ಮದುವೆ ಬೇಡ ಎನ್ನುತ್ತಿದ್ದ ಹರೀಶ, ಗೆಳೆಯನ ಮದುವೆಯಲ್ಲಿ ಕೃತಿಕಾಳನ್ನು ನೋಡಿ ಮಾರು ಹೋದ. ಮದುವೆಯಾದರೆ ಅವಳನ್ನೇ ಎಂದು ನಿರ್ಧಾರ ಮಾಡಿದ. ಅವನು ಬಯಸಿದಂತೆ ಹರೀಶನ ಮದುವೆ ಕೃತಿಕಾಳ ಜೊತೆಗೆ ಆಗಿ ಹೋಯಿತು. ಮುಂದೇನಾಯಿತು. ಬಸವರಾಜ ಹೊನಗೌಡರ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ……
ಊರಿನ ಆ ದೊಡ್ಡ ಮನೆಗಾಗಿ ಚಂದ್ರಪ್ಪಾ ತನ್ನ ಜೀವನವನ್ನೇ ತೇಯ್ದಿದ್ದ, ಬಡವನಾದರೂ ಪ್ರಾಮಾಣಿಕತೆ, ಸೌಜನ್ಯ, ವಿಶ್ವಾಸದಲ್ಲಿ ಶ್ರೀಮಂತ. ದೊಡ್ಡಮನೆಯ ಯಜಮಾನ ಚಂದ್ರಪ್ಪನಿಗೆ ಸೂರೊಂದು ಮಾಡಿಕೊಟ್ಟು ಆಸರೆಯಾಗಿದ್ದನು. ಚಂದ್ರಪ್ಪನಿಗೆ ಹೇಳಿಕೊಳ್ಳುವ ಆಸ್ತಿಯೆಂದರೆ ಅದೇ ಮನೆ. ಅದೂ ಯಜಮಾನರು ಕಟ್ಟಿಸಿಕೊಟ್ಟದ್ದು. ಮನೆಯೆಂದರೆ ಒಂದು ದೊಡ್ಡದಾದ ಕೋಣೆ. ಅದರಲ್ಲಿಯೇ ಅಡುಗೆಮನೆ, ಅಲ್ಲಿಯೇ ಮಲಗಿಕೊಳ್ಳುವುದು. ದೇವರ ಕೋಣೆ ಅಲ್ಲಿಯೇ. ಒಟ್ಟಿನಲ್ಲಿ ಒಂದು ಕೋಣೆಯಲ್ಲಿ ಎಲ್ಲವನ್ನೂ ಮಾಡಿಕೊಂಡಿದ್ದರು.
ವಾರಕ್ಕೊಂದಿಷ್ಟು ಪಗಾರ, ಯಜಮಾನರ ಮನೆಯಲ್ಲಿ ಊಂಡುಳಿದ ಅನ್ನ, ವರ್ಷಕ್ಕೊಮ್ಮೆ ಬರುವ ಲಕ್ಷ್ಮೀ ಜಾತ್ರೆಗೆ ಎಲ್ಲರಿಗೂ ಬಟ್ಟೆ ಇಷ್ಟು ಯಜಮಾನರು ನೀಡುತ್ತಿದ್ದರು. ಅಷ್ಟರಲ್ಲಿಯೇ ಸಂತೃಪ್ತ ಜೀವನ ಚಂದ್ರಪ್ಪನ್ನದ್ದು. ಹೆಂಡತಿ ಮಗನೊಂದಿಗೆ ನಗು ನಗುತ್ತಾ ಕಾಲಕಳೆಯುತ್ತಿದ್ದನು.
ಚಂದ್ರಪ್ಪನಿಗೆ ವಯಸ್ಸೇನು ಹೆಚ್ಚಾಗಿರಲಿಲ್ಲ. ಆಕಸ್ಮಿಕವಾಗಿ ಅನಾರೋಗ್ಯ ಪೀಡಿತನಾದ ಚಂದ್ರಪ್ಪ ಹಾಸಿಗೆ ಹಿಡಿದ ಎರಡೇ ದಿನಗಳಲ್ಲಿ ಉಸಿರು ಬಿಟ್ಟನು. ಯಜಮಾನರಿಗೆ ಗೊತ್ತಾದರೆ ಉಳಿಸಿಕೊಳ್ಳುತ್ತಿದ್ದರೇನೊ!! ಸ್ವಾಭಿಮಾನಿ ಚಂದ್ರಪ್ಪಾ ಹೇಳಲಿಲ್ಲ. ಅನಾರೋಗ್ಯವೆಂದರೆ ಕೆಮ್ಮು, ನೆಗಡಿಯೆಂದು ಸುಮ್ಮನಾಗಿದ್ದಳು ಚಂದ್ರಪ್ಪನ ಹೆಂಡತಿ. ಯಾವ ರೋಗವೊ ಸರಿಯಾಗಿ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಚಂದ್ರಪ್ಪ ಇಹಲೋಕ ತ್ಯಜಿಸಿದ. ಯಜಮಾನರು ಮನೆಯ ಸದಸ್ಯನನ್ನು ಕಳೆದುಕೊಂಡಷ್ಟು ದುಃಖ ಪಟ್ಟರು. ಅವರೇ ಮುಂದೆ ನಿಂತು ಅಂತ್ಯಸಂಸ್ಕಾರದ ಕಾರ್ಯಗಳನ್ನು ಮಾಡಿದರು. ಚಂದ್ರಪ್ಪನ ಹೆಂಡತಿ ಮಗನಿಗೆ ಧೈರ್ಯ ಹೇಳಿದರು.
ವಂಶಪರಂಪರೆ ಎಂಬುದು ಎಲ್ಲಾ ಕಡೆಯೂ ಇದ್ದದ್ದೇ. ರಾಜಕಾರಣಿಗಳನ್ನೆ ನೋಡಿ ಅಪ್ಪನ ನಂತರ ಮಗನೇ ಎಂಎಲ್ಎ ಆಗುವಂತೆ ಚಂದ್ರಪ್ಪನ ನಂತರ ದೊಡ್ಡಮನೆಯಲ್ಲಿ ಕೆಲಸ ಮಾಡುವ ಕಾಯಕ ವೆಂಕಟೇಶನದ್ದು. ವೆಂಕಟೇಶ ಚಂದ್ರಪ್ಪನ ಏಕೈಕ ವಾರಸುದಾರ. ತಂದೆಯಂತೆ ಸೌಜನ್ಯ, ಪ್ರಾಮಾಣಿಕತೆಯು ರಕ್ತಗತವಾಗಿ ಬಂದಿದ್ದವು. ಶಾಲೆಯಲ್ಲಿ ಕಲಿತದ್ದು ಕಡಿಮೆಯೇ. ಸಮಾಜದಲ್ಲಿ ಕಲಿತದ್ದೇ ಹೆಚ್ಚು. ವೆಂಕಟೇಶ ದೊಡ್ಡಮನೆಯ ನಿಷ್ಠಾವಂತ ಚಾಕರಿಯ ಹುಡುಗನಾದ. ಆ ಮನೆಯವರೆಲ್ಲರೂ ಅವನ ಮೇಲೆ ವಿಶ್ವಾಸ, ಭರವಸೆ ಇಟ್ಟಿದ್ದರು. ಅವನೂ ಅದಕ್ಕೆ ಬದ್ಧನಾಗಿದ್ದನು. ಯಜಮಾನರ ಏಕೈಕ ಸಂತಾನ ಹರೀಶ. ವೆಂಕಟೇಶ ಮತ್ತು ಹರೀಶ ಒಂದೇ ವಯಸ್ಸಿನವರು. ಹೀಗಾಗಿ ಸಲುಗೆ ಹೆಚ್ಚಾಗಿತ್ತು. ಸಣ್ಣವರಿದ್ದಾಗ ಕೂಡಿ ಆಡಿದ್ದರಿಂದ ಹರೀಶನಿಗೆ ವೆಂಕಟೇಶನನ್ನು ಕಂಡರೆ ಆತ್ಮೀಯತೆ ಹೆಚ್ಚು. ವೆಂಕಟೇಶನು ತಂದೆಯೊಂದಿಗೆ ಮೇಲಿಂದ ಮೇಲೆ ಯಜಮಾನರ ಮನೆಗೆ ಹೋಗುತ್ತಿದ್ದರಿಂದ ಅವನಿಗೂ ಆ ಮನೆ ಬೇರೆ ಎನಿಸಿರಲಿಲ್ಲ.
ಯಜಮಾನರ ಮಗ ಎಂಬಿಎ ಮುಗಿಸಿಕೊಂಡು ಪಕ್ಕದ ನಗರದಲ್ಲಿ ಸ್ವಂತ ಬಿಸಿನೆಸ್ ಮಾಡುತ್ತಿದ್ದನು. ಮಗನಿಗೆ ಮದುವೆ ಮಾಡಲು ಹರೀಶನ ತಾಯಿ ಯೋಚಿಸುತ್ತಿದ್ದಳು. “ಹರೀಶ ನಿನಗೆ ಮದುವೆಯ ವಯಸ್ಸು ಹೆಣ್ಣು ನೋಡಲು ಪ್ರಾರಂಭಿಸೋಣ” ಎಂದಳು. “ಅಮ್ಮಾ ನನಗೇನು ಬಹಳ ವಯಸ್ಸಾಗಿಲ್ಲ, ಇನ್ನೇರಡು ವರ್ಷ ಕಳಿಯಲಿ” ಎಂದ. ತಾಯಿ ಹಟ ಬಿಡಲಿಲ್ಲ. ಮಗ ಕರಗಿದ. ಮ್ಯಾರೇಜ್ ಬ್ಯುರೊದಲ್ಲಿ ಹೆಸರು ರಿಜಿಸ್ಟರ್ ಮಾಡಿದರು. ಎಷ್ಟೋ ಹೆಣ್ಣುಗಳ ಬಯೋ ಡೇಟಾಗಳ ಅದಲು ಬದಲಾದರೂ ಕಂಕಣಬಲ ಕೂಡಿಬರಲಿಲ್ಲ. ಹರೀಶನ ತಾಯಿಗೆ ಆದಷ್ಟು ಬೇಗನೆ ಮದುವೆ ಮಾಡಬೇಕೆಂಬ ಆಸೆ ನಿರಾಸೆ ಆಗುತ್ತಿತ್ತು. ಹರೀಶ ಗೆಳೆಯನ ಮದುವೆಗೆ ಹುಬ್ಬಳ್ಳಿಗೆ ಹೋಗಿದ್ದನು. ಒಂದೆರಡು ದಿನ ಗೆಳೆಯನ ಜೊತೆ ಅಲ್ಲಿಯೇ ಉಳಿಯುವ ಅನಿವಾರ್ಯತೆ ಬಂತು. ಗೆಳೆಯನ ಹೆಂಡತಿಯ ಗೆಳತಿ ಕೃತಿಕಾಳಿಗೆ ಮನಸೋಲುತ್ತಾನೆ. ತಾಯಿಗೆ ಇನ್ನೆರಡು ವರ್ಷ ಕಳಿಯಲಿ ಮದುವೆಯಾಗುತ್ತೇನೆಂದು ಹೇಳುವವನು, ಇವಳನ್ನು ನೋಡಿದ ಕ್ಷಣದಲ್ಲಿಯೇ ಬದಲಾಗುತ್ತಾನೆ. “ವ್ಹಾವ್… ಎಂತಹ ಸುಂದರಿ” ಗೆಳೆಯನಿಗೆ ಹೇಳುತ್ತಾನೆ. ಗೆಳೆಯನು ಇವನ ಮನದ ಇಂಗಿತವನ್ನು ಅರಿತು ಅವಳ ಬಗ್ಗೆ ತಿಳಿದುಕೊಳ್ಳಲು ತನ್ನ ಹೆಂಡತಿಯ ಸಹಾಯ ಪಡೆಯುತ್ತಾನೆ. ಕೃತಿಕಾಳ ಡ್ರೇಸ್, ಹೇರಕಟ್, ಚಪ್ಪಲಿ, ಅವಳ ಸ್ಟೈಲ್, ಅವಳ ಲುಕ್ ಎಲ್ಲವೂ ಮಾಡರ್ನ್. ಮದುವೆಯಾದರೆ ಇಂತಹವಳನ್ನೇ ಮದುವೆಯಾಗಬೇಕೆಂದು ಮನಸ್ಸಿನಲ್ಲಿ ಕೃತಿಕಾಳನ್ನೇ ಫಿಕ್ಸ್ ಮಾಡಿಕೊಳ್ಳುತ್ತಾನೆ. ಅವಳ ಕಣ್ಣಿನಲ್ಲಿನ ರಸಿಕತೆ, ಬಳಕುವ ಸೊಂಟ ಅವನನ್ನು ಮಂತ್ರಮುಗ್ದಗೊಳಿಸುತ್ತವೆ. ಅವನದೇ ಜಾತಿಯವಳೆಂದು ತಿಳಿದ ಮೇಲಂತೂ ಇನ್ನೂ ಖುಷಿಯಾಗುತ್ತದೆ. ಮನೆಯಲ್ಲಿ, ಸಂಬಂಧಿಕರಿಂದ ಯಾವುದೇ ತಕರಾರು ಬರುವುದಿಲ್ಲ. ಇನ್ನೇನಿದ್ದರು ಮನೆಯವರಿಗೆ ತಿಳಿಸುವುದೊಂದೆ ಬಾಕಿ ಇತ್ತು. ಗೆಳೆಯನ ಕಲ್ಯಾಣ ಮಾಡಲು ಹೋಗಿ ತನ್ನ ಕನಸಿನ ರಾಣಿಯನ್ನು ಹುಡುಕಿಕೊಂಡತಾಯಿತು. “ಏನೊ ಹರೀಶ ಮುಖದ ಮ್ಯಾಗಿನ ಬಣ್ಣ ಬದಲಾಯಿತಲೋ” ಎಂದ ಗೆಳೆಯನ ಮಾತಿಗೆ. “ಎಲ್ಲಾ ನಿನ್ನ ಮದುವೆಯಿಂದ, ನಿನ್ನ ಹೆಂಡತಿ ಕಾಲ್ಗುಣದಿಂದ! ಥ್ಯಾಂಕ್ಯೂ ಕಣೋ” ಎಂದ ಹರೀಶ. “ಮದುವೆಗಳು ಸ್ವರ್ಗದಲ್ಲಿ ಮೊದಲ ನಿಶ್ಚಯವಾಗಿರತ್ತಾವಂತೆ, ಅವಳೆ ನಿನ್ನ ಹೆಂಡತಿ ಆಗಬೇಕಂತ ಮೊದಲೇ ಬರೆದಿರಬೇಕು” “ದೋಸ್ತ ಏನೆ ಆಗಲಿ ನಿನ್ನ ಮದುವೆಗೆ ಬಂದ ನನಗ ಲಾಭ ಆತ ನೋಡ” ಎಂದು ಹರೀಶ ನಕ್ಕ, ಗೆಳೆಯನೂ ನಕ್ಕನು.
