“ಹೊಂಗನಸು” ಕವನ ಸಂಕಲನ ಪುಸ್ತಕ ಪರಿಚಯ

ಸಾಹಿತ್ಯ ಅನ್ನುವದು ಕೇವಲ ಬುದ್ಧಿ ಜೀವಿ ವಿದ್ಯಾವಂತರ ಸೊತ್ತಲ್ಲ, ಅದು ಕಾಯಕದಲ್ಲಿ ನಿರತರಾದ ನಿರಕ್ಷರಿ ಕುಕ್ಷಿಗಳ ನಾಲಿಗೆಯ ಮೇಲು ನೆಲೆಸಿರುತ್ತದೆ, ನಲಿಯುತ್ತದೆ, ಉಲಿಯುತ್ತದೆ, ತನ್ನಂತರಂಗದ ಭಾವನೆಗಳನ್ನು ಹೊರಹಾಕುತ್ತದೆ. ಅಂತೆಯೇ ಜನಪದ ಸಾಹಿತ್ಯ ಜನಜನಿತವಾಗಿರುವದು. ಎನ್ನುತ್ತಾರೆ ಹಿರಿಯ ಸಾಹಿತಿಗಳಾದ ಪ. ಗು. ಸಿದ್ದಾಪುರ ಅವರು. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ “ಹೊಂಗನಸು” ಕವನ ಸಂಕಲನದ ಕುರಿತು ಅವರು  ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇವರೆಲ್ಲರೂ ಶಾಲೆಯ ಮುಂದೆ ಅಲ್ಲ ಹಿಂದೆಯೂ ಸುಳಿದವರಲ್ಲ ! ಆದರೂ ಅವರ ಸಾಹಿತ್ಯ ಬೆಲ್ಲದಚ್ಚಿನ ಹಾಗೆ ಎಲ್ಲಿ ಕಚ್ಚಿದರೂ ಸವಿಸವಿ, ಎಲ್ಲದಕ್ಕೂ ಆಸಕ್ತಿ ಬೇಕು.ಆಸಕ್ತಿ ಇದ್ದವರಿಂದ ಸಾಹಿತ್ಯ ಝರಿಯಾಗಿ ಹರಿದು ಹೊನಲಾಗಿ ಮುಂದುವರೆಯುವದಲ್ಲಿ ಸಂದೇಹವಿಲ್ಲ. ಸಾಹಿತ್ಯ ಬೀಜ ಎಲ್ಲರ ಮನೋ ಭೂಮಿಕೆಯಲ್ಲೂ ಇರುತ್ತದೆ.ಆದರೆ,ಅದಕ್ಕೆ ಅಭಿರುಚಿ ಅನ್ನುವ ನೀರು – ಗೊಬ್ಬರ ಸಿಕ್ಕರೆ ಚಿಗುರೊಡೆಯುವದರಲ್ಲಿ ಸಂಶಯವಿಲ್ಲ.ಉನ್ನತ ಪದವೀಧರರಷ್ಟೇ ಸಾಹಿತ್ಯದ ವಾರಸುದಾರರಲ್ಲ. ಅದು ಕೂಲಿ ಕಾರ್ಮಿಕರನ್ನು ಪ್ರೀತಿಸುತ್ತದೆ, ಸ್ವಾಗತಿಸುತ್ತದೆ. ಹಾಗೆಯೇ ಕಲಬುರ್ಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲೊಬ್ಬರು ವ್ಯಾಪಾರಸ್ತರಿದ್ದಾರೆ, ಪ್ರವೃತ್ತಿಯಿಂದ ಅವರು ಸಾಹಿತ್ಯಾರಾಧಕರು. ಹಲವಾರು ನಾಟಕಗಳನ್ನು ರಚಿಸಿ ರಂಗಭೂಮಿಯ ಮೇಲೆ ಪ್ರದರ್ಶಿಸಿದ್ದಾರೆ, ನಟರಾಗಿ ಸ್ವತಃ ತಾವು ಪಾತ್ರ ನಿರ್ವಹಿಸಿದ್ದಾರೆ. ಧರ್ಮರಕ್ಷಕ, ಧರ್ಮಜ್ಯೋತಿ ಧರ್ಮಸಿಂಧು ಹಾಗು ಸದ್ಧರ್ಮ ಸಿಂಹಾಸನ ಹೀಗೆ ನಾಲ್ಕು ಕ್ರಾಂತಿಕಾರಿ ನಾಟಕಗಳನ್ನು ಬರೆದು ಕನ್ನಡಿಗರ ಉಡಿ ತುಂಬಿದ್ದಾರೆ. ಇಂಥ ಹವ್ಯಾಸಿ ಬರಹಗಾರರಿಂದು ” ಹೊಂಗನಸು ” ಅನ್ನುವ ಕವನ ಸಂಕಲನವನ್ನು ನಿಮ್ಮ ಕೈಗಿತ್ತಿದ್ದಾರೆ, ಇದರಲ್ಲಿ ಸುಮಾರು ಎಂಬತ್ತು ಕವಿತೆಗಳು ಸ್ಥಾನ ಪಡೆದುಕೊಂಡಿವೆ ಅವುಗಳಲ್ಲಿ ತಾವು ಕಂಡುಂಡ ಅನುಭವದ ಸಾರವನ್ನು ಅನಾವರಣಗೊಳಿಸಿದ್ದಾರೆ.

ರಾಮಾಯಣ, ಮಹಾಭಾರತದ ಕೆಲವೊಂದು ಸನ್ನಿವೇಶಗಳನ್ನು ಇಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕಾವ್ಯ ರೂಪದಲ್ಲಿ ಕಟ್ಟಿ ಕಟ್ಟಿಕೊಟ್ಟಿದ್ದಾರೆ. ವಿಷಯ ಹಳೆಯದಾದರೂ ಹೇಳುವ ಕಲೆ ನವನವೀನವಾಗಿದೆ, ಓದುಗರು ತಲೆದೂಗುವಂತೆ ಹೆಣೆದಿದ್ದಾರೆ.

ಒಂದೊಂದು ಕವಿತೆಯಲ್ಲಿ ಅನುಭವದ ಕೆನೆ ತೇಲಿಬರುತ್ತದೆ.

ಸಂಯುಕ್ತ

‘ ಸಂಯುಕ್ತ ಎಂಬ ಪದವೇ ಬಲು ಬಲಿಷ್ಠವಾಗಿಹುದು
ಒಡೆದು ಆಳುವ ಕುತಂತ್ರಿಗಳಿಗೆ ಕಷ್ಟವಾಗಿಹುದು
ಬಿಡಿ ಬಿಡಿಯಾಗಿಯಾಗಿದ್ದರೆ ದುರ್ಬುದ್ಧಿಗಳಿಗೆ ಆಶ್ರಯವದು
ಒಗ್ಗಟ್ಟು ಹೊಸತನದ ಆವಿಷ್ಕಾರಗಳಿಗೆ ಮೂಲವದು.’

ಇಲ್ಲಿ ಕವಿ ಒಗ್ಗಟಿನ ಫಲವನ್ನು ತುಂಬಾ ಮಾರ್ಮಿಕವಾಗಿ ಹೆಣೆದಿದ್ದಾರೆ, ಒಂಟಿತನದಿಂದ ಬರುವ ಕಂಟಕಗಳನ್ನು ನವಿರಾಗಿ ಎತ್ತಿ ತೋರಿಸಿದ್ದಾರೆ, ನಾವು ಸ್ವಾತಂತ್ರ್ಯ ಪಡೆದದ್ದು ಒಗ್ಗಟ್ಟಿನಿಂದಲ್ಲವೇ ? ಒಗ್ಗಟ್ಟಿನಿಂದ ಏನೆಲ್ಲಾ ಸಾಧಿಸಬಹುದೆಂದು ತುಂಬಾ ಸೊಗಸಾಗಿ ಹೇಳಿದ್ದಾರೆ.

ಮಮತೆಯ ಮಡಿಲು.

‘ ಅಮ್ಮನ ಮಮತೆಯ ಮಡಿಲು ಅಮೃತದ ಕಡಲು
ನಮ್ಮನ್ನು ನವಮಾಸ ಹೊತ್ತಿರುವದು ಅವಳೊಡಲು
ತಾನು ಹಸಿದಿದ್ದರು ಕಂದನಿಗೆ ಕೊಡುವಳು ಎದೆಹಾಲು
ಆಕೆಯ ವಾತ್ಸಲ್ಯದ ಚಿಲುಮೆಯೇ ನಮಗೆ ಹೊನಲು’

ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು, ಜನನಿ, ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠವೆಂದು ಹೇಳುತ್ತಾ ಬಂದಿದ್ದಾರೆ, ಇದು ಶತ ಸತ್ಯವಾದುದ್ದು, ಅದನ್ನೆ ಇಲ್ಲಿ ಮಲ್ಲಿಕಾರ್ಜುನ ಆಲಮೇಲ ಅವರು ಸೊಗಸಾಗಿ ಹೇಳಿದ್ದಾರೆ, ತಾಯಿಯ ಘನತೆ – ಗೌರವವನ್ನು ಎತ್ತಿ ತೋರಿಸಿದ್ದಾರೆ ಈ ಕವಿತೆ ಮನ ಮುಟ್ಟುವಂತೆ ಹೃದಯ ತಟ್ಟುವಂತೆ ಮೂಡಿಬಂದಿದೆ.

ಗುಬ್ಬಿಯ ಗೂಡು

‘ ಕಸದಿಂದ ಕಲೆಯನ್ನು ಸೃಷ್ಟಿಸಿದೆ
ಮಹಾನ್ ಕಲಾ ಕಾರನಂತೆ ಕಾಣುತ್ತಿದೆ
ಅದರ ಮನೆ ಅದೆಷ್ಟು ಸೊಗಸಾಗಿದೆ
ಅದನ್ನು ನೋಡಿ ಶಿಲ್ಪಿಯ ಮನವು ನಾಚಿದೆ ‘

ಗುಬ್ಬಿ – ಗೀಜಗ ಕಟ್ಟುವ ಗೂಡನ್ನು ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ.ಅಷ್ಟೊಂದು ನಯ – ನಾಜೂಕಾಗಿ ಹೆಣೆದಿರುತ್ತವೆ, ಅದ್ಯಾವ ಕಲಾ ಶಾಲೆಯಲ್ಲಿಯೂ ಅವು ತರಬೇತಿ ಪಡೆದಿರುವದಿಲ್ಲ.

ಅಷ್ಟೊಂದು ಜಾಣ್ಮೆ ಆ ಪಕ್ಷಿಗಳಿಗೆ ಎಲ್ಲಿಂದ ಬಂತು ? ಯಾರು ಕಲಿಸಿದರು ? ಎಂಬ ಪ್ರಶ್ನೆ ಪ್ರತಿಯೊಬ್ಬರ ಮನದಿ ಸುಳಿಯದೇ ಇರದು. ಅದನ್ನು ಕವಿ ಕಂಡು ಮನಸೋತು ತನ್ನ ಶಬ್ದಗಳಲ್ಲಿ ಸೆರೆ ಹಿಡಿದಿದ್ದಾರೆ ನಾನೂ ಸೋತೆನೆಂದು ಒಪ್ಪಿಕೊಂಡಿದ್ದಾರೆ.ನಿಜವಾಗಿಯೂ ಸತ್ಯವಾದುದ್ದು ಮಕ್ಕಳಿಗೆ ಗುಬ್ಬಿಗಳೆಂದ್ರೆ ತುಂಬಾ ಇಷ್ಟ

‘ಬಾ ಬಾ ಗುಬ್ಬಿ ಚಿಂವು ಚಿಂವು ಗುಬ್ಬಿ
ಬಾ ಬಾ ಹತ್ತಿರಕೆ ಕಲಿಸಿದರಾರು
ಹಾರಲು ನಿನಗೆ ಆಗಸದೆತ್ತರಕೆ ?

ಎಂದು ಮುಗ್ದ ಮಗು ಪ್ರಶ್ನೆ ಮಾಡುತ್ತದೆ, ಇಲ್ಲಿ ಆಲಮೇಲವರು ಮಗುವಾಗಿ ಈ ಕವಿತೆಯನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ.

ಅನರ್ಘ್ಯ ರತ್ನ.

‘ಶ್ರಾವಣ ಮಾಸದಿ ನಾಕು ತಂತಿಯ ಮೀಟಿದಿರಿ
ತಾಯಿ ಶಾರದಾಂಬೆಯ’ ವರಕವಿ ಬೇಂದ್ರೆ ‘ ಆದಿರಿ
ಕೃಷ್ಣಕುಮಾರಿಗೆ ಸಖಿಗೀತೆ ಹಾಡಿ ಉಯ್ಯಾಲೆ ತೂಗಿದಿರಿ
ಮಧುರವಾದ ನಾದಲೀಲೆ ಮಾಡುತ್ತಾ ಹಕ್ಕಿ ಹಾರಿಸಿದಿರಿ ‘

ಶಬ್ದಗಾರುಡಿಗ, ನಾಕು ತಂತಿಯ ನಿರ್ಮಾತೃ ಕವಿ ದ. ರಾ. ಬೇಂದ್ರೆಯಾರನ್ನು ಕುರಿತು ಹೆಣೆದ ಈ ಕವಿತೆಯಲ್ಲಿ ಅವರನ್ನು ಪರಿಚಯಿಸಿದ್ದಾರೆ.ಅವರ ಸಾಹಿತ್ಯದ ಸತ್ವವನ್ನು ತಿಳಿಸಿಕೊಟ್ಟಿದ್ದಾರೆ,ಅವರಿಗೆ ದೊರೆತ ಪ್ರಶಸ್ತಿ – ಪುರಸ್ಕಾರಗಳನ್ನು ಓದುಗರಿಗೆ ಅನಾವರಣಗೊಳಿಸಿದ್ದಾರೆ. ಕನ್ನಡಿಗರ ‘ಕಣ್ಮಣಿ ಅಂಬಿಕಾತನಯ ನಮ್ಮೆಲ್ಲರ ದಿನಮಣಿ ‘ ಎನ್ನುವದನ್ನು ತಿಳಿಸಿಕೊಟ್ಟಿದ್ದಾರೆ.

ಕಾಗುಣಿತ ಕವನ

‘ ಕ – ಕರುಣೆಯ ಮಹಾ ಕಡಲಾಗಿಹನು ಜನಕ

ಕಾ – ಕಾರುಬಾರು ಮಾಡುವನು ಎಲ್ಲರ ಹಿತಕ
ಕಿ – ಕಿರಿಕಿರಿ ಇದ್ದರು ತಾಳ್ಮೆಯಿಂದ ಇರುವನು
ಕೀ – ಕೀರ್ತಿ ಬಯಸುವನು ಮಕ್ಕಳಿಗಾಗಿ ಅವನು ‘

ಇದು ಅಪ್ಪಟ ಮಕ್ಕಳ ಕವಿತೆ. ಶಿಕ್ಷಕರಾದವರು ಮಕ್ಕಳಿಗೆ ಕಾಗುಣಿತ ಕಲಿಸಲು ಒಳ್ಳೆಯ ಸುಲಭವಾದ ಕವಿತೆ ಇದಾಗಿದೆ, ಈ ಕವಿತೆಯನ್ನು ಮಕ್ಕಳು ಕಂಠಪಾಠ ಮಾಡಿದರೆ ಎರಡು ಲಾಭಗಳಿವೆ,ಒಂದು ತಂದೆಯ ಘನತೆ, ಗೌರವವನ್ನು ಎತ್ತಿ ತೋರಿಸಿದರೆ ಮತ್ತೊಂದು ಸಹಜವಾಗಿಯೇ ಕಾಗುಣಿತ ಕಲಿಯಬಹುದು. ಇದೊಂದು ಒಳ್ಳೇ ಕವಿತೆಯೆಂದು ಹೇಳಬಹುದು.ಇದನ್ನು ನಾನು ಮೆಚ್ಚಿದ್ದೇನೆ ಓದುಗರು ಮೆಚ್ಚುವರು.

ತಾಪಮಾನ
‘ದಿವ್ಯವಾದ ವನಸಿರಿಯ ಸಂಪತ್ತು ನಾಶವಾಗುತ್ತಿದೆ
ಶುದ್ಧಗಾಳಿ ನೀಡುವ ಗಿಡಮರಗಳಿಗೆ ಕೊಡಲಿ ಏಟಿದೆ
ಪ್ರಕೃತಿಯ ಮಡಿಲಿಗೆ ವಿನಾಶಕಾರಿ ಬೆಂಕಿ ಬೀಳುತ್ತಿದೆ
ಧರಿತ್ರಿಯ ಒಡಲಿನ ಕೂಗು ಯಾರಿಗೂ ಕೇಳದಾಗಿದೆ ‘

ಇದೊಂದು ಪರಿಸರ ಗೀತೆ, ಮಾನವ ತನ್ನ ಸ್ವಾರ್ಥಕ್ಕಾಗಿ ಸುಂದರ ಪರಿಸರವನ್ನು ಹಾಳುಮಾಡುತ್ತಿದ್ದಾನೆ. ಕೊಡಲಿಯ ಕಾವಿನಿಂದ ಗಿಡ ಮರಗಳೆಲ್ಲ ನಲುಗಿ ಹೋಗಿವೆ. ಇದರ ಪರಿಣಾಮ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗಿ ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಅಲ್ಲದೆ ಓಜೋನ್ ಪದರಕ್ಕೆ ತೂತು ಬಿದ್ದು ವಿನಾಶಕ್ಕೆ ಕಾದು ನಿಂತಿದೆ ಅನ್ನುವದನ್ನು ನಾವೆಲ್ಲಾ ತಿಳಿದುಕೊಳ್ಳಬೇಕಾಗಿದೆ.ಗಿಡ ಮರಗಳನ್ನು ಬೆಳಸಿದರೆ ಪ್ರಕೃತಿಯಲ್ಲಿ ಸಮತೋಲನ ಉಲಿಯುತ್ತದೆ, ಇಲ್ಲವಾದಲ್ಲಿ ಜೀವ ಕುಲ ನಶಿಸುತ್ತದೆ ಅನ್ನುವದನ್ನು ಈ ಕವಿತೆಯಲ್ಲಿ ಆಲಮೇಲ ಅವರು ಒತ್ತಿ ಹೇಳಿದ್ದಾರೆ.

ವಿಜಯಪಥ
‘ವಿಜಯಪಥದತ್ತ ಸಾಗಲಿ ಬದುಕಿನ ಪಯಣ
ಸೋಲು ಗೆಲುವು ಏನೇ ಬರಲಿ ಮುನ್ನುಗ್ಗೋಣ
ಸತ್ಯಾ ಅಸತ್ಯಗಳ ಅನ್ವೇಷಣೆಯ ಮಾಡೋಣ
ಸದ್ಧರ್ಮದಿಂದ ಸ್ವಾಭಿಮಾನದ ಹೆಜ್ಜೆ ಹಾಕೋಣ ‘

ಇದು ಆದರ್ಶ ಬದುಕಿಗೆ ದಾರಿದೀಪ ನೀಡುವ ಭಾವಗೀತೆಯಾಗಿದೆ. ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ಈ ಕವಿತೆಯಿಂದ ನೀಡಿದ್ದಾರೆ. ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿದರೆ ಸಮಾಜ ನಮ್ಮನ್ನು ಮೆಚ್ಚುತ್ತದೆ,ಗೌರವಿಸುತ್ತದೆ. ಆದ್ದರಿಂದ ನಾವು ಪರರಿಗೆ ನೀತಿ ಬೋಧಿಸದೆ ನಾವು ನೀತಿವಂತರಾಗಿ ಬದುಕಿದರೆ, ಹೇಳುವ ಅವಶ್ಯಕತೆ ಬೀಳುವದಿಲ್ಲ. ಆದ್ದರಿಂದ ಸದ್ಧರ್ಮದಿಂದ, ಸ್ವಾಭಿಮಾನದಿ ಬದುಕುವದು ಆದರ್ಶ ಬದುಕೆಂದು ಒತ್ತಿ ಹೇಳಿದ್ದಾರೆ. ಇಂತಹದೇ ಇನ್ನೊಂದು ಕವಿತೆ ಇಲ್ಲಿ ನೋಡಬಹುದು.

‘ಸಮಾಜದಿ ಮಾನವೀಯತೆಯು ಮರೆಯಾಗುತ್ತಿದೆ
ದ್ವೇಷ, ಮೋಸ, ವಂಚನೆಯೇ ಹೆಮ್ಮರವಾಗುತ್ತಿದೆ
ದುಷ್ಟ, ದುರುಳರ ಆಟ ಆರ್ಭಟವು ಮಿತಿ ಮೀರಿದೆ
ಸತ್ಯ, ನ್ಯಾಯ, ನೀತಿ ನಿರ್ನಾಮವಾಗಿತ್ತಿದೆ.’

ಇಂದು ಸಮಾಜದಲ್ಲಿ ಎಲ್ಲಿ ನೋಡಿದರಲ್ಲಿ ಅನ್ಯಾಯ, ಅನೀತಿ, ಅತ್ಯಾಚಾರ, ಕೊಲೆ – ಸುಲಿಗೆ ತಾಂಡವವಾಡುತ್ತಿದೆ. ಅದನ್ನು ನೋಡಿದ ಕವಿ ಮನನೊಂದು ಹೀಗೆ ಮುಂದುವರೆದರೆ, ಜಗತ್ತು ವಿನಾಶದ ಹಾದಿಹಿಡಿಯುವದರಲ್ಲಿ ಮುಂಚೂಣಿಯಲ್ಲಿರುತ್ತೆ, ಇದು ಒಂದು ರೀತಿಯ ಪ್ರಳಯವೇ ಎಂದು ಹೇಳಬಹುದೆಂದು ಭವಿಷ್ಯ ನುಡಿದಿದ್ದಾರೆ. ನಿಜಕ್ಕೂ ಅವರ ಭವಿಷ್ಯ ಸುಳ್ಳಾಗದು. ಅಧರ್ಮದ ಹಾದಿ ತುಳಿದವರಿಗೆ ಎಂದು ಸದ್ಗತಿ ಸಿಗದು. ಇಂತಹ ದುರ್ಬುದ್ಧಿ ಹೋಗಿ ಸದ್ಭುದ್ಧಿ ನೆಲಸಿದರೆ ಬದುಕು ಹಂದರ ಬಳ್ಳಿಯಾಗುವದರಲ್ಲಿ ಸಂದೇಹವಿಲ್ಲ, ಅಧರ್ಮದಿಂದ ಯಾರು ಬದುಕಿ ಉಳಿದಿಲ್ಲ. ಬದುಕುವದು ಇಲ್ಲವೆಂದು ಒತ್ತಿ ಹೇಳಿದ್ದಾರೆ. ಸದ್ಗುಣ ಸನ್ಮಾರ್ಗ, ಸದ್ಗತಿಗೆ ಮೂಲವೆಂದು ಹಿರಿಯರಾಡಿದ ಮಾತು ಸುಳ್ಳಲ್ಲ. ಕವಿ, ನಾಟಕಕಾರ, ಮಲ್ಲಿಕಾರ್ಜುನ ಆಲಮೇಲ ಅವರು ವೃತ್ತಿಯಿಂದ ವ್ಯಾಪಾರಸ್ತರಾದರು ಪ್ರವೃತ್ತಿಯಿಂದ ಒಳ್ಳೆಯ ಬರಹಗಾರರಾಗಿದ್ದಾರೆ. ಇದು ಇವರ ದ್ವಿತೀಯ ಕವನ ಸಂಕಲನ ಇಲ್ಲಿ ಎಲ್ಲರಿಗೂ ಅನ್ವಯವಾಗುವಂತಹ ಒಳ್ಳೊಳ್ಳೆಯ ಕವಿತೆಗಳು ಅರಳಿವೆ. ” ಹೊಂಗನಸು ” ಕೃತಿಯಲ್ಲಿ ಪ್ರೌಢ ಕವಿತೆಗಳೊಂದಿಗೆ, ಮಕ್ಕಳ ಕವಿತೆಗಳು ಬೆರೆತುಕೊಂಡಿವೆ. ಬೇರ್ಪಡಿಸಿದ್ದರೆ ಎರಡು ಸಂಕಲನ ಮಾಡಬಹುದಿತ್ತು, ಆದರೂ ಒಂದಡೆ ಸೇರಿಸಿ ‘ ಓದುಗರಿಂದ ಸದಭಿಪ್ರಾಯದ ಹೊಂಗನಸು ಕಂಡಿದ್ದಾರೆ. ಕವಿ ಮಲ್ಲಿಕಾರ್ಜುನವರ ಹೊಂಗನಸು ನನಸಾಗಲೆಂದು ನಾನು ತುಂಬು ಹೃದಯದಿಂದ ಶುಭ ಹಾರೈಸುವೆ. ಮುಂಬರುವ ಕೃತಿಗಳು ಇನ್ನಷ್ಟು ಗಟ್ಟಿಗೊಂಡು ಓದುಗರ ಮನಸೊರೆಗೊಳ್ಳಲೆಂದು ಶುಭಕೋರುತ್ತಾ ನನ್ನೆರಡು ಅನಿಸಿಕೆಗಳಿಗೆ ಪೂರ್ಣ ವಿರಾಮ ನೀಡುವೆ.


  • ಪ. ಗು. ಸಿದ್ದಾಪುರ – ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಮಕ್ಕಳ ಸಾಹಿತಿಗಳು, ಮುಳವಾಡ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW