ಮಾನಸ….ಇದು ಮನಸಿನ ಮಾತು (ಭಾಗ-೩೯)

ಮಗಳು ಶಾಲೆಯಲ್ಲಿದ್ದ ತನ್ನ ಸಹಪಾಠಿಯನ್ನು ಪ್ರೀತಿಸುತ್ತಿದ್ದಳು, ಇದ್ದಕ್ಕಿದ್ದಂತೆ ಅವಳ ಓದಿನಲ್ಲಿ ಬದಲಾವಣೆಗಳು ಆಗತೊಡಗಿತು. ಅದನ್ನು ಗಮನಿಸಿದ ಅವಳ ಪಾಲಕರು ಆಪ್ತಸಮಾಲೋಚನೆ ನಡೆಸಲು ಕರೆತಂದಾಗ ಕೆಲವು ಸತ್ಯ ಗೊತ್ತಾಯಿತು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರವು ಕೂಡಾ ಮಾಡಿದ್ದಳು. ಮುಂದೇನಾಯಿತು ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ನಮ್ಮ ಮಗಳು ಮೊದಲಿನಂತೆ ಆಗಬೇಕು. ಅವಳು ನಗು ನಗುತ್ತಾ ಇರುವುದನ್ನು ನಾವು ನೋಡಬೇಕು ಎಂದು ತಂದೆ ತಾಯಿಯ ರೋಧನ ಹೇಳತೀರದು. ತಂದೆ ತಾಯಿಗೆ ಒಬ್ಬಳೇ ಮಗಳು ಹತ್ತನೇ ತರಗತಿ ಓದುತ್ತಿದ್ದಳು, ತರಗತಿಗೆ ಮೊದಲಿಗಳಾಗಿ ಎಲ್ಲಾ ವಿಷಯಗಳಲ್ಲು ಪೂರ್ಣ ಅಂಕವನ್ನು ತೆಗೆಯುತ್ತಿದ್ದಳು. ಪರೀಕ್ಷೆಗೆ ಇನ್ನೇನು ಮೂರು ತಿಂಗಳು ಉಳಿದಿತ್ತು. ಶಾಲೆಯಿಂದ ಮನೆಗೆ ಖುಷಿಯಾಗಿ ಬರುತ್ತಿದ್ದವಳು ಒಂದು ವಾರದಿಂದ ಸಪ್ಪಗೆ ಬರುತ್ತಿದ್ದು ಏನೋ ಯೋಚನೆ ಮಾಡುತ್ತ ಕುಳಿತಿರುತಿದ್ದಳು. ತಾಯಿಗೆ ಮೊದಲು ಮಗಳ ವರ್ತನೆ ನೋಡಿ ಬಹಳ ಆತಂಕವಾಯಿತು. ತನ್ನ ಪತಿಗೆ ಮಗಳು ಇತ್ತೀಚೆಗೆ ಮಂಕಾಗಿರುವುದನ್ನು ಹೇಳಿದಳು.

ಶಾಲೆಯಲ್ಲಿ ಹೋಗಿ ವಿಚಾರಿಸಿದರು. ಬಹಳ ಚೆನ್ನಾಗಿ ಓದುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಬದಲಾವಣೆಯಾಗಿದ್ದು ಎಲ್ಲರೂ ಆತಂಕಗೊಂಡರು. ಶಾಲೆಯಲ್ಲಿ ತಿಳಿದ ವಿಚಾರ ಎಂದರೆ ಅವಳದೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ಹುಡುಗನ ಪ್ರೀತಿ ಮಾಡುತ್ತಿದ್ದು, ಅವನು ಇವಳ ಜೊತೆ ಕೆಲವು ದಿನಗಳು ಮಾತ್ರ ಮಾತನಾಡುತ್ತಿದ್ದು ನಂತರ ಅವಳನ್ನು ನಿರ್ಲಕ್ಷ್ಯ ಮಾಡುತ್ತಿದ್ದ. ಅವಳಿಂದ ದೂರವಿರುತಿದ್ದ. ಇದು ಆ ಹುಡುಗಿಯ ಮನಸಿಗೆ ಬಹಳ ಬೇಸರ ತಂದಿದ್ದು, ಅವನಿಂದ ನಿರ್ಲಕ್ಷ್ಯಕ್ಕೆ ಒಳಗಾದ ಅವಳಿಗೆ ಓದು ಬರಹದಲ್ಲಿ ನಿರಾಸಕ್ತಿ ಹೊಂದಿ ಖಿನ್ನತೆಗೆ ಒಳಗಾಗಿದ್ದಳು. ಇದನ್ನು ಕೇಳಿ ತಂದೆ ತಾಯಿ ಅವಳಿಗೆ ಎಷ್ಟು ಬುದ್ಧಿ ಹೇಳಿದರೂ ತಿಳಿದುಕೊಳ್ಳದ ಪರಿಸ್ಥಿತಿ ತಂದುಕೊಂಡಿದ್ದಳು. ಇವಳ ಪರಿಸ್ಥಿತಿ ನೋಡಿ ಆಪ್ತಸಮಾಲೋಚನೆ ನಡೆಸಲು ಕರೆತಂದಾಗ ಪರಿಸ್ಥಿತಿ ಮಿತಿ ಮೀರಿತ್ತು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದಳು. ಕೆಲವು ಸಿಟ್ಟಿಂಗ್, ಸೆಷನ್, ಆಪ್ತಸಮಾಲೋಚನೆಯ ನಂತರ ನಿಜ ಜೀವನದ ಅರ್ಥ ಮಾಡಿಕೊಂಡಳು. ಮತಿಗೇಡಿತನ ಹಾಗು ಭ್ರಮೆಯಿಂದ ಹೊರಬಂದಳು.

ಹರೆಯದ ವಯಸ್ಸಿನ ಸಮಸ್ಯೆಗಳು ಬಹಳ ಇರುತ್ತದೆ. ಮಕ್ಕಳ ಮನೋಭಾವನೆಗಳು ಮತ್ತು ಅವರ ವಯಸ್ಸನ್ನು ಸರಿಯಾಗಿ ಗಮನದಲ್ಲಿಟ್ಟುಕೊಂಡು, ಪ್ರೀತಿ, ಪ್ರೇಮ ಅಥವಾ ಲೈಂಗಿಕತೆಯ ಬಗ್ಗೆ ಅವರನ್ನು ಅರ್ಥಮಾಡಿಸುವಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಹತ್ತನೆಯ ತರಗತಿಯ ಮಕ್ಕಳು ಇನ್ನೂ ಸನ್ನಿಹಿತವಾದ ಜ್ಞಾನ ಮತ್ತು ಸಾಮಾಜಿಕ ಆಗು ಹೋಗುಗಳಲ್ಲಿ ಪ್ರೇರಿತರಾಗಿ, ಪ್ರೀತಿ, ಸ್ನೇಹ, ಅಥವಾ ಪ್ರತ್ಯೇಕ ಸಂಬಂಧಗಳ ಬಗ್ಗೆ ಅವರ ಮನಸ್ಸು ಸಾಧಾರಣವಾಗಿ ನಿರ್ಧಿಷ್ಟವಾದ ರೀತಿಯಲ್ಲಿ ಚಂಚಲಗೊಳ್ಳುತ್ತದೆ. ಇದರಿಂದ ಪ್ರೀತಿ ಅಥವಾ ಸಂಬಂಧಗಳ ಬಗ್ಗೆ ಮಾತನಾಡುವಾಗ, ಈ ಸಂಗತಿಗಳನ್ನು ಈ ರೀತಿಯಲ್ಲಿ ವಿವರಿಸಬಹುದು. ಹರೆಯದ ವಯಸಿನ ಪ್ರಾರಂಭದಲ್ಲಿ ಅವರ ಮನಸ್ಸು ಹಾಗೂ ಭಾವನೆಗಳು ಸ್ಥಿರವಾಗಿರುವುದಿಲ್ಲ ಮತ್ತು ವೈಯಕ್ತಿಕ ಸಂಬಂಧಗಳನ್ನು ಗಾಢವಾಗಿ ಅರ್ಥಮಾಡಿಕೊಳ್ಳಲು ಅವರು ತಯಾರಿರುವುದಿಲ್ಲ. ಹಾರ್ಮೋನುಗಳ ಉತ್ಪತ್ತಿ ಹಾಗು ಅದರ ವ್ಯತ್ಯಾಸದಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ.

ಫೋಟೋ ಕೃಪೆ :google

ಪ್ರೀತಿ ಎಂದರೆ ಕೇವಲ ಭಾವನಾತ್ಮಕ ಸಂಬಂಧವಷ್ಟೇ ಅಲ್ಲ, ಅದು ಗೌರವ, ಬದ್ಧತೆ ಮತ್ತು ಅದರ ಬಗ್ಗೆ ಎಚ್ಚರಿಕೆಯ ಅಗತ್ಯವಿರುತ್ತದೆ. ಹಾಗಾಗಿ ಹತ್ತನೇ ತರಗತಿಗೆ ಸೇರಿರುವ ಮಕ್ಕಳಿಗೆ ಈ ವಿಚಾರಗಳನ್ನು ಹೇಗೆ ನಿರ್ವಹಿಸಬೇಕೆಂದು ಅರಿತುಕೊಳ್ಳುವುದು ಕಠಿಣವಾಗಬಹುದು. ಈ ಹಂತದಲ್ಲಿ ಮಕ್ಕಳಿಗೆ ಅವರ ಭಾವನೆಗಳನ್ನು ನಿಯಂತ್ರಿಸುವ ಮತ್ತು ವ್ಯಕ್ತಿತ್ವವನ್ನು ಬೆಳೆಯಿಸುವ ಅಗತ್ಯವಿದೆ. ತಮ್ಮ ಜ್ಞಾನ, ಅಧ್ಯಯನ, ಮತ್ತು ಹವ್ಯಾಸಗಳನ್ನು ಸುಧಾರಿಸಲು ಹೆಚ್ಚು ಗಮನ ಹರಿಸುವುದು ಉತ್ತಮ ಎಂದು ಅವರಿಗೆ ತಿಳಿ ಹೇಳಬೇಕು. ವಿದ್ಯಾಭ್ಯಾಸದ ನಂತರದ ಜೀವನ ಬಹುಮಟ್ಟಿಗೆ ಪ್ರೌಢಿಮೆಯನ್ನು ಹೊಂದಿರುತ್ತಾರೆ ಹಾಗಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಬುಧ್ಧಿವಂತರಿರುತ್ತಾರೆ. ಅಂತಹ ಸಮಯದಲ್ಲಿ ಪ್ರೀಸುವುದು, ಮದುವೆ ಆಗುವುದರ ಬಗ್ಗೆ ಯೋಚಿಸುವುದು ಸಮಂಜಸ ಎಂದು ಹೇಳಬೇಕು.

ಅವರ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಲು, ಮಕ್ಕಳ ಶಿಸ್ತಿನ ಬೆಳವಣಿಗೆ, ತಮ್ಮ ಭವಿಷ್ಯದ ಗುರಿಗಳನ್ನು ಸಾಧಿಸಲು ಧೈರ್ಯ ನೀಡಿದರೆ, ಅವರು ತಮ್ಮ ಭಾವನೆಗಳನ್ನು ಸೂಕ್ತವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಕ್ಕಳಿಗೆ ಪ್ರೀತಿ, ಸ್ನೇಹ ಮತ್ತು ಸಂಬಂಧಗಳ ಅರ್ಥವನ್ನು ಬೋಧಿಸುವುದಕ್ಕೆ ಪ್ರಾಮುಖ್ಯತೆ ನೀಡುವುದು. ಅವರಲ್ಲಿ ಭಾವನೆಗಳನ್ನು ತಿಳಿದುಕೊಳ್ಳಲು ಮತ್ತು ಅವುಗಳನ್ನು ಸಮರ್ಥವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಬಹುದು. ಪ್ರೀತಿಯ ಭಾವನೆ ಹೇಗೆ ಸಾಮಾನ್ಯವಾದ, ಹಿತೈಷಿ ಹಾಗೂ ಗೌರವಯುತ ಸಂಬಂಧಗಳ ಭಾಗವಾಗಿದೆ ಎಂಬುದನ್ನು ಅವರಿಗೆ ಅರ್ಥಮಾಡಿಸುವುದು ಮುಖ್ಯ.

ಉತ್ತಮ ಸಂಬಂಧವು ಪರಸ್ಪರ ಗೌರವ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ಅವರು ತಮ್ಮ ಸ್ನೇಹಿತರೊಂದಿಗೆ ಅಥವಾ ಇತರರೊಂದಿಗೆ ಇರುವ ಸಂಬಂಧಗಳಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ಗೌರವವನ್ನು ಹೇಗೆ ಅನುಸರಿಸಬೇಕು ಎಂದು ತಿಳಿಸಲು ಸಹಾಯ ಮಾಡಬಹುದು. ಅವರು ತಮ್ಮ ಭಾವನೆಗಳನ್ನು ಹೇಗೆ ತಿಳಿದುಕೊಳ್ಳಬಹುದು, ವ್ಯಕ್ತಪಡಿಸಬಹುದು ಮತ್ತು ನಿರ್ವಹಿಸಬಹುದು ಎಂಬುದನ್ನು ಕಲಿಸಬೇಕು. ಪ್ರೀತಿಯ ಭಾವನೆಗಳನ್ನು ಸ್ವೀಕರಿಸುವುದು ಹೇಗೆ, ಆದರೆ ಅವುಗಳನ್ನು ಗಮನಪೂರ್ವಕವಾಗಿ ಮತ್ತು ಸಮಯೋಪಯೋಗಿಯಾಗಿ ವ್ಯಕ್ತಪಡಿಸುವುದರ ಬಗ್ಗೆ ಮಾರ್ಗದರ್ಶನ ನೀಡುವುದು ಬಹಳ ಮುಖ್ಯ.

ಪ್ರೀತಿ ಅಥವಾ ಸಂಬಂಧಗಳು ಯಾವಾಗಲೂ ಇತರರ ಗೌರವ ಮತ್ತು ಆಶಯಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ, ಅವರು ತಮ್ಮ ಆತ್ಮಗೌರವ ಮತ್ತು ವ್ಯಕ್ತಿತ್ವವನ್ನು ಸದಾ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಇನ್ನೂ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪರಸ್ಪರ ಆಕರ್ಷಣೆಯ ಹಾಗು ಕುತೂಹಲದ ಹೊರತಾಗಿ ಬೇರೆ ಏನೂ ಇರುವುದಿಲ್ಲ.

ಈ ರೀತಿಯ, ಈ ವಯಸಿನಲ್ಲಿ ಯಾವುದೇ ಮಕ್ಕಳು ಪ್ರೇಮ ಪ್ರೀತಿ ಎಂದು ತಮ್ಮ ದಾರಿ ಬದಲಾಯಿಸುತಿದ್ದರೆ ಅವರಿಗೆ ಅವರ ಪೋಷಕರು ಅಲ್ಲದೆ, ಶಿಕ್ಷಕರೂ ಅಲ್ಲದೆ ಸಮಾಜದ ಯಾರೇ ವ್ಯಕ್ತಿಯಾಗಲಿ ಇದರ ಬಗ್ಗೆ ಗೊತ್ತಾದವರು ಬುದ್ಧಿ ಮಾತು ಹೇಳುವುದರಲ್ಲಿ ತಪ್ಪಿಲ್ಲ. ತಮ್ಮ ಅನುಭವಗಳನ್ನು ಕುಟುಂಬದ ಸದಸ್ಯರು ಅಥವಾ ಗುರುಗಳೊಂದಿಗೆ ಹಂಚಿಕೊಳ್ಳಲು ಮಾರ್ಗದರ್ಶನ ನೀಡಬೇಕು. ಹಿರಿಯರ ಅನುಭವಗಳನ್ನು ಕೇಳುವುದು ಅವರಿಗೂ ಹೆಚ್ಚಿನ ಜ್ಞಾನ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.

ಈ ಎಲ್ಲ ಮಾರ್ಗದರ್ಶನವು ಮಕ್ಕಳಿಗೆ ಪ್ರೀತಿ, ಸಂಬಂಧ ಮತ್ತು ಸಮರ್ಪಣೆಗಳ ಬಗ್ಗೆ ಸಂವಿಧಾನಾತ್ಮಕ ಹಾಗೂ ಗುಣಮಟ್ಟದ ಅರಿವು ನೀಡಲು ಸಹಾಯ ಮಾಡುತ್ತದೆ. ಪ್ರೀತಿ ಅಥವಾ ಭಾವನಾತ್ಮಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸರಿಯಾದ ವಯಸ್ಸು ಮತ್ತು ಸಮಯ ಅವಶ್ಯಕತೆಯಾಗಿದೆ. ಪ್ರೀತಿ, ಸ್ನೇಹ ಅಥವಾ ಸಂಬಂಧಗಳನ್ನು ಹೊಂದಲು ಯಾವುದೇ ನಿರ್ದಿಷ್ಟ ವಯಸ್ಸು ಅಥವಾ ನಿಯಮವಿಲ್ಲ, ಆದರೆ ಅವುಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ದೇಹ ಹಾಗು ಮನಃಶಕ್ತಿಯ ಬೆಳವಣಿಗೆ, ಜ್ಞಾನ, ಮತ್ತು ಸಾಮಾಜಿಕ ಅನುಭವಗಳನ್ನು ಪರಿಗಣಿಸಬೇಕು.

ಮಕ್ಕಳಿಗೆ ತಮ್ಮ ಭಾವನೆಗಳನ್ನು ಅರಿತುಕೊಳ್ಳಲು, ಪ್ರೀತಿಯ ಅರ್ಥವನ್ನು ಅರ್ಥಮಾಡಿಕೊಳ್ಳಲು, ಮತ್ತು ಅವುಗಳನ್ನು ಸವಾಲುಗಳನ್ನು ಎದುರಿಸುವ ಶಕ್ತಿ ಇರಬೇಕು. ಹತ್ತನೇ ತರಗತಿಯಲ್ಲಿ ಇರುವ ಮಕ್ಕಳು, ಸಾಮಾನ್ಯವಾಗಿ, ಪ್ರೀತಿಯನ್ನು ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಅಥವಾ ಅದರ ಗಂಭೀರತೆ ಮತ್ತು ಪರಿಣಾಮಗಳನ್ನು ತಿಳಿಯಲು ಪೂರ್ಣ ಪ್ರಮಾಣದ ಬುದ್ಧಿ ಇರುವುದಿಲ್ಲ. ಅವರು ತಮ್ಮ ಸ್ನೇಹಿತರಿಂದಲೂ ಪ್ರಭಾವಕ್ಕೊಳಗಾಗಿ ದಾರಿ ತಪ್ಪುವ ಸಾಧ್ಯತೆ ಹೆಚ್ಚು.

ಈ ನಿಟ್ಟಿನಲ್ಲಿ ಮಕ್ಕಳು ದಾರಿ ತಪ್ಪುತಿದ್ದಾರೆ ಎಂದು ತಿಳಿದು ಬಂದರೆ ಅವರ ಸುತ್ತಮುತ್ತಲಿನ ಜನರ, ಪೋಷಕರ, ಶಿಕ್ಷಕರ ಹಾಗು ಕುಟುಂಬದ ಎಲ್ಲಾ ಸದಸ್ಯರು ಅವರಿಗೆ ತಿಳಿ ಹೇಳುವುದು ಆದ್ಯ ಕರ್ತವ್ಯವಾಗಿದೆ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW