ಪಶ್ಚಿಮ ಘಟ್ಟದಲ್ಲಿ ಹರಿಯುವ ಸಾವೆಹಕ್ಲು ನದಿಯು ಚಕ್ರಾ ನದಿಗೆ ದೊಡ್ಡ ಉಪ ನದಿಯಾಗಿದೆ.ಸಾವೆಹಕ್ಲು ಜಲಾಶಯದ ಇನ್ನೊಂದು ವಿಶೇಷವೆಂದರೆ, ಈ ಅಣೆಕಟ್ಟಿನ ವಿರುದ್ಧ ದಿಕ್ಕಿನಲ್ಲಿ ಖೈರಗುಂದಾ ಸ್ಯಾಡಲ್ ಅಣೆಕಟ್ಟು ಹಾಗೂ ನಿಯಂತ್ರಣ ಕಟ್ಟಡ ಹೊಂದಿದೆ. ಮುಂದೆ ಓದಿ ಲೇಖಕರಾದ ಶಿವಕುಮಾರ್ ಬಾಣಾವರ ಅವರ ಅನುಭವಗಳ ನೆನಪಿನ ಸುರುಳಿ…
ಮಗ ದೂರದ ಅಂಬಿಕಾನಗರಕ್ಕೆ ಹೋಗುತ್ತೇನೆಂದು ನಿಂತಾಗ “ಬ್ಯಾಡಕಣ್ಮಗ. ಆ ಪಾಟಿ ದೂರದ ದೇಸ್ಕೆ ಹೋಗಿ ನೀನ್ ಗೆತ್ತಿ, ಗೇದ್ ತಂದ್ಹಾಕೂದ್ ಬ್ಯಾಡಾ. ನಮ್ಗೇನ್ ಕಮ್ಮಿ ಆಗಿದ್ದಾದೂ. ಏನೋ ಒಬ್ನೇ ಮಗ ಓದ್ತೀನಿ ಅಂದಲ್ಲಾಂತ ವೋದಿಸ್ದೆ. ತಿರ್ಗಾಡ್ಕೊಂಡು ಮನೇ ತಾವ್ ಇದ್ರೂ ಸಾಕ್ ಕಣ್ಮಗ. ಗೆತ್ತಾಕೆ ಗೆಯ್ಯಾಕೆ ಆಳು ಕಾಳು ಅವ್ರೆ. ಎಲ್ಲೂ ಓಗ್ಬೇಡಾ. ಸುಮ್ನೆ ನಮ್ ಮನೆ ತಾವ್ ಇದ್ಬುಡ್ಲಾ.” ಅಂದ್ರು ಆತನ ತಂದೆ.
“ಇಷ್ಟು ಕಲ್ತದ್ದು ಮನೇತಾವ್ ಇರೋದಿಕ್ಕಾ? ಲಂಚ ಗಿಂಚ ಏನೂ ತಗೊಳ್ದೇ ಕೆಲ್ಸ ಕೊಟ್ಟವ್ರೆ. ಇಂಥಾ ಛಾನ್ಸು ಮತ್ತೊಂದು ಸಲ ಸಿಗಲ್ಲ ಕಣಪ್ಪಾ. ನಾನು ಹೋಗೇ ಹೋಗ್ತೀನಿ” ಅಂದ ಬಿ. ಇ. ಓದಿದ ಮಗ.
“ಇದೇ ನಿನ್ ಕಡೇ ಮಾತೇನ್ಲಾ?” ಗುಡುಗಿದ ಅಪ್ಪ.
“ಹೌದು”
“ನಾವ್ಯಾರೂ ಬ್ಯಾಡಾ ಅಂದ್ರೆ ಹೋಗಪ್ಪಾ, ನನ್ ಮಾತಿಗೆ ಬೆಲೆ ಇಲ್ಲಾ ಅಂದ್ಮೇಲೆ ಇನ್ನೇನ್ ಮಾಡಕ್ಕಾದದು”
“ನನ್ಗೆ ನೀವೂ ಬೇಕು ಕೆಲ್ಸನೂ ಬೇಕು”
“ನಿನ್ನಿಷ್ಟ ಏನ್ ಬೇಕಾರ ಮಾಡ್ಕೋ ಓಗು” ಎಂದು ತಂದೆ ಒಳಹೋದರು. ಈತ ಪ್ರಯಾಣಕ್ಕೆ ಸಿದ್ಧತೆ ಮಾಡತೊಡಗಿದ. ಅಂದುಕೊಂಡಂತೆ ಕೆಲಸಕ್ಕೂ ಸೇರಿದ.
***************
೧೯೭೯ ರ ಒಂದು ಮುಂಜಾನೆ ಹೆಡ್ ರೇಸ್ ಟನಲ್ (ಕುದುರೆ ಲಾಳದ ಆಕಾರದ ೯.೪ ಕಿಮೀ ಮುಖ್ಯ ಸುರಂಗ) ನಲ್ಲಿ ಆದ ಅಪಘಾತದ ಸುದ್ದಿ ಕಾಳಿನದಿ ಯೋಜನಾ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಲು ತಡವಾಗಲಿಲ್ಲ. ಎಲ್ಲರ ಬಾಯಲ್ಲೂ ರಾತ್ರಿ ಪಾಳಿಯ ಕೊನೆ ಕೊನೆಯಲ್ಲಿ ಆದ ಅವಘಡದ್ದೇ ಮಾತು. ಆಡಿಟ್ -೧ (ಗುತ್ತಿ ಆಡಿಟ್) ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೊಸದಾಗಿ ನಿಗಮಕ್ಕೆ ಸೇರಿದ ಇಂಜಿನಿಯರೊಬ್ಬರಿಗೆ ತೀವ್ರ ಪೆಟ್ಟಾಗಿದೆ ಎಂದೂ, ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆಂದೂ ಆತ ಮಂಡ್ಯದ ಬಳಿಯ ಊರಿನವನೆಂದೂ ಅಲ್ಲಿಂದ ಇಲ್ಲಿಂದ ಬಂದ ಸುದ್ದಿಗಳಿಂದ ತಿಳಿಯಿತು. ನಿಜವಾಗಿಯೂ ಆತನಿಗೆ ಏನಾಗಿದೆಯೆಂದು ನಮಗ್ಯಾರಿಗೂ ಸ್ಪಷ್ಟವಾಗಿ ತಿಳಿದಿರಲಿಲ್ಲ. ಕಾರಣ ನಮ್ಮ ಕಾರ್ಯ ಸ್ಥಾನವೇ ಬೇರೆ. ಆದ್ದರಿಂದ ಸರಿಯಾಗಿ ವಿಷಯ ಗೊತ್ತಿಲ್ಲದೆ ನಮ್ಮೆಲ್ಲರ ಮುಖಗಳು ಗೊಂದಲದಿಂದ ಕೂಡಿದ್ದವು. ನಾನೂ ಸಹ ಬೇಸರಗೊಂಡಿದ್ದೆ. ಯಾಕೆಂದರೆ ಅಪಘಾತಕ್ಕೆ ಒಳಗಾದವನು ನಮ್ಮ ಆಪ್ತ ಮಿತ್ರನೂ ಆಗಿದ್ದನು. ಸಹಜವಾಗಿ ಅಪಘಾತಕ್ಕೆ ಒಳಗಾದವನನ್ನು ಕಾಣುವ ಹಂಬಲ ಇದ್ದರೂ ನಮ್ಮ ಕಾರ್ಯ ಸ್ಥಾನದಿಂದ ಕದಲುವಂತಿರಲಿಲ್ಲ. ಅಂದು ಬೇಸರದಿಂದಲೇ ಕಾರ್ಯ ನಿರ್ವಹಿಸಿದೆವು.

ಮಾರನೇ ದಿನ ಮೂರು ನಾಲ್ಕು ಗೆಳೆಯರು ಸೇರಿ ದಾಂಡೇಲಿಯ ಆಸ್ಪತ್ರೆಗೆ ಭೇಟಿ ಕೊಟ್ಟೆವು. ೨೩-೨೪ ವರ್ಷದ ಸ್ಪರದ್ರೂಪಿ ಯುವಕ ಮಿತ್ರ ಹಾಸಿಗೆಯ ಮೇಲೆ ಮಲಗಿದ್ದ. ಮುಗ್ಧ ಮುಖದ ಸೌಮ್ಯ ರೂಪದ ಅಷ್ಟಾಗಿ ಮೀಸೆ ಬಾರದ ಅವನು ತನಗೆ ಅಪಘಾತವಾಗಿದೆ ಎಂಬ ಕುರುಹನ್ನೇ ನೀಡದಂತೆ ನಮ್ಮನ್ನೆಲ್ಲಾ ಸ್ವಾಗತಿಸಿ ಮಾತನಾಡಿದ. ನಮಗೆಲ್ಲರಿಗೂ ಆಶ್ಚರ್ಯ ಮತ್ತು ಕುತೂಹಲ ಉಂಟಾಯಿತು. ಸದ್ಯ ಪ್ರಾಣಾಪಾಯವೇನೂ ಇಲ್ಲವಲ್ಲ ಎಂದುಕೊಂಡೆ. ನನ್ನ ಮಿತ್ರನೊಬ್ಬ ಕುತೂಹಲ ಹತ್ತಿಕ್ಕಲಾರದೇ ಮಂಚದ ಮೇಲೆ ಕುಳಿತು ಬೆಡ್ ಶೀಟನ್ನು ಸರಿಸಿದ. ಮಂಡಿಯ ಚಿಪ್ಪಿನ ಕೆಳಗಿನ ಭಾಗವಿಲ್ಲದ ಕಾಲೊಂದು, ತೊಡೆಯ ಮಧ್ಯದವರೆಗಷ್ಟೇ ಉಳಿದ ಕಾಲು ಇನ್ನೊಂದು. ಇದನ್ನು ಕಂಡ ನಮಗ್ಯಾರಿಗೂ ಬಾಯಿಂದ ಮಾತೇ ಹೊರಡಲಿಲ್ಲ. ಛೇ, ಎಷ್ಟೊಂದು ಸಣ್ಣ ವಯಸ್ಸು. ಹೀಗೇ ಎರಡೂ ಕಾಲಿಲ್ಲದೇ ಹೇಗಪ್ಪಾ ಮುಂದಿನ ಜೀವನ ಸಾಗಿಸುತ್ತಾನೆ ಎಂದು ಮನದಲ್ಲೇ ಅಂದುಕೊಂಡೆ. ಬೇಗ ಗುಣಮುಖವಾಗಲೆಂದು ಹರಸಿ ಬಂದೆವು.
ರಾತ್ರಿ ಪಾಳಿಯಲ್ಲಿ ಕೆಲಸ ನಡೆಯುತ್ತಿರುವಾಗ ಗುಣನಿಯಂತ್ರಣ ವಿಭಾಗದ ಪರವಾಗಿ ಕಾಂಕ್ರೀಟ್ ಕ್ಯೂಬ್ ಕ್ಯಾಸ್ಟ್ ಮಾಡಲು ತನ್ನ ಸಹಚರನೊಂದಿಗೆ, ಕಾಂಕ್ರೀಟ್ ಸ್ಯಾಂಪಲ್ ತೆಗೆದುಕೊಳ್ಳಲು ನಿರತನಾಗಿದ್ದಾಗ ಅಲ್ಲಿಗೆ ಬಂದ ಅಜಿಟೇಟರ್ ಕಾರಿನ ಚಾಲಕನಾಗಲೀ, ಕ್ಲೀನರನಾಗಲೀ ಅಲ್ಲಿದ್ದ ಇಂಜಿನಿಯರ್ ಮತ್ತು ಸಹಾಯಕನನ್ನು ಗಮನಿಸದೆ ಹಿಂದುಹಿಂದಕ್ಕೆ ವಾಹನ ಚಲಿಸಿ ಬಂದಿದ್ದರಿಂದ ನ್ಯೂಮ್ಯಾಟಿಕ್ ಕಾಂಕ್ರೀಟ್ ಪ್ಲೇಸರ್ ಮತ್ತು ಅಜಿಟೇಟರ್ ಕಾರ್ ನಡುವೆ ನಿಂತಿದ್ದ ಇಂಜಿನಿಯರ್ ಸಿಕ್ಕಿಹಾಕಿಕೊಂಡು ಈ ಅಪಘಾತ ಸಂಭವಿಸಿತೆಂದು ಇಂಜಿನಿಯರನ ಸಹಾಯಕ ತಿಳಿಸಿದ.
ಸದರಿ ಇಂಜಿನಿಯರನನ್ನು ನೋಡಿಕೊಂಡು ಬಂದು ನಾಲ್ಕೈದು ದಿನಗಳೂ ಕಳೆದಿರಲಿಲ್ಲ. ಯಾರೂ ಬಯಸದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ನಮ್ಮೆಲ್ಲರ ಹೃದಯಗಳನ್ನು, ಕಣ್ಣುಗಳನ್ನು ಒದ್ದೆ ಮಾಡಿಬಿಟ್ಟವು. ಎಲ್ಲರೂ ಕೆಲಸಗಳನ್ನು ನಿಲ್ಲಿಸಿ ಮುಖ್ಯ ಅಭಿಯಂತರ ಕಛೇರಿಯ ಎದುರು ನೆರೆದೆವು. ಇದ್ದಕ್ಕಿದ್ದಂತೆ ರಕ್ತ ಹೆಪ್ಪುಗಟ್ಟಿಕೊಳ್ಳತೊಡಗಿದ್ದರಿಂದ ನಾವು ನಡೆಸಿದ ಔಷದೋಪಚಾರವು ಫಲಕಾರಿಯಾಗದೆ ಸಾವು ಸಂಭವಿಸಿತೆಂದು ಸದರಿ ಇಂಜಿನಿಯರನನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಹೇಳುತ್ತಿದ್ದಂತೆಯೇ ಅವರಿಗೂ ಗಂಟಲು ಉಬ್ಬಿ ಬಂದಿತು. ಅಲ್ಲಿ ನೆರೆದ ಜನಸ್ತೋಮ ಮೂಕರಾಗಿ ಕಂಬನಿ ಮಿಡಿದರು. ಹೀಗೆ ಎಲ್ಲಿಂದಲೋ ಬಂದು ದಾಂಡೇಲಿಯಲ್ಲಿ ಇಹಲೋಕದ ವ್ಯಾಪಾರ ಮುಗಿಸಿದವನೇ ಅಭಿಯಂತರನಾದ ಶ್ರೀ ಚಿಕ್ಕೇಗೌಡ, ತಂದೆಯು ಬೇಡವೆಂದರೂ ಇಂಜಿನಿಯರಾಗಿ ಬಂದಿದ್ದ ಮಗ.
ಮಗನ ಕಳೇಬರದ ಮುಂದೆ ಕೂತು ಶೋಕಿಸುತ್ತಿದ್ದಾಗ ಶ್ರೀ ಚಿಕ್ಕೇಗೌಡರ ತಂದೆ ಹೇಳುತ್ತಿದ್ದ ಮಾತುಗಳನ್ನೇ ಈ ಘಟನೆಯ ಪ್ರಾರಂಭದಲ್ಲಿ (ಸಂಚಿಕೆ-೧೦) ಬಳಸಿದ್ದೇನೆ. ಇಂಥ ದುರ್ಘಟನೆಗಳು ಬೇರೆಬೇರೆ ರೀತಿಯಲ್ಲಿ ಬೇರೆಬೇರೆ ಕಾರ್ಯ ಸ್ಥಳಗಳಲ್ಲಿ ನಡೆದಿರಬಹುದು. ನನ್ನ ಗಮನಕ್ಕೆ ಬಂದದ್ದು. ಹಾಗೂ ಸದಾ ಕಾಡುವಂಥದ್ದು ಇದೊಂದೇ!
ದಿವಂಗತ ಚಿಕ್ಕೇಗೌಡರ ಸ್ಮರಣಾರ್ಥ ೧೯೮೦ ರಿಂದ ಅಂಬಿಕಾನಗರದ ಮನರಂಜನಾ ಸಂಘದವರು ಅಂತರ ಕೆ. ಪಿ. ಸಿ. ಚಿಕ್ಕೇಗೌಡ ಸ್ಮಾರಕ ಟೇಬಲ್ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸಲು ಪ್ರಾರಂಭಿಸಿದರು. ನಂತರದ ವರ್ಷಗಳಲ್ಲಿ ಚಕ್ರಾನಗರ, ಶಕ್ತಿನಗರ, ಬೆಂಗಳೂರು ಹೀಗೆ ವಿವಿಧ ಯೋಜನಾ ಪ್ರದೇಶದ ಮನರಂಜನಾ ಸಂಘಗಳು ಈ ಟೂರ್ನಮೆಂಟನ್ನು ಸಂಘಟಿಸಿದ್ದವು. ೧೯೮೭ ರ ನಂತರ ಶ್ರೀ ಚಿಕ್ಕೇಗೌಡ ಸ್ಮಾರಕ ಟೇಬಲ್ ಟೆನಿಸ್ ಪಂದ್ಯಾವಳಿ ನೆನಪಾಗದಿದ್ದದ್ದು ಮಾತ್ರ ವಿಪರ್ಯಾಸವೇ ಸರಿ. ಅಷ್ಟಲ್ಲದೇ, ದಾರ್ಶನಿಕರ, ತ್ರಿಕಾಲ ಜ್ಞಾನಿಗಳ “ಕಣ್ಣಿಂದ ಮರೆಯಾದದ್ದು, ಮನಸ್ಸಿನಿಂದ ಮರೆಯಾಗಲು ಹೆಚ್ಙು ಸಮಯ ತೆಗೆದುಕೊಳ್ಳುವುದಿಲ್ಲ” ಎಂಬ ನುಡಿಯು ಅಕ್ಷರಶಹ ಸತ್ಯವಲ್ಲವೇ?!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ನಗರ ಪಟ್ಟಣದ ಸಮೀಪ ಹರಿಯುವ ಚಕ್ರಾ ಮತ್ತು ಸಾವೆಹಕ್ಕಲು ನದಿಗಳಿಗೆ ಅಣೆಕಟ್ಟೆಗಳನ್ನು ನಿರ್ಮಿಸಿ, ವಾರ್ಷಿಕ ೫೧೦ ದಶಲಕ್ಷ ಘನ ಮೀ. ನೀರನ್ನು ಸಂಗ್ರಹಿಸಿ, ಹೀಗೆ ಶೇಖರಿಸಲಾದ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ತಿರುಗಿಸಿ ಲಿಂಗನಮಕ್ಕಿ ಅಣೆಕಟ್ಟೆಯ ವಿದ್ಯುದಾಗಾರ ಮತ್ತು ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದಿಸಲು ನೆರವಾಗುವುದೇ ಈ ಯೋಜನೆಗಳ ಪ್ರಮುಖ ಉದ್ದೇಶ.
ಚಕ್ರಾ ಅಣೆಕಟ್ಟು :
ಚಕ್ರಾ ನದಿಯ ಮೂಲವು ಪಶ್ಚಿಮ ಘಟ್ಟದ ಪ್ರಖ್ಯಾತ ಕೊಡಚಾದ್ರಿ ಬೆಟ್ಟದ ತುದಿಯಲ್ಲಿದ್ದು ಅರಬ್ಬೀ ಸಮುದ್ರವನ್ನು ಸೇರುವ ಮುಂಚೆ ಸುಮಾರು ೭೪ ಕಿಮೀ. ದೂರ ಹರಿಯುತ್ತದೆ. ಹಾಗೂ ಶರಾವತಿ ನದಿಯ ದಕ್ಷಿಣಕ್ಕಿದೆ. ಈ ನದಿಗೆ ಅಡ್ಡವಾಗಿ ಕಲ್ಲು ಮಣ್ಣಿನಿಂದ ೮೪ ಮೀಟರ್ ಎತ್ತರ, ೫೭೦ ಮೀ. ಉದ್ದವಾದ ಅಣೆಕಟ್ಟೆ ನಿರ್ಮಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲು ೪೨೨೦ ಮೀ. ಉದ್ದದ ಜಲವಾಹಕ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ೬೧೦ ಮೀ. ಉದ್ದದ ಅಪ್ರೋಚ್ ನಾಲೆ, ೭೯೮ ಮೀ. ಉದ್ದದ D ಆಕಾರದ ಕಟ್ & ಕವರ್ ಸುರಂಗ ಮತ್ತು ೨೮೧೨ ಮೀ. ಉದ್ದದ ಡ್ರಾಫ್ಟ್ ನಾಲೆ ಇದೆ. ಈ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ ೨೨೩ ದಶಲಕ್ಷ ಘನ ಮೀ.
ಸಾವೆಹಕ್ಲು ಅಣೆಕಟ್ಟು :
ಅದೇ ಪಶ್ಚಿಮ ಘಟ್ಟದಲ್ಲಿ ಹರಿಯುವ ಸಾವೆಹಕ್ಲು ನದಿಯು ಚಕ್ರಾ ನದಿಗೆ ದೊಡ್ಡ ಉಪ ನದಿಯಾಗಿದ್ದು, ಈ ನದಿಗೂ ೫೦ ಮೀ. ಎತ್ತರ ೬೩೩ ಮೀ. ಉದ್ದದ ಮಣ್ಣಿನ ಅಣೆಕಟ್ಟು ನಿರ್ಮಿಸಲಾಗಿದ್ದು, ೧೨೧.೪ ದಶಲಕ್ಷ ಘನ ಮೀ. ನೀರಿನ ಸಂಗ್ರಹಣಾ ಸಾಮರ್ಥ್ಯವಿದೆ. ಇಲ್ಲಿ ಸಂಗ್ರಹವಾದ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಲು ೫೦೯೩ಮೀಟರ್ ಉದ್ದದ ಜಲವಾಹಕ ವ್ಯವಸ್ಥೆ ಇದೆ. ಇದರಲ್ಲಿ ೨೦೫ ಮೀ. ಉದ್ದದ ಸಂಪರ್ಕ ಕಾಲುವೆ, ೧೬೨೭ ಮೀ. ಉದ್ದದ D ಆಕಾರದ ಸುರಂಗ, ೩೬೧ ಮೀ. ಉದ್ದದ D ಆಕಾರದ ಕಟ್ &ಕವರ್ ಸುರಂಗ ಹಾಗೂ ೨೯೦೦ ಮೀ. ಉದ್ದದ ಡ್ರಾಫ್ಟ್ ನಾಲೆಯನ್ನು ಹೊಂದಿದೆ.

ಚಕ್ರಾ ಅಣೆಕಟ್ಟೆಯ ಸಂಪೆಕಟ್ಟೆ ಸಮೀಪದಲ್ಲಿ ನಿಯಂತ್ರಣ ಕಟ್ಟಡವು ಎರಡು ಗೇಟುಗಳನ್ನುಹೊಂದಿರುತ್ತದೆ. ಹಾಗೆಯೇ ಸಾವೆಹಕ್ಲು ಅಣೆಕಟ್ಟೆಯ ಬಲ ಭಾಗದಲ್ಲಿ ನಿಯಂತ್ರಣ ಕಟ್ಟಡವು ಎರಡು ಗೇಟುಗಳನ್ನು ಹೊಂದಿರುತ್ತದೆ.
ಸಾವೆಹಕ್ಲು ಜಲಾಶಯದ ಇನ್ನೊಂದು ವಿಶೇಷವೆಂದರೆ, ಈ ಅಣೆಕಟ್ಟಿನ ವಿರುದ್ಧ ದಿಕ್ಕಿನಲ್ಲಿ ಖೈರಗುಂದಾ ಸ್ಯಾಡಲ್ ಅಣೆಕಟ್ಟು ಹಾಗೂ ನಿಯಂತ್ರಣ ಕಟ್ಟಡ ಹೊಂದಿದ್ದು ಸಾವೆಹಕ್ಲು ಜಲಾಶಯದ ನೀರನ್ನು ವಾರಾಹಿ ಪಿಕಪ್ ಅಣೆಕಟ್ಟೆಗೆ ಹರಿಸಿ ವಾರಾಹಿ ಭೂಗರ್ಭ ವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶವಿದೆ.
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೧)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೨)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೩)- ಶಿವಕುಮಾರ್ ಬಾಣಾವರ
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
