ಜಗದೇಕ ಸುರಸುಂದರಿ ಆಮ್ರಪಾಲಿ ಕತೆ ನಿಜಕ್ಕೂ ನಿಬ್ಬೆರಗಾಗುವಂತಹದು. ವೈಶಾಲಿನಗರದ ಅನುಪಮ ದಿವ್ಯ ಸುಂದರಿ, ಚಿಗುರೆಲೆಯ ಮಾವಿನ ತೋಟದಲಿ ಆಮ್ರಪಾಲಿ ಮಗುವಾಗಿದ್ದಾಗ ವೈಶಾಲಿಪುರದ ದಂಪತಿಗಳಿಗೆ ದೊರಕಿದ್ದಳು. ಮುಂದೇನಾಯಿತು? ಓದಿ …
ಮಾವಿನ ಹಣ್ಣಿನ ವಿಶೇಣ ‘ಆಮ’ ರ್ರ ಪಾಲಿ ಹೆಸರಾಯಿತು. ಇವಳ ಸೌಂದರ್ಯದ ರೂಪರಾಶಿ ನೋಡುಗರ ಕಣ್ಣು ಕುಕ್ಕುವಂತಿತ್ತು.ಇವಳ ಅಪರಮಿತ ಚೆಲುವಿಕೆಗೆ ಕನ್ಯೆಯರು ಕರುಬುತ್ತಿದ್ದರೆ, ಅಂತಃಪುರದ ರಾಣಿಯರು ತಲೆದೂಗತ್ತಿದ್ದರು. ರಾಜಮಹಾರಾಜರು ಇವಳ ಮೋಹಕ ಮೈಮಾಟಕೆ, ಕುಡಿನೋಟದ ಸಂಗ ಸೇರಲು ಹಾತೊರೆಯುತಿದ್ದರು. ವಿಪರ್ಯಾಸದ ಸಂಗತಿ ಎಂದರೆ, ಇವಳ ಅಪ್ರತೀಮ ಸೌಂದರ್ಯವೇ ಇವಳ ಬಾಳ್ವೆಗೆ ಮುಳ್ಳಾಯಿತು. ಆಮ್ರಪಾಲಿ ಪಡೆಯಲು ಪರಸ್ಪರರಲ್ಲಿ ಅಂತಃಕಲಹ ಹೆಚ್ಚಾದವು. ದ್ವೇಷಾಸೂಯೆಗಳು ತಾರಕಕ್ಕೇರಿದವು. ಒಂದು ದಿನ ಇವಳ ಸ್ವಯಂವರ ಸಿದ್ದವಾಗಿ ಪುರದ ಜನ ಶರಂಪರವಾಗಿ ಕದನಕ್ಕಿಳಿದರು. ಪರಿಣಾಮ ಆಮ್ರಪಾಲಿ ಶಾಶ್ವತವಾಗಿ ‘ನಗರವಧು’ವೆಂದು (ವೇಶ್ಯೆ) ಯಾಗಿ ನ್ಯಾಯನಿರ್ಣಯವಾಗಿ,ದಿವ್ಯ ಸುಂದರಿಯ ಬದುಕಿಗೆ ಕೊಳ್ಳಿಯಿಟ್ಟಿತು. ಸುಖದ ಸುಪ್ಪತಿಗೆಯಿಂದ, ಇವಳು ಮುಕ್ತಿಗಾಗಿ ತೀವ್ರತರವಾಗಿ ಹಂಬಲಿಸಿ ಬುದ್ಧರ ಪಾದಗಳಿಗೆ ಹಣೆ ಹಚ್ಚಿದಳು. ಈ ಕಲ್ಪನೆಯಲ್ಲಿ ಈ ನಾಲ್ಕು ಸಾಲುಗಳ ಕವನ ಬರೆದಿರುವೆ!

ಜಗದೇಕ ಸುಂದರಿ
ಜಗದೇಕ ಸುರಸುಂದರಿ ಅತುಲ್ಯಬಾಲೆ ಆಮ್ರಪಾಲಿ !
ದೊರಕಿದಳು ಚೆಲುವೆ ವನದೇವತೆ ಉಡಿಯಲಿ !
ಸೇರಿದಳು ವೈಶಾಲಿಪುರದ ದಂಪತಿಗಳ ಮಡಿಲಲಿ !
ರಸಪೂರಿ ಮಾವಿನ ಪ್ರತೀಕ ಹೆಸರಾಯಿತು ಆಮ್ರಪಾಲಿ
ಚಿಮ್ಮುತಾ ಮೊಗದಲಿ ಬೆಳದಿಂಗಳ ಚಂದಿರನ ಚೆಲುವು!
ಮಂದಾರಮುಖದಿ ಕೆಂದಾವರೆಯಾಗಿ ಬೆಳೆದು ಒಲವು!
ಮೋಡ ಮಾರುತಗಳು ಬಾಲೆ ನೋಡಲು ಧರೆಗಿಳಿದವು
ಬಳ್ಳಿ ಬಾಗಿದವು ಸುಮಧುರ ಸುಮಗಳು ನಾಚಿದವು !
ಮೋಹಕ ಮೈಮಾಟ ಕುಡಿನೋಟಕೆ ದಂಗಾದರು ಜನ!
ಲಾವಣ್ಯವತಿಗೆ ಬೆರಗಾದವು ರಾಜಮಹಾರಾಜರ ಮನ!
ಶುಭದಿನದಿ ಶುಭವಿವಾಹದ ನೀರಿಕ್ಷೆಯಲಿ ಸುದಿನ !
ಕನಸು ಕಾಣುವ ಕುಬೇರರು ತಂದರು ಬಂಡಿಯಲಿ ಧನ
ರಥವೇರಿ ಬರುತಿರಲು ಚಂದನ ಸುಗಂಧಿತ ಪರಿಮಳ!
ಮನೆ ಮಹಡಿಗಳಿಂದ ರಥದ ಮೇಲೆ ಪುಷ್ಪಗಳ ಮಳೆ!
ಆಮ್ರಪಾಲಿಯ ಸೌಂದರ್ಯ ಜನರಲಿ ಹಚ್ಚಿತ ಕಿಚ್ಚು !
ನ್ಯಾಯನಿರ್ಣಯವಾಗಿ ನಗರವಧುವಾಗಿ ಅಚ್ಚುಮೆಚ್ಚು
ಬಿಂದುಸಾರ ಬೆರಗಾದ, ಕುಬೇರರು ಕುಚೇಲರಾದರು!
ಸುಂದರಿಯ ಸಮ್ಮೋಹದಿ ರಾಜರ ಕತೆ ರಕ್ತಕಣ್ಣೀರು !
ಕೇಳಿದಳು ಬುದ್ಧಂ ಶರಣಂ ಗಚ್ಚಾಮಿ ಸುಮಧುರವಾಣಿ
ಕಂಡಳು ಬಿಕ್ಕುವಿನ ತೇಜಸ್ಸು ಓಜಸ್ಸು ಮಹಲಿನ ರಾಣಿ!
ಬಿಕ್ಕುವಿನ ಚಿತ್ತಚಂಚಲ ಮಾಡಲು ಹೂಡಿದಳು ಸಂಚು!
ಮಹಲಿನಲಿ ಚಾರ್ತುಮಾಸ ಕಳೆದ, ಬಿಕ್ಕುವಿನ ಮಿಂಚು
ವೈಶಾಲಿಪುರದಲಿ ಕಂಡಿತು ಜಗದಿ ಸುಜ್ಞಾನದ ಬೆಳಕು!
ಗರಿಗೆದರಿತು ಜನ್ಮಜನ್ಮಾಂತರದ ಮುಕ್ತಿಯ ಸೆಳಕು!
ಸಮಾಧಿಯಾಗುವ ಮುನ್ನ ಶರಣಾಗಲು ನಡೆದಳು!
ಶ್ವೇತ ವಸ್ತ್ರ ಧರಿಸಿ ಬರಿಗಾಲಲಿ ಬುದ್ಧನೆಡೆಗೆ ಸಾಗಿದಳು!
ಮನೆ ಮಹಲು ದಾನದಲಿ ಬಿಕ್ಕುಗಳಿಗೆ ಅರ್ಪಿಸಿದಳು !
ಮೋಹ ನಿರ್ಮೋಹದಲಿ ಮೋಕ್ಷಗಾಗಿ ಹಂಬಲಿಸಿದಳು!
ಪರಮ ತೇಜೋಮಯ ಬುದ್ಧರ ದಿವ್ಯತೆ ಕಂಡಳು !
ಗೌತಮರ ಅಮೃತವಾಣಿ ದೇವವಾಣಿಯ ಆಲಿಸಿದಳು!
ಶಾಕ್ಯಮುನಿಯ ಪಾದಕೆ ಹಣೆ ಹಚ್ಚಿ ನಮಸ್ಕರಿಸಿದಳು!
ಬುದ್ದರ ಕೃಪೆಗೆ, ಆಮ್ರಪಾಲಿ ಪಾವನ ಗಂಗೆಯಾದಳು!
ಕೇಶಮುಂಡನೆಯವಳ ಮೊಗದಲಿ ಅಹಿಂಸೆಯ ಸಾರ!
ಋಣಮುಕ್ತಳಾಗಿ ಹೊರಟಳು ಲೋಕ ಸಂಚಾರ !
ಜಗದಿ ಸಾರಿದಳು ಅಹಿಂಸಾ ಪರಮೋಧರ್ಮ !
ಆಮ್ರಪಾಲಿ ಆತ್ಮ ಸೇರಿತು, ಒಂದು ದಿನ ಪರಂದಾಮ.!
- ರಚನೆ : ದಶರಥ ಕೋರಿ