ಮಾನಸ….ಇದು ಮನಸಿನ ಮಾತು (ಭಾಗ-೩೫)

ಹದಿನೈದು ವರ್ಷದಿಂದ 22 ವರ್ಷದವರೆಗೂ ಓದು, ವಿದ್ಯೆ ಎಂದು ಅಷ್ಟಕ್ಕೇ ಸೀಮಿತವಾಗಿರಬೇಕಾದ ಸಮಯದಲ್ಲಿ ಪ್ರೀತಿ, ಪ್ರೇಮ ಎಂದು ದಾರಿ ತಪ್ಪುತ್ತಾರೆ, ಈ ಮನಸ್ಸಿನಲ್ಲಿ ಅವರಿಗೆ ತಂದೆ ತಾಯಿ ಶತ್ರುಗಳಂತೆ ಕಾಣುತ್ತಾರೆ. ತಪ್ಪದೆ ಓದಿ ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣ …

ಇನ್ಫ್ಯಾಚುಯೇಷನ್, ಭ್ರಮೆ, ಮತಿಗೇಡಿತನ, ತಿಳಿಗೇಡಿತನ.

ಏನಿದು? ಏಕೆ ಹೀಗೆ?

ನೀನು ಮೊದಲಿನ ಹಾಗಿಲ್ಲ ಕಣೋ, ಕೇರಿಂಗ್, ಪ್ರೀತಿಯಿಂದ ಮಾತಡಲ್ಲ…ಯು ವರ್ ನಾಟ್ ಲೈಕ್ ಬಿಫೋರ್ ಯು ಹ್ಯಾವ್ ಚೇಂಜ್ಡ್ ಅ ಲಾಟ್…

ಏನಿಲ್ಲ ಕಣೆ, ನಾನಿರೋದೇ ಹೀಗೆ, ನಿಂಗೆ ಹಾಗನಿಸಿದರೆ ನಾನೇನು ಮಾಡಕ್ಕಾಗಲ್ಲ. ಹುಡುಗರೇ ಹಾಗೆ ನಾನೊಬ್ಬ ಅಲ್ಲ ತಿಳ್ಕೋ. ನಿಮಗೆ ಹುಡುಗಿಯರಿಗೆ ಎಕ್ಸಪೆಕ್ಟೇಷನ್ಸ್ ಜಾಸ್ತಿ ಇರುತ್ತೆ, ನೀನು ಸ್ವಲ್ಪ ಬದಲಾಯಿಸಿಕೋ….

ನಾನು ನಮ್ಮ ಮನೆಯಿಂದ ಸಂಜೆ ವಾಕಿಂಗ್ ಹೊರಟಾಗ ನಮ್ಮ ಮನೆಯ ಮುಂದೆ ಹೋಗುತಿದ್ದ ಒಂದು ಹುಡುಗ, ಹುಡುಗಿಯ ಸಂಭಾಷಣೆಯಾಗಿತ್ತು. ನೋಡಲು ಇನ್ನೂ ಹತ್ತನೆ ತರಗತಿಯ ಮಕ್ಕಳು, ಬಹುಶಃ ಶಾಲೆಯಲ್ಲಿ ಎಥ್ನಿಕ್ ಡೇ ಇದ್ದಿರಬೇಕು. ಅವನು ಶೆರ್ವಾನಿ ಕುರ್ತಾ, ಇವಳು ಸೀರೆ ಉಟ್ಟಿದ್ದಳು. ನಾನು ಅವರ ಹಿಂದೆ ಏನೂ ಕೇಳಿಸಿಕೊಳ್ಳುತಿಲ್ಲ ಎಂದು ಸುಮ್ಮನೆ ಆ ಕಡೆ ಈ ಕಡೆ ನೋಡುತ್ತಾ ನಡೆಯುತಿದ್ದೆ. ಅವರಿಗೆ ಅವರ ಹಿಂದೆ ನನ್ನ ಇರುವಿಕೆಯೂ ಗಮನಿಸಲಿಲ್ಲ. ಮಾತು ಅಷ್ಟು ಗಂಭೀರವಾಗಿತ್ತು.

ಫೋಟೋ ಕೃಪೆ :google

‘ನೋಡು ಮೊದಲು ಮೊದಲು ಎಷ್ಟು ಸಲ ಕಾಲ್ ಮಾಡ್ತಿದ್ದೆ, ಊಟ ಆಯ್ತಾ, ನಿದ್ದೆ ಮಾಡುದ್ಯಾ, ಆರಾಮಿಗಿದ್ಯಾ? ಅಂತೆಲ್ಲ ಕೇಳ್ತಿದ್ದೆ ಇವಾಗ ನೋಡುದ್ರೆ ಅವಾಯ್ಡ್ ಮಾಡ್ತಿದೀಯಲ್ಲ ಯಾಕೆ ಎಂದು ಕೇಳಿದಳು ಅವಳು.

ನೋಡು ಯಾವಾಗ್ಲೂ ಒಂದೇ ರೀತಿ ಇರಕ್ಕಾಗಲ್ಲ, ನಾನು ಕೇಳಿದ ಮಾತ್ರಕ್ಕೆ ನೀನು ಊಟ, ನಿದ್ದೆ ಮಾಡ್ತಿಯ, ಇಲ್ಲ ಅಂದ್ರೆ ಇಲ್ವಾ ಸುಮ್ನೇ ತಲೆ ತಿನ್ಬೇಡ ಎಂದು ಹೇಳಿ ಅವಳಿಗಿಂತ ಮುಂದೆ ಮುಂದೆ ಹೊರಟ.

ಅವಳು ಏನೋ ನೀನು ಮೊದ್ಲೆಲ್ಲ ಚೆನ್ನಾಗಿ ಮಾತಾಡ್ತಿದ್ದೆ ಈಗೇನಾಯ್ತು ಎಂದು ಕೇಳುತಿದ್ದಳು…ನಾನಿರೋದೆ ಹೀಗೆ, ಏನಾದ್ರೂ ಅನ್ಕೋ ಎಂದು ಹೇಳಿ ಇಬ್ಬರೂ ರಸ್ತೆಯ ಎಡಕ್ಕೆ ತಿರುಗಿಕೊಂಡು ಹೋದರು. ನಾನು ಸೀದ ಹೋಗಬೇಕಾದ್ದರಿಂದ ಅವರಿಬ್ಬರನ್ನೂ ನೋಡಿಕೊಂಡು ಮುಂದೆ ಹೊರಟೆ…

ವಿಷಯ ಏನೆಂದರೆ, ಇಷ್ಟು ಚಿಕ್ಕ ವಯಸಿನಲ್ಲಿ ಒಬ್ಬರಿಗೊಬ್ಬರು ಆಕರ್ಷಿತರಾಗುವುದು ಸಹಜ ಆದರೆ ಇದೆಲ್ಲ ಕ್ಷಣಿಕ, ಭ್ರಮೆ ಎಂದು ತಿಳಿಯು ಮೊದಲೇ ಜೀವನ ಹಾಳುಮಾಡಿಕೊಂಡಿರುತ್ತಾರೆ. ಹದಿಹರೆಯದ ವಯಸ್ಸಿನಲ್ಲಿ ಕತ್ತೇನೂ ಚೆನ್ನಾಗಿ ಕಾಣುತ್ತೆ ಎಂದು ಹೇಳುತ್ತಾರೆ.

ಹದಿನೈದು ವರ್ಷದಿಂದ 22 ವರ್ಷದವರೆಗೂ ಓದು, ವಿದ್ಯೆ ಎಂದು ಅಷ್ಟಕ್ಕೇ ಸೀಮಿತವಾಗಿರಬೇಕಾದ ಸಮಯದಲ್ಲಿ ಪ್ರೀತಿ, ಪ್ರೇಮ ಏನು ಎಂದು ತಿಳಿಯುವ ಮೊದಲೇ ಆಕರ್ಷಣೆಗೆ ಒಳಗಾಗಿ ಹಾರ್ಮೋನು ಏರುಪೇರಿನಿಂದ ಆಗುವ ದೇಹದ ಕಾಮನೆಗಳನ್ನು ನೀಗಿಸಿಕೊಳ್ಳಲು ಗಂಡು ಹಾಗು ಹೆಣ್ಣು ಮಕ್ಕಳು ಹಾದಿ ತಪ್ಪುತ್ತಾರೆ.

ಫೋಟೋ ಕೃಪೆ :google

ಈ ಮನಸ್ಸಿನಲ್ಲಿ ಅವರಿಗೆ ತಂದೆ ತಾಯಿಗಿಂತ ಶತ್ರುಗಳು ಬೇರೊಬ್ಬರಿರುವುದಿಲ್ಲ. ಅವರ ಹಿತನುಡಿಗಳು ಕೋಪ ತರಿಸುತ್ತದೆ. ಬುದ್ಧಿ ಮಾತು ಕಿವಿಗೆ ಹೋಗುವುದಿಲ್ಲ. ಅವರು ಏನೇ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಮಕ್ಕಳು ಇರುವುದಿಲ್ಲ. ಅವರಿಗೆ ಅವರ ಸ್ನೇಹಿತರ ಮೇಲೆ ಬಹಳ ನಂಬಿಕೆ, ವಿಶ್ವಾಸ ತುಂಬಾ ಇರುತ್ತದೆ. ಅವರು ಹೇಳುವುದೆಲ್ಲ ವೇದವಾಕ್ಯ. ತಂದೆ ತಾಯಿಯನ್ನು ದೂಷಿಸಿದರೂ ಪರ್ವಾಗಿಲ್ಲ ಸ್ನೇಹಿತರನ್ನು ಕಳೆದುಕೊಳ್ಳುತ್ತೇವೆಂಬ ಭಯ ಕಾಡುತ್ತದೆ.

ಈ ವಿಚಾರಗಳನ್ನು ತಿಳಿಸಲು ಮಕ್ಕಳಿಗೆ ಶಾಲೆಯಲ್ಲಿ ಆಪ್ತಸಮಾಲೋಚಕರಿಂದ ಹೇಳಿಸುತ್ತಾರೆ. ಮಾಸ್ ಕೌನ್ಸಲಿಂಗ್ ಅಂದರೆ ಇಡೀ ತರಗತಿಗಳಿಗೆ ಹದಿಹರೆಯದ ವಯಸಿನ ಸರಿ ತಪ್ಪುಗಳ ಅರಿವು ಮೂಡಿಸಲು ತರಗತಿಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಾರೆ. ಪೋಷಕರಿಗೂ ಸಹ ಆಪ್ತಸಮಾಲೋಚಕರ ಮಾರ್ಗದರ್ಶನ ನೀಡಲು ಅವರನ್ನೂ ಸಹ ಶಾಲೆಗೆ ಆಹ್ವಾನಿಸಿ ಸೆಷನ್ ಗಳ ಮೂಲಕ ಅರಿವು ಮೂಡಿಸುತ್ತಾರೆ.

ಬಗೆ ಹರಿಯದ ಯಾವುದೂ ಸಮಸ್ಯೆಗಳಿರುವುದಿಲ್ಲ. ಆದರೆ ಈ ಹರೆಯದ ವಯಸ್ಸಿನಲ್ಲಿ ಅನೇಕ ಗೊಂದಲಗಳು ಇರುತ್ತದೆ. ಸರಿ ತಪ್ಪುಗಳ ನಿರ್ಣಯದ ಬಗ್ಗೆ ವಿವೇಕ, ವಿವೇಚನೆ ಇಲ್ಲದಿರುವುದು, ಮಾರ್ಗದರ್ಶನದ ಕೊರತೆ, ಪೋಷಕರ ಪ್ರೀತಿಯ ಕೊರತೆ, ಹಣದ ಮುಗ್ಗಟ್ಟು ಹೀಗೆ ಅನೇಕ ರೀತಿಯ ಕಾರಣಗಳು ಹರೆಯದಲ್ಲಿ ದಾರಿ ತಪ್ಪುವಂತೆ ಮಾಡುತ್ತದೆ.

ಈ ಬಗ್ಗೆ ಮಕ್ಕಳಿಗೆ ಖಂಡಿತವಾಗಿಯೂ ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇರುತ್ತದೆ. ಮನೆಯಲ್ಲಿ ತಂದೆ ತಾಯಿ ಮಾತು ಕೇಳಬೇಕು, ಶಾಲೆಯಲ್ಲಿ ಶಿಕ್ಷಕರ ಮಾತೂ ಕೇಳಬೇಕು. ಆದರೆ ಇವರಿಬ್ಬರ ಮಾತುಗಳು ಅವರಿಗೆ ಕೇಳಲು ಇಷ್ಟ ಆಗುವುದಿಲ್ಲ. ಬೈಯ್ಯುವವರು ಬದುಕುವುದಕ್ಕೆ ಹೇಳುತ್ತಾರೆ ಎಂಬುದು ಯಾವಾಗ ಅರಿವಾಗುತ್ತದೋ ಆಗ ಅವರ ಜೀವನಕ್ಕೆ ಒಂದು ಅರ್ಥವಿರುತ್ತದೆ.

ಮನೆಯಲ್ಲಿ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಶಾಲೆ ಮುಗಿಸಿ ಮನೆಗೆ ಹೋಗುವ ಕೆಲವು ಮಕ್ಕಳಿಗೆ ಮಾತ್ರ ಜವಾಬ್ದಾರಿ ಇರುತ್ತದೆ, ಇನ್ನೂ ಕೆಲವರು ಅಜ್ಜಿ, ತಾತ, ಅಕ್ಕ, ಅಣ್ಣ ಹೀಗೆ ದೊಡ್ಡವರು ಇರುವ ಮನೆಯಲ್ಲಿ ಅವರ ಪಾಲನೆಯಲ್ಲಿ ಇರುತ್ತಾರೆ. ಇನ್ನೂ ಕೆಲವು ಮಕ್ಕಳು ಮನೆಯಲ್ಲಿ ತಂದೆ ತಾಯಿ ಹೊರತು ಪಡಿಸಿ ಇನ್ಯಾರೂ ಇಲ್ಲದಿದ್ದಾಗ ಶಾಲೆ ಬಿಟ್ಟ ತಕ್ಷಣ ಮನೆಗೆ ಹೋಗುವುದೇ ಇಲ್ಲ, ಅಲ್ಲಿ ಇಲ್ಲಿ ಸುತ್ತಾಡಿಕೊಂಡು, ಅಂಗಡಿಯಲ್ಲಿ ತಿಂಡಿ ತಿನಿಸು ತಿಂದುಕೊಂಡು ತಡವಾಗಿ ಮನೆ ಸೇರಿತ್ತಾರೆ.

ಇದೆಲ್ಲವನ್ನು ಗಮನಿಸಿದಾಗ ಮಕ್ಕಳು ಏಕೆ ಹಾದಿ ತಪ್ಪುತ್ತಿದ್ದಾರೆ, ಅವರನ್ನು ಸರಿಯಾದ ದಾರಿಗೆ ತರುವ ಬಗೆ, ಅವರ ಭವಿಷ್ಯವನ್ನು ರೂಪಿಸುವ ಕುರಿತಾಗಿ ಅವರ ಕೈಮೀರಿ ಹೋಗಿದ್ದಾಗ ಆಪ್ತಸಮಾಲೋಚಕರ ಬಳಿ ಆಪ್ತಸಮಾಲೋಚನೆ ನಡೆಸಿ ಸರಿಯಾದ ಮಾರ್ಗದರ್ಶನ ನೀಡಬೇಕು.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading