ಬೂಕರ್ ಪ್ರಶಸ್ತಿ ವಿಜೇತರಾದ ನಾಡಿನ ಖ್ಯಾತ ಸಾಹಿತಿ ಬಾನು ಮುಷ್ತಾಕ್ ರವರು ಶೈಲಜಾ ಹಾಸನ್ ಅವರ ‘ಹಿಂದಿನ ಬೆಂಚಿನ ಹುಡುಗಿಯರು ‘ ಕೃತಿಗೆ ಬರೆದಿರುವ ಮುನ್ನುಡಿಯಿದು. ತಪ್ಪದೆ ಓದಿ…
ಮುನ್ನುಡಿ
ಹೆಸರಿನಲ್ಲಿಯೇ ಕಂಡುಬರುವಂಥ ಶೈಲಜಾ ಹಾಸನ್‌ರವರು ಈ ನೆಲದ ಸೂಕ್ಷ್ಮ ಅಭಿವ್ಯಕ್ತಿಯ ಸೆಲೆಯಾಗಿದ್ದಾರೆ. ಅನೇಕ ಕೃತಿಗಳು ಅವರ ಅಂತರಂಗದ ಭಿತ್ತಿಯನ್ನು ದಾಟಿ ಓದುಗರ ಕೈ ಸೇರಿವೆ ಹಾಗೂ ಅನೇಕ ನಿಯತಕಾಲಿಕೆಗಳಲ್ಲಿ ಬೆಳಕನ್ನು ಕಂಡಿವೆ ಮತ್ತು ಧಾರವಾಹಿಯಾಗಿಯೂ ಪ್ರಕಟವಾಗಿವೆ. ಹಸನಾದ ವ್ಯಕ್ತಿತ್ವದ ಲೇಖಕಿಯು ತಮ್ಮ ಸರ್ಕಾರಿ ಉದ್ಯೋಗ, ಕುಟುಂಬದ ಜವಾಬ್ದಾರಿಗಳ ನಡುವೆಯೂ ಸೃಜನಶೀಲ ಅಭಿವ್ಯಕ್ತಿಯನ್ನು ತಮ್ಮ ಮೂಲದ್ರವ್ಯವನ್ನಾಗಿಸಿಕೊಂಡಿದ್ದಾರೆ. ಅವರ ಈ ಕಥಾ ಸಂಕಲನದ ಬಗ್ಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಲು ನನಗೆ ಒಂದು ಸದವಕಾಶವನ್ನೂ ಕೂಡಾ ಕಲ್ಪಿಸಿಕೊಟ್ಟಿದ್ದಾರೆ.

ಮೌಖಿಕ ಪರಂಪರೆಯಿಂದ ಪ್ರಾರಂಭಗೊಂಡು ಕಥೆಯ ಸಂಪ್ರದಾಯ ಬೆಳದದ್ದೇ ತಾಯಿಯ ಮಡಿಲಲ್ಲಿ. ಅಜ್ಜಿ ಒಡಲಲ್ಲಿ. ಈ ಸಂಪ್ರದಾಯದ ವಾರಸುದಾರರು ಮಹಿಳೆಯರೇ ಆದದ್ದರಿಂದ ಕಥೆಯ ಜಾಡು ಕೊಳದಂತೆ ಮಡುಗಟ್ಟಲಿಲ್ಲ. ಬದಲಿಗೆ ಹೊಳೆಯಂತೆ ಪ್ರವಹಿಸಿತು. ಉಪನದಿಗಳಾಗಿ ಟಿಸಿಲೊಡೆದು ಆಯಾ ಮಣ್ಣಿನ ಮೂಲ ಗುಣಗಳನ್ನು ಮೈಗೂಡಿಸಿಕೊಂಡು ನಿರಂತರವಾಗಿ ಪ್ರವಹಿಸಿ ಇಂದಿಗೂ ಜೀವಂತವಾಗಿ ಸಂಭ್ರಮಿಸುತ್ತಿದೆ. ಮೌಖಿಕ ಪರಂಪರೆಯ ಕಥೆ ಸಾಹಿತ್ಯಕ ಪ್ರಾಕಾರವಾಗಿ ಗುರುತಿಸಿಕೊಳ್ಳಲು ಸಹಸ್ರಾರು ವರ್ಷಗಳೇ ಬೇಕಾಯಿತು. ಕೈಗಾರಿಕೀಕರಣ ಮತ್ತು ಮುದ್ರಣ ತಂತ್ರಜ್ಞಾನದ ಆವಿಷ್ಕಾರಗಳು ಕಥೆಗೆ ಬೇಕಾದ ಸಾಹಿತ್ಯಕ ಅಸ್ತಿತ್ವವನ್ನು ಒದಗಿಸುವಲ್ಲಿ ಹೆಚ್ಚಿನ ಕಾಣಿಕೆಯನ್ನು ನೀಡಿವೆ. ಹತ್ತೊಂಬತ್ತನೇ ಶತಮಾನದ ಆರಂಭದಿಂದ ಅರಳಿದ ಕಥಾ ಸಾಹಿತ್ಯವು ಇಂದು ವಿಶ್ವದಾದ್ಯಂತ ವಿಫುಲವಾಗಿ ಬೆಳೆದಿದೆ. ಮತ್ತು ಯಾವ ಚೌಕಟ್ಟಿಗೂ ಒಳಪಡದಂತೆ ತನ್ನದೇ ಆದ ಸ್ವಂತ ಛಾಪಿನಲ್ಲಿ ಮುಂದುವರೆಯುತ್ತಿದೆ. ಶಿಕ್ಷಣದ ಅವಕಾಶವು ಮಹಿಳೆಯರಿಗೆ ತೆರೆಯುತ್ತಿದ್ದಂತೆಯೇ ಮಹಿಳೆಯರು ಪುನಃ ಕಥಾ ಸಾಹಿತ್ಯದಲ್ಲಿ ತಮ್ಮ ವಾರೀಸುದಾರಿಕೆ ಯನ್ನು ಮುಲಾಜಿಲ್ಲದೇ ಮರಳಿ ಪಡೆಯುವತ್ತ ಸಕ್ರಿಯರಾಗಿದ್ದು, ಈ ನಿಟ್ಟಿನಲ್ಲಿ ಮರೆಯಲಾರದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
ಏನನ್ನೋ ಹೇಳಬೇಕೆನ್ನುವ ಉತ್ಕಟತೆ ಮತ್ತು ತನ್ನ ಅನುಭವಗಳನ್ನು ಹಂಚಿಕೊಳ್ಳುವ ತುಡಿತಗಳು ಕಥೆಗೆ ಅಗತ್ಯವಾದ ಮೂಲ ದ್ರವ್ಯವನ್ನು ಒದಗಿಸುತ್ತದೆ. ಅನುಭವವು ನೇರ ನಿರೂಪಣೆಯಾಗಿರಬಹುದು ಅಥವಾ ಅನುಭವದ ಹಿನ್ನೆಲೆಯ ಜೀವನ ದೃಷ್ಟಿಯ ಅಭಿವ್ಯಕ್ತಿಯಾಗಿರಬಹುದು. ನುರಿತ ಫೋಟೋಗ್ರಾಫರ್ ಕ್ಲಿಕ್ಕಿಸಿದ ಒಂದು ಪ್ರೇಮ್‌ನ ಚಿತ್ರದ ಅನುಭವವನ್ನು ಓದುಗರಿಗೆ ನೀಡುವಾಗ ಒಂದೇ ದೃಶ್ಯದ ವಿವಿಧ ಕೋನಗಳು. ಬೆಳಕಿನ ಸಂಯೋಜನೆ ಹಾಗೂ ಚಿತ್ರದ ಎದ್ದುಕಾಣುವ ಭಾಗ ಮತ್ತು ಮಬ್ಬಾದ ಪರಿಕರಗಳು ಚಿತ್ರದ ಗುಣಮಟ್ಟವನ್ನು ನಿರ್ಧರಿಸುವಂತೆ ಸಣ್ಣಕಥೆಯ ಪರಿಣಾಮ ವಿಭಿನ್ನವಾಗಬಹುದು. ನಿರ್ದಿಷ್ಟ ಚೌಕಟ್ಟು, ಮಿತವಾದ ಪಾತ್ರಗಳು ಮತ್ತು ಸೀಮಿತ ಅವಧಿ ಇವುಗಳ ನಡುವೆ ತನ್ನ ತುಡಿತಗಳನ್ನು ಸೂಕ್ಷ್ಮವಾಗಿ ಮತ್ತು ಪರಿಣಾಮಕಾರಿಯಾಗಿ ದಾಖಲಿಸಬೇಕಾದ ಸೃಜನಶೀಲ ಹೊಣೆಗಾರಿಕೆಯು ಲೇಖಕ / ಲೇಖಕಿಯ ಮೇಲೆ ಇರುತ್ತದೆ. ಈ ಎಲ್ಲವನ್ನೂ ನಿಭಾಯಿಸುವ ಸೂಕ್ಷ್ಮ ದೃಷ್ಟಿಕೋನ, ವಿಶ್ಲೇಷಣೆಯ ಕಲಾತ್ಮಕತೆ, ಪಾತ್ರಗಳ ವ್ಯಕ್ತಿತ್ವವು ಅರಳುವಂತಹ ಸನ್ನಿವೇಶಗಳ ಜೋಡಣೆ ಮತ್ತು ಅದೊಂದು ಮುಖ್ಯ ತಿರುವು-ಇಡೀ ಸಣ್ಣಕಥೆಯ ಸ್ವರೂಪವನ್ನು ನಿರ್ಧರಿಸುವ ಮಾನದಂಡಗಳಾಗಿವೆ. ಕುಸುರಿ ಕೆಲಸದ ತಾಳ್ಮೆ ಅಂತರಂಗದ ಧ್ವನಿಗಳನ್ನು ಕೇಳಿಸಿಕೊಳ್ಳುವ ಮತ್ತು ಅರ್ಥೈಸುವಲ್ಲಿ ಅಗತ್ಯವಾದ ಮೌನ ಹಾಗೂ ಸಮಾಜವನ್ನು ನೋಡುವ ಮತ್ತು ಗ್ರಹಿಸುವ ವಿಭಿನ್ನ ದೃಷ್ಟಿಕೋನ ಕಥೆಗಾರನಿಗೆ ಅಗತ್ಯವಾದ ಒಳನೋಟಗಳನ್ನು ಒದಗಿಸುತ್ತವೆ.
ಯಾವುದೋ ಒಂದು ಕಥೆಯನ್ನು ಓದಿ ಹಲವಾರು ವರ್ಷಗಳು ಕಳೆದಿದ್ದರೂ ಅದನ್ನು ಮರೆಯಲು ಸಾಧ್ಯವೇ ಆಗಿರುವುದಿಲ್ಲ. ಯಾವುದೋ ಸನ್ನಿವೇಶದಲ್ಲಿ ಅಗತ್ಯವಿರಲಿ ಇಲ್ಲದಿರಲಿ ತನ್ನದೇ ಸ್ವಂತ ಮನೆಯೇನೊ ಎಂಬಂತೆ ನಮ್ಮ ಎದೆಯ ಬಾಗಿಲನ್ನು ಮುಲಾಜಿಲ್ಲದೇ ತಟ್ಟುತ್ತದೆ. ಬಹಳ ಹಿಂದೆ ನಾನು ಒಂದು ಉರ್ದು ಕಥೆಯನ್ನು ಓದಿದ್ದೆ. ಕಥಾನಾಯಕ ಒಬ್ಬ ನಿರುದ್ಯೋಗಿ ಯುವಕ. ಆತ ಸೆಪ್ಟೆಂಬರ್‌ನಿಂದ ಫೆಬ್ರವರಿ ತಿಂಗಳವರೆಗಿನ ಮನೆಯ ಜಮಾ ಖರ್ಚನ್ನು ತನ್ನ ಹಳೆಯ ನೋಟ್‌ಬುಕ್‌ನಲ್ಲಿ ಬರೆಯುತ್ತಾನೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮನೆಯ ಬಾಡಿಗೆ, ದಿನಬಳಕೆಯ ಖರ್ಚಿನ ಲೆಕ್ಕ. ಅದರೊಂದಿಗೆ ತಾಯಿಯ ಔಷಧದ ವೆಚ್ಚ ಮತ್ತು ತಂಗಿಯ ಕಾಲೇಜು ಫೀ. ಈ ಕುಟುಂಬಕ್ಕೆ ಆದಾಯದ ಬಾಬು ಗತಿಸಿದ ತಂದೆಯ ಸರ್ಕಾರಿ ನೌಕರಿಯ ದೆಸೆಯಿಂದ ದೊರಕಿದ ತಾಯಿಯ ಪೆನ್ನನ್ ಹಣ ಮತ್ತು ಪೆನ್ನನ್ ಹಣ ಸಾಲದೆ ಪಡೆದ ಸಾಲ. ಇದೇ ಲೆಕ್ಕಾಚಾರ ಹೆಚ್ಚು ಕಡಿಮೆ ಮುಂದಿನ ಎರಡು ತಿಂಗಳಲ್ಲಿ ಹಾಗೂ ತಾಯಿಯ ಔಷಧೋಪಚಾರದ ವೆಚ್ಚ ಏರಿಕೆ, ಡಿಸೆಂಬರ್ ತಿಂಗಳ ಜಮಾಖರ್ಚಿನ ಲೆಕ್ಕದಲ್ಲಿ ತಂಗಿಯ ಕಾಲೇಜಿನ ಫೀ ಕಡಿತ ಹಾಗೂ ತಾಯಿಯ ಶವ ಸಂಸ್ಕಾರದ ವೆಚ್ಚ ಸೇರಿತ್ತು. ಜನವರಿ ತಿಂಗಳು ತೀರಾ ನಿರಾಶಾದಾಯಕವಾಗಿದ್ದು, ಕಥಾ ನಾಯಕ ಫಾಲಿಡಾಲ್ ಕ್ರಿಮಿನಾಶಕವನ್ನು ಖರೀದಿಸಿದ ಬಗ್ಗೆ ನಮೂದು. ಆದರೆ ಫೆಬ್ರವರಿ ತಿಂಗಳ ಲೆಕ್ಕದಲ್ಲಿ ಮನೆಯ ಬಾಡಿಗೆ ಬಾಕಿ ಇದ್ದ ಅರ್ಧ ಮೊಬಲಗು ಪಾವತಿ, ಒಂದಿಬ್ಬರು ಸಾಲಗಾರರಿಗೆ ಸಾಲ ಮರುಪಾವತಿಯ ಲೆಕ್ಕ, ತಂಗಿಯ ಸ್ಕೋ, ಪೌಡರ್ ಮತ್ತು ಸುಗಂಧದೆಣ್ಣೆಯ ಬಾಬು ವೆಚ್ಚ ಮತ್ತು ಈ ಎಲ್ಲವನ್ನೂ ಪಾವತಿ ಮಾಡಿ ಕೈಯಲ್ಲಿ ಇನ್ನಷ್ಟು ಹಣ ಉಳಿದಿದೆ ಎಂದು ನಮೂದು ಮತ್ತು ಕೊನೆಯದಾಗಿ ಜಮಾ ಬಾಬು ತಂಗಿಯಿಂದ ಕೈಸೇರಿದ ಆದಾಯ ಅಲ್ಲಿಗೆ ಕಥೆಯು ಅಂತ್ಯವಾಗುತ್ತದೆ. ಈ ತಂಗಿಯ ಆದಾಯದ ಮೂಲ ಯಾವುದೆಂಬುದು ಓದುಗರಿಗೆ ಬಿಟ್ಟ ವಿಷಯ. ಕಾಲೇಜು ಬಿಟ್ಟ ಆಕೆಯ ಆದಾಯ ಮೂಲದ ಬಗ್ಗೆ ಈ ಕಥೆಯನ್ನು ಓದಿ ಸುಮಾರು ಇಪ್ಪತ್ತೈದು