‘ಒಲ್ಲದ ಮನಸ್ಸು’ ಕವನ

ಐವತ್ತಾದರೂ ಹರೆಯ ನಿನಗೆ, ಹದಿನೆಂಟರಲೇ ಮುಪ್ಪು ನನಗೆ, ಕಾರಣ ಪ್ರೇಮವಿರದೆ ಕಾಮಿಸುವ ಕಣ್ಣಲ್ಲಿ ಬರಿಯ ದರ್ಪವನೇ ಮೆರೆಯುತಿಹೆ… ಹೇಮಂತ್ ಶೃಂಗನಾಡು ಅವರ ಲೇಖನಿಯಲ್ಲಿ ಮೂಡಿ ಬಂದ ಒಂದು ಕವಿತೆ, ತಪ್ಪದೆ ಮುಂದೆ ಓದಿ…

ಒಲವಿರದ ಮನಸ ಮೆದ್ದರೆ ಗಂಡ ನಿನಗೆ
ಒಲಿಯಬಹುದೇನೋ ದೇಹ ಮನಸಲ್ಲ
ಐವರಾದರೂ ಮನ್ನಣೆ ಇತ್ತು.
ದ್ರೌಪದಿಯ ಮನಸಿಗೆ, ನೀನೊಬ್ಬನೇ ನನಗೆ,
ಗಂಡ ಒಲಿಸಿಕೊಳ್ಳದೇ ಹೋದೆ ಮನಸ.

ಐವತ್ತಾದರೂ ಹರೆಯ ನಿನಗೆ,
ಹದಿನೆಂಟರಲೇ ಮುಪ್ಪು ನನಗೆ, ಕಾರಣ
ಪ್ರೇಮವಿರದೆ ಕಾಮಿಸುವ ಕಣ್ಣಲ್ಲಿ
ಬರಿಯ ದರ್ಪವನೇ ಮೆರೆಯುತಿಹೆ,
ಗಂಡ ಒಲಿಸಿಕೊಳ್ಳದೇ ಹೋದೆ ಮನಸ.

ನನ್ನೊಲವಿಗೆ ಎಂದೂ ಉಸುರಲಿಲ್ಲ ನೀನು,
ಬರಿಯ ಉಸಿರಾಡುವ ಗೊಂಬೆ ನಾನು,
ನೋಯಿಸದೆಲೆ ತಣಿಸಲಿಲ್ಲ ನೀನು,
ಉಸಿದುಗಟ್ಟಿಸಿ ಸಂಭವಿಸಿದ್ದೆಲ್ಲ, ಕೇವಲ
ಸಹವಾಸವಾಯ್ತೇ ವಿನಃ ಸಂಭೋಗವಲ್ಲ.

ನೀನಿಟ್ಟಕೂಳ ಕಣ್ಗೊತ್ತಿ ತಿಂದೆ,
ನೀ ಕೊಟ್ಟ ಮಕ್ಕಳ ನನ್ನೊಡಲಲಿಹೊತ್ತೆ,
ಲಾಲಿಸಿ ಪಾಲಿಸಿ ಪೋಷಿಸಿದ ಮಕ್ಕಳು,
ಅಪ್ಪನೆಂದಾಗ ಅವು ನಿನ್ನವೆಂದುಬಿಟ್ಟೆ,
ಗಂಡ ಅವು ನಿನ್ನವೆಂದು ಬಿಟ್ಟೆ.

ಆಡುವ ಮಕ್ಕಳ ಮಡಿಲಲ್ಲಿ ಬಿಟ್ಟೆ,
ಹಾರುವ ಮನಸ ಪಂಜರದಲಿ ಇಟ್ಟೆ,
ಕೊನೆವರೆಗೂ ಇರುವೆನೆಂದು ತಾಳಿಯ ಕಟ್ಟಿ,
ಮದ್ಯಂತರದಲೇ ದೂಡಿಬಿಟ್ಟೆ ಗಂಡ
ಕೈಲಾಸವ ಸೇರಿಬಿಟ್ಟೆ.

ಕನಸ ಕಟ್ಟಲು ಮುಜುಗರವಾಗುವ ವಯಸಲಿ,
ಬಾಳಕಟ್ಟಲು ಕಲಿ ಎಂದೆ,ಬಾಳೆಗಿಡವಾಯ್ತು ಬದುಕು,
ಹೊರಲು ಬಲವಿಲ್ಲ, ಮಕ್ಕಳ ದಡ ಸೇರಿಸದೆ,
ಬೀಳಲು ಮನಸಿಲ್ಲ, ಗಂಡ ಬೀಳಲು ಮನಸಿಲ್ಲ.

ಒಲ್ಲದ ಮನಸಲೇ ಸಲ್ಲಿಸಿದೆ ನನ್ನೇ,
ಸಲ್ಲುವ ಹೊತ್ತಲ್ಲಿ ಮೆಲ್ಲುವ ವಿಧಿಯ ಶಪಿಸುತಲಿ,
ಇನ್ನುಳಿಸ ಒದುಕ ಮಕ್ಕಳಿಗಾಗೇ ಕಳೆವೆ,
ಗಂಡ ಮಕ್ಕಳಿಗಾಗೇ ಕಳೆವೆ.


  • ಹೇಮಂತ್ ಶೃಂಗನಾಡು – ನವದೆಹಲಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading