‘ಹೀಗೊಂದು ಕುಟುಂಬದ ಕಥೆ’ ಕೃತಿ ಪರಿಚಯ

ಗಾಂಧಿ ಸ್ಮೃತಿಯ ದಿನದಂದು ಗಾಂಧಿಯಿಂದ ಪ್ರೇರಣೆ ಪಡೆದ, ಕುಟುಂಬದ ಐದು ಜೀವಿಗಳ ಸಾಧನೆಗಳ ಕಥನವನ್ನು ಗ್ರಹಿಸುವುದು ಇಂದಿನ ಯುವಜನಾಂಗಕ್ಕೆ ಸ್ಪೂರ್ತಿದಾಯಕ. ಅದನ್ನು ವಸ್ತುನಿಷ್ಠವಾಗಿ ಸೆರೆ ಹಿಡಿದು ಅನಾವರಣ ಮಾಡಿದ ಶ್ರೇಯಸ್ಸು ಸ್ವತಃ ಆ ಕುಟುಂಬದ ಕುಡಿಯಾದ ಡಾ.ಪಿ.ಆರ್ ವಿಶ್ವನಾಥ ಲೇಖಕರಿಗೆ ಸಲ್ಲಬೇಕು. ಅವರ ‘ಹೀಗೊಂದು ಕುಟುಂಬದ ಕಥೆ’ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಹೀಗೊಂದು ಕುಟುಂಬದ ಕಥೆ
ಲೇಖಕರು : ಡಾ.ಪಿ.ಆರ್ ವಿಶ್ವನಾಥ
ಪ್ರಕಾಶನ : ವಸಂತ ಪ್ರಕಾಶನ
ಬೆಲೆ : ೨೮೦.೦೦

ಗಾಂಧಿ ಸ್ಮೃತಿಯ ದಿನದಂದು ಗಾಂಧಿಯಿಂದ ಪ್ರೇರಣೆ ಪಡೆದ, ಕುಟುಂಬದ ಐದು ಜೀವಿಗಳ ಸಾಧನೆಗಳ ಕಥನವನ್ನು ಗ್ರಹಿಸುವುದು ಇಂದಿನ ಯುವಜನಾಂಗಕ್ಕೆ ಸ್ಪೂರ್ತಿದಾಯಕ. ಗಾಂಧಿಯನ್ನು ಮುನ್ನಡೆಸಿದ ಎರಡು ತತ್ವಗಳು ಸತ್ಯ ಮತ್ತು ಅಹಿಂಸೆ. ಅದರಿಂದ ಪ್ರೇರಿತರಾಗಿ ಈ ಕುಟುಂಬದ ಐವರು ನಡೆದ ಹಾದಿ ಉದ್ಭೋದಕವಾದುದು. ಅದನ್ನು ವಸ್ತುನಿಷ್ಠವಾಗಿ ಸೆರೆ ಹಿಡಿದು ಅನಾವರಣ ಮಾಡಿದ ಶ್ರೇಯಸ್ಸು ಸ್ವತಃ ಆ ಕುಟುಂಬದ ಕುಡಿಯಾದ ಲೇಖಕರಿಗೆ ಸಲ್ಲಬೇಕು.

ಈ ಐವರಲ್ಲಿ ಮೊದಲಿಗರು ಇವರ ತಂದೆ ಶ್ರೀ ಪಿ.ಆರ್.ರಾಮಯ್ಯನವರು. ಮೈಸೂರಿನ ಪಾಲಹಳ್ಳಿಗೆ ಸೇರಿದ ಇವರು ತಮ್ಮ ಹದಿಹರೆಯದಲ್ಲಿ, ಇದ್ದಕ್ಕಿದ್ದಂತೆ ಅಲ್ಲಿಂದ ಮಾಯವಾದರು. ಹತ್ತು ದಿನಗಳ ನಂತರ ಕಾಶಿಯಲ್ಲಿ ಪ್ರತ್ಯಕ್ಷರಾದರು. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ತಮ್ಮ ವಿಜ್ಞಾನ ಶಿಕ್ಷಣ ಕೈಗೊಂಡರು. ಉನ್ನತ ಶಿಕ್ಷಣದ ನಡುವೆ ಅಲ್ಲಿಗೆ ಬಂದ ಗಾಂಧಿಯವರ ಭಾಷಣವನ್ನು ಕೇಳಿ ಅದರಿಂದ ಪ್ರಭಾವಿತರಾಗಿ, ದೇಶಸೇವೆಗೆ ತಮ್ಮ ಬದುಕು ಇನ್ನು ಮೀಸಲು ಎಂದು ನಿರ್ಧರಿಸಿ, ಅವರ ಮಾರ್ಗದರ್ಶನದಲ್ಲಿ ಕರ್ನಾಟಕಕ್ಕೆ ಮರಳಿ ಬಂದು ದೇಶ ಭಕ್ತರ ಗಂಗಾಧರ ದೇಶಪಾಂಡೆ ಅವರ ಜೊತೆ ಎರಡು ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ಕಳೆದು, ಮರಳಿ ತನ್ನ ಊರಿಗೆ ಮರಳಿದರು. ಆಗ ಪ್ರಸಿದ್ಧರಾದ ತಾತಯ್ಯನವರ ಪತ್ರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದು ಸ್ವತಂತ್ರ ಧೀರ ಪತ್ರಿಕೋದ್ಯಮಕ್ಕೆ ಬೇಕಾದ ತರಬೇತಿ ನೀಡಿತು ಮತ್ತು ಸ್ವತಂತ್ರ ಪತ್ರಿಕೆಯ ಆರಂಭಕ್ಕೆ ನಾಂದಿ ಹಾಡಿತು. ಅದೆ ತೊಂಬತ್ತು ನಾಲ್ಕು ವರ್ಷಗಳ (೧೯೨೭) ಹಿಂದೆ ಅವರು ಪ್ರಾರಂಭಿಸಿದ ‘ ತಾಯಿನಾಡು” ಪತ್ರಿಕೆ. ತಮ್ಮ ಪತ್ರಿಕೆಗೆ ಆಶೀರ್ವಾದವನ್ನು ಗಾಂಧಿಯ ಶುಭಹಾರೈಕೆಯ ಬರಹದ ಮೂಲಕ ಪಡೆದರು. ಅವರ ಬರಹ ಇಂದಿಗೂ ಲೇಖಕರ ಮನೆಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಅಲ್ಲದೆ ಈ ಪುಸ್ತಕದಲ್ಲಿ ಕೂಡ ಅದನ್ನು ಮುದ್ರಿಸಲಾಗಿದೆ. ಮೂರು ದಶಕಗಳ ಕಾಲ ಏರಿಳಿತಗಳನ್ನು ಕಂಡರು’ ತಾಯಿ ನಾಡು ‘ ಅವರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವವಾದಿಯಾದ ಇವರು ಅದಕ್ಕೆ ವಿರುದ್ಧವಾಗಿದ್ದ ,ಮೈಸೂರು ಪ್ರಭುತ್ವವನ್ನು ಅದರ ಪ್ರತಿನಿಧಿಯಾಗಿದ್ದ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರನ್ನು ಕಟು ಟೀಕೆ ಮಾಡಿ ಅವರ ಕೋಪಕ್ಕೆ ಗುರಿಯಾಗಿ, ಇವರ ಪತ್ರಿಕೆಯನ್ನು ಮುಟ್ಟುಗೋಲು ಹಾಕಿದರೂ ಹೆದರಲಿಲ್ಲ ಎಂಬುದು ಅವರ ಸತ್ಯನಿಷ್ಠೆಗೆ ಸಾಕ್ಷಿ. ಅದಕ್ಕೆ ಸಂಬಂಧಿಸಿದಂತೆ ಹಾಕಿದ ಚಿತ್ರಗಳು ಅದನ್ನು ಅಧಿಕೃತವಾಗಿಸುತ್ತವೆ. ಆದರೆ ಇದೆ ಮೊದಲಲ್ಲ. ೧೮೮೭ ರಲ್ಲಿ ಶ್ರೀ ಸೂರಿ ವೆಂಕಟರಮಣ ಶಾಸ್ತ್ರಿ ಅವರು, ತಮ್ಮ’ ಹವ್ಯಕ ಹಿತೇಚ್ಚು’ ಪತ್ರಿಕೆಯಲ್ಲಿ ಬ್ರಿಟಿಷ್ ಅಧಿಕಾರಿಗಳ ಮೋಸವನ್ನು ಬಯಲಿಗೆ ಎಳೆದು, ಅವರಿಂದ ಮುಟ್ಟುಗೋಲನ್ನು ಎದುರಿಸಿದರು. ಅದೂ ಮುಂಬೈನಲ್ಲಿ. ಡಿ.ವಿ.ಜಿ ಕೂಡ ತಮ್ಮ ಪತ್ರಿಕೆಯಲ್ಲಿ ಮಿರ್ಜಾ ಇಸ್ಮಾಯಿಲ್ ರನ್ನು ಕಟುವಾಗಿ ಟೀಕಿಸುತ್ತಾರೆ. ಅಲ್ಲದೆ ಮಹಾರಾಜರು ಅವರಿಗೆ ಕೊಟ್ಟ ಇನ್ನೂರು ಐವತ್ತು ರೂಪಾಯಿಗಳನ್ನು ತಿರಸ್ಕರಿಸುತ್ತಾರೆ.

ಎರಡನೆಯವರು ಅವರ ಶ್ರೀಮತಿ ಪಿ.ಆರ್.ಜಯಲಕ್ಷಮಮ್ಮನವರು. ೧೯೫೭ ರಲ್ಲಿ ಪಿ.ಆರ್.ರಾಮಯ್ಯನವರು ಪತ್ರಿಕೆಯನ್ನು ಮಾರಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿದರೆ, ಅದೆ ವರ್ಷದಲ್ಲಿ ಇವರು ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದರು. ಅವರ ಸಾರ್ವಜನಿಕ ಜೀವನಕ್ಕೆ ಎರಡು ಮುಖಗಳು. ಒಂದು ರಾಜಕೀಯ , ಎರಡು ಸಾಮಾಜಿಕ. ಮೊದಲಿನದರಲ್ಲಿ ಬೆಂಗಳೂರು ಕಾರ್ಪೊರೇಷನ್ ನ ಡೆಪ್ಯುಟಿ ಮೇಯರ್ ಆಗಿ ಆಯ್ಕೆಗೊಂಡರು. ಎರಡನೆಯದು ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ವಿವಿಧ ಪದಾಧಿಕಾರಿಗಳಾಗಿ ಅವುಗಳ ಅಭ್ಯುದಯಕ್ಕೆ ದುಡಿದದ್ದು. ಎರಡರ ಉದ್ದೇಶ ಕೂಡಾ ಸಮಾಜ ಸೇವೆ. ಇದಕ್ಕೆ ಅವರಿಗೆ ದೊರೆತ ಪ್ರೇರಣೆ ಗಾಂಧಿ. ಅವರನ್ನು ಕುರಿತು ಇವರು ಬರೆದ ಲೇಖನ ಇದಕ್ಕೆ ನಿದರ್ಶನ.ಅವರು ಹಲವಾರು ಚಿತ್ರಗಳು ಇದಕ್ಕೆ ಜೀವಂತ ಸಾಕ್ಷಿ.

ಮೂರನೆಯವರು ಅವರ ಅಣ್ಣ ಪಿ.ಆರ್. ಬ್ರಹ್ಮಾನಂದ. ಅಂತರರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ. ಮೂವತ್ತು ಪುಸ್ತಕಗಳನ್ನು ಬರೆದಿದ್ದಾರೆ. ಮುಂಬೈ ವಿ.ವಿ. ದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇಷ್ಟಾದರೂ ಅವರು ಅಮೆರಿಕ ಮತ್ತು ಇಂಗ್ಲೆಂಡ್ ಮಾದರಿಯ ಆರ್ಥಿಕ ಅಭಿವೃದ್ಧಿಯನ್ನು ನಿರಾಕರಿಸಿ ಭಾರತಕ್ಕೆ ದೇಸೀ ಮಾದರಿಯನ್ನು ರೂಪಿಸಿ ಕೊಟ್ಟಿದ್ದಾರೆ. ವೈಯಕ್ತಿಕವಾಗಿ ಅವರು ಸರಳ ವ್ಯಕ್ತಿ. ಮತ್ತು ಗಾಂಧಿ ಪ್ರಣೀತ ಖಾದಿದಾರಿ ಅವರ ಜೀವನ ಪರ್ಯಂತ.

ನಾಲ್ಕನೆಯವರು ಇವರ ಅಕ್ಕ ರಾಮೇಶ್ವರಿ ವರ್ಮಾ. ಅವರು ರಂಗ ಕಲಾವಿದೆ ಮಾತ್ರವಲ್ಲ ಚಲನಚಿತ್ರ ಕಲಾವಿದರು ಕೂಡ. ಕಲೆಯ ಮೂಲಕ ಸತ್ಯದ ಸಾಕ್ಷಾತ್ಕಾರ ಅವರ ದಾರಿ.ಅದು ಕೂಡ ಗಾಂಧಿಯ ದಾರಿಯೇ ಸರಿ.

ಐದನೆಯವರು ಸ್ವತಃ ಈ ಪುಸ್ತಕದ ಲೇಖಕರಾದ ಡಾ.ಪಿ.ಆರ್.ವಿಶ್ವನಾಥ..ಖಬೌತ ವಿಜ್ಞಾನದ ಮೂಲಕ ಸತ್ಯದ ಸಾಕ್ಷಾತ್ಕಾರಕ್ಕೆ ಪ್ರಯೋಗದಲ್ಲಿ ತೊಡಗಿದರು. ಗಾಂಧಿಯೇ ಹೇಳಿಕೊಂಡಂತೆ ಸತ್ಯದೊಂದಿಗೆ ಪ್ರಯೋಗವೇ ಅವರ ಜೀವನ.

ಲೇಖಕರು ಹಾಕಿದ ಚಿತ್ರಗಳು ಅವರ ಪ್ರಯೋಗಶೀಲತೆಗೆ ಸಾಕ್ಷಿ.

ಈ ಕೃತಿಯ ವೈಶಿಷ್ಟ್ಯಗಳು:

೧. ಇದು ಏಕಕಾಲಕ್ಕೆ ವಿಶಿಷ್ಟ ವ್ಯಕ್ತಿಯ, ಕುಟುಂಬದ, ಪತ್ರಿಕೋದ್ಯಮದ, ಸಮುದಾಯದ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕಥನವಾಗಿರುವುದು.

೨. ಇಂದು ಮಾಯವಾಗಿರುವ ಅವಿಭಕ್ತ ಕುಟುಂಬಗಳ ಕಥನವಾಗಿ ಕೂಡ ಇದಕ್ಕೆ ವಿಶಿಷ್ಟ ಸ್ಥಾನ ಪಡೆದಿದೆ.

೩. ಬೆಂಗಳೂರು ಸಾಂಸ್ಕೃತಿಕ ನಗರವಾಗಿ ರೂಪುಗೊಂಡ ಇತಿಹಾಸದ ಕಥನವೂ ಆಗಿದೆ.

೪. ಸಾಮಾನ್ಯವಾಗಿ ಸ್ವಕುಟುಂಬದ ಚರಿತ್ರೆಯಲ್ಲಿ ಕಾಣೆಯಾಗುವ ವಸ್ತುನಿಷ್ಠತೆ ಇದರಲ್ಲಿ ಹಾಸುಹೊಕ್ಕಾಗಿದೆ. ಅದಕ್ಕೆ ಹಲವು ನಿದರ್ಶನಗಳನ್ನು ಒದಗಿಸುತ್ತದೆ.

ಉದಾ:
ಅ) ರಾಮಯ್ಯನವರ ಗುಣ ಆದರ್ಶಗಳನ್ನು ಕೊಂಡಾಡುವವರ ಎಡೆಯಲ್ಲಿ, ಅವರನ್ನು ಕುರಿತು ಬರೆದ ಟೀಕೆಗಳಿಗೆ ಕೂಡ ಇಲ್ಲಿ ಸಮಪ್ರಮಾಣದಲ್ಲಿ ಅವಕಾಶ ಕೊಡಲಾಗಿದೆ.
ಬ)ಅವರ ಅಣ್ಣ ಪಿ.ಆರ್. ಬ್ರಹ್ಮಾನಂದರಿಗೂ ಇದು ಅನ್ವಹಿಸುತ್ತದೆ.

೫. ಲೇಖಕರ ಹಾಸ್ಯಪ್ರಜ್ಞೆ ವಿಶೇಷವಾದದ್ದು: ಅವರ ತಂದೆ ಬ್ರಹ್ಮಚರ್ಯ ವ್ರತವನ್ನು ಆಚರಿಸಬೇಕು ಎಂದು ನಿರ್ಧರಿಸಿದಾಗ,” ಅವರು ಅದನ್ನು ನಿಜವಾಗಿಯೂ ಆಚರಿಸಿದ್ದರೆ ನಾವು ಹುಟ್ಟುತ್ತಲೇ ಇರಲಿಲ್ಲ” ಎನ್ನುವುದು. ಇದು ಅವರ ತಂದೆಯನ್ನು ಕುರಿತದ್ದಾದರೆ ಅವರ ತಾಯಿ ತಾನು ಮಾಡಿದ ಸಮಾಜ ಸೇವೆಗೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂದಾಗ “ಕೃಷ್ಣನ ಭಗವದ್ಗೀತೆಯ ಉವಾಚವನ್ನು ಜ್ಞಾಪಿಸಿಕೋ” ಎಂದು ರೇಗಿಸುವುದು. ಇದು ತಂದೆ ತಾಯಿಗಳನ್ನು ಕುರಿತು, ಸ್ವತಃ ತಮ್ಮನ್ನು ಕುರಿತು ತಾವೇ ಹಾಸ್ಯ ಮಾಡಿಕೊಳ್ಳುವುದಕ್ಕೆ ನಿದರ್ಶನ: ಅವರ ತಂದೆ ತೀರಿಕೊಂಡಾಗ ಅಮೇರಿಕಾದಲ್ಲಿ ಇದ್ದ ಇವರು, ಅಲ್ಲಿಂದಲೇ ‘ಫಿಲಾಸಫಿ ಹೇಳಿ ಪತ್ರ ಬರೆದು ಅದರ ಆವರಣದಲ್ಲಿ ( ಫಿಲಾಸಫಿ ಬರೆಯಲು ಏನು ಕಷ್ಟ) ಎಂದು ಉದ್ಗಾರ ತೆಗೆದಿರುವುದು ಅವರ ಆತ್ಮಾವಲೋಕನಕ್ಕೆ ಸಾಕ್ಷಿ. ಅವರ ಅರ್ಧಾಂಗಿ ಶ್ರೀಮತಿ ಗಾಯತ್ರಿ ವಿಶ್ವನಾಥ್ ಇವರ ಅಂತ: ಸ್ಪೂರ್ತಿ ಯಾಗಿದ್ದಾರೆ.

ಮಿತಿಗಳು :

೧. ಹಲವಾರು ಪುನರುಕ್ತಿಗಳನ್ನು ಹೊಂದಿದ್ದು ಅವನ್ನು ಕೈಬಿಡಲು ಸಾಧ್ಯವಿತ್ತು.ತಂದೆಯ ಇಬ್ಬರು ಹೆಂಡಿರು, ಅವರು ನೂರು ರೂಪಾಯಿ ಮರಳಿಸಿದ ಪ್ರಸಂಗ…..ಅವರ ಅಕ್ಕನ ಮರುವಿವಾಹದ ಇತ್ಯಾದಿ.

೨. ತಪ್ಪು ಪದ ಪ್ರಯೋಗಗಳು: ವಿಕಸಿಸುತನ, ವಿಕಾಸದ ಬದಲಿಗೆ, ತೀವ್ರವಾಗಿ/ ತೀವ್ರವಾದಿ ಬದಲಿಗೆ ಇತ್ಯಾದಿ.

೩. ಲಿಪಿ ಸ್ಖಾಲಿತ್ಯಗಳ ತಿದ್ದುಪಡಿ ಮಾಡದಿರುವುದು. ಈ ಅಪೂರ್ವ ಕೃತಿಯನ್ನು ಅವರ ಮನೆಗೆ ಹೋದಾಗ ಕೈಯಾರೆ ಹರಸಿ , ಓದಿ ಬರೆಯಲು ಅವಕಾಶ ಮಾಡಿಕೊಟ್ಟ ಅವರಿಗೆ ಅನಂತ ಕೃತಜ್ಞತೆಗಳು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW