ಅಳಿಲ ಸೇವೆಗೂ ಮನ್ನಣೆ ನೀಡಿದ ರಾಮ…ಪಾಮರ ಪ್ರಚೇತಸನಿಗೂ ಒಲಿದ ಶ್ರೀರಾಮ… ರೂಪಶ್ರೀ ಎಂ ಅವರ ಲೇಖನಿಯಲ್ಲಿ ಅರಳಿದ ಶ್ರೀರಾಮ, ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹೇ ಹೃದಯವಾಸಿ ಶ್ರೀರಾಮ
ಕೌಸಲ್ಯಾ ದಶರಥನಂದನ ರಾಮ
ಅಗಣಿತ ಗುಣಸಂಪನ್ನ ಶ್ರೀರಾಮ
ಜನಕಸುತೆಯ ವರಿಸಿದ ರಾಮ
ಸೌಮ್ಯಗುಣದ ಪ್ರೇಮಮಯಿ ರಾಮ
ಸೀತೆಯ ಅತ್ಮಸಖ ನೀ ಶ್ರೀರಾಮ
ಪಿತೃವಾಕ್ಯ ಪರಿಪಾಲಕ ಮಾದರಿ ರಾಮ
ದುರುಳರನೂ ಕ್ಷಮಿಸಿದ ಅನಂತರಾಮ
ವೈದೇಹಿಯ ಹೃದಯದಿ ಸಲಹಿದ ರಾಮ
ಲೋಕದ ನಿಂದನೆ ಸಹಿಸಿದ ರಾಮ
ಅಗಸನ ಮಾತಿಗೂ ಬೆಲೆತೆತ್ತ ರಾಮ
ಸತಿಯ ಪವಿತ್ರತೆ ಲೋಕಕೆ ತೋರಿದ ರಾಮ
ವನಮಾಲಿಯ ಧರಿಸಿದ ಶ್ರೀರಾಮ
ವನವಾಸವನೂ ಆನಂದಿಸಿದ ರಾಮ
ಅನುಜರಿಗೆ ವಾತ್ಸಲ್ಯ ಹಂಚಿದ ರಾಮ
ಹನುಮನ ಆರಾಧ್ಯದೈವ ಶ್ರೀರಾಮ
ಅಳಿಲ ಸೇವೆಗೂ ಮನ್ನಣೆ ನೀಡಿದ ರಾಮ
ಪಾಮರ ಪ್ರಚೇತಸನಿಗೂ ಒಲಿದ ಶ್ರೀರಾಮ
ರಾಮಾಯಣ ಬರೆಸಿ ಅನುಗ್ರಹಿಸಿದ ರಾಮ
ಶಬರಿಯ ಭಕ್ತಿಗೆ ಮುಕ್ತಿಯ ನೀಡಿದ ಶ್ರೀರಾಮ
ಜಗತ್ಪಾಲಕ ಅಯೋಧ್ಯೆಯರಸ ಶ್ರೀರಾಮ
ಶತಮಾನಗಳ ನಿರೀಕ್ಷೆ ಸತ್ಯವಾಗಿದೆ ರಾಮ
ಭರತಭೂಮಿ ಸಿಂಗಾರಗೊಂಡಿದೆ ಬಾ ರಾಮ
ಎಲ್ಲೆಲ್ಲೂ ಮೊಳಗಲಿ ಘೋಷ “ಜೈ ಶ್ರೀರಾಮ”
- ರೂಪಶ್ರೀ ಎಂ