ತಾಯಿಗೆ ಮದುವೆ ಚಿಂತೆ ಇದ್ದದ್ದು ಹರೀಶನಿಗೆ ಗೊತ್ತೆ ಇತ್ತು. ಮನೆಯಲ್ಲಿ ತಾನಾಗಿ ಏನೂ ಹೇಳದೆ ತಾಯಿಯೇ ಮದುವೆ ವಿಚಾರ ಪ್ರಸ್ತಾಪಿಸಿದಾಗ ಹೇಳಲು ಅವನೂ ಕಾತರನಾದನು.
ತಾಯಿಯೂ ಇವನನ್ನು ಒಂದೇರೆಡು ದಿನ ಏನೂ ಕೇಳಲೇ ಇಲ್ಲ. ಇವನಿಗೆ ಪ್ರತಿ ಕ್ಷಣವೂ ತಳಮಳ. ಅವಳ ಸುಂದರವಾದ ಮುಖ, ಸೊಂಟನ್ನು ಬಳಸಿ ನಡೆಯವ ಚೆಂದದ ನಡೆಗೆ ಇವನ ಮೈಮನಗಳಲ್ಲಿ ಸುಳಿಯುತ್ತಿದ್ದವು. ಇವನ ಚಡಪಡಿಕೆ ಹೆಚ್ಚಾಯಿತು. ನೇರವಾಗಿ ತಂದೆ ತಾಯಿಗೆ ಹೇಳದೆ ತನ್ನ ಗೆಳೆಯನ ಮೂಲಕ “ಹುಬ್ಬಳ್ಳಿಯಲ್ಲಿ ಒಂದು ವಧು ಇದೆ ಅವರ ವಿಳಾಸ ಹೀಗಿದೆ” ಇಷ್ಟನ್ನು ಮಾತ್ರ ಹೇಳಿಸಿದ. ಅವನು ಅವಳನ್ನು ನೋಡಿ ಮೆಚ್ಚಿಕೊಂಡಿದ್ದನ್ನು ಹೇಳಬೇಡೆಂದು ಮೊದಲೇ ತಿಳಿಸಿದ್ದನು. ಮನೆಯಲ್ಲಿ ಅವನು ತನಗೇನೂ ಗೊತ್ತಿಲ್ಲದವನಂತೆ ಇದ್ದನು. ಹರೀಶ ಉನ್ನತ ವ್ಯಾಸಂಗ ಮಾಡಿದ್ದರೂ, ಇಂದಿನ ಹುಡುಗರಿಗೆ ಹೋಲಿಸಿದರೆ ಇನ್ನೂ ಸಂಪ್ರದಾಯಸ್ಥ, ಗುರುಹಿರಿಯರಿಗೆ ಗೌರವ ಕೊಡುತ್ತಿದ್ದನು. ತಾಯಿ ಅವನಿಗೆ ಒಳ್ಳೆಯ ಸಂಸ್ಕಾರ ಕೊಟ್ಟಿದ್ದಳು. ಅವನು ಮನೆಯ ಮರ್ಯಾದೆ, ಗೌರವ, ಪ್ರತಿಷ್ಠೆಗಳನ್ನು ಉಳಿಸಿಕೊಳ್ಳಲು ಯಾವಾಗಲೂ, ಎಂತಹ ತ್ಯಾಗಕ್ಕೂ ಸಿದ್ಧನಿದ್ದನು. ಇದಕ್ಕಾಗಿಯೇ ಅವನ ಮೇಲೆ ಮನೆಯಲ್ಲಿ, ಸಂಬಂಧಿಕರಲ್ಲಿ ಹೆಚ್ಚಿನ ಗೌರವ.
ವಧುವನ್ನು ನೋಡಲು ಹುಬ್ಬಳ್ಳಿಗೆ ದೊಡ್ಡಮನೆ ಹಿರಿಯ ತಲೆ, ಯುವ ತಲೆಗಳೆಲ್ಲಾ ಹೊರಟವು. ವಧುವಿನ ಕಡೆಯವರಲ್ಲಿ ಸಂಭ್ರಮ. ಕೃತಿಕಾಳಿಗೂ ಹರೀಶ ಇಬ್ಬರೂ ಮಾತನಾಡಿದ್ದರೂ ಸಹ ಅವು ಕೇವಲ ಗೆಳಯನ ಮದುವೆ ಸನ್ನಿವೇಶದಲ್ಲಿ ಸಾಂದರ್ಭಿಕ ನುಡಿಗಳು ಮಾತ್ರ. ಇದು ಒನ್ ಸೈಡ್ ಲವಸ್ಟೋರಿ. ಹರೀಶ ಅವಳ ಪ್ರೇಮಪಾಶದ ಗಾಳಕ್ಕೆ ಸಿಕ್ಕಿದ್ದು ಅವಳಿಗೆ ಗೊತ್ತಿರಲಿಲ್ಲ. ನಂತರ ಅವಳ ಗೆಳತಿ, ಅಂದರೆ ಹರೀಶನ ಗೆಳೆಯನ ಹೆಂಡತಿ ಎಲ್ಲಾ ವಿಷಯಗಳನ್ನು ಹೇಳಿದಳು. ಅವಳಿಗೂ ಶ್ರೀಮಂತ ಗಂಡ ಬೇಕಾಗಿದ್ದ. “ರೋಗಿ ಬಯಸಿದ್ದು ಅನ್ನ ಹಾಲನ್ನೇ, ವೈದ್ಯರು ಹೇಳಿದ್ದು ಅದನ್ನೇ…” ಒಟ್ಟಿನಲ್ಲಿ ಅವಳಿಗೆ ಬೇಕಾದಂತಹ ಶ್ರೀಮಂತ ಕುಳ ತನ್ನ ನೋಡಲು ಬರುತ್ತಿದ್ದಾನೆಂಬ ಖುಷಿಯಿತ್ತು. ಅವಳಿಗೆ ಎಷ್ಟೋ ಸರಕಾರಿ ನೌಕರ ವರಗಳು ಬಂದಿದ್ದರೂ ರಿಜೆಕ್ಟ್ ಮಾಡಿದ್ದಳು. ಸರಕಾರಿ ನೌಕರರಿಗೆ ತಿಂಗಳಿಗೊಮ್ಮೆ ಪಗಾರ ಅದರೊಳಗೆ ಎಷ್ಟು ಉಳಿಸೋದು, ಎಷ್ಟು ಖರ್ಚುಮಾಡೋದು ಎಂಬ ಭಾವನೆ. ಮೇಲಾಗಿ ಟ್ರಾನ್ಸಫರ್ ಅಂತ ಊರೂರು ಸುತ್ತೋದು ಅವಳಿಗೆ ಬೇಕಾಗಿರಲಿಲ್ಲ. ಕಂಪನಿಯ ಸಿಇಒಗಳು ದೊಡ್ಡ ರಾಜಕಾರಣಿಗಳ ಮಕ್ಕಳು, ಜಮೀನ್ದಾರರು, ದೊಡ್ಡ ವ್ಯಾಪಾರಸ್ಥರ ಮಕ್ಕಳನ್ನು ಮದುವೆಯಾದರೆ ಖರ್ಚಿಗೆ ಬೇಕಾದಷ್ಟು ಹಣ ಸಿಗುತ್ತದೆಂಬ ಭಾವನೆ ಅವಳದ್ದು. ಈ ಕಾರಣಕ್ಕಾಗಿಯೇ ಅವಳಿಗೆ ಹರೀಶನನ್ನು ಒಪ್ಪಿಕೊಳ್ಳಲು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದಳು.
ಎರಡು ಮನೆಯವರೂ ಒಪ್ಪಿಕೊಂಡು ಭರ್ಜರಿಯಾಗಿ ಮದುವೆ ಮಾಡಿದರು. ಹರೀಶನಿಗಂತೂ ಅವನ ಹೆಂಡತಿ ಕೃತಿಕಾ ಒಮ್ಮೊಮ್ಮೆ ಸ್ವರ್ಗಲೋಕದ ಅಪ್ಸೆರೆಯರಾದ
ಊರ್ವಶಿ, ಮೆನಕೆ, ತಿಲೋತಮೆಯಂತೆ ಕಾಣುತ್ತಿದ್ದಳು. ಅವಳಿಂದ ಮನೆಗೆ ಹೊಸ ಕಳೆ, ಅವಳಿಗೆ ಹಳೆಯ ಜಮಾನದ ಸಾಮಾನುಗಳೆಂದರೆ ದ್ವೇಷ. ಹೀಗಾಗಿ ಮನೆಯಲ್ಲಿನ ಹಳೆ ಕಾಲದ ಸೋಪಾ, ಖುರ್ಚಿ, ಮುಂತಾದ ಫರ್ನಿಚರ್ ಗಳನ್ನು ಬದಲಾಯಿಸಿ ಮಾಡರ್ನ್ ಟಚ್ ಕೊಟ್ಟಳು. ರೂಮ್ ಗಳಲ್ಲಿ ಅಲಂಕಾರಿಕ ವಸ್ತುಗಳಿಗೆ ಸ್ಥಾನ ದೊರೆಯಿತು. ಇಡೀ ಮನೆಯನ್ನೇ ಮಾಡರ್ನ್ ಮಾಡಿದಳು. ಜೊತೆಗೆ ಮನೆಯಲ್ಲಿ ಊಟದ ಮೆನು ಬದಲಾವಣೆ ಮಾಡಿದಳು. ಸಂಪ್ರದಾಯ ಅಡುಗೆಯ ಜಾಗದಲ್ಲಿ ಮಾಡರ್ನ್ ರೆಸಿಪಿಗಳು ಜಾಗ ಪಡೆದವು. ವಾರಕ್ಕೊಂದೆರಡು ಬಾರಿಯಾದರೂ ಪಿಜ್ಜಾ, ಬರ್ಗ್ ರ ಇರಲೇಬೇಕು. ಇವುಗಳನ್ನೆಲ್ಲಾ ನೋಡಿದ ಮನೆಯ ಯಜಮಾನತಿ ಅಂದರೆ ಹರೀಶನ ತಾಯಿಗೆ ಇವಳ ಬಗ್ಗೆ ಒಳಗೊಳಗೆ ತೆಗಳುತ್ತಿದ್ದಳು. ನೇರವಾಗಿ ಬಯ್ದು ಬುದ್ಧಿ ಹೇಳಲು ಮಗನ ಪ್ರೀತಿ ಅಡ್ಡಬರುತ್ತಿತ್ತು. ಮಗ ಕೃತಿಕಾಳನ್ನು ಪ್ರೀತಿಸಿ ಮದುವೆಯಾಗಿದ್ದನು.
ಕೃತಿಕಾಳನ್ನು ಮಾವ ಹೊಗಳುತ್ತಿದ್ದರೆ. ಅತ್ತೆಗೆ ತಳಮಳ. ಅವಳ ಕೆಲಸ ಅತ್ತೆಗೆ ಸರಿ ಹೋಗುತ್ತಿರಲಿಲ್ಲ. ಮಗ ಹರೀಶನಿಗೆ ಬೇಸರವಾಗಬಾರದೆಂದು ಎಲ್ಲವನ್ನೂ ನೋಡಿಯೂ ನೋಡದಂತೆ ಇದ್ದಾಳೆ. ಅವಳ ವೈಯಾರ, ಡ್ರೆಸ್ ಇವಳಿಗೆ ವಾಕರಿಕೆ ತರುತ್ತಿವೆ. “ನನ್ನ ಅಣ್ಣನ ಮಗಳು, ಎಷ್ಟು ಸಂಸ್ಕಾರ, ವಿನಯವಂತೆ ಅವಳನ್ನು ಮದುವೆ ಮಾಡಿಕೊ ಎಂದರೆ, ಅವಳು ಹಳ್ಳಿ ಗಮಾರಳೆಂದು ಇವಳನ್ನು ಕಟ್ಟಿಕೊಂಡಿದ್ದಾನೆ.” ಎಂದು ಮನದಲ್ಲಿ ಮಗನನ್ನು ಬೈಯುತ್ತಿದ್ದಾಳೆ. ಈಗ ಎಲ್ಲವೂ ಮುಗಿದು ಹೋಗಿದೆ.
ಹರೀಶನು ಎಂಬಿಎ ಮಾಡಿಕೊಂಡು ಪಕ್ಕದ ನಗರದಲ್ಲಿ ಸ್ವಂತಕ್ಕೆ ದೊಡ್ಡ ಉದ್ಯಮ ನಡೆಸುತ್ತಿದ್ದಾನೆ. ಹಣಕ್ಕೇನು ಕೊರತೆಯಿಲ್ಲ. ದೊಡ್ಡ ಉದ್ಯಮಿಯಾಗಬೇಕೆಂಬ ಕನಸು ಕಾಣುತ್ತಿದ್ದಾನೆ. ಹೀಗಾಗಿ ಹಗಲಿರಳು ದುಡಿಯುತ್ತಾನೆ. ಮಹಾನ್ ಕನಸುಗಾರ. ಮನೆಯಲ್ಲಿ ಎಲ್ಲರೂ ಸಂತೋಷದಿಂದರಲು ಅವರಿಗೆ ಯಾವುದಕ್ಕೂ ಕೊರತೆ ಮಾಡಿಲ್ಲ. ಅದರಂತೆ ಇವನು ದುಡಿಯುತ್ತಾನೆ. ಅವರೂ ಸಂತೋಷದಿಂದ ಇದ್ದಾರೆ. ಪೂರ್ವಜರ ಆಸ್ತಿಯೂ ಇದೆ. ಆದರೆ….. ಕೃತಿಕಾಳದ್ದೆ ಸಮಸ್ಯೆ.
ಕೃತಿಕಾ ಬಿಂದಾಸ್ ಹುಡುಗಿ. ಆ ಹಳ್ಳಿಯಲ್ಲಿ ಅವಳದ್ದೇ ಮಾತು… ಅವಳ ಡ್ರೆಸ್… ಸ್ಟೈಲ್ ಗೆ ಹುಡುಗರನ್ನು ಬಿಡಿ, ಹುಡುಗಿಯರೇ ಮರಳಾಗಿದ್ದಾರೆ. ಇದರಿಂದ ಮನೆಯವರಿಗೆ ಇರಿಸು ಮುರುಸಾಗುತ್ತಿದೆ. ಕೃತಿಕಾಳಿಗೆ ಅಡುಗೆಯಂತೂ ಬರುವುದಿಲ್ಲ. ಮನೆಯಲ್ಲಿ ಆಳುಗಳು ಮಾಡಿದ ಅಡುಗೆಗೆ ದಿನಕ್ಕೊಂದು ಹೆಸರಿಟ್ಟು ಅವರನ್ನೇ ಬೈಯುತ್ತಿದ್ದಳು. ಸುಮ್ಮ ಸುಮ್ಮನೆ ಉಪ್ಪು ಹೆಚ್ಚಾಯಿತು, ಖಾರ ಕಡಿಮೆಯಾಯಿತು. ಹೀಗೆ ಪ್ರತಿಯೊಂದರಲ್ಲೂ ತಪ್ಪು ಕಂಡು ಹಿಡಿದು ಪಕ್ಕದ ಪಟ್ಟಣದಿಂದ ಊಟ ತರಿಸುತ್ತಿದ್ದಳು. ದೊಡ್ಡಮನೆಯಲ್ಲಿ ನಿಷ್ಠಾವಂತ ಆಳುಗಳಾಗಿರುವುದರಿಂದ ಯಜಮಾನರ ಮುಖನೋಡಿ ಸುಮ್ಮನಾಗುತ್ತಿದ್ದರು. ದೊಡ್ಡಮನೆಯ ವಾತಾವರಣ “ಮೊದಲಿನಂತೆ ಚೆನ್ನಾಗಿಲ್ಲ” ಎಂದು ಎಷ್ಟೋ ಸಲ ಆಳುಗಳೇ ಮಾತನಾಡಿಕೊಳ್ಳುತ್ತಿದ್ದರು. ಇಷ್ಟೇಲ್ಲಾ ಆದರೂ ಹರೀಶನ ಮುಂದೆ ಇದನೆಲ್ಲಾ ಹೇಳಲು ಯಾರಿಗೂ ಧೈರ್ಯವಿಲ್ಲ. ತಂದೆ ತಾಯಿಗೆ ಅವನ ಮನಸ್ಸನ್ನು ನೋಯಿಸುವ ಇಚ್ಚೆಯಿಲ್ಲ. ತಂದೆ ಮೊದಮೊದಲು ಸೊಸೆಯನ್ನು ಬೆಂಬಲಿಸಿದ್ದರೂ ಅವಳ ಅತಿರೇಕಗಳ ವರ್ತನೆಗಳಿಂದ ಅವನ ಮನಸ್ಸಿಗೆ ನೋವಾಗಿತ್ತು. ಹರೀಶನಿಗೆ ಇದೆಲ್ಲಾ ಗೊತ್ತಿತ್ತು. ಒಂದಿಬ್ಬರು ಗೆಳೆಯರೂ ಅವನಿಗೆ ಹೇಳಿದ್ದರು. ಒಂದು ದಿನ ಹರೀಶ “ಕೃತಿಕಾ ಇದು ಹಳ್ಳಿ ನಿನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೋ” ಎಂದನು. “ಹೇಗೆ” ಎಂದಳು ಹುಬ್ಬು ಹಾರಿಸುತ್ತಾ. “ಬಟ್ಟೆಗಳನ್ನು ಮೈ ಕಾಣುವ ಹಾಗೇ….” ಎನ್ನುತ್ತಿದ್ದನು. ಅವಳು ತಡೆದು “ನೀನು ನನ್ನನ್ನು ಏನು ನೋಡಿ ಮೆಚ್ಚಿಕೊಂಡೆ” ಎಂದಳು. “ನಿನ್ನ ಸೌಂದರ್ಯ” ಎಂದ.
” ದೇಹದಿಂದ ಸೌಂದರ್ಯ!! ಬಟ್ಟೆಗಳಿಂದ ಸೌಂದರ್ಯ!! ” ಎಂದಳು. ಅವನಿಗೆ ಗೆಳೆಯನ ಮದುವೆಯ ನೆನಪುಗಳು ಕಣ್ಣು ಮುಂದೆ ಬಂದು ಹೋದವು. ಹರೀಶ ತನ್ನ ಗೆಳೆಯನ ಮದುವೆಗೆ ಹೋದಾಗ ಕೃತಿಕಾ ಕಣ್ಣಿಗೆ ಬಿದ್ದದ್ದು, ಅಂದು ಅವಳ ಬೆನ್ನು ಹಿಂದೆ ಬಿದ್ದದ್ದು, ಅವಳ ಮಾಡರ್ನ್ ಲುಕ್ ಗೆ ಮನಸೋತ ಹೋದದ್ದು, ಅವಳು ಕಲಿತ್ತಿದ್ದು ಅಷ್ಟಕ್ಕಷ್ಟೇ. ಫ್ಯಾಶನ್ ಎಂದರೆ ಅವಳಿಗೆ ಪ್ರಾಣ. ಮದುವೆಯ ಮೊದಲಿದ್ದ ಪ್ರೀತಿ ಅದು ಕೇವಲ ಬಾಹ್ಯ ಸೌಂದರ್ಯದ ಮತ್ತು ಆಕರ್ಷಣೆಯಾಗಿತ್ತು ಎಂಬುವುದು ಹರೀಶನಿಗೆ ಈಗ ಮನವರಿಕೆಯಾಗಿದೆ. ಆದರೆ ಕಾಲ ಮಿಂಚಿ ಹೋಗಿದೆ.
ಬರಬರುತ್ತಾ ಇಬ್ಬರ ನಡುವೆ ಅಂತರ ಹೆಚ್ಚಾಗುತ್ತಾ ಹೋಯಿತು. ಅವನು ಅವಳಲ್ಲಿ ಆಸಕ್ತಿ ಕಳೆದುಕೊಂಡ. ಆದರೆ ಅವಳಿಗೆ ಮನೆಯಲ್ಲಿ ಒಂಟಿ ಭಾವನೆ ಕಾಡುತ್ತಿತ್ತು. ಆಗ ಅವಳ ಕಣ್ಣಿಗೆ ಬಿದ್ದವನೇ ವೆಂಕಟೇಶ. ಅವನು ಶಾಲೆಯಲ್ಲಿ ಕಲಿತದ್ದು ಕಡಿಮೆಯಿದ್ದರೂ ಸಮಾಜದಲ್ಲಿ ಕಲಿತದ್ದು ಬಹಳಷ್ಟಿತ್ತು. ನೋಡಲು ಗಟ್ಟಿಮುಟ್ಟಾದ ಆಳು. ಯಾವಾಗಲೂ ರಾಜಕುಮಾರನ ಹಾಡುಗಳನ್ನು ಹಾಡುತ್ತಾ ದೊಡ್ಡಮನೆಯಲ್ಲಿ ಯಾರೇ ಏನೇ ಕೆಲಸ ಹೇಳಿದರೂ ಇಲ್ಲ ಎನ್ನದೇ ಮಾಡುವ ನಿಷ್ಠಾವಂತ ಕೆಲಸಗಾರ. ಅವನ ಮನಸ್ಸು ಕಪಟ, ವಂಚನೆ, ದ್ರೋಹ ಕೆಲಸ ಮಾಡುವವರನ್ನು ವಿರೋಧಿಸುತ್ತಿತ್ತು. ಅಂತಹದರಲ್ಲಿ ಸ್ವತಃ ಕೆಟ್ಟ ಕೆಲಸಕ್ಕೆ ಕನಸು ಮನಸ್ಸಿನಲ್ಲಿಯೂ ಎಂದೂ ಕೈ ಹಾಕದ ದೊಡ್ಡ ವ್ಯಕ್ತಿತ್ವ ಅವನದ್ದು. ಆದರೆ ಏನಾದರೂ ನೆಪ ಮಾಡಿಕೊಂಡು ಕೃತಿಕಾ ಅವನ ಜೊತೆ ಹರಟೆ ಹೊಡೆಯಲು ಪ್ರಯತ್ನಿಸುತ್ತಿದ್ದಳು. ಅವನಿಗೆ ಇದೇಕೊ ಸರಿ ಕಾಣಲಿಲ್ಲ. ಅವಳಿಂದ ದೂರವಿರಲು ಪ್ರಯತ್ನಿಸುತ್ತಿದ್ದನು. ಅವಳು “ವೆಂಕಟೇಶ ಬಾ ಇಲ್ಲಿ, ಆ ವಸ್ತು ತೆಗೆದುಕೊಂಡು ಬಾ, ಇದನ್ನು ಮಾಡು” ಎಂದು ಸುಮ್ಮನೆ ಕೆಲಸ ಹೇಳುತ್ತಿದ್ದಳು. ಅವನು ಅವಳ ರೂಮಿನಲ್ಲಿ ಬರುವ ವೇಳೆಯಲ್ಲಿಯೇ ಅವಳ ಅಂಗಾಂಗಗಳ ಪ್ರದರ್ಶನ ಮಾಡುತಿದ್ದಳು. ರೂಮ್ ಸ್ವಚ್ಛ ಮಾಡಲು ಹೆಣ್ಣು ಆಳುಗಳಿದ್ದರೂ ಇವನನ್ನೇ ಕರೆಯುತ್ತಿದ್ದಳು. ಉದ್ದೇಶಪೂರ್ವಕವಾಗಿಯೇ ಏನೊ ಕೊಡುವಂತೆ ನಾಟಕ ಮಾಡಿ ಅವನ ಕೈಹಿಡಿಯುತ್ತಿದ್ದಳು. ಇದರಿಂದ ಅವನಿಗೆ ಮುಜುಗರ ಆಗುತ್ತಿತ್ತು.
ವೆಂಕಟೇಶನು ಕೃತಿಕಾಳ ಕಣ್ಣು ತಪ್ಪಿಸಿ ಓಡಾಡಲು ಪ್ರಾರಂಭಿಸಿದನು. ಆದರೆ ಅವಳು ಬಿಡಬೇಕಲ್ಲ… ಗಂಡನು ದುಡಿದು ಬಂದು ಮಲಗುತಿದ್ದ. ಅವಳಿಗೆ ದೈಹಿಕ ಸುಖದ ಅನಿವಾರ್ಯತೆ ಇತ್ತು. ವೆಂಕಟೇಶನಿಗೆ ವಯಸ್ಸಿದ್ದರೂ ದೊಡ್ಡಮನೆಯ ಅನ್ನದ ಋಣ ಮತ್ತು ಪ್ರಮಾಣಿಕತೆಗಳಿದ್ದವು. ಹೀಗಾಗಿ ಅವನು ಆ ಮನೆಗೆ ಮೋಸ ಮಾಡಲಾರ. ಅಂದು ಅವಳು ತೀರ್ಮಾನಿಸಿಯೇ ಬಿಟ್ಟಿದ್ದಳು. ಅವನಿಂದ ಸುಖ ಪಡೆಯಲೇಬೇಕು. ಇಲ್ಲದಿದ್ದರೇ ಅವನನ್ನೇ ಈ ಮನೆಯಿಂದಲೇ ಹೊರಗೆ ಹಾಕಬೇಕು. ನಮ್ಮ ಮನೆಯ ಆಳು ನನ್ನಂತಹ ಸೌಂದರ್ಯ, ವಯಸ್ಸಿನ ಹೆಣ್ಣು ಕರೆದರೂ ನನ್ನನ್ನೇ ದಿಕ್ಕರಿಸುವ ಧೈರ್ಯ ಹೇಗೆ ಬಂತು ಅವನಲ್ಲಿ. ಅವಳಲ್ಲಿ ಕಾಮದ ಸೇಡು ತುಂಬಿಕೊಂಡಿತ್ತು. ಉಪಾಯವಾಗಿ ವೆಂಕಟೇಶನನ್ನು ತನ್ನ ಕೋಣೆಗೆ ಕರೆಯಿಸಿಕೊಂಡಳು. “ನೀನು ನಾ ಹೇಳಿದ ಹಾಗೆ ಕೇಳಬೇಕು” ಎಂದಳು. ಅವನು ಹೆದರುತ್ತಾ “ಹೇಳಿ ಮೇಡಂ” ಎಂದನು. “ನನ್ನ ಕೈ ಹಿಡಿದುಕೊಳ್ಳು” ಎಂದಳು. ಅವನು ಸುಮ್ಮನೆ ನಿಂತನು. ಅವಳೇ ಕೋಣೆಯ ಬಾಗಿಲು ಹಾಕಿ ಅವನನ್ನು ತಬ್ಬಿಕೊಂಡಳು. ಅವನು ಗಲಿಬಿಲಿಗೊಂಡನು. ಕೈಕಾಲು ಗಡಗಡ ನಡುಗುತ್ತಿದ್ದವು. ನಾಲಿಗೆ ಬತ್ತಿತ್ತು. ಏನು ಮಾಡಲು ತಿಳಿಯಲಿಲ್ಲ. “ನಾನು ಹೇಳಿದ ಹಾಗೆ ಕೇಳದಿದ್ದರೆ ನನ್ನ ಮೇಲೆ ಅತ್ಯಾಚಾರ ಮಾಡಿದ ಕೇಸ್ ನಲ್ಲಿ ಜೈಲಿಗೆ ಹಾಕಿಸುತ್ತೇನೆ” ಎಂದಳು. ಮೊದಲೇ ಹೆದರಿದ್ದ ವೆಂಕಟೇಶ ಜೈಲು ಶಬ್ಧ ಕೇಳಿ ಮತ್ತಷ್ಟು ಹೆದರಿಕೊಂಡ. ತನ್ನಲ್ಲಿದ್ದ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಅವಳ ತೆಕ್ಕೆಯಿಂದ ಬಿಡಿಸಿಕೊಂಡು ಕೋಣೆಯಿಂದ ಹೊರಬಂದನು. ಓಡುತ್ತಾ ತನ್ನ ಮನೆ ಸೇರಿದನು. “ವೆಂಕಟೇಶ ಇಷ್ಟು ಬೇಗ?” ಆಶ್ಚರ್ಯದಿಂದ ತಾಯಿ ಕೇಳಿದಳು. “ಅಮ್ಮ ಏಕೋ ತಲೆ ನೋವು” ಎಂದನು.
ಕೃತಿಕಾಳಿಗೆ ವೆಂಕಟೇಶನ ಮೇಲೆ ಎಲ್ಲಿಲ್ಲದ ಸಿಟ್ಟು, ಸೇಡುಗಳು ಒಮ್ಮಲೆ ಹುಟ್ಟಿ ನನ್ನನ್ನು ಧಿಕ್ಕರಿಸಿ ಅವನನ್ನು ಜೀವನದಲ್ಲಿ ನೆನಪಿನಲ್ಲಿ ಉಳಿಯುವಂತಹ ಶಿಕ್ಷೆಯಾಗಲೇ ಬೇಕು. ಅವನು ಮಾಡಿದ ತಪ್ಪು ಅವನಿಗೆ ಅರಿವಾಗಬೇಕು. ನನ್ನ ಕಾಲು ಹಿಡಿಯಬೇಕು. ಎಂದು ನಿರ್ಧರಿಸಿ ಗಂಡನಿಗೂ ಏನು ಹೇಳದೆ ಪೋಲಿಸ್ ಸ್ಟೇಷನ್ ಗೆ ಕರೆಮಾಡಿ ವೆಂಕಟೇಶನ ಮೇಲೆ ಅತ್ಯಾಚಾರ ಕೇಸ್ ಹಾಕಿದಳು. ನಂತರ ಸ್ಟೇಷನ್ ಗೆ ಬಂದು ದೂರ ಕೊಡುತ್ತೇನೆ. ಮೊದಲು ಅವನು ಓಡಿಹೋಗುತ್ತಾನೆ ಒದ್ದು ಒಳಗೆ ಹಾಕಿ ಎಂದು ಪೋಲಿಸರಿಗೆ ಹೇಳಿದಳು. ದೊಡ್ಡಮನೆ ಸೊಸೆ ಹೇಳಿದರೆ ಸಾಕು ಪೋಲಿಸರು ವೆಂಕಟೇಶನ ಮನೆಗೆ ಬಂದರು.
ವೆಂಕಟೇಶನು ಒಂದು ತೀರ್ಮಾನಕ್ಕೆ ಬಂದನು. ಇನ್ನು ಮುಂದೆ ದೊಡ್ಡಮನೆ ಕೆಲಸವೇ ಬೇಡ. ಬೇರೆ ಕಡೆ ಕೆಲಸಕ್ಕೆ ಹೋದರಾಯಿತೆಂದು ಹಾಸಿಗೆ ಮೇಲೆ ಹೊರಳಾಡುತ್ತಿರಲು “ಏ ವೆಂಕಟೇಶ ಹೊರಗೆ ಬಾ” ಎಂದು ಯಾರೊ ಕರೆದಂತಾಯಿತು. ಹೊರಗೆ ಬಂದು ನೋಡಿದರೆ ಪೋಲಿಸ್ ರು “ಮಗನೇ ಉಂಡ ಮನೆಗೆ ಕಣ್ಣು ಹಾಕುತ್ತಿಯಾ” ಎಂದು ಅಂಗಿಯ ಕಾಲರಗೆ ಕೈಹಾಕಿದ ಪೋಲಿಸ್ ರು ಎಳೆದೊಯ್ಯುತ್ತಿರಲು. ತಾಯಿ ಕಣ್ಣೀರ ಹಾಕುತ್ತಾ “ನನ್ನ ಮಗ ಒಳ್ಳೆಯವನು” ಎಂದು ಪೋಲಿಸರಿಗೆ ಕೈಮುಗಿಯುತ್ತಿದ್ದಳು. ವೆಂಕಟೇಶನಿಗೂ ಏನಾಗುತ್ತಿದೆ ಎಂಬುದು ಗೊತ್ತಿಲ್ಲ. ಯಜಮಾನತಿ ಕೃತಿಕಾ ಹೇಳಿದಂತೆ ಮಾಡಿದಳಾ! ಅವಳು ಸುಮ್ಮನೆ ಹೆದರಿಸಲು ಹೇಳಿದ್ದಾಳೆ ಅಂದುಕೊಂಡರೆ! ಕಣ್ಣೀರು ಹಾಕುತ್ತು ಪೋಲಿಸ್ ಗಾಡಿ ಹತ್ತಿದನು. ಪೋಲಿಸ್ ರು ಎಳೆದೊಯ್ಯುವದಕ್ಕಿಂತ ಜನರ ನೋಟದಿಂದ ಅವನ ಹಾಗೂ ಅವನ ತಾಯಿಯ ಮನಸ್ಸಿಗೆ ನೋವಾಗಿತ್ತು. ಸ್ಟೇಷನ್ ಗೆ ಹೋದಾಗ ನೈಜ ಗೊತ್ತಾಯಿತು. ಕೃತಿಕಾ ಮೇಡಂ ಅವನ ಮೇಲೆ ಅತ್ಯಾಚಾರ ಕೇಸ್ ಹಾಕಿದರ ಬಗ್ಗೆ. ಅವನ ಅನುಮಾನ ಸರಿಯಾಗಿತ್ತು.
ಕೃತಿಕಾ ಇಷ್ಟೆಲ್ಲಾ ಮಾಡಿದರೂ ದೊಡ್ಡಮನೆಯಲ್ಲಿ ಎಲ್ಲರ ಮನಸ್ಸುಗಳ ಈ ಘಟನೆ ಸತ್ಯವೆಂದು ನಂಬಲು ತಯಾರಿರಲಿಲ್ಲ. ಕಾರಣ ವೆಂಕಟೇಶ ಸಣ್ಣ ಮಗುವಿದ್ದಾಗಿನಿಂದಲೂ ತಂದೆಯ ಜೊತೆ ಇದೆ ಮನೆಯಲ್ಲಿ ಬೆಳೆದವನು. ಅವನ ಬಗ್ಗೆ ಎಲ್ಲರಿಗೂ ಗೊತ್ತು, ಹೀಗಾಗಿ ಹರೀಶನ ತಂದೆ ತಾಯಿಯರಿಗೆ ಈ ವಿಷಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಳ್ಳಿಯಲ್ಲಿ ದೊಡ್ಡಮನೆ ಮಾನ ಮಣ್ಣುಪಾಲು ಆದದ್ದು ಅವರಿಗೆ ಜನಕ್ಕೆ ಮುಖ ತೋರಿಸಲಾಗುತ್ತಿಲ್ಲ. ಕೆಟ್ಟ ಸುದ್ದಿ ಪ್ರಚಾರ ಪಡೆದಷ್ಟು ಒಳ್ಳೆಯ ಸುದ್ದಿ ಬೇಗ ಪ್ರಚಾರವಾಗುದಿಲ್ಲ. ಈಗ ಆ ಹಳ್ಳಿ ತುಂಬಾ ಗೌಡರ ಸೊಸೆಯ ಸುದ್ದಿಗೆ ರೆಕ್ಕೆ ಪುಕ್ಕಗಳು ಅಂಟಿಸಿಕೊಂಡು ಬೇಕಾದ ಹಾಗೆ ಹಾರಾಡಿಸುತ್ತಿದ್ದಾರೆ. ಹಂಗಂತೆ, ಹಿಂಗಂತೆ ಖುದ್ದು ಕಣ್ಣಾರೆ ಕಂಡವರಂತೆ ವರ್ಣರಂಜಿತವಾಗಿ ವರ್ಣಿಸುತ್ತಿದ್ದಾರೆ. ಸೊಸೆಯಿಂದ ಆ ಮನೆತನದ ಗೌರವ ಹೋಗಿದೆ.
ವೆಂಕಟೇಶ ಎಷ್ಟೇ ಬೇಡಿಕೊಂಡರು ಕೇಳುವ ಕಿವಿಗಳು ಅಲ್ಲಿರಲಿಲ್ಲ. ಅವನನ್ನು ಅಪರಾಧಿಯನ್ನಾಗಿ ಮಾಡಿದರು. ಬಡವನ “ಕೋಪ ದವಡೆಗೆ ಮೂಲ” ಎನ್ನುವಂತೆ ದೇವರ ಮೇಲೆ ಬಾರ ಹಾಕಿದನು. ಸ್ಟೇಷನ್ ಪಕ್ಕದ ಸಬ್ ಜೈಲಿನಲ್ಲಿ ಇರಿಸಿದರು. ಇಲ್ಲಿ ನಡೆದ ಘಟನೆಗಳು ಹರೀಶನಿಗೆ ರಾತ್ರಿ ಗೊತ್ತಾದವು. ಅವನು ನಂಬಲಿಲ್ಲ. “ವೆಂಕಟೇಶ ಒಳ್ಳೆಯವನು ಈ ರೀತಿ ಮಾಡಲು ಸಾಧ್ಯವಿಲ್ಲ” ಎಂದನು. ಇದನ್ನು ಕೇಳಿ ಕೃತಿಕಾ ಸಿಟ್ಟಿನಿಂದ “ಕಟ್ಟಿಕೊಂಡ ಹೆಂಡತಿಗಿಂತ ಆಳುಗಳ ಮೇಲೆ ನಂಬಿಕೆ ಹೆಚ್ಚಾಯಿತಾ?” ಎಂದು ಮಾತಿನಲ್ಲಿಯೇ ತಿವಿದಳು. ಅವನ ಮನಸ್ಸು ವೆಂಕಟೇಶನನ್ನು ಅಪರಾಧಿ ಸ್ಥಾನದಲ್ಲಿ ನೋಡಲು ಒಪ್ಪುತ್ತಿಲ್ಲ. ಹೆಂಡತಿಯಿಂದ ನಡೆದ ಘಟನೆಯ ಪ್ರತಿಯೊಂದು ಅಂಶಗಳನ್ನು ಕೇಳಿದನು. ಅವನಿಗೇನೊ ಹೊಳೆದಂತಾಯಿತು. ರಾತ್ರಿ ಮನೆಯ ಟೆರೇಸ್ ಮೇಲೆ ಒಬ್ಬನೇ ಹೋಗಿ ತನ್ನ ಮೊಬೈಲ್ ಚೆಕ್ ಮಾಡಿದನು. ಸತ್ಯ ಗೊತ್ತಾಯಿತು.
ಕೆಲವು ದಿನಗಳ ಹಿಂದೆ ಹೆಂಡತಿ ಫ್ಯಾಶನ್, ಸ್ಟೈಲ್ ಗಳ ಬಗ್ಗೆ ಗುಮಾನಿಗಳು ಕಿವಿಗೆ ಬಿದ್ದಾಗ ಅವನು ಎರಡು ಹಿಡನ್ ಕ್ಯಾಮರಾಗಳನ್ನು ಅವಳ ಮೇಲೆ ಕಣ್ಣಿಡಲು ಬಳಸಿದ್ದನು. ಮನೆಯ ವೈಫೈ ಕನೆಕ್ಟ್ ಮಾಡಿ ತನ್ನ ಮೊಬೈಲ್ ದಲ್ಲಿ ರೆಕಾರ್ಡ್ ಆಗುವ ಹಾಗೆ ಮಾಡಿದ್ದನು. ಕೆಲಸದ ಒತ್ತಡದಲ್ಲಿ ಅವುಗಳನ್ನು ನೋಡಿರಲಿಲ್ಲ. ಎಲ್ಲ ವೀಡಿಯೋಗಳನ್ನು ನೋಡಿದಾಗ ಕೃತಿಕಾ ಸುಳ್ಳು ಆರೋಪ ಮಾಡಿದ್ದು ಗೊತ್ತಾಯಿತು. ಆದರೆ ಈ ಸತ್ಯವನ್ನು ಈಗಲೇ ಹೇಳದೆ, ನಾಳೆ ವೆಂಕಟೇಶನನ್ನು ಮನೆಗೆ ಕರೆದುಕೊಂಡು ಬಂದು ಹೇಳಿದರಾಯಿತೆಂದು ಮಲಗಿಕೊಂಡನು.
ಮರುದಿನ ಹರೀಶ ಪೋಲಿಸ್ ರಿಗೆ ಎಲ್ಲವನ್ನೂ ವಿವರಿಸಿ ಹೆಂಡತಿಯಿಂದ ಕೇಸ್ ಹಿಮ್ಮಡೆಯುವುದಾಗಿ ಹೇಳಿ ವೆಂಕಟೇಶನನ್ನು ಬಿಡಿಸಿಕೊಂಡು ಬಂದನು. “ಅಪರಾಧಿಯನ್ನು ಮನೆಗೇಕೆ ಕರೆದುಕೊಂಡು ಬಂದಿದ್ದೀರಿ?” ಎಂದು ಸಿಟ್ಟಿನಿಂದ ಕೇಳಿದಳು. “ಅಪರಾಧಿ ಅವನ್ನಲ್ಲ ನೀನು” ಎಂದನು. ವೆಂಕಟೇಶನಿಗೆ ಸಮಾಧಾನವಾಯಿತು. ಸ್ಪೈ ಕ್ಯಾಮರಾ ಇಟ್ಟಿದ್ದನ್ನು ಕೃತಿಕಾಳಿಗೆ ಹೇಳಿದಾಗ, ಮುಖ ಬಾಡಿಸಿಕೊಂಡು ಹೋದಳು. “ಕ್ಷಮಿಸಿಬಿಡು ವೆಂಕಟೇಶ ಅವಳ ಬದಲಾಗಿ ನಾನು ಸ್ವಾರಿ ಕೇಳುತ್ತೇನೆ” ಎಂದು ಕೈ ಮುಗಿದನು. “ಸರ್ ನೀವು ಕೆಲಸದನ ಬಳಿ ಕ್ಷಮೆ ಕೇಳಬಾರದು” ಎಂದನು. “ಸರ್ ನಿಮ್ಮಿಂದ ಬಹಳ ಉಪಕಾರವಾಯಿತು” ಎಂದನು. “ವೆಂಕಟೇಶ ನಾಳೆಯಿಂದ ಈ ಮನೆಯಲ್ಲಿ ಕೆಲಸವಿಲ್ಲ, ನನ್ನ ಜೊತೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಲು ತಯಾರಾಗು” ಎಂದು ಹೇಳಿ ಅವನನ್ನು ಮನೆಗೆ ಕಳುಹಿಸಿದನು.
ಹರೀಶ ತನ್ನ ಬೆಡ್ ರೂಂಗೆ ಬಂದನು. ಕೃತಿಕಾಳಿಗೆ ಸಂಕಟವಾಗುತ್ತಿತ್ತು. ಅಪರಾಧಿ ಭಾವನೆ ಕಾಡುತ್ತಿತ್ತು. ಹರೀಶನು “ಕೃತಿಕಾ ಆಯ್ ಆ್ಯಮ್ ಸ್ವಾರಿ” ನಾನು ನನ್ನ ಉದ್ಯಮ ಬಗ್ಗೆ ತಲೆಕೆಡಿಸಿಕೊಂಡೆ ನಿನ್ನ ಜೊತೆ ವೇಳೆಯನ್ನು ಕಳೆಯುವುದನ್ನು ಮರೆತುಬಿಟ್ಟೆ. ಇನ್ನು ಮುಂದೆ ಹಾಗೆ ಆಗುವುದಿಲ್ಲ ಎಂದು ಅವಳ ತೋಳಲ್ಲಿ ಬಳಸಿ ಹಣೆಗೆ ಮೆಲ್ಲನೆ ಮುತ್ತಿಟ್ಟನು. ಅವಳು ನಾಚಿ ನೀರಾದಳು..
- ಬಸವರಾಜ ಹೊನಗೌಡರ – ಬಸಾಪೂರ ಜಿ. ಬೆಳಗಾವಿ