ವರ್ಷಗಳಾಗಿದ್ದರೂ ಇಂದಿಗೂ ನಾನು ತೀರಾ ಗಂಭೀರವಾಗಿ ತೊಡಗಿಸಿಕೊಳ್ಳುವುದು ನಡೆದೇ ಇದೆ. ಹೀಗಾಗಿ ನಾನು ಆಕೆಯ ಆದಾಯ ಮೂಲವನ್ನು ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡುವುದರಿಂದ ಆರಂಭಿಸಿ ಆಕೆಗೆ ಸರ್ಕಾರಿ ನೌಕರಿ ಸಿಗುವವರೆಗೂ ಸಂಭಾವ್ಯತೆಯನ್ನು ಊಹಿಸಿ ಕೊನೆಗೆ ಆಕೆಯು ಈ ಪ್ರಪಂಚದ ಅತ್ಯಂತ ಪುರಾತನವಾದ ವೃತ್ತಿಯನ್ನು ಅವಲಂಬಿಸಿರಬಹುದೇ ಎಂಬ ಪ್ರಶ್ನಾರ್ಥಕ ಚಿಹ್ನೆಯಡಿಯಲ್ಲಿ ಛೇ! ಹಾಗಾಗಲು ಸಾಧ್ಯವೇ ಇಲ್ಲವೆಂದು ನಿರಾಕರಿಸಿ ಮತ್ತೆ ನನ್ನ ಅನ್ವೇಷಣೆಯನ್ನು ಮುಂದುವರೆಸುತ್ತಲೇ ಇದ್ದೇನೆ. ಮತ್ತು ಈ ಊಹೆಗಳು ನನ್ನ ವೈಯಕ್ತಿಕ ಬದುಕಿನ ಸಂಬಂಧಗಳ ಮೇಲೆ ಅವಲಂಬಿತವಾಗಿದ್ದು. ನನ್ನ ಕೌಟುಂಬಿಕ ಸಂಬಂಧಗಳು ಬದಲಾದಂತೆ ಆಕೆಯ ವೃತ್ತಿಯ ಘನತೆ ಕೂಡಾ ಬದಲಾಗುತ್ತಿವೆ.

ಸಣ್ಣಕಥೆಯ ಬಗ್ಗೆ ಮೇಲ್ಕಂಡಂತೆ ನಾನು ಆಲೋಚಿಸುತ್ತಾ ಶೈಲಜಾ ಹಾಸನ್‌ರವರ ಈ ಸಂಕಲನದ ಸಣ್ಣಕಥೆಗಳನ್ನು ಓದಿದೆ. ಈ ಕಥೆಗಳನ್ನು ವಿಮರ್ಶಾತ್ಮಕವಾಗಿ ನೋಡುವುದಕ್ಕೆ ಬದಲಾಗಿ ಓದುಗಳಾಗಿ ಸಹೃದಯತೆಯಿಂದ ಅವಲೋಕಿಸಿದೆ. ಈ ಸಂಕಲನದ ಹತ್ತು ಕಥೆಗಳು ಕೂಡಾ ವಿಭಿನ್ನ ಕಥಾ ಹಂದರವನ್ನು ಹೊಂದಿವೆ. ಕಥೆಗಾರ್ತಿಯು ಪ್ರಚಲಿತ ಸಮಾಜದ ಅನೇಕ ಸಮಸ್ಯೆಗಳು ಆಲೋಚಿಸಿ ತಮ್ಮ ಅನಿಸಿಕೆಯನ್ನು ದಾಖಲಿಸಿದ್ದಾರೆ. ‘ಎಲ್ಲು ಕೊಡ ನೀರು’ ವರ್ಣ ಸಂಘರ್ಷದ ಹಿನ್ನೆಲೆಯಲ್ಲಿ ಕೆಳಜಾತಿಗಳ ಜನವರ್ಗದ ಮೇಲೆ ನಡೆಯುತ್ತಿರುವ ತಾರತಮ್ಯ, ಶೋಷಣೆ, ಅಪಮಾನ ಹಾಗು ಬಂಡಾಯದ ಕಿಡಿಯಿಂದ ಉಂಟಾದ ಅಶಾಂತಿ ಮೊದಲಾದ ಘಟನೆಗಳನ್ನು ನಿರ್ಲಿಪ್ತತೆಯಿಂದ ಶೈಲಜಾರವರು ದಾಖಲಿಸಿದ್ದಾರೆ. ಅಸಮಾನ ವ್ಯವಸ್ಥೆಯ ದುರಂತವು ಯಾವುದೇ ಸಮುದಾಯದ ಮಹಿಳೆಯ ದುರಂತವೇ ಆಗುವ ಕೋಭೆಯ ವ್ಯವಸ್ಥೆಯನ್ನು ಕಪ್ಪು ಬಿಳುಪಿನಲ್ಲಿ ಹೇಳಿರುವ ಬಗೆ ಇಂದಿನ ಸಮಾಜಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ. ‘ಚಂದೂ ಮಾಮ’, ‘ತುಮುಲ’, ‘ಮೌನ ಮನದ ವೀಣೆ’- ಈ ಕಥೆಗಳಲ್ಲಿ ಆಯಾ ಕಥೆಯ ಕೇಂದ್ರ ಪಾತ್ರದ ವ್ಯಕ್ತಿ ವಿವರ ಮತ್ತು ಆ ವ್ಯಕ್ತಿ ಮತ್ತು ನಿರೂಪಕಿಯ ನಡುವಿನ ಬಾಂಧವ್ಯವೇ ಪ್ರಮುಖವಾಗಿ ಕಥೆಯ ವಸ್ತುವಿಷಯವು ಪೇಲವವಾಗುತ್ತದೆ. ಅಂದರೆಇಡೀ ಚಿತ್ರದ ಪ್ರಾಮುಖ್ಯತೆಯನ್ನು ಅದರ ಢಾಳಾದ ಪ್ರೇಮ್ ನುಂಗಿ ಹಾಕಿದಂತೆ, ಈ ಕಥಾ ಸಂಕಲನದ ಪ್ರಮುಖ ಕಥೆಯಾದ ‘ಹಿಂದಿನ ಬೆಂಚಿನ ಹುಡುಗಿಯರು’ ಹದಿಹರೆಯದ ಬಾಲಕಿಯರ ಲೈಂಗಿಕ ಸಮಸ್ಯೆಗಳು ಮತ್ತು ಅವರ ಮುಗ್ಧತೆಯನ್ನು ಶೋಷಣೆ ಮಾಡುವ ಪ್ರಭಾವೀ ಮಾಸ್ತರರ ಸುತ್ತಾ ಹೆಣೆಯಲಾಗಿದೆ. ಅಧ್ಯಾಪಕಿಯಾಗಿರುವ ಶೈಲಜಾರವರಿಗೆ ಈ ರೀತಿಯ ವಸ್ತು ವಿಷಯಗಳ ಮಾಹಿತಿಯು ಅನುಭವಕ್ಕೆ ದಕ್ಕುವಂತಹದ್ದು. ಹೀಗಾಗಿ ವಿಷಯವನ್ನು ನಿಸ್ಸಂಕೋಚದಿಂದ ನಿರ್ವಹಣೆ ಮಾಡಿದ್ದಾರೆ. ಹಾಗೂ ಸಾಮಾಜಿಕವಾದ ಈ ಸಮಸ್ಯೆಗಳನ್ನು ಸಾಹಿತ್ಯಕವಾಗಿ ವಿಶ್ಲೇಷಿಸಿದ್ದಾರೆ. ಶೈಲಜಾರವರಿಗೆ ಇರುವ ಸಾಮಾಜಿಕ ಕಳಕಳಿ ಅವರ ಇನ್ನಿತರೆ ಅನೇಕ ಕಥೆ ಮತ್ತು ಕಾದಂಬರಿಗಳಲ್ಲಿ ಸುವ್ಯಕ್ತವಾಗಿದೆ.
ಸಾಹಿತಿಗೆ ಅಧ್ಯಯನ, ಸಂಶೋಧನೆ, ಸಂವಾದ, ಪ್ರವಾಸ ವಿಭಿನ್ನ ಜನರೊಡನೆ ಒಡನಾಟ-ಇವೆಲ್ಲವೂ ಪೂರಕ ಮನಸ್ಥಿತಿಯನ್ನು ನಿರ್ಮಾಣ ಮಾಡುವಂತಹದ್ದಾಗಿವೆ.
ಇವರ ಶೈಲಿ, ವಸ್ತುವಿನ ಆಯ್ಕೆ, ಪಾತ್ರಗಳು ಮತ್ತು ಅಭಿವ್ಯಕ್ತಿಯ ಬಗ್ಗೆ ನಾನು ಯಾವುದೇ ಹಣೆಪಟ್ಟಿಯನ್ನು ಅಂಟಿಸಲು ಇಷ್ಟಪಡುವುದಿಲ್ಲ. ಶೈಲಜಾರವರು ಜನಪ್ರಿಯ ಶೈಲಿಯ ಲೇಖಕಿಯೋ, ಅಕಾಡೆಮಿಕ್ ವಲಯದ ಲೇಖಕಿಯೋ ಇದು ನನಗೆ ಮುಖ್ಯವಲ್ಲ. ಬದಲಿಗೆ ಸಮಾಜದ ಸಂಕ್ರಮಣ ಸ್ಥಿತಿಯಲ್ಲಿ ತಂತ್ರಗಾರಿಕೆಯ ಮೌನವನ್ನು ಅಪ್ಪಿಕೊಳ್ಳದೆ, ತನ್ನ ವಲಯದಿಂದ ಗಟ್ಟಿ ಧ್ವನಿಯಾಗಿ ತಮ್ಮ ಅನಿಸಿಕೆಗಳನ್ನು ದಾಖಲು ಮಾಡುತ್ತಿರುವ ಶೈಲಜಾರವರ ಕ್ರಿಯಾತ್ಮಕತೆ ನನಗೆ ಪ್ರಿಯವಾದುದು. ತಮ್ಮ ಸೃಜನಶೀಲ ಕೃತಿಗಳಿಗೆ ಅನೇಕ ಸನ್ಮಾನಗಳನ್ನು ಪಡೆದಿರುವ ಶೈಲಜಾರವರ ಬೆಳವಣಿಗೆಯು ಸಾಹಿತ್ಯಕವಾಗಿ ಗಮನಾರ್ಹ ಸ್ಥಾನವನ್ನು ಪಡೆಯಲಿ ಮತ್ತು ಅವರ ನಿಲುವುಗಳು ಪಕ್ವವಾಗಲಿ ನಿರೂಪಣಾ ಶೈಲಿ ಇನ್ನೂ ಪರಿಣಾಮಕಾರಿಯಾಗಲೀ ಹಾಗೂ ಇವರ ಕೃತಿಗಳ ವ್ಯಾಪ್ತಿ ಇನ್ನಷ್ಟು. ಮತ್ತಷ್ಟು ಹಿಗ್ಗಲಿ ಎಂಬ ಸದಾಶಯಗಳೊಡನೆ
ಪ್ರೀತಿ ಮತ್ತು ಅಭಿಮಾನದಿಂದ
20.2.७००७
- ಬಾನು ಮುಷ್ಕಾಕ್ – ಹಾಸನ
