ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ವಿಜ್ಞಾನದ ಮಹತ್ವ ದೈನಂದಿನ ಜೀವನದಲ್ಲಿ ಇದರ ಪ್ರಾಮುಖ್ಯತೆಯನ್ನು ಅರಿಯುವುದು ಮುಖ್ಯವಾಗಿದೆ. ರಂಗಕರ್ಮಿ ಕಿರಣ್ ಭಟ್ ಹೊನ್ನಾವರ ಅವರು ತಮ್ಮ ಬಾಲ್ಯದಲ್ಲಿ ವಿಜ್ಞಾನ ಪ್ರಭಾವ ಹೇಗಿತ್ತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ನಮ್ಮ ಶಾಲೆಯ ವಿಜ್ಞಾನ ಕೊಠಡಿ. ನೂರಿಪ್ಪತ್ತು ವರ್ಷಗಳನ್ನ ಪೂರೈಸಿದ ನನ್ನ ಶಾಲೆ 1960-70 ರ ಹೊತ್ತಿಗೇ ಒಂದು ಸ್ವತಂತ್ರ ಪ್ರಯೋಗಾಲಯವನ್ನು ಹೊಂದಿತ್ತು. ನಾವು ಐದನೇತ್ತಿಗೆ ಶಾಲೆ ಸೇರೋ ಹೊತ್ತಿಗೆ ಅದು ಸಾಕಷ್ಟು ಸುಸಜ್ಜಿತವಾಗಿತ್ತು. ಅದು ಪ್ರಯೋಗಾಲಯಾದರೂ ನಾವೆಲ್ಲ ಅದನ್ನು ಕರೆಯುತ್ತಿದ್ದುದು ವಿಜ್ಞಾನ ಕೊಠಡಿ ಎಂದೇ.

ವಾರವಿಡೀ ಪಾಠ ಕೇಳುತ್ತ, ಕೇಳುತ್ತ ಸುಸ್ತಾಗುತ್ತಿದ್ದ ನಮಗೆ ವಾರಕ್ಕೊಮ್ಮೆ ವಿಜ್ಞಾನ ಕೊಠಡಿಗೆ ಹೋಗುವ ಭಾಗ್ಯ ದೊರಕುತ್ತಿತ್ತು. ಅದೊಂದು ದೊಡ್ಡ ರಿಲೀಫ್. ವಿಜ್ಞಾನ ಕೊಠಡಿ ನಮಗೆ ಕುತೂಹಲದ ಕೇಂದ್ರ. ಅಲ್ಲಿ ಗಾಜಿನ ಪೆಟ್ಟಿಗೆಯೊಳಗೆ ನೇತು ಹಾಕಿದ ದೊಡ್ಡ ಅಸ್ಥಿಪಂಜರವೊಂದಿತ್ತು . ಅದು ಅವರದ್ದು, ಇವರದ್ದು ಅಂತ ಯಾರ್ಯಾರದೋ ಹೆಸರು ಹೇಳುತ್ತಿದ್ದೆವು. ಕೃಷ್ಣ ಹಾಸ್ಯಗಾರ ಮಾಸ್ತರರು ಯಕ್ಷಗಾನದಲ್ಲಿ ಪ್ರೇತ ನೃತ್ಯ ಮಾಡುವಾಗ ” ಅದನ್ನೇ ಹಾಕ್ಕೋತಾರಂತೆ” ಅಂತ ಪಿಸುಗುಡುತ್ತಿದ್ದೆವು. ಕಿಟಕಿಯಿಂದಲೇ ಚಿಕ್ಕ ಮಕ್ಕಳಿಗೆ ಅದನ್ನ ತೋರಿಸಿ ಬೆದರಿಸುತ್ತಿದ್ದೆವು.

ತುಂಬ ಒಳ್ಳೆಯ ವಿಜ್ಞಾನ ಮಾಸ್ಟ್ರುಗಳಿದ್ದ ಕಾಲ ಅದು. ಪುಸ್ತಕದಲ್ಲಿನ ಹೆಚ್ಚಿನ ಪ್ರಯೋಗಗಳನ್ನ ಅವರು ಮಾಡಿಯೇ ತೋರಿಸುತ್ತಿದ್ದರು. ರಂಜಕ ಗಾಳಿಯಲ್ಲಿ ತಾನೇ ಹೊತ್ತು ಉರಿದಾಗ, ನಿರ್ವಾತದಲ್ಲಿ ಅರ್ಧ ರಬ್ಬರ್ ಚೆಂಡುಗಳು ಅಂಟಿಸಿದಂತೆ ಕೂಡಿಕೊಂಡಾಗ, ಕಾಯಿಸಿದ ನೀರಿನ ಉಗಿಯಲ್ಲಿ ಉಗಿ ಬಂಡಿ ಓಡಿದಾಗ ನಮಗೆಲ್ಲ ಸಂಭ್ರಮ, ಆಶ್ಚರ್ಯ.

ಬರೀ ಪಾಠದಲ್ಲಿ ಓದಿಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನಮಗೆ ವಿಜ್ಞಾನವನ್ನ ತೆರೆದಿಟ್ಟ, ವೈಜ್ಞಾನಿಕ ಮನೋಭಾವ ಬೆಳೆಸಿದ ಶಾಲೆಗೆ ಶರಣು. ವಿಜ್ಞಾನ ದಿನದಂದು ಇದೆಲ್ಲ ನೆನಪಾಯ್ತು.


  • ಕಿರಣ್ ಭಟ್ ಹೊನ್ನಾವರ – ರಂಗಕರ್ಮಿ, ರಂಗ ನಿರ್ದೇಶಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading