ಶೃತಿ ಮಹಾದೇವ ಹೆಗ್ಗೆ ಅವರ ‘ಶೃತಿಯ ಗಜಲ್’ ಕೃತಿಯಲ್ಲಿ ಬರುವ ಷೇರ್ ಗಳು ಬರೀ ಬಡತನ, ಬಡವನ ಜೀವನ, ಅವ್ವನ ಬಗ್ಗೆ ಮಾತ್ರವಾಗಿರದೇ, ಪ್ರೀತಿ ಪ್ರೇಮ, ವಿರಹದ ಸಾಲುಗಳು ಕೂಡ ಈ ಕೃತಿಯಲ್ಲಿ ಅಡಕವಾಗಿವೆ. ಈ ಕೃತಿ ಕುರಿತು ನಾರಾಯಣಸ್ವಾಮಿ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಶೃತಿ ಗಜಲ್
ಲೇಖಕರು: ಶೃತಿ ಮಹಾದೇವ ಹೆಗ್ಗೆ
ಪ್ರಕಾಶನ: ಮೈಲಾರಿ ಪ್ರಕಾಶನ ಯಕ್ಸಂಬಾ
ಬೆಲೆ: ೧೨೦ ರೂಪಾಯಿಗಳು
“ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ” – ಡಾ. ಬಿ ಆರ್ ಅಂಬೇಡ್ಕರ್
ಒಂದು ಕಾಲದಲ್ಲಿ ಅಕ್ಷರವೇ ಕಾಣದ ಮಹಿಳೆ, ಇಂದು ಸಂವಿಧಾನ ನೀಡಿದ ವಿಶೇಷ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡು, ಅಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿ ತನ್ನ ಜ್ಞಾನ, ಪ್ರತಿಭೆಯಿಂದ ತಮ್ಮ ಹೆಸರನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಪಾಶ್ಚಿಮಾತ್ಯ ಕಾವ್ಯ ಗಜಲ್ ಕ್ಷೇತ್ರಲ್ಲೂ, ಗಜಲ್ ಕವಯತ್ರಿಯರಾಗಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಕನ್ನಡದ ಗಜಲ್ ಕಾವ್ಯಲೋಕಕ್ಕೆ ಶ್ರೀಮತಿ ಶೃತಿ ಮಹದೇವ ಹೆಗ್ಗೆ ಇವರು ” ಶೃತಿಯ ಗಜಲ್” ಎಂಬ ಗಜಲ್ ಕೃತಿಯ ಮೂಲಕ ಕನ್ನಡದ ಗಜಲ್ ಲೋಕಕ್ಕೆ ಪರಿಚಯವಾಗುತ್ತಿದ್ದಾರೆ.
“ನನ್ನ ಪಾಲಿಗೆ ಮುಳ್ಳುಗಳು ಬರಲೇ ಬೇಕಿದ್ದವು
ಏಕೆಂದರೆ ನಾನು ಗುಲಾಬಿಯಂತಹ ಸಂಗಾತಿಯನ್ನು
ಆಯ್ದುಕೊಂಡೆ”
ಗುಲ್ಜಾರ್ (ಶೃತಿ ಗಜಲ್ ಕೃತಿಯ ಮನ್ನುಡಿಯಲ್ಲಿನ ಬರಹ) ಇಂತಹ ಅದ್ಭುತ ಸಾಲುಗಳು ಗಮನ ಸೆಳೆದದ್ದು ಶ್ರೀಮತಿ ಶೃತಿ ಮಹದೇವ ಹೆಗ್ಗೆ ಇವರು ಬರೆದಂತಹ ಶೃತಿ ಗಜಲ್ ಕೃತಿಯ ಮುನ್ನುಡಿಯಲ್ಲಿ….
ಶ್ರೀಮತಿ ಶೃತಿ ಮಹದೇವ ಹೆಗ್ಗೆ ಇವರು ಬೆಳಗಾವಿ ಜಿಲ್ಲೆಯ ಯಕ್ಸಂಬಾ ಎನ್ನುವ ಗ್ರಾಮದಲ್ಲಿ ಹುಟ್ಟಿ, ಫ್ರೌಡಶಾಲೆಯ ಶಿಕ್ಷಣ ಓದುವಾಗಲೇ ಮದುವೆಯಾದರು ಪತಿಯ ಮತ್ತು ಕುಟುಂಬದವರ ಸಹಕಾರದಿಂದ ವಿದ್ಯಾಭ್ಯಾಸವನ್ನು ಮುಂದುವರೆಸಿ, ಬಿ ಕಾಂ ಪದವಿಯನ್ನು ಪಡೆದರು. ಬಾಲ್ಯದ ದಿನಗಳಿಂದ ಆಸಕ್ತಿ ಹೊಂದಿದ್ದ ಇವರು ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತಷ್ಟು ಸಾಹಿತ್ಯದ ಒಲವನ್ನು ಬೆಳೆಸಿಕೊಂಡು ಚೊಚ್ಚಲ ಸಂಕಲನವಾಗಿ “ಬಣ್ಣದ ಗರಿ” ಕವನಸಂಕಲನ ಲೋಕಾರ್ಪಣೆ ಮಾಡಿ ಕವಯಿತ್ರಿಯಾಗಿ ಗುರುತಿಸಿಕೊಂಡರು. ಈಗ ಪಾಶ್ಚಿಮಾತ್ಯ ಕಾವ್ಯ ಗಜಲ್ ಕಾವ್ಯದ ಮೋಹದ ಸೆಳೆತಕ್ಕೆ ಒಳಗಾಗಿ ” ಶೃತಿಯ ಗಜಲ್ ” ಗಜಲ್ ಕೃತಿಯನ್ನು ಹೊರತಂದಿದ್ದಾರೆ.

ಇವರ ಗಜಲ್ ಕೃತಿಯಲ್ಲಿನ ಷೇರ್ ಗಳನ್ನು ಒಮ್ಮೆ ಅವಲೋಕಿಸಿದಾಗ ಅವು ಸುಂದರ ಭಾವನೆಗಳ ಸಂಗಮವಾಗಿದೆ. ಬಹಳಷ್ಟು ಸಾಲುಗಳಲ್ಲಿ ಬಡತನದ ನೋವಿದೆ, ಭಕ್ತಿಯ ಆರಾಧನೆಯ ಮಿಳಿತವಿದೆ, ಒಲವಿನ ಮಮತೆಯಿದೆ, ಪ್ರೀತಿ, ಮತ್ತು ವಿರಹದ ಮಿಡಿತವಿದೆ,
ಈ ಗಜಲ್ ಸಂಕಲನ ಒಂದಷ್ಟು ಷೇರ್ ಗಳ ನೋಡುವುದಾದರೆ.
ಹಸಿದ ಹೊಟ್ಟೆಗೆ ಮಮತೆಯ ಗಂಜಿ ಬಡಿಸುವಳು ಅವ್ವ
ತನ್ನ ಉದರದ ಹಸಿವಿನ ನೋವನು ಮರೆಸುವಳು ಅವ್ವ
ಕವನ ಸಂಕಲನವಿರಲಿ, ಗಜಲ್ ಕಾವ್ಯವಿರಲಿ ಯಾವುದೇ ತರಹದ ಕೃತಿಯಲ್ಲಿ ಅಮ್ಮನಿಗೆ ವಿಶೇಷವಾದ ಜಾಗವಿರುತ್ತದೆ. ಅಮ್ಮನ ವಿಷಯದಲ್ಲಿ ಶ್ರೀಮಂತ ಬಡವ ಇಲ್ಲವಾದರೂ ಕೂಡ ಕಡುಬಡತನದಲ್ಲಿ ಬೆಳೆದ ಮಕ್ಕಳು ಅವ್ವನನ್ನು ಗ್ರಹಿಸುವ ರೀತಿ, ಅವರನ್ನು ಪ್ರೀತಿಸುವ ಆರಾಧಿಸುವ ರೀತಿ ನನಗೆ ವಿಶೇಷವಾಗಿರುತ್ತದೆ. ದಿನವೆಲ್ಲಾ ಬೇರೆಯವರ ಹೊಲದೊಳಗೋ, ತೋಟದೊಳಗೊ ದುಡಿದು ಬಂದ ಅಮ್ಮ, ದುಡಿದು ತಂದ ಹಣದಿಂದ ತನ್ನ ಮಕ್ಕಳ ಗಂಜಿಗೆ ಬೇಕಾಗುವ ಅಹಾರ ಪದಾರ್ಥಗಳನ್ನು ತಂದು ಬೇಯಿಸಿ, ಅವರ ತಟ್ಟೆಯೊಳಗೆ ಬಡಿಸಿದಾಗ ಆ ಮಕ್ಕಳು ಖುಷಿಯಿಂದ ಊಟ ಮಾಡುವ ಸನ್ನಿವೇಶವನ್ನು ಕಂಡು ಹೃದಯದೊಳಗೆ ಪಡುವ ಸಂತೋಷ ಆ ತಾಯಿಯ ಒಡಲ ಹಸಿವನ್ನು ಕೂಡ ಮರೆಸುತ್ತದೆ. ಈ ಸಾಲುಗಳನ್ನು ಅರ್ಥ ಮಾಡಿಕೊಳ್ಳಲು ಬಡತನದ ಜೀವನದಲ್ಲಿ ಬದುಕಿರುವ ಮನಸ್ಸುಗಳಿಗೆ ಮಾತ್ರ ಸಾಧ್ಯವಾಗಬಹುದು.
“ಒಪ್ಪತ್ತಿನೂಟಕೆ ದಿನದ ಏಳು ತಾಸು ದುಡಿಯಲೇಬೇಕು
ಮನೆಯ ಛಾವಣಿ ಮಳೆ ಹನಿಗೆ ಸೋರುತಿದೆ ಸಾಕಿ”
ಈ ಷೇರ್ ನಲ್ಲಿ ಬಡತನದ ಬದುಕಿನ ಜೀವನಾನುಭವಿದೆ. ಹಿಂದಿನ ಕಾಲದಲ್ಲಿ ಬಡತನ ಇಡೀ ದೇಶವನ್ನು ಅಕ್ರಮಿಸಿತ್ತು. ವಿದ್ಯೆ , ಉದ್ಯೋಗ, ಭೂಮಿ, ಹಣ ಉಳ್ಳವರ ಅಥಾವ ಉನ್ನತ ಜಾತಿಯವರ ಸ್ವತ್ತಾಗಿತ್ತು. ಬಡವರು ಸಮಯದ ಲೆಕ್ಕವಿಲ್ಲದೆ ಗಂಟೆಗಟ್ಟಲೆ ದುಡಿಯಬೇಕಾಗಿತ್ತು. ದುಡಿಯಲು ಯಾವುದೇ ಸಮಯವು ನಿಗದಿಯಾಗಿರಲಿಲ್ಲ. ಬಡವ, ಕಾರ್ಮಿಕ, ಕೂಲಿ, ಜೀತಗಾರ ಹೀಗೆ ಕರೆಯುತ್ತಾ ಪಶುಗಳಿಗೆ ಸಮಾನವಾಗಿ ಬಡವರನ್ನು ಶೋಷಣೆ ಮಾಡುತ್ತಿದ್ದರು. ಭಾರತ ದೇಶ ಸ್ವಾತಂತ್ರ್ಯವಾಗಿ ಸಂವಿಧಾನ ಜಾರಿಗೆ ಬಂದ ನಂತರ ಕಾರ್ಮಿಕರಿಗೆ ವಿಶೇಷವಾದ ಕಾನೂನುಗಳನ್ನು ತಂದು ಇಂತಿಷ್ಟೇ ಗಂಟೆಗಳು ದುಡಿಯಬೇಕು ಎನ್ನುವ ಕಾನೂನು ಜಾರಿಗೆ ಬಂತು. ಸ್ವಾತಂತ್ರ್ಯ ಬಂದು ಇಷ್ಟು ವರುಷ ಕಳೆದರೂ ಕೂಡ, ಬಡವ ಬಡವನಾಗಿಯೇ ಇದ್ದಾನೆ. ಅವನ ಬಡತನ ಕಡಿಮೆ ಆಗಲಿಲ್ಲ, ಅವನಿಗೆ ತಲುಪಬೇಕಾದ ಸರ್ಕಾರದ ಸವಲತ್ತುಗಳು ತಲುಪಲಿಲ್ಲ. ಒಂದು ಹೊತ್ತಿನ ಊಟಕ್ಕಾಗಿ ಅವನು ಏಳು ತಾಸು ದುಡಿಯಬೇಕು. ಈ ದೇಶದ ಬಡವನು ವಾಸಿಸುವ ಮನೆಯ ಪರಿಸ್ಥಿತಿ ಹೇಗಿದೆಯೆಂದರೆ ಅವನು ವಾಸಿಸುತ್ತಿರುವ ಮನೆಯು ಮಳೆ ಹನಿಯು ಸುರಿದರೆ ಸಾಕು ಮನೆಯು ಸೋರುತ್ತದೆ. ಇಂತಹ ಸಾಲುಗಳನ್ನು ಬರೆಯಲು ಬದುಕಿನಲ್ಲಿ ಬಡತವನು ಅನುಭವಿದ ಭಾವ ಜೀವಿಗೆ ಮಾತ್ರ ಸಾಧ್ಯ. ಕಾವ್ಯ ಎದೆಯಾಳದ ನೋವಾಗಿ ಆ ನೋವು ಮತ್ತೆ ಮರುಕಳಿಸದಿರಲಿ ಎಂದು ಭಾವಿಸಿ ಸಮಾಜದಲ್ಲಿ ಒಂದಷ್ಟು ಬದಲಾವಣೆ ಕಾಣಲು ಇಂತಹ ಸಾಲುಗಳು ಪ್ರಸ್ತುತ ದಿನಗಳ ಸಾಹಿತ್ಯದ ಬರಹವಾಗಬೇಕು.

ಶೃತಿಯ ಗಜಲ್ ಕೃತಿಯಲ್ಲಿ ಬರುವ ಷೇರ್ ಗಳು ಬರೀ ಬಡತನ, ಬಡವನ ಜೀವನ, ಅವ್ವನ ಬಗ್ಗೆ ಮಾತ್ರವಾಗಿರದೇ, ಪ್ರೀತಿ ಪ್ರೇಮ, ವಿರಹದ ಸಾಲುಗಳು ಕೂಡ ಈ ಕೃತಿಯಲ್ಲಿ ಅಡಕವಾಗಿವೆ.
“ಪ್ರೇಮದ ಫಕೀರನಂತೆ ಪ್ರೀತಿಯ ಭಿಕ್ಷೆಯನು ಬೇಡುತಾ ಕಾದಿರುವೆ”
“ನಿನ್ನ ಬಿಸಿಯುಸಿರ ತಾಕಿದಾಗ ಮಂಜಿನಂತೆ ಕರಗುವೆ ನಲ್ಲ”
ಈ ಷೇರ್ ನಲ್ಲಿ ಪ್ರೀತಿಯ ಆರಾಧನೆಯಿದೆ, ವಿರಹದ ನೋವಿದೆ. ಪ್ರೀತಿಸಿದ ಜೀವವೊಂದು ತನ್ನೆಲ್ಲಾ ಸಂಬಂಧಗಳನ್ನು, ಸ್ವತ್ತುಗಳನ್ನು ತ್ಯಜಿಸಿ ಕೇವಲ ನಿನ್ನ ಪ್ರೀತಿಗೋಸ್ಕರ ಪ್ರೇಮದ ಫಕೀರನಂತೆ ನಿನ್ನನೇ ಧ್ಯಾನಿಸುವತ್ತಾ, ಆರಾಧಿಸುತ್ತಾ ನಿನಗಾಗಿ ಕಾಯುತ್ತಿರುವೆ. ನಿನ್ನ ದೇಹದ ಬೀಸಿಯಾದ ಉಸಿರು ನನಗೆ ತಾಕೀದರೆ ಸಾಕು ಸೂರ್ಯನ ಕಾಂತಿಗೆ ಮಂಜು ಹನಿಗಳು ಹೇಗೆ ಕರಗಿ ಹೋಗುತ್ತವೋ ಹಾಗೇ ನಿನ್ನ ಬಿಸಿಯುಸಿರು ನನ್ನ ತಾಕಿದರೆ ಮಂಜಿನಂತೆ ಕರಗಿ ಹೋಗುವೆ ಇಂತಹ ಹಲವಾರು ಷೇರ್ ಗಳು ಓದುಗನ ಗಮನವನ್ನು ಸೆಳೆಯುತ್ತವೆ.
ಮುಖವಾಡ ಹಾಕಿದವರ ಕಂಡು ನನ್ನತನ ದಫನ್ ಮಾಡಿದೆ
ತುಳಿದು ಬೆಳೆಯುವವರ ನಡುವೆ ಏಣಿ ಎರಲು ಸಮಯ ಕೊಡು
ನಮ್ಮ ಸುತ್ತಲಿನ ಮನುಜನರು ಒಳ್ಳೆಯವರು ಕೆಟ್ಟವರು ಇರುತ್ತಾರೆ. ಮತ್ತೇ ಕೆಲವರು ಮುಖವಾಡ ತೊಟ್ಟವರು ಇರುತ್ತಾರೆ. ಇವರು ನಮ್ಮ ಮುಂದೆ ಒಳ್ಳೆಯದನ್ನು ಮಾತನಾಡಿ ಹೊಗಳಿ ಬೇರೆಯವರ ಹತ್ತಿರ ಹೋಗಿ ನಮ್ಮ ಬಗ್ಗೆ ಕೆಟ್ಟದಾಗಿ ಬಿಂಬಿಸಿ ಬಣ್ಣಬಣ್ಣದ ಮಾತುಗಳನ್ನು ಕಟ್ಟುತ್ತಾರೆ. ಈ ಷೇರ್ ನಲ್ಲಿ ಗಜಲ್ ಕವಯಿತ್ರಿ ಹೇಳುತ್ತಾರೆ. ಮುಖವಾಡದ ಜನರನ್ನು ಕಂಡು ನನ್ನತವನ್ನು ದಹಿಸಿದ್ದೇನೆ. ಹೂತು ಮಣ್ಣು ಮಾಡಿದ್ದೇನೆ. ನಮ್ಮ ತುಳಿದು ಎತ್ತರಕ್ಕೆ ಬೆಳೆಯುವವರ ನಡುವೆ ನಾನು ಎರಲು ನನಗೆ ಸಮಯ ಬೇಕಾಗಿದೆ. ಎಂಬ ಅರ್ಥಪೂರ್ಣ ಸಾಲುಗಳು ನಮ್ಮನ್ನು ಮತ್ತಷ್ಟು ಓದಿಸಿಕೊಳ್ಳುತ್ತವೆ.
ಸಾವಿರ ಹುಡುಗಿಯರ ನಡುವಿನ ನಯನಕೆ ಹಿಡಿಸಿರುವೆ
ಹಗಲೆಲ್ಲಾ ಕನಸಿಗೆ ಬಂದು ಕಾಡಬೇಡ ನನಗೂ ಮನಸಾದಿತು
ಸಾವಿರಾರು ಹುಡುಗಿಯರನ್ನು ನೋಡಿದರು ಕೂಡ ಯಾರು ಮನಸ್ಸನ್ನು ಸೆಳೆಯಲಿಲ್ಲ, ಆರ್ಕಷಿಸಲಿಲ್ಲ ಅದರೆ ಅಂತಹ ಹುಡುಗಿಯರ ನಡುವೆ ನನ್ನ ಕಣ್ಣು ಸೆಳೆದಿದ್ದು ನಿನ್ನನ್ನು ಮಾತ್ರ, ಹಗಲಿನಲ್ಲೂ ಕೂಡ ನನ್ನ ಮನಸ್ಸಿಗೆ, ಕನಸಿಗೆ ಬಂದು ಕಾಡಬೇಡ ಯಾಕೆಂದರೆ ನನಗೂ ಕೂಡ ನಿನ್ನ ಮೇಲೆ ಮನಸ್ಸು ಅದಿತು ಎಂಬ ಸಾಲುಗಳು ಮನವನ್ನು ತಾಕುತ್ತವೆ.
ಶೃತಿ ಮಹಾದೇವ ಹೆಗ್ಗೆ ಇವರು ಇನ್ನಷ್ಟು ಗಜಲ್ ಕಾವ್ಯದ ಅಧ್ಯಯನ, ಗಜಲ್ ನಿಯಮಗಳು, ರೀತಿ ನೀತಿಗಳನ್ನು ಪಾಲಿಸಿದ್ದೇ ಆದರೆ ಕನ್ನಡದ ಗಜಲ್ ಸಾಹಿತ್ಯದ ಲೋಕದಲ್ಲಿ ಉತ್ತಮ ಗಜಲ್ ಕವಯಿತ್ರಿಯಾಗಿ ಯಶಸ್ವಿಯಾಗುತ್ತಾರೆ.
ಮೈಲಾರಿ ಪ್ರಕಾಶನ ಯಕ್ಸಂಬಾದಿಂದ ಹೊರಬಂದಿರುವ ಈ ಕೃತಿಗೆ ಶಮಾ ಎಂ ಜಾಮದಾರ ರವರ ಅರ್ಥಪೂರ್ಣ ಮುನ್ನುಡಿಯೊಂದಿಗೆ ನಾಡಿನ ಹಿರಿಯ ಗಜಲ್ ಕಾರರಾದ ಅಲ್ಲಾ ಗಿರಿರಾಜ,ಸಿದ್ದರಾಮ ಹೀರೆಮಠ, ಮುಂತಾದ ಹಿರಿಯರ ಅಶಯ ನುಡಿಗಳೊಂದಿಗೆ ರೇಖಾ ಚಿತ್ರಗಳ ಜೊತೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಈ ಕೃತಿಗೆ ಬೆನ್ನುಡಿ ಬರೆಯುವ ಅವಕಾಶ ನನಗೆ ಒದಗಿ ಬಂದಿತ್ತು.
ಗಜಲ್ ಲೋಕದಲಿ ಹಂಬೆಗಾಲಿಟ್ಟು ಚೊಚ್ಚಲ ಗಜಲ್ ಕೃತಿ ,”ಶೃತಿಯ ಗಜಲ್” ಎಂಬ ಪುಸ್ತಕವನ್ನು ಹೊರತರುತ್ತಿರುವ ಶ್ರೀಮತಿ ಶೃತಿ ಮಹಾದೇವ ಹೆಗ್ಗೆ ರವರನ್ನು ತುಂಬು ಹೃದಯದಿಂದ ಅಭಿನಂದನೆಗಳು ತಿಳಿಸುತ್ತಾ.. ಮುಂದಿನ ದಿನಗಳಲ್ಲಿ ಇನ್ನಷ್ಟು ಗಜಲ್ ಕಾವ್ಯವನ್ನು ಓದಲಿ, ಗಟ್ಟಿತನದ ಕಾಫಿಯಾದ ಸಾಲುಗಳೊಂದಿಗೆ ಹಲವಾರು ಗಜಲ್ ಕೃತಿಗಳು ಹೊರಬರಲಿ, ಗಜಲ್ ಕಾವ್ಯದ ಜೊತೆಯಲ್ಲಿಯೇ ವಿವಿಧ ಪ್ರಕಾರದ ಕನ್ನಡ ಸಾಹಿತ್ಯದ ಪುಸ್ತಕಗಳು ರಚನೆ ಆಗಲಿ, ಇವರಿಗೆ ಸಮಾಜ ಸರ್ಕಾರದಿಂದ ಗೌರವ, ಪ್ರಶಸ್ತಿ ಸನ್ಮಾನಗಳು ಸಿಗಲಿ ಎಂದು ಶುಭ ಹಾರೈಸುತ್ತೇನೆ.. ಶುಭವಾಗಲಿ.
- ನಾರಾಯಣಸ್ವಾಮಿ (ನಾನಿ) – ಮಾಸ್ತಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ.
