‘ಹೋಳಿ ಆಡೋಣ ಬನ್ನಿರೋ’ ಕವನ

ಬೃಂದಾವನಕೆ ತೆರಳಿ ಹೋಳಿ ಆಡೋಣ ಬನ್ನಿರೋ… ಮರೆಯದೆ ನೀವೆಲ್ಲಾ ಪಿಚಕಾರಿ ತನ್ನಿರೋ… ನಿವೃತ್ತ ಶಿಕ್ಷಕರು ಶಿವದೇವಿ ಅವನೀಶಚಂದ್ರ ಅವರು ಹೋಳಿ ಹಬ್ಬಕ್ಕೆ ಬರೆದ ವಿಶೇಷ ಕವನವನ್ನು ತಪ್ಪದೆ ಮುಂದೆ ಓದಿ…

ಹೋಳಿ ಆಡೋಣ ಬನ್ನಿರೋ
ನಾವೆಲ್ಲ ಹೋಳೀ ಆಡೋಣ ಬನ್ನಿರೋ
ಬೃಂದಾವನಕೆ ತೆರಳಿ ಆಡೋಣ ಬನ್ನಿರೋ
ಮರೆಯದೆ ನೀವೆಲ್ಲಾ ಪಿಚಕಾರಿ ತನ್ನಿರೋ

ಗೋಪಾಲ ಬರುವನಂತೆ
ಗೋಪಿಯರು ನೆರೆವರಂತೆ
ನಂದನವೆ ಭುವಿಗಿಳಿದಂತೆ
ಗೋಕುಲದಲಿ ಸಂಭ್ರಮವಂತೆ

ಹೋಳಿ ಆಡೋಣ ಬನ್ನಿರೋ

ವಸಂತನೊಡ್ಡೋಲಗವಂತೆ
ಗೋವುಗಳ ನೆರವಿಯಂತೆ
ಬಹು ಬಣ್ಣಗಳ ಮೇಳವಂತೆ
ಜಗವೇ ಸಿಂಗಾರವಂತೆ||ಹೋಳಿ||

ನಾನು ನೀನೂ ಆಡೋಣಂತೆ
ಹೋಳಿ ಆಡಿ ನಿಜ ಬಣ್ಣ ಮರೆಯೋಣಂತೆ
ರಂಗಾಗಿಸುವ ತನುಮನವ
ಬೆಳದಿಂಗಳಲಿ ಹೊಳೆಸಿ ಭಾವ || ಹೋಳಿ||

ನವಿಲುಗರಿಯ ಕಣ್ಣಿನಲ್ಲಿ
ಬದುಕ ಬಣ್ಣ ನೂರು ತುಂಬಿ
ನಾನು ನೀನು ಅವನೆಂಬುದ ಮರೆಸಿ
ಮನದಣಿಯೆ ಕುಣಿಯೋಣ||ಹೋಳಿ||

ಆಸರಿಕೆ ಬ್ಯಾಸರಿಕೆ
ಎಲ್ಲ ಮರೆತು ಕಲೆಯೋಣ
ನವಿಲು ಗಿಳಿ ಗೊರವಂಕಗಳ
ಜಗದೊಳಗೆ ಹಣಕೋಣ
ವಿಶ್ವ ಪ್ರಜ್ಞೆಯಲಿ ಲಯವಾಗಿಬಿಡೋಣ…
ಕಾಡುವ ನೂರು ಕಾಮನೆಗಳ ದಹಿಸಿ ತಮಸ ನೀಗೋಣ||ಹೋಳಿ||

ಮುರಳೀ ಲೋಲನಿರಲು
ಹೋಳಿಕಾಳ ಭಯವೇಕೆ
ಕೊಳಲ ನಾದವಿರಲು
ಎದೆಗೆ ಬೇರೆ ಮೃಷ್ಟಾನ್ನವೇಕೆ
ರಾಧೆಯಂತ ಗೆಳತಿಯಿರಲು
ಜಗವೇ ನಂದನವಾಗಿರಲು
ರಂಗುರಂಗಿನ ಕನಸು ಗರಿಬಿಚ್ಚಿ ಹಾರುತಿರಲು
ಮುಕುಂದನ ನಗೆಬೆಳದಿಂಗಳಲಿ
ಬಾಳೇ ಬೆಳಕಾಗಿರಲು ||ಹೋಳಿ||

ತಾಳ ಮೇಳ ಇಲ್ಲದೇನೇ
ಮಿಡಿಯುತಿರಲು ಎದೆಯ ವೀಣೆ
ನೂಪುರದ ಪಾದಗಳಲಿ
ಸಂಚಲನವಿರಲು ಜಾಣೆ

ಸವಿಯೋಣ ಬಾಳ ಬೋನ
ವಿಹರಿಸುತ ಅನಂತ
ಭಾವಗಗನ
ಮೃಣ್ಮಯ ಕಾಯದಲಿ ಜೀವನ
ಬೆರೆತು ಸಚ್ಚಿದಾನಂದ ಚಿನ್ಮಯನ||ಹೋಳಿ||

ನಾನೂ ರಂಗಾಗಿ
ನೀನೂ‌ರಂಗಾಗಿ
ಕಾಯದ ಮೋಹ ಹಿಂಗಿ
ನಾವೆಂಬ ಭಾವದಲ್ಲಿ ಲೋಕವಜೀವನ ಸುಗ್ಗಿ
ಜೀವಭಾವ ಬೆರೆಸಿ ಹಿಗ್ಗಿ
ಹೋಳಿ ಆಡೋಣ ಬನ್ನಿರೋ

ಬೆಳದಿಂಗಳ ರಾತ್ರಿಯಲ್ಲಿ
ಆ ಯಮುನೆಯ ತೀರದಲಿ
ನಂದನದ ಕಣ್ಮಣಿಯು
ಕುಣಿಸಿದಂತೆ ಕುಣಿಯುತ|| ಹೋಳಿ||


  •  ಶಿವದೇವಿ ಅವನೀಶಚಂದ್ರ –ನಿವೃತ್ತ ಶಿಕ್ಷಕರು, ಲೇಖಕರು, ಅಂಕಣಕಾರ್ತಿ, ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading