ಲಿ ಸೂಕ್ಷ್ಮ ಭಕ್ತಿ ರಹಸ್ಯ ಅಡಗಿದೆ.ಭೀಷ್ಮರಿಗೆ ಮೋಕ್ಷಾನಂದ, ಧರ್ಮರಾಜನಿಗೆ ಧರ್ಮ ಪರಿಪಾಲನೆಯ ಸಿದ್ಧಿ ಸಿಗುವುದು.ಭೀಷ್ಮಾಚಾರ್ಯರು ಮರಣವನ್ನೆ ಗೆದ್ದವರು.ಹೊರಗಿನ ಒಳಗಿನ ಸಮಸ್ತ ಶತ್ರುಗಳಿಗೂ ಭಯಂಕರೂ ಧರ್ಮ ಗೆದ್ದವರು ಆಗಿದ್ದುದರಿಂದ ಧರ್ಮರಾಜನಿಗೆ ಪಿತಾಮಹರಿಂದ ಉಪದೇಶ ಕೊಡಿಸಿದನು ಶ್ರೀ ಕೃಷ್ಣನು.

ಧರ್ಮರಾಜನು ಕೇಳಿದ ಪ್ರಶ್ನೆಗಳು :

೧) ಲೋಕದಲ್ಲಿ ಅದ್ವಿತೀಯನಾದ ದೇವರು ಯಾರು?
೨) ಯಾವ ಪಾರಾಯಣ ಶ್ರೇಷ್ಠ?
೩) ಮಾನವನಿಗೆ ಶುಭವಾಗಲು ಯಾರನ್ನು ಸ್ತುತಿಸಬೇಕು?
೪) ಯಾವ ಕರ್ಮದಿಂದ ಅರ್ಚಿಸಬೇಕು?
೫)ಸರ್ವ ಧರ್ಮಗಳಲ್ಲಿ ಯಾವ ಧರ್ಮ ಶ್ರೇಷ್ಠ?
೬)ಯಾವುದನ್ನು ಜಪಿಸಿದರೆ ಜನ್ಮ ಸಂಸಾರದಿಂದ ಮುಕ್ತಿ ಹೊಂದುವರು?

ಈ ಆರು ಪ್ರಶ್ನೆಗಳಿಗೆ ಉತ್ತರವಾಗಿ ಶ್ರೀ ವಿಷ್ಣು ಸಹಸ್ರನಾಮಗಳು ಹೊರಬಂದು ಭೀಷ್ಮಾಚಾರ್ಯರಿಗೆ ಮುಕ್ತಿ, ಪಾಂಡವರಿಗೆ ಜ್ಞಾನ ಶಕ್ತಿ.

ಸರ್ವೋತ್ತಮನಾದ ಪರಮಾತ್ಮನ ವ್ಯಾಪ್ತಿ, ಅದ್ಭುತ ಮಹಿಮೆ ಅಪರಿಮಿತ.ವಿಶೇಷಣಗಳು ಲಕ್ಷಣಗಳು ಅನಂತ,. ಪರಮಾತ್ಮನ ಗುಣ ಮಹಿಮೆಗಳ ಕೊನೆಯನ್ನು ಶ್ರೀ ಮಹಾಲಕ್ಷ್ಮಿ ಸಹಿತ ಬ್ರಹ್ಮಾದಿ ಎಲ್ಲ ದೇವತೆಗಳು ಅರಿಯಲಾರರು ಅಂದ ಮೇಲೆ ನಮ್ಮಂಥ ಹುಲುಮಾನವರಿಗೆ ತಿಳಿಯುವದು ಅಸಾಧ್ಯ.ಕಾರಣ ನಾಮಸ್ಮರಯಲ್ಲಿ ಮಿಂದು ಧನ್ಯರಾಗೋಣ.

“ವಿಶ್ವೇಶ್ವರಮಜಂ ದೇವಂ ಜಗತ:ಪ್ರಭುಮವ್ಯಯಮ್/
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್”
//ನ ತೇ ಯಾಂತಿ ಪರಾಭವಮ್ ಓಂ ನಮ ಇತಿ//

ಕವನ
ವಜ್ರ ಸಿಕ್ಕಿದೆ ಎನಗೆ ವಜ್ರ ಸಿಕ್ಕಿದೆ
ವಿಷ್ಣು ನಾಮವೆಂಬ ಪುಣ್ಯ ವಜ್ರ ಸಿಕ್ಕಿದೆ

ಹೊನ್ನಿನಂತೆ ಹೊಳೆವ ತಾ ಶ್ರೀ ನಿಧಿ
ಬೆನ್ನು ಬಿಡದೆ ಕಾವ ನಾ ದಯಾನಿಧಿ
ಏನು ನಾಮದಾ ಮಹಿಮೆ ಗುಣನಿಧಿ
ಕಾಣು ಮನವೆ ನೀ ಈ ಜ್ಞಾನ ನಿಧಿ

ಅಕ್ಷರ ಎಂದು ನೀ ತಿಳಿಯ ಬೇಡ
ಸುಕ್ಷರದ ರಕ್ಷಣೆ ನೀ ಮರೆಯಬೇಡ
ಸೃಷ್ಟಿ ಸ್ಥಿತಿ ಲಯಕೆ ಈ ನಾಮ ಕಾರಣ
ಕಷ್ಟವೇಕೆ ಹಿಡಿ ನೀ ನಾಮ ಸ್ಮರಣ

ನಾಮ ಸುರಧೇನುವಿರಲು ಚಿಂತೆ ಏತಕೆ
ನಿಷ್ಕಾಮದಿಂದ ಭಜಿಸು ನೀ ತಡವೇತಕೆ
ಯಾರ ಪುಣ್ಯವೋ ನನಗೆ ನಾಮ ಸಿಕ್ಕಿದೆ
ಕರವ ಪಿಡಿ ಶ್ರೀ ಹರಿ ಮನವ ಕಲಕದೆ


  • ಸಂಧ್ಯಾ ಟಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading