ಸಹ್ಯಾದ್ರಿಯ ದಿವ್ಯಕ್ಷೇತ್ರ ಭೀಮೇಶ್ವರ – ಡಾ.ಗಜಾನನ ಶರ್ಮಾ



ಪ್ರವಾಸ ಪ್ರಿಯರು ಭೀಮೇಶ್ವರ, ಬೆಳ್ಳಿಗುಂಡಿ ಜಲಪಾತ, ದಬ್ಬೆ ಜಲಪಾತ, ಗೇರುಸೊಪ್ಪೆಯ ಕರಿಮೆಣಸಿನ ರಾಣಿಯ ಕಾಲದ್ದೆಂದು ಹೇಳಲಾಗುವ ‘ಕಾನೂರು ಕೋಟೆ’ ಎಲ್ಲವನ್ನೂ ಒಂದೇ ಪ್ರವಾಸದಲ್ಲಿ ಹೋಗಿ ನೋಡಿಕೊಂಡು ಬರಬಹುದು. ಮುಂದೆ ಓದಿ…

#ಸಾಗರ_ಭಟ್ಕಳ ರಸ್ತೆಯಲ್ಲಿ ಕಾರ್ಗಲ್, ಅರಲಗೋಡು, ಕೋಗಾರು ದಾಟಿ ಎರಡು ಕಿಲೋಮೀಟರ್ ಸಾಗುತ್ತಿದ್ದಂತೆಯೇ ಬಲಬದಿಗೆ ನಿಮಗೆ ಭೀಮೇಶ್ವರ ಎಂಬ ಬೋರ್ಡುಗಲ್ಲು ಕಾಣಿಸುತ್ತದೆ. ನೀವು ನಡೆದು ಹೋಗುವ ಇಚ್ಚೆಯುಳ್ಳವರಾದರೆ ಅದರ ಬಳಿಯಲ್ಲಿಯೇ ವಾಹನವಿಳಿದು ಪಕ್ಕದಲ್ಲಿ ಕಾಣಸಿಗುವ ಮಣ್ಣುರಸ್ತೆಯಲ್ಲಿ ಇಳಿಯತೊಡಗಬೇಕು.

ನೀವು ವಾಹನದಲ್ಲೇ ಹೋಗುವವರಾದರೂ ಈ ಮಣ್ಣುರಸ್ತೆಗೆ ಇಳಿದು ಮುಂದೆ ಸಾಗಬೇಕು. ಕಡಿದಾಗಿ ಇಳಿಯುವ ಈ ಮಣ್ಣು ರಸ್ತೆ ಸುಮಾರು ಐನೂರು ಅಡಿಗಳಷ್ಟು ಇಳಿದಮೇಲೆ ನಿಮಗೊಂದು ಸೇತುವೆ ಸಿಗುತ್ತದೆ. ಇತ್ತೀಚೆಗೆ ನಿರ್ಮಾಣಗೊಂಡ ಈ ಸೇತುವೆ ’ಸರಳಹೊಳೆ” ಎಂಬ ನದಿಯನ್ನು ದಾಟಲು ನಿರ್ಮಿಸಲಾದದ್ದು. ನೀವು ನಡೆದೇ ಹೋಗುವವರಾದರೆ ಇಲ್ಲಿ ಹೊಳೆಗಿಳಿದು ಮುಖಕ್ಕೆ ತಣ್ಣೀರ ಸಿಂಚನದ ಸುಖವನ್ನು ಅನುಭವಿಸಿ,ಸುಮಾರು ಅರ್ಧ ಕಿಲೋಮೀಟರಿನ ಘಾಟಿಯಿಳಿದ ಶ್ರಮವನ್ನು ಕಳೆದುಕೊಳ್ಳಬಹುದು. ಇಲ್ಲಿಂದ ಮುಂದೆ ಸುಮಾರು ಅರ್ಧ ಕಿಲೋಮೀಟರ್ ಹಸಿರಡವಿಯ ಮನಮೋಹಕ ರಸ್ತೆಯಲ್ಲಿ ಸಾಗಿದರೆ ನಿಮಗೆ ದೇವಸ್ಥಾನದ ಆಡಳಿತ ಸಮಿತಿಯವರು ನಿರ್ಮಿಸಿದ ಸಮುದಾಯ ಭವನದಂತಹ ಒಂದು ಕಟ್ಟಡ, ಭಟ್ಟರ ಮನೆ ಸಿಗುತ್ತವೆ. ನೀವು ಅಲ್ಲಿ ದಣಿವಾರಿಸಿಕೊಂಡು ಮುಂದೆ ಸುಮಾರು ಮುನ್ನೂರು ಮೀಟರ್ ದಾರಿಯನ್ನು ಸವೆಸಿದರೆ ನಿಮ್ಮೆದುರು ನಿಲ್ಲುತ್ತದೆ ಭೀಮಗಾತ್ರದ ಶಿಲಾಮಯ ಶಿಖರ. ನಿಮ್ಮ ಬಲಕ್ಕೆ ಈ ಶಿಲಾಮಯ ಪರ್ವತವಾದರೆ,ಎಡಕ್ಕೆ ಉದ್ದಕ್ಕೂ ನಿತ್ಯಹರಿದ್ವರ್ಣದಿಂದ ಸುಶೋಭಿಸುವ ಸುಂದರ ಸಹ್ಯಾದ್ರಿಯ ವನಶ್ರೇಣಿ. ಕ್ಷಣ ಕಾಲ ಅಲ್ಲಿ ನಿಂತು ನೀವು ಹಸಿರನ್ನೇ ಉಸಿರಾಡುತ್ತಾ ಪಸರಿಸಿದ ಆ ವನವೈವಿಧ್ಯವನ್ನು ಸವಿದಿರಾದರೆ, ಇದುವರೆಗೂ ನೀವು ಇಲ್ಲಿಗೆ ಬರಲು ಪಟ್ಟ ಶ್ರಮ ಸಾರ್ಥಕವಾಯಿತೆಂದು ಭಾವಿಸುತ್ತೀರಿ. ಬೃಹತ್ ಗಾತ್ರದ ಬಂಡೆಗಳು,ಐದಾರುಜನರು ತೋಳ್ಚಾಚಿ ಕೈಕೈ ಹಿಡಿದು ನಿಂತರೂ ಸುತ್ತುವರಿಯಲಾರದಷ್ಟು ವಿಶಾಲವಾದ ಕಾಂಡದ ಮರಗಳು,ಹಸಿರಿನಲ್ಲೇ ಹಲವು ವಿಧಗಳನ್ನು ತೋರ್ಪಡಿಸುವ ಗಿಡಮರ ಬಳ್ಳಿಗಳು ನಿಂತಲ್ಲೇ ನಿಮ್ಮನ್ನು ನಿಸರ್ಗ ಸ್ವರ್ಗದಲ್ಲಿ ಕರಗಿಸಿಬಿಡುತ್ತವೆ.

This slideshow requires JavaScript.

ನಮ್ಮ ಪೂರ್ವಿಕರಿಗೆ ನಿಸರ್ಗದ ಸೊಗಸನ್ನು ಅನುಭವಿಸುವಷ್ಟೇ ಆಸಕ್ತಿ ಶ್ರಮಪಡುವ ಪ್ರಕ್ರಿಯೆಗಳ ಮೇಲೂ ಇತ್ತು ಎಂಬುದು ಅರ್ಥವಾಗಲು ನಾವೀಗ ಬಲಕ್ಕೆ ತಿರುಗಬೇಕು. ನಮ್ಮ ಬಲಕ್ಕೆ ಬೃಹತ್ ಶಿಲೆಗಳಿಂದ ಆವೃತವಾದ ಭೀಮಪರ್ವತ ಒಂದನ್ನೇರಲು ಅಣಿಗೊಳಿಸಿದ ಮೆಟ್ಟಿಲುಗಳು ಕಾಣುತ್ತವೆ. ಶಿಲಾ ಭಿತ್ತಿಯ ನೆತ್ತಿಯನ್ನು ಕಾಣಲು ನಮ್ಮ ಕತ್ತನ್ನು ಬೆನ್ನಿಗೇ ತಾಕಿಸಬೇಕಾಗುತ್ತದೆ. ಅಷ್ಟೆತ್ತರ ಅದು! ನಿಧಾನವಾಗಿ ಕಲ್ಲು ಬಂಡೆಗಳ ನಡುವೆ ಅಡ್ಡಾದಿಡ್ಡಿಯಾಗಿ ಹರಡಿಕೊಂಡ ಒಂದಿಷ್ಟು ಮೆಟ್ಟಿಲುಗಳನ್ನು ಏರುತ್ತಿದ್ದಂತೆ, ಸುಮಾರು ಮೂವತ್ತು ನಲವತ್ತು ಅಳತೆಯ ಸೈಟಿನಷ್ಟು ಅಗಲದ ಮಣ್ಣಿನ ಜಾಗ ಕಾಣಿಸುತ್ತದೆ.

ದಬ್ಬೆ ಜಲಪಾತ ಫೋಟೋ ಕೃಪೆ : adventurebuddha

ಅದರ ಪಕ್ಕದಲ್ಲಿ ಕಲ್ಲು ಬಂಡೆಗಳ ಸಂಧಿಯಲ್ಲಿ , ಮೇಲೆನಿಂದ ತಣ್ಣಗಿನ ನೀರು ಶೈಲಶಿವನ ಶಿರದಿಂದ ಉರುಳುವ ಗಂಗೆಯಂತೆ ನಮ್ಮ ಮೈಮನಗಳಿಗೆ ತಂಪೆರೆಯುತ್ತಾಳೆ. ಅಲ್ಲಿ ಕೈ ಕಾಲ್ತೊಳೆದು ಮತ್ತೆ ಹತ್ತತೊಡಗಬೇಕು. ಕಾಲು ಸೋಲುತ್ತದೆ. ದೇಹ ದಣಿಯುತ್ತದೆ. ನಾನೆಂಬ ಭಾವ ಬೆವರಾಗಿ ಹರಿದೋಡುವ ವೇಳೆಗೆ ಎಡಬದಿಯಲ್ಲಿ ಬಂಡೆಯೊಳಗೇ ಮೈಚಾಚಿಕೊಂಡ ಶಿವ ದೇಗುಲ ಕಾಣುತ್ತದೆ. ಎದುರಿನ ದೇಗುಲದಲ್ಲಿ ಸುಮಾರು ಮೂರಡಿ ಎತ್ತರದ ನಂದಿ ಶಿವನಿಗೆ ಎದುರಾಗಿ ನಿಂತಿದ್ದರೆ ಒಳಗೆ ಶಿಲಾಗರ್ಭದಲ್ಲಿ ಶಿವಲಿಂಗ ಮೈದೋರಿ, ದಣಿದು, ಮಣಿದ ನಮ್ಮನ್ನು ಹರಸಿ ತಣಿಸುತ್ತದೆ. ಸುತ್ತಲೂ ಹರಡಿ ಬಿದ್ದ ಬಂಡೆಗಳು. ಅವುಗಳ ನಡುವೆ ತುಂತುರು ತುಂತುರಾಗಿ ತುಷಾರ ಸಿಂಚನ ಗೈಯ್ಯುವಂತೆ ಬೀಳುವ ಜಲಧಾರೆಗಳು, ಪರ್ವತದ ಶಿಲೆಯೊಳಗೇ ಅರ್ಧ ಸೇರಿಕೊಂಡಿರುವ ಶಿವಾಲಯ, ಇದನ್ನೆಲ್ಲಾ ನೋಡುತ್ತಿದ್ದರೆ ಇದು ಭೀಮನಂತಹ ಭೀಮ ಕಾಯನಲ್ಲದೇ ಅನ್ಯರಿಂದ ನಿರ್ಮಿಸಲು ಅಸಾಧ್ಯ ಎಂಬುದು ಯಾರಿಗಾದರೂ ಅನ್ನಿಸುತ್ತದೆ. ಈ ಶಿವರಾತ್ರಿಯ ಸಂದರ್ಭದಲ್ಲಿ ಕುಟುಂಬದೊಡನೆ, ವಿಶೇಷವಾಗಿ ಮೊಮ್ಮಗನೊಡನೆ ಭೀಮೇಶ್ವರನ ದರ್ಶನದ ಭಾಗ್ಯ ನನಗೆ ಲಭಿಸಿದ್ದು ನನ್ನ ಪುಣ್ಯ ವಿಶೇಷ.


  • ಡಾ.ಗಜಾನನ ಶರ್ಮಾ (ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW