ಅನ್ಯಾಯದ ಮಟ್ಟವನ್ನು ತಗ್ಗಿಸಬಹುದೇ?



ಎದೇಯೆತ್ತರಕ್ಕೆ ಬೆಳೆದ ಮಕ್ಕಳನ್ನು ಕಡಿಯಬೇಕಾಗಬಹುದು ಎಂದು ಸಲಹಿದ ತಾಯಿಗೆ ಲೆಕ್ಕ ಕೊಡುತ್ತಿದ್ದಾರಂತೆ- ಅಂದರೆ ಪಕ್ಕದಲ್ಲೆ ಇನ್ನೊಂದು ಹೈ ವೋಲ್ಟೇಜಿನ ಲೈನು ಎಳೆಯಲಿದ್ದಾರಂತೆ, ಕಂಪೆನ್ಸೇಶನು ಕೊಡುತ್ತಾರಂತೆ. ಎಂದಾಗ ಮನ ನೊಂದಿತು – ಮಧುಸೂದನ ವೈ ಎನ್, ಮುಂದೆ ಓದಿ…

ಈ ಸಲದ #BIFFES ನಲ್ಲಿ commitment hasan ಎಂಬ ಸಿನಿಮಾ ನೋಡಿದೆ. ಟರ್ಕಿ ದೇಶದ್ದು. ಒಬ್ಬ ದೊಡ್ಡ ರೈತ. ಎಕರೆಗಟ್ಟಲೆ ಟೊಮೇಟೋ ಬೆಳೆದಿದ್ದಾನೆ. ಹೊಲದ ತುಂಬ ಗಿಡಗಳು ಹಣ್ಣಿನ ಭಾರದಿಂದ ತೂಗುತ್ತಿವೆ. ಒಂದಿನ ಒಬ್ಬ ವ್ಯಕ್ತಿ ಕಾರಿನಲ್ಲಿ ಬರುತ್ತಾನೆ. ಟೊಮ್ಯಾಟೊದ ರೇಟು ಗೀಟು ವಿಚಾರಿಸುತ್ತ ಕುಶಲೋಪರಿ ನಡೆಸಿ ಮುಖ್ಯ ವಿಚಾರಕ್ಕೆ ಬರುತ್ತಾನೆ.

ಈ ಜಮೀನಿನ ಮೂಲಕ ಹೈ ವೋಲ್ಟೇಜು ಲೈನು ಹೋಗುತ್ತದೆಂದು ಹಸನ್‌ ನ ಟೊಮೇಟೊ ನೆಲದಲ್ಲಿ ಟವರು ಬೀಳುತ್ತದೆಂದು ತಿಳಿಸುತ್ತಾನೆ. ಹಸನ್‌ ಎದೆಗುಂದುತ್ತಾನೆ. ತೀರ ಕುಸಿದು ಕೂರುವುದಿಲ್ಲ. ಅವನು ಸಣ್ಣ ರೈತನಲ್ಲ. ಬೇರೆ ಕಡೆ ಸೇಬಿನ ತೋಟವಿದೆ. ಕಾರ್ಯೋನ್ಮಖನಾಗುತ್ತಾನೆ. ಸಮೀಪದಲ್ಲಿದ್ದ ಟವರು ಊಣುವ ಕಂಪನಿಯ ಆಫೀಸಿಗೆ ತೆರಳಿ “ದಯವಿಟ್ಟು ನನ್ನ ಜಮೀನಿನಲ್ಲಿ ಊಣಬೇಡಿ, ಬೇಕಾದರೆ ಪಕ್ಕದ ಜಮೀನಿನಲ್ಲಿ ಊಣಿ” ಎಂದು ಬೇಡಿಕೊಳ್ಳುತ್ತಾನೆ. ಅಲ್ಲಿನ ಎಂಜಿನಿಯರ್ ನಗುತ್ತ “ಪಕ್ಕದ ಜಮೀನಿನವನ ಒಪ್ಪಿಗೆ ಪಡೆದಿದೀಯ?” ಎಂದು ಕೇಳುತ್ತಾನೆ. ನಿನ್ನ ನಂತರ ಅವನು ಬರ್ತಾನೆ, ಅವನ ನಂತರ ಇನ್ನೊಬ್ಬನು ಬರ್ತಾನೆ, ಎಲ್ಲರಿಗೂ ಹ್ಞೂ… ಹ್ಞೂ… ಅಂತ ಸರಿಸುತ್ತ ಹೋದರೆ ಟವರು ಎಲ್ಲಿ ಊಣುವುದು ಅಭಿವೃದ್ಧಿ ಕಾರ್ಯ ಹೇಗೆ ನೆರವೇರಿಸುವುದು? ಎಂದು ಪ್ರಶ್ನಿಸುತ್ತಾನೆ. ಹಸನ್‌ ಹೊರಬರುತ್ತಾನೆ. ಅಲ್ಲಿಗೆ ಸುಮ್ಮನಾಗುವುದಿಲ್ಲ. ಅವನಿಗೆ ಸ್ಥಳೀಯ ನ್ಯಾಯಾಧೀಶನ ಸ್ನೇಹವಿದೆ. ಹಿಂದೆ ಆತನಿಂದ ಒಂದು ತೀರ್ಪು ತನ್ನ ಪರವಾಗಿ ಬಂದಿದೆ. ನ್ಯಾಯಾಧೀಶನ ಮನೆಗೆ ಒಂದು ಉತ್ತಮ ತಳಿಯ ಚೆರಿ(?) ಸಸಿ ಕೊಂಡೊಯ್ದು ಅವನ ಗಾರ್ಡನಿನಲ್ಲಿ ಗುಂಡಿ ತೆಗೆದು ಊಣಿ ನ್ಯಾಯಾಧೀಶನನ್ನು ಮೆಚ್ಚಿಸಿ ಚಾ ಕುಡಿದು ತನ್ನ ಸಮಸ್ಯೆಯನ್ನು ಹಂಚಿಕೊಳ್ಳುತ್ತಾನೆ. ನ್ಯಾಯಾಧೀಶ ಎಂಜಿನಿಯರ್ ಒಂದು ಫೋನು ಮಾಡಿ ಟವರನ್ನು ಎತ್ತಿ ಪಕ್ಕದ ಜಮೀನಿಗೆ ಹಾಕಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಜಮೀನು ಹಸನ್‌ ನ ಅಣ್ಣನದು. ಅಲ್ಲಿ ಏನೂ ಬೆಳೆಯಿಲ್ಲ, ಬರಡು. ಆದರೆ ಅಲ್ಲೊಂದು ಬೃಹತ್‌ ಮರವಿರುತ್ತದೆ. ವರುಷಾನು ಕಾಲದಿಂದ ಕುರಿ ಮೇಯಿಸುವವರಿಗೆ ಗಾಳಿನೆರಳು ಕೊಡುತ್ತಿರುತ್ತದೆ. ಅದನ್ನು ಬುಡಸಮೇತ ಎಬ್ಬಲಾಗುತ್ತದೆ.

ನಾ ಇದನ್ನು ಏಕೆ ಪ್ರಸ್ತಾಪಿಸಿದೆ ? ಯಾಕೆಂದರೆ ನಮ್ಮ ಹೊಲದ ಮೇಲೆ ಅಷ್ಟೇ ಗಾತ್ರದ ಹೈ ವೋಲ್ಟೇಜು ಲೈನು ಹಾದು ಹೋಗಿದೆ. ಎಲ್ಲಿಯ ಟರ್ಕಿ ಎಲ್ಲಿಯ ಯರಗುಂಟೆ?

ನನ್ನ ಪುಣ್ಯಕ್ಕೆ ನಮ್ಮ ಜಮೀನಿನಲ್ಲಿ ಟವರು ಬಿದ್ದಿಲ್ಲ. ಈ ಲೈನನ್ನು ಎಳೆಯುವ ಕಾಲದಲ್ಲಿ ನಾನು ಕೃಷಿ ಶುರುಮಾಡಿರಲಿಲ್ಲ. ನಮ್ಮ ಹೊಲ ಬೀಳು ಬಿದ್ದಿತ್ತು. ನಾ ನಿರಾಸಕ್ತನಿದ್ದೆ. ಅಮ್ಮನಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಕೊಟ್ಟರಂತೆ. ಅಮ್ಮ ಅದರಿಂದ ಅಕ್ಕನಿಗೆ ಒಡವೆ ಮಾಡಿಸಿಕೊಟ್ಟು ಸಂತೋಷಪಟ್ಟರು.

ನಾನು ಕೃಷಿ ಆರಂಭಿಸಿದಾಗಲೇ ನನಗೆ ಇಲ್ಲೇನೋ ಅನ್ಯಾಯವಾಗಿದೆ ಎಂಬ ವಾಸನೆ ಬಡಿದದ್ದು. ನಡುವಲ್ಲಿ ಗೇರು ಅಂಚಿನಲ್ಲಿ ತೆಂಗು ನೆಡಿಸುತ್ತಿದ್ದೆ. ಈ ಲೈನಿನ ಕೆಳಗೆ ಸುಮಾರು ನಾಲ್ಕರಿಂದ ಆರು ಸಾಲು ಖಾಲಿ ಬಿಡಬೇಕಿತ್ತು. ಆಗ ನನಗೆ ಅವರು ಕೊಟ್ಟ ಒಂದು ಲಕ್ಷಕ್ಕೂ ನಮಗುಂಟಾಗಬಹುದಾದ ಒಟ್ಟು ನಷ್ಟಕ್ಕೂ ತಾಳೆಯಾಗುತ್ತಿಲ್ಲವೆಂದು ಹೊಳೆಯಿತು. ಈ ಲೈನು ಐದತ್ತು ವರುಷ ಇದ್ದು ಹೋಗುವಂಥದಲ್ಲ. ಜೀವಮಾನವಿಡಿ ನೆತ್ತಿ ಮೇಲೆ ಕೂತಿದ್ದು ನಮ್ಮ ಹಣೆಬರಹವನ್ನು ಅಣಕಿಸುತ್ತಿರುತ್ತದೆ. ಅಷ್ಟೂ ಮರಗಳು ನೀಡಬಹುದಾಗಿದ್ದ ನೆರಳು ಹಣ್ಣು ನೆಮ್ಮದಿ ಒಂದು ಲಕ್ಷ ತೂಗಿಸಬಹುದೇ ? ಅಲ್ಲಿಗೆ ನಿಲ್ಲಲ್ಲ, ಅಮ್ಮ ಹೇಳ್ತಾರೆ –

‘ಲೈನಿನ ಅಡಿ ಕೊಡೆ ಹಿಡಿದು ನಡೆದರೆ ಝುಂ ಅನಿಸುತ್ತದೆ ಅಪ್ಪೀ’…

ಇನ್ನು ನಾವು ಮುಂದೆಂದಾದರೂ ಜಮೀನನ್ನು ಮಾರಬೇಕಾಗಿ ಬಂದರೆ ಕೊಳ್ಳುವವನು ನಮ್ಮ ಈ ಸರಕಾರಿ ಬಹುಮಾನದತ್ತ ಬೆರಳು ಮಾಡುತ್ತಾನೆ. ಆತ ಹೇಳಿದ ರೇಟಿನಲ್ಲಿ ಒಂದು ಲಕ್ಷ ಕಡಿಮೆ ಮಾಡಿ ಎಂದು ಕೇಳಲ್ಲ, ವ್ಯವಹಾರವನ್ನೆ ಐದಾರು ಲಕ್ಷ ಮೈನಸ್‌ ಮಾಡಿ ಆರಂಭಿಸುತ್ತಾನೆ.

ಸರಿ ಇದು ನಮ್ಮ ಹಣೆಬರಹವೆಂದುಕೊಂಡು ನೊಂದು ಪ್ರಯೋಜನವಿಲ್ಲವೆಂದು ಸುಮ್ಮನಾದೆವು. ನಷ್ಟವನ್ನು ನೆನೆದು ದುಃಖಿಸುವುದಕಿಂತ ಬರಡು ನೆಲದಲ್ಲಿ ನೀರು ಸಿಕ್ಕಿದೆ- ಅದರಲ್ಲೇ ಏನಾದರೂ ಬೆಳೆಯೋಣ ಎಂದು ನಿರ್ಧರಿಸಿ ಕೃಷಿ ಆರಂಭಿಸಿದೆವು. ವರುಷಗಳು ಉರುಳಿವೆ. ಈಗ ನಮ್ಮ ಹೊಲ ಹಚ್ಚ ಹಸಿರಾಗಿದೆ. ಇನ್ನು ಕೆಲವು ವರುಷಗಳಲ್ಲಿ ನೆರಳುಮಯವಾಗಲಿದೆ. ಗೇರು ಈಗಾಗಲೆ ಹಣ್ಣು ಬಿಡುತ್ತಿದೆ. ತೆಂಗು ಇನ್ನೇನು ಫಸಲು ಕೊಡಲಿದೆ. ಮಡದಿ ಮಕ್ಕಳು ಜಮೀನಿಗೆ ಕಾಲಿಟ್ಟರೆ ಒಂದರ್ಧ ತಾಸು ನಿಲ್ಲಿಸಿಕೊಳ್ಳಬಹುದು, ಉರಿಯುವ ಬಿಸಿಲೆಂದು ಗೊಣಗಿದರೆ ಎಳನೀರು ಕುಡಿಸಿ ತಂಪಿಸಬಹುದು ಎಂಬ ನೆಮ್ಮದಿ ನನ್ನದು.

ಲೈಫು ಇಷ್ಟು ಸುಲಭದ್ದಾಗಿದ್ದರೆ ಚನ್ನಾಗಿರುತ್ತಿತ್ತು. ಅದಕ್ಕೆ ಬಡಿಸಿಕೊಂಡವರು ಸುಧಾರಿಸಿಕೊಂಡು ಎದ್ದು ನಿಂತರೆ ತಿರಗ ಬಡಿದು ಬಗ್ಗಿಸುವ ವಾಂಛೆ. ಊರಿಂದ ಫೋನು ಬಂದಿದೆ. ಕಂಪನಿಯವರು ಪುನಃ ಬಂದಿದ್ದಾರಂತೆ. ಹೊಲವನ್ನು ಅಳೆಯುತ್ತಿದ್ದಾರಂತೆ. ಈ ಸಲ ಎಷ್ಟು ಬೆಳೆದ ಮಕ್ಕಳನ್ನು ಕಡಿಯಬೇಕಾಗಬಹುದು ಎಂದು ಸಲಹಿದ ತಾಯಿಗೆ ಲೆಕ್ಕ ಕೊಡುತ್ತಿದ್ದಾರಂತೆ- ಅಂದರೆ ಪಕ್ಕದಲ್ಲೆ ಇನ್ನೊಂದು ಹೈ ವೋಲ್ಟೇಜಿನ ಲೈನು ಎಳೆಯಲಿದ್ದಾರಂತೆ, ಕಂಪೆನ್ಸೇಶನು ಕೊಡುತ್ತಾರಂತೆ.

ಅಮ್ಮ ಹೀಗೆ ಆಗಾಗ್ಗೆ ಫೋನು ಮಾಡಿ ಗೊಬ್ಬರಬೇಕು, ಗೇಯಿಸಬೇಕು, ಮಣ್ಣು ಹೊಡೆಸಬೇಕು, ಹುಳ ಹಿಡಿದಿವೆ, ಕುರಿಯವರು ಸಸಿಯ ಕುಡಿಗಳನ್ನೇ ಕಡಿಸಿ ಮೇಯಿಸಿ ಬಿಟಿದ್ದಾರೆ, ಯಾರೋ ಹೊಲ ತುಳಿದಿದ್ದಾರೆ, ಕಂಪೊಂಡು ಕಿತ್ತಿದ್ದಾರೆ, ಎಲೆ ಒಣಗಿವೆ, ನೀರು ಬರ್ತಿಲ್ಲ ಎಂದೆಲ್ಲ ಕೃಷಿಯ ಸಮಸ್ಯೆಗಳನ್ನು ಒಂದೊಂದೆ ಪೋಣಿಸಿದಾಗೆಲ್ಲ ನನಗೆ ಕಾಡುತ್ತಿದ್ದ ಒಂದೇ ಒಂದು ತಾತ್ವಿಕ ಸವಾಲು- ನಿಜಕ್ಕೂ ನಾನು ಇದಕ್ಕೆಲ್ಲ ಗಮನ ಕೊಡಬೇಕೇ ಎಂದು. ಎಷ್ಟೋ ಮಕ್ಕಳು ಅಪ್ಪನ ಸೈಟು ಎಂದು ಅಪ್ಪನ ಫ್ಯಾಕ್ಟರಿಯೆಂದು ಅಪ್ಪನ ಕಟ್ಟಡವೆಂದು – ಆ ಲಾಭಕ್ಕೆ ಅದರೊಟ್ಟಿಗೆ ಬರುವ ಕಷ್ಟ ಕೋಟಲೆಗಳಿಗೆ ಸಿಕ್ಕಿ ಹಾಕಿಕೊಂಡು ಕೋರ್ಟ್, ಕಛೇರಿಗಳನ್ನು ಅಲೆದುಕೊಂಡು ತಾವೇನೋ ಕಟ್ಟಿಕೊಳ್ಳಬಹುದಾಗಿದ್ದ ಭವ್ಯ ಭವಿಷ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ ಅಥವಾ ಅಲ್ಪ ತೃಪ್ತರಾಗಿರುತ್ತಾರೆ. ಊರಿನ ನನ್ನಷ್ಟೇ ಪ್ರತಿಭಾವಂತ ಸಹಪಾಠಿಗಳು ಅಪ್ಪನ ತೋಟವಿತ್ತು ಅಂಗಡಿಯಿತ್ತು ಎಂದು ಊರಲ್ಲೆ ನೆಲೆನಿಂತು ಈಗ ಮೇಲೆ ಕೆಳಗೆ ನೋಡುತ್ತಿರುವುದು ಕಣ್ಣೆದುರಿಗಿದೆ.
ಹಿಂದಗುಂಟೆಲೆ ಮತ್ತೊಂದು ತಾತ್ವಿಕ ಪ್ರಶ್ನೆ ಏಳುತ್ತದೆ- ಮನುಷ್ಯನ ಹೋರಾಟ ಸೋಲು ಗೆಲುವು ನಿಜಕ್ಕೂ ಅಷ್ಟು ವೈಯುಕ್ತಿಕವೇ ಅಷ್ಟು ಸ್ವತಂತ್ರವೇ ಎಂದು. ಎಸ್‌ ಸುರೇಂದ್ರನಾಥ್‌ ಅವರ ಒಂದು ಕತೆಯಲ್ಲಿ ತಮ್ಮನಿಗೆ ಮೈತುಂಬ ಕೂದಲು, ಕುರೂಪಿ, ರೋಗಿಷ್ಠನೆಂದು ಅಣ್ಣ ಅಸಹ್ಯಪಟ್ಟುಕೊಂಡು ಮನೆಬಿಟ್ಟು ಓಡಿಹೋಗುತ್ತಾನೆ. ಖಾಸನೀಸರ ಕತೆಗಳಲ್ಲೂ ಇದೇ ಬರುತ್ತದೆ. ವ್ಯಾಸರ ಕತೆಗಳಲ್ಲೂ ಇದನ್ನೇ ಶೋಧಿಸಲಾಗಿದೆ.

ಈಗಾಗಲೇ ಭೂದಾಖಲೆಗಳ ಕಂಪ್ಯೂಟರೀಕರಣ ಸಮಯದಲ್ಲಿ ನಮ್ಮ ದೊಡ್ಡಪ್ಪನವರೊಬ್ಬರ ಸಣ್ಣ ಮನಸಿಂದ ಕೈತಪ್ಪಿ ಹೋಗಿದ್ದ ಜಮೀನನ್ನು ಹತ್ತನ್ನೆರಡು ವರುಷಗಳ ಕಾಲ ಕೋರ್ಟು ಕಛೇರಿ ಅಲೆದು ಮರಳಿ ಪಡೆದುದಾಗಿದೆ. ಅದು ದಾಖಲೆಯುಕ್ತವಾಗಿ ನಮ್ಮದೆಂದು ಘೋಷಣೆಯಾದ ನಂತರವೆ ನಾನು ಅಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುವ ಮನಸು ಮಾಡಿದ್ದು. ಹೂಡಿಕೆಯಂಬುದು ರೂಢಿ ಮಾತಷ್ಟೆ. ಅದು ಎಂದಿಗೂ ಹೂಡಿದ ಹಣವನ್ನು ಮರಳಿಸದು. ಇದು ಗೊತ್ತಿದೆ. ನನಗಷ್ಟೇ ಅಲ್ಲ ಪ್ರತಿಯೊಬ್ಬ ಊರು ತೊರೆದ ಕೃಷಿಕನಿಗೂ ಗೊತ್ತಿದೆ. ಆದರೂ ಅಲ್ಲಿ ಹೋಗಿ ಹಣ ಸುರಿಯುತ್ತಾನೆ. ಏನೋ ಒಂದು ಮಾಡುತ್ತಾನೆ. ಅದರಿಂದ ಅವನಿಗೆ ಬೇರೇನೊ ಸಿಗುವುದಿದೆ. ಸಿಗತ್ತೊ ಬಿಡತ್ತೊ ಸಿಗುತ್ತದೆ ಎಂದು ನಂಬುತ್ತೇವೆ.

ಇಷ್ಟೆಲ್ಲ ಮಾಡಿ ಸದ್ಯ ಬೋರು ನಿಂತುಹೋಗದಿದ್ದರೆ ಸಾಕಪ್ಪ; ನೆಮ್ಮದಿ ಹುಡುಕ ಹೋಗಿ ಕಣ್ಣೆದುರೆ ಒಣಗುವ ತೋಟ ಕಂಡು ನರಳದಂತಾಗದಿರಲಪ್ಪ ಎಂದು ಪ್ರಾರ್ಥಿಸುತ್ತಿರುವಾಗಲೇ ನಮ್ಮ ಕೈಮೀರಿದ ಶಕ್ತಿಗಳು ನಮ್ಮ ಭವಿಷ್ಯದಲ್ಲಿ ತಲೆತೂರಿಸಲಾರಂಭಿಸುತ್ತವೆ. ಸರಕಾರಗಳು ಕಂಪನಿಗಳು ಸಣ್ಣ ದನಿರಹಿತ ಕೃಷಿಕರನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಈಗಾಗಲೆ ತೋಟಗಳಿರುವವರು ಲೈನುಗಳನ್ನು ತೋಟರಹಿತ ಜಮೀನುಗಳಿಗೆ ಎತ್ತಿ ಹಾಕಿಸುತ್ತಾರಂತೆ. ಅಧಿಕಾರಿಗಳೊಂದಿಗೆ ನೆಕ್ಸಸ್‌ ಇರುತ್ತದಂತೆ. ನಾ ಯೋಚಿಸುತ್ತೇನೆ. ನಾ ನಿಜಕ್ಕೂ ಇದನ್ನು ಮೇಲೆಳೆದುಕೊಳ್ಳಬೇಕೇ? ಉಳಿಸಿಕೊಳ್ಳಬೇಕೇ? ನ್ಯಾಯವಲ್ಲದಿದ್ದರೂ ಕನಿಷ್ಠ ಅನ್ಯಾಯದ ಮಟ್ಟವನ್ನು ತಗ್ಗಿಸಬಹುದೇ? ಕೋರ್ಟಲ್ಲಿ ಕೇಸು ದಾಖಲಿಸೋಣವೇ? ಎಂದೆಲ್ಲ.

ಇದೇ BIFFES ನಲ್ಲಿ ಲೆಸೆಂತೊ ಎಂಬ ಆಫ್ರಿಕಾದ ಪುಟ್ಟ ದೇಶದ ಒಂದು ಸಿನಿಮಾ It’s not burial, it’s a resurrection ಎಂದು. ಅಲ್ಲೊಂದು ಪ್ರದೇಶ. Valley of sorrow ಎಂದೆನೊ ಕರೆಯುತ್ತಾರೆ. ಪ್ರದೇಶದ ಜನಪದ ಹೆಸರೇ ‘ದುಃಖದ ಕಡಲು’ ಎಂದು. ಅಲ್ಲಿ ಸಮಾಧಿಯಿದೆ. ಆ ಜನಾಂಗದಲ್ಲಿ ಮಡಿದವರನ್ನು ಊಣಲಾಗಿದೆ. ಅಲ್ಲಿಗೆ ಸರಕಾರ ಒಂದು ಡ್ಯಾಮ್‌ ಕಟ್ಟುವ ಯೋಜನೆ ತರುತ್ತದೆ. ಸ್ಥಳೀಯ ಎಂಪಿಗೆ ಜನರನ್ನು ಓಲೈಸುವ ಜವಾಬ್ದಾರಿ ಹೊರಿಸಲಾಗುತ್ತದೆ. ತನ್ನ ಜನರಿಗೆ ಅವನೂ ಅದೇ ಹೇಳ್ತಾನೆ – “ನೋಡಿ, ಇದು ಇಂದಲ್ಲ ನಾಳೆ ಬಂದೇ ಬರುತ್ತದೆ. ಒಪ್ಪದಿದ್ದರೆ ಒದ್ದು ಹೊರಹಾಕುತ್ತಾರೆ. ಬದಲಾಗಿ ಗೌರವದಿಂದ ಕೊಟ್ಟಷ್ಟು ಇಸಕೊಂಡು ಜಾಗ ಖಾಲಿ ಮಾಡೋಣ. ಅಲ್ಲೆಲ್ಲೊ ಪಟ್ಟಣದ ಅಂಚಿನಲ್ಲಿ ನಮಗಾಗಿ ಮನೆಗಳನ್ನು ಕಟ್ಟಿದಾರಂತೆ“ ಊರಿಗೂರೇ ಗಂಟು ಮೂಟೆ ಕಟ್ಟಿಕೊಂಡು ಕತ್ತೆಗಳ ಮೇಲೆ ಹೇರಿಕೊಂಡು ಗುಳೆ ಹೊರಡುತ್ತದೆ. ಉದ್ದಕ್ಕೂ ಅದನ್ನು ಪ್ರತಿರೋಧಿಸುತ್ತ ಬಂದ ಓರ್ವ ಮುದುಕಿ ಗುಳೆ ಹೊರಟ ಜನರಿಗೆ ಬೆನ್ನು ಮಾಡುತ್ತಾಳೆ. ಒಂದೊಂದೆ ಬಟ್ಟೆ ಕಳಚುತ್ತ ಊರಿನ ಕಡೆ ಹೆಜ್ಜೆ ಹಾಕುತ್ತಾಳೆ. ಅವಳಿಗೆ ಎದುರಾಗಿ ಬಂದೂಕು ಹಿಡಿದ ಶಸ್ತ್ರಧಾರಿಗಳು ಸಾಲಾಗಿ ನಿಂತಿರುತ್ತಾರೆ. ಆದರೂ ಅವಳು ಮುನ್ನಡೆಯುತ್ತಾಳೆ.



ಮತ್ತು ನಾವು ನಗರಗಳಲ್ಲಿ ಕುಳಿತು ಬಡಜನರನ್ನು ಹಳ್ಳಿಗರನ್ನು ನಕ್ಸಲೀಯರು ವಿದೇಶಿ ಏಜೆಂಟರು ಎಂದೆಲ್ಲ ಆಡಿಕೊಳ್ಳುತ್ತೇವೆ. ಅವರನ್ನು ಮುಗಿಸಲು ಮಟ್ಟಹಾಕಲು ಸರಕಾರ, ಕಂಪನಿ ಶಕ್ತಿಗಳೊಂದಿಗೆ ಕೈಜೋಡಿಸುತ್ತೇವೆ.

ಓಕೆ, ಅವರು ಗಲಾಟೆ ಮಾಡುವುದು ಬೇಡ, ಗನ್ನು ಹಿಡಿಯುವುದು ಬೇಡ. ಹೀಗೆ ಪದೇ ಪದೇ ತುಳಿದವರನ್ನೇ ತುಳಿದು ಮಜಾ ಪಡೆಯುವ ಬದಲು ನಾವೆಲ್ಲ ಯಾಕೆ ಒಂದೊಂದು ಹಗ್ಗದ ಕುಣಿಕೆಯನ್ನೊ ವಿಷದ ಬಾಟಲಿಗಳನ್ನೊ ಕೊರಿಯರ್‌ ಮಾಡಬಾರದು ? ಹೆಂಗಿದ್ರೂ ನರಪೇತಲ ಇದಾರೆ. ಛಕ್ಕನೆ ಪ್ರಾಣ ಹಾರಿಹೋಗುತ್ತದೆ.

(ಚಿತ್ರಗಳು ಎರಡು ವರುಷ ಹಳೆಯವು. ಈಗ ಈ ಗಿಡಗಳು ಇನ್ನಷ್ಟು ಬೆಳೆದಿವೆ)


  • ಮಧುಸೂದನ ವೈ ಎನ್ (ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW