ನವ ಯುಗದ ನೇಯ್ಗೆ…ಹೊಸ ಋತುವಿನ ಪಡಾಸಾಲೆಯಲಿ ತಲೆ ಎತ್ತಿ ತೇಲುತಿದೆ..ಕವಿಯತ್ರಿ ಡಾ. ಕೃಷ್ಣವೇಣಿ. ಆರ್. ಗೌಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮಣ್ಣ ಮಾಳಿಗೆಯಡಿ
ನೂರೆಂಟು ಸೂರು,
ಕೆಮ್ಮಣ್ಣು ಹೊಸ್ತಿಲಿಗೆ
ಬಣ್ಣ ದಾರಗಳ ಎಳೆ
ಹೊಸತನ ಹೆಚ್ಚಿಸಿದೆ….
ಭಾವನೆಯ ಕೌದಿಯ ಹಾಸಿಗೆಗೆ
ಸೂಜಿ, ದಾರ
ಓಣಿ ಓಣಿಯೊಳು ಮಿಂಚು..
ಬಟ್ಟು, ಭಂಡಾರಾದ ಮಧ್ಯ
ಕೆಂಬಣ್ಣದ ಅಂದ.
ಇದಕೆ ಚಮತ್ಕಾರದ
ಚದುರಂಗದ ಚಾತುರ್ಯ
ನನ್ನದು ನನ್ನದು ಎಂದು
ಕೂಗುತಿದೆ….
ಹಳೆಯ ಕಂಬದ ಮಳೆಯ
ನಡುವೆ ಒದ್ದಾಡುತಿದೆ
ಬಸಿರ ಬೇನೆ,
ಸಂತೈಯಿಸುವ ಸೂಲಗಿತ್ತಿಯ
ಪದಕೆ ಹೊರಬಂದ ಕರುಳಬಳ್ಳಿ
ಚಿತ್ತಾರದ ಬೆಚ್ಚನೆಯ ತೇಪೆಯಡಿ
ನಂಜಿಲ್ಲದೆ ನಗುತಿದೆ…
ಸುಟ್ಟ ಅರವಿಯು
ನಂಬಿಕೆಯ ಬೂದಿಯೊಳು
ಮರದ ಮೊಗದಿ
ಮೆರುಗಾಗಿದೆ…..
ಮದಿಲಗಿತ್ತಿಯ ಕನಸ ತಲೆಗೆ
ಟೋಪ ಸೆರಗು ಅಪ್ಪಿ
ನಲಿಯುತಿದೆ….
ಊರ ಹೆಜ್ಜೆಯ ನಿಲುವಿಗೆ
ಹಳೆ ಬೇರ ದಿಟದ ವಚನ..
ಪಂಚೆ, ರೂಮಾಲುಗಳಿಗೆ
ಭವ್ಯತೆಯ ಸೂಚನೆ…
ಹಂಬಲದ ಕಲೆ
ನೆಮ್ಮದಿ ಸೆರಗಿನೊಳು
ಬದುಕುತಿದೆ.
ಮಾಸದ ‘ಹಚ್ಚೆ’ಯ
ಕಮಾನಿನ ಕನ್ನಡಿ ಬಿಂಬದಿ
ಸೂಜಿಗಲ್ಲಾಗಿದೆ….
ನವ ಯುಗದ ನೇಯ್ಗೆ
ಹೊಸ ಋತುವಿನ
ಪಡಾಸಾಲೆಯಲಿ
ತಲೆ ಎತ್ತಿ ತೇಲುತಿದೆ..
- ಡಾ. ಕೃಷ್ಣವೇಣಿ. ಆರ್. ಗೌಡ – ವಿಜಯ ನಗರ ಜಿಲ್ಲೆ
