ನೋಡುಗರನ್ನು ನಿಬ್ಬೆರಗಾಗಿಸುವ ’ದಬ್ಬೆಫಾಲ್ಸ್’



ನಿತಾಂತ ನಿಸರ್ಗ ವೈಭವಕ್ಕೊಂದು ನಿದರ್ಶನ ಎನ್ನಬಹುದಾದ ಜಲಪಾತ ದಬ್ಬೆ ಫಾಲ್ಸ್.ಈ ಜಲಪಾತದ ಬಗ್ಗೆ ಇನ್ನಷ್ಟು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ ಲೇಖಕರಾದ ಡಾ.ಗಜಾನನ ಶರ್ಮಾ ಅವರು ಮುಂದೆ ಓದಿ…

ಪಶ್ಚಿಮಘಟ್ಟದ ಮೈಗೆ ಮೆತ್ತಿಕೊಂಡ ನಿತ್ಯ ಹರಿದ್ವರ್ಣದ ಮಹಾರಣ್ಯ ಗರ್ಭದಲ್ಲಿ ಹುದುಗಿಕೊಂಡಿರುವ, ಕಾಣಬರುವವರಿಗೆ ತನ್ನ ಇರವನ್ನು ಆಬ್ಬರದ ಶಬ್ಧಜಾಲದ ಮೂಲಕ ಬಹು ದೂರದಿಂದಲೇ ವ್ಯಕ್ತವಾಗಿಸುವ, ನೋಡುಗರನ್ನು ನಿಬ್ಬೆರಗಾಗಿಸಿ ನಿಲ್ಲಿಸುವ ನಿತಾಂತ ನಿಸರ್ಗ ವೈಭವಕ್ಕೊಂದು ನಿದರ್ಶನ ಎನ್ನಬಹುದಾದ ಜಲಪಾತ –ದಬ್ಬೆ ಫಾಲ್ಸ್.

ಕಾರ್ಗಲ್-ಭಟ್ಕಳ ರಸ್ತೆಯಲ್ಲಿ ಸುಮಾರು ಇಪ್ಪತ್ತು ಕಿಲೋಮೀಟರ್ ದೂರ ಹೋದ ನಂತರ ಬಲಕ್ಕೆ ಸಿಗುವ ಹೊಸಗದ್ದೆ ಎಂಬ ನಿಲ್ದಾಣದಿಂದ ನಡೆದು ಹೋದರೆ ನಾಲ್ಕು ಕಿಲೋಮೀಟರ್, ಅಥವಾ ಮುಂದೆ ಬಿಳಿಗಾರಿನಿಂದ ವಾಹನದಲ್ಲಿ ತೆರಳಿದರೆ ಅಲ್ಲಿಂದ ಆರೇಳು ಕಿಲೋಮೀಟರ್ ದೂರದಲ್ಲಿ ಈ ಜಲಪಾತ ಸಿಗುತ್ತದೆ, ಶರಾವತಿಯ ಉಪನದಿಯೆನ್ನಬಹುದಾದ ದಬ್ಬೆಹೊಳೆ, ಸುಮಾರು ನಾಲ್ಕುನೂರು ಅಡಿಗಳೆತ್ತರದಿಂದ ಧುಮುಕುವ ಈ ಜಲಪಾತದ ಪೂರ್ಣ ಸೌಂದರ್ಯವನ್ನು ಕೆಳಗಿಳಿದೇ ಕಾಣಬೇಕು.

ಫೋಟೋ ಕೃಪೆ : Karnataka

ಇಲ್ಲಿನ ನಿಸರ್ಗ ವೈಭವದ ಸೊಬಗನ್ನು ಸವಿಯುವ ಮನಸ್ಸುಳ್ಳವರು ಭಟ್ಕಳ ರಸ್ತೆಯಿಂದ ನಡೆದುಕೊಂಡೇ ಹೋದರೆ ಚೆನ್ನ. ಆದರೆ ಹೋಗುವ ಮುನ್ನ ಆಹಾರ, ಪಾನೀಯಗಳನ್ನು ಮರೆಯದೇ ಕೊಂಡುಹೋಗುವುದು ಒಳ್ಳೆಯದು. ಮಾರ್ಗ ಮಧ್ಯದಲ್ಲಿ ಯಾವುದೇ ಸೌಲಭ್ಯವಿಲ್ಲ. ಜಲಪಾತವನ್ನಿಳಿಯುವ ಮೊದಲು ಮಂಜಯ್ಯ ಎಂಬ ಸದ್ಗೃಹಸ್ಥರೊಬ್ಬರ ಮನೆ ಸಿಗುವುದಾದರೂ, ಅವರಲ್ಲಿ ಯಾವುದೇ ಊಟೋಪಚಾರದ ವ್ಯವಸ್ಥೆ ಇರುವುದಿಲ್ಲ. ಗಳಿಗೆ ತಂಗಿ, ನೀರು ಕುಡಿದು ಹೋಗಲು ಅವಕಾಶ ಒದಗಿಸುವಷ್ಟು ವಿಶಾಲ ಮನಸ್ಸುಳ್ಳವರಾದರೂ ಯಾವುದೇ ವ್ಯಾಪಾರೀ ವ್ಯವಸ್ಥೆ ಅವರಲ್ಲಿ ಇಲ್ಲ. ನಾವು ಮಂಜಯ್ಯನವರ ಗದ್ದೆಯ ಅಂಚಿನಿಂದ ಜಲಪಾತದಾಳಕ್ಕೆ ಇಳಿಯಲು ತೊಡಗಬೇಕು.

ಇಲ್ಲಿ ಇಳಿಯುವುದು ಜೋಗ ಜಲಪಾತದ ತಳಕ್ಕೆ ಇಳಿಯುವುದಕ್ಕಿಂತಲೂ ಕಠಿಣ. ಬದುಕಲ್ಲಿ ಇಳಿಯುವುದೂ ಸುಲಭವಲ್ಲವೆಂಬುದು ಇಲ್ಲಿ ನಮ್ಮ ಅರಿವಿಗೆ ಬರುತ್ತದೆ. ಶಿಲಾಮಯ ಹಾದಿಯಲ್ಲಿ ನಮ್ಮ ನೆರವಿಗೆ ಬರುವುದು ಮರಗಿಡಗಳ ಬೇರು ಮತ್ತು ಕಾಂಡಗಳು ಮಾತ್ರ. ಎಷ್ಟೋ ಸಲ ಕಲ್ಲುಗಳ ತುದಿಯನ್ನು ಹಿಡಿದೇ ಕಲ್ಲುಗಳನ್ನು ಇಳಿಯಬೇಕು. ಒಂದೆರಡು ಕಡೆ ಹಗ್ಗವನ್ನು ಬಳಸುವುದು ಅನಿವಾರ್ಯ. ಇಳಿಯುವ ಮುನ್ನ ಹತ್ತುವುದು ನಮ್ಮಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕೊಟ್ಟುಕೊಂಡು ಇಳಿಯುವುದು ಉಚಿತ. ಕೆಲವರು ಕೆಳಗಿಳಿದು, ಕೊನೆಗೆ ಹತ್ತಲಾಗದೇ ಸಹಾಯಕ್ಕಾಗಿ ಮೊರೆಯಿಟ್ಟ ಉದಾಹರಣೆಗಳೂ ಇವೆಯಂತೆ. ಆದರೆ ಬಹುತೇಕ ಸಂದರ್ಭದಲ್ಲಿ ನಮ್ಮ ಕೂಗು ಅರಣ್ಯ ರೋಧನವಾಗುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಇದು ಬಹಳಜನ ಬಂದು ಹೋಗುವ ತಾಣವಲ್ಲ.



ಎಲ್ಲಕ್ಕಿಂತ ಮುಖ್ಯವಾಗಿ ಇದು ಅಭಯಾರಣ್ಯದೊಳಗಿನ ನೆಲೆಯಾಗಿರುವುದರಿಂದ ಅರಣ್ಯ ಇಲಾಖೆಯ ಪರವಾನಗಿ ಅಗತ್ಯ. ಇಲ್ಲದಿದ್ದರೆ ಅರಣ್ಯ ರಕ್ಷಕ ಸಿಬ್ಬಂದಿ ನಿಮ್ಮನ್ನು ಕಾಡುತ್ತಾರೆ.
ಆದರೆ ದಭ್ಭೆಫಾಲ್ಸ್ ಒಂದು ಅತ್ಯಂತ ರಮ್ಯ ತಾಣ ಎಂಬುದರಲ್ಲಿ ಮಾತ್ರ ಎರಡು ಮಾತಿಲ್ಲ. ಇಲ್ಲಿಗೆ ಬಂದುಹೋಗುವುದು ದುಸ್ತರವೆಂಬುದು ಸತ್ಯವಾದರೂ, ಈ ಮಾರ್ಗದ ಚೆಲುವು, ಇಳಿಯುವಾಗಿನ ಸಾಹಸ ನಮಗೆ ನೀಡುವ ಆನಂದ, ಇಳಿದ ನಂತರ ಕಾಣುವ ಜಲಪಾತದ ಸೊಬಗು, ಇಳಿದ ಶ್ರಮ ಕೆಳಗಿನ ಬಂಡೆಯ ಮೇಲೆ ಕುಳಿತು ತುಂತುರು ಹನಿಗಳಿಗೆ ಮೈಯೊಡ್ಡಿದಾಗ ಪರಿಹಾರವಾಗುವ ಬಗೆ, ಎಲ್ಲವೂ ವರ್ಣನಾತೀತ. ಶ್ರಮದ ನಂತರ ದೊರೆಯುವ ಸುಖದಲ್ಲಿ ಅಡಗಿರುವ ಸೌಖ್ಯ, ಹಸಿವಿನ ನಂತರದ ಊಟದಲ್ಲಿ ದೊರೆಯುವ ಅಸೀಮ ತೃಪ್ತಿ ಅನುಭವಕ್ಕೆ ಬರಲು ಇಲ್ಲಿ ಇಳಿಯಬೇಕು. ಜೀವನದಲ್ಲಿ ನಿಸರ್ಗದ ಮಹತ್ತಿನೆದಿರು ಮನುಷ್ಯ ಎಷ್ಟು ಸಣ್ಣವನೆನ್ನುವುದೂ ನಮಗಿಲ್ಲಿ ಅನುಭವಕ್ಕೆ ಬರುತ್ತದೆ.

ಹತ್ತು ವರ್ಷಕ್ಕಿಂತ ಸಣ್ಣ ಮಕ್ಕಳನ್ನು ಕರೆದೊಯ್ಯುವುದು ಇಲ್ಲಿ ಕಷ್ಟಸಾದ್ಯ. ಕಡಿದಾದ ಮಾರ್ಗವಾದ್ದರಿಂದ ಹೆಚ್ಚು ವಯಸ್ಸಾದವರೂ ತುಸು ಎಚ್ಚರಿಕೆ ವಹಿಸುವುದು ಕ್ಷೇಮ.ಇಳಿದು ಬಂದು ನಾಲ್ಕು ದಿನ ಕಳೆದಿದ್ದರೂ ನನಗಿನ್ನೂ ಸೊಂಟ ಹಾಗೂ ಕಾಲುನೋವು ಕಡಿಮೆಯಾಗಿಲ್ಲವೆಂಬುದು ಸತ್ಯ. ಆದರೆ ನೋಡುವಾಗಿನ ಆನಂದದ ಮುಂದೆ ಈ ಸಣ್ಣ ತೊಂದರೆಗಳು ಗೌಣ.


  • ಡಾ.ಗಜಾನನ ಶರ್ಮಾ (ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೇಖಕರು)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW