ಏನಿದ್ದರೂ ಮರೆತು ಮುನ್ನಡೆಯಬೇಕು

ನಿನ್ನೆಗಳ ನೆನಪಲ್ಲಿ ನಾಳೆಗಳ ಕನಸಲ್ಲಿ ಹೊಸತು ಹಳತಾಗಿ ಹಳತು ಹೊಸತಾಗಬೇಕು…ಬದುಕಿನ ನವ ನವೀನ ಪುಟಗಳಲ್ಲಿ ಹೊಸ ಅಧ್ಯಾಯವ ಶುರುಮಾಡಬೇಕು…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಸಮಯ ಯಾರಿಗೂ ಎಂದಿಗೂ
ಕ್ಷಣ ಮಾತ್ರವೂ ಕಾಯುವುದಿಲ್ಲ
ಯಾರಿಗಾಗಿಯು ಗಿಡದಿ ಹೂವು
ಅರಳಿ ನಗುವ ಬೀರುವುದಿಲ್ಲ

ಇಂದು ಈ ಕ್ಷಣ ಮೂಡಿದ ಮೊಗ್ಗು
ನಾಳೆ ಅರಳಿ ಹೂವಾಗಿ ಸೆಳೆಯುವುದು
ದುಂಬಿಯು ಬಂದು ಮುತ್ತ ನೀಡುತ್ತ
ಖುಷಿಯಿಂದ ಮಕರಂದವ ಹೀರುವುದು

ಜೇನು ಹುಳು ತನ್ನ ಕುಶಲತೆಯಿಂದ
ಜೇನು ತುಪ್ಪವನ್ನು ತಯಾರಿಸುವುದು
ಯಾರೋ ಮಾಡಿದ ಕಷ್ಟದ ಫಲವ
ಸುಲಭದಿ ಇನ್ಯಾರೋ ಅನುಭವಿಸುವರು

ಒಂದಿಷ್ಟು ನಮ್ಮರಿವಿಗೆ ಬರುವಂತೆ
ಇನ್ನೊಂದಿಷ್ಟು ನಮ್ಮರಿವಿಗೆ ಬಾರದಂತೆ
ಗೊತ್ತು ಗೊತ್ತಾಗದಂತೆ ದಿನನಿತ್ಯದಿ
ಬದಲಾಗುತ್ತಲೇ ಸಾಗುತ್ತಲಿದೆ ದಿನ

ಇದ್ದದ್ದು ಇರುವಷ್ಟು ಹೊತ್ತು ಸಾಧ್ಯವಾದಷ್ಟು ನಮ್ಮದೆಂಬಂತೆ ಖುಷಿಯಿಂದ ಅನುಭವಿಸಬೇಕು
ಆಗಸದಿ ಮಿನುಗುವ ಚುಕ್ಕಿ ತಾರೆಗಳ ನೋಡಿ
ಕಣ್ತುಂಬಿಕೊಂಡು ಸಂಭ್ರಮಿಸಬೇಕು

ಮಾಗಿದ ಎಲೆ ಒಣಗಿ ಉದುರುವುದು
ಹೊಸ ಚಿಗುರು ಹೊಸದಾಗಿ ಚಿಗುರುವುದು
ತೆರೆದುಕೊಳ್ಳಬೇಕು ನಾವು ಹೊಸತನಕ್ಕೆ
ಸಾಕ್ಷಿಯಾಗಬೇಕು ಬದುಕಿನ ಸವಿ ಕ್ಷಣಕ್ಕೆ

ನಿನ್ನೆಗಳ ನೆನಪಲ್ಲಿ ನಾಳೆಗಳ ಕನಸಲ್ಲಿ
ಹೊಸತು ಹಳತಾಗಿ ಹಳತು ಹೊಸತಾಗಬೇಕು
ಬದುಕಿನ ನವ ನವೀನ ಪುಟಗಳಲ್ಲಿ
ಹೊಸ ಅಧ್ಯಾಯವ ಶುರುಮಾಡಬೇಕು

ಮೌನದೊಳಗಿನ ಮೌನವ ಸರಿಸಿ
ಮಾತಿನ ಸಂಘರ್ಷಕ್ಕೂ ಸಿದ್ಧರಾಗಿ
ದ್ವೇಷವ ಸರಿಸಿ ಪ್ರೀತಿಯ ಬೆರೆಸಿ
ನಗು ನಗುತಾ ಎಲ್ಲರೊಳಗೊಂದಾಗಿ

ಸಂಘರ್ಷವ ಮರೆತು ಬದುಕಿ ಬಾಳಿ
ಹೊಸ ವರ್ಷವನ್ನು ಪ್ರೀತಿಯಿಂದ
ಒಬ್ಬರಿಗೊಬ್ಬರು ಬರಮಾಡಿಕೊಳ್ಳಿ
ಶಾಂತಿ ನೆಮ್ಮದಿಯ ತುಂಬಿಕೊಳ್ಳಿ

ಜೀವ ಭಾವಗಳು ಜೊತೆಯಾಗಿ
ಹೊಸ ಕ್ಷಣದಲಿ ಬೆರೆತು ಸಿಹಿಯಾಗಿ
ಹೆಜ್ಜೆ ಹೆಜ್ಜೆಯೂ ಗೆಲುವಾಗಿ ನಲಿವಾಗಿ
ಹೆಚ್ಚಾಗಬೇಕು ನಮ್ಮ ಹರುಷ ಪ್ರತಿವರುಷ


  • ನಾಗರಾಜ ಜಿ. ಎನ್. ಬಾಡ, ಕುಮಟ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading