ಈ ಕತೆಯ ಜೀವಾಳು ಮೊಗ್ಗಮ್ಮ. ಮೊಗ್ಗಮ್ಮ ಯಾರು?, ಮೊಗ್ಗಮ್ಮನ ಕಾಡಿನ ಹಿಂದಿನ ಕತೆಯೇನು? ಅವಳ ಸ್ಫೂರ್ತಿಯ ಕತೆಯಿದು. ಓದುಗರಿಗೆ ಖಂಡಿತವಾಗಿ ಇಷ್ಟವಾಗುತ್ತದೆ. ಪ್ರೊ.ರೂಪೇಶ್ ಪುತ್ತೂರು ಅವರು ಬರೆದಿದ್ದಾರೆ. ಮುಂದೆ ಓದಿ ಮೊಗ್ಗಮ್ಮನ ಕತೆ…
ಅಂದು ಎರಡನೇ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದ ಸಮಯ, ಮಿತ್ರ ಸಂದೇಶ/ಸಂದು ಸಂಜೆ ಆಟದ ಮೈದಾನದಿಂದ ತೆರಳುವಾಗ ಸ್ವಲ್ಪ ದೂರ ಹೋಗಿ ಪುನಃ ಮರಳಿ ಬಂದು ” ಏಯ್ ನಾಳೆ ಬಾ… ಅಡಿಕೆ ಸಿಪ್ಪೆ ಸುಲಿಯಲು ಇದೆ. ನೂರಕ್ಕೆ ಹತ್ರುಪಾಯಿ”. ಎಂದ, ನಾನು ಒಪ್ಪಿದೆ.
ಆ ದಿನ ಸೈಕಲಿನ ಗಾಳಿ ಎಲ್ಲಾ ಸರಿ ಮಾಡಿ, #ಅಮ್ಮನಿಗೆ ಆಡಲು ಹೋಗುವೆ ಎಂದು ಸುಳ್ಳು ಹೇಳಿ ಕೆಲಸಕ್ಕೆ ಹೊರಟೆ. ಸಂದೇಶನ ಮನೆಯಲ್ಲಿ ಹಳೆಯ ವಿಲ್ಲೀಸ್ ಜೀಪು ಓಡಿಸುವುದು ನನಗೆ ತುಂಬಾ ಇಷ್ಟ. ಅದು ಎಡಚಾಲನೆಯ ವಾಹನವಾಗಿತ್ತು, ಬ್ರಿಟಿಷರ ಕಾಲದ್ದು. ಬೇಗನೇ ಹೋದೆ, ಅವನ ತಂದೆ ಮುರಳಿಕೃಷ್ಣರವರು ” ಜೀಪಿನಲ್ಲಿ ಸ್ವಲ್ಪ ತೆಂಗಿನಕಾಯಿ ಮಿಲ್ಲಿಗೆ ಕೊಂಡೋಗಬೇಕು”ಎಂದಿದಕ್ಕೆ, ನಾನು ಸಂದು ಹೊರಟೆವು , ನನಗೆ ಪರವಾನಿಗೆ ಇತ್ತು ಸಂದುನಿಗೆ ಇರಲಿಲ್ಲ. ಪೇಟೆಯವರೆಗೆ ಅವನೇ ಓಡಿಸಿದ ನಂತರ ನಾನೇ ಓಡಿಸಿ ಮರಳಿದೆ. ಅಷ್ಟೊತ್ತಿಗೆ ಅಡಿಕೆ ಅಂಗಳದಲ್ಲಿ ರಾಶಿ ಬಿದ್ದಿತ್ತು.

ಫೋಟೋ ಕೃಪೆ : prajavani
ಸುಲಿಗೆಯ ಚಿಕ್ಕ ನುಣುಪಾದ ಲೋಹದ ಕತ್ತಿ ಅಂಗಳದಲ್ಲಿ ಎರಡು ಬಿದ್ದಿತ್ತು. “ನಾನೊಬ್ಬನೇ ಸುಲಿದರೆ ಐವತ್ತು ರೂಪಾಯಿ ನನಗೆ ಆಗುತ್ತಿತ್ತು. ಜೊತೆಗೆ ಇನ್ನೊಬ್ಬರು ಇರ್ಬಾದಾಗಿತ್ತು ” ಎಂದು ಸ್ವಾರ್ಥ ಮನ ಕುದಿಯುತ್ತಿತ್ತು. ” ಯಾರಪ್ಪಾ ಇನ್ನೊಬ್ಬರು ಸುಲಿಯಲಿಕ್ಕೆ?” ಎಂದು ಕೇಳಿದಾಗ
ಸಂದೇಶ “ಮೊಗ್ಗಮ್ಮ” ಎಂದ.
ಮೊಗ್ಗಮ್ಮ ಅವನ ಮನೆಯ ಪಕ್ಕದ ಬೆಟ್ಟದಲ್ಲಿ ವಾಸಿಸುವ ಸುಮಾರು ಐವತ್ತು-ಅರುವತ್ತರ ಹೆಂಗಸು. ಅವನ ತಂದೆಗಿಂತಲೂ ಹಿರಿಯರು. ಚಿಕ್ಕಂದಿನಲ್ಲಿ ಅವನ ತಂದೆಯೊಂದಿಗೆ ಆಟ ಆಡಿದವರು. ಅವನ ತಂದೆ ಅವರನ್ನು ” ದೊಡ್ಡ” ಎಂದು ಕರೆಯುತ್ತಿದ್ದರು. ಆದರೆ ಸಂದೇಶನಿಗೆ, ಅವನ ತಂಗಿ, ತಾಯಿಗೆ ಅವರು ಬರೇ ಮೊಗ್ಗಮ್ಮ.
ಮೊಗ್ಗಮ್ಮನ ಕುಟುಂಬದವರು ತಲೆ ತಲಾಂತರದಿಂದ ಆ ಬೆಟ್ಟದ ತಪ್ಪಲಲ್ಲಿ ಜೀವಿಸಿದವರು. ಒಂದು ವಿಪರೀತ ಗಾಳಿ ಹಾಗೂ ಮಳೆಯಲ್ಲಿ , ಕಾಡಿನ ಮರಗಳುರುಳಿ ಮೊಗ್ಗಮ್ಮ ಮಾತ್ರ ಬಾಕಿಯಾದಳು. ಸಂದೇಶನ ಅಜ್ಜ ಅವರಿಗೆ ಒಂದು ಮನೆ ಕಟ್ಟಿಸಿಕೊಟ್ಟರು. ಆದರೆ ಮೊಗ್ಗಮ್ಮ ಐವತ್ತು ವರುಷವಾದರೂ ಮದುವೆಯಾಗದಿದ್ದರೂ, ಏಕಾಂಗಿಯಾಗಿರಲಿಲ್ಲ,ತನ್ನ ಜೊತೆ ನಾಯಿ ಸಾಕುತ್ತಿದ್ದಳು.
ಮೊಗ್ಗಮ್ಮನ ಬಳಿ ಮೂರು ನಾಯಿ ಇತ್ತು ಒಂದರ ಹೆಸರು ತೆಂಕು, ಮತ್ತೊಂದು ಬಡಕು, ಮಗದೊಂದು ಪಿರಕು. ಅವರು ನಡೆಯುವಾಗ ಹಿಂದೊಂದು , ಎಡ – ಬಲದಲ್ಲಿ ಒಂದೊಂದು ನಾಯಿ ಇರುತ್ತಿತ್ತು. ಒಂದು ನಾಯಿ ಸತ್ತು ಕಡಿಮೆಯಾದರೆ ಕೂಡಲೇ ಇನ್ನೊಂದು ನಾಯಿಯನ್ನು ಸಾಕುತ್ತಾ, ಮೂರು ನಾಯಿಯನ್ನು ಸಾಕುವ ಅದೇ ಹೆಸರಿಡುವ ಒಂದು ಸ್ವನಿಯಮ ಪಾಲಿಸುತ್ತಾಳೆ.
ಬೆಳಿಗ್ಗೆ ಸೂರ್ಯೋದಯ ಆಗುವ ಕಿಂಚಿತ್ ಮೊದಲು ಎದ್ದು, ತನ್ನ ಮನೆಯ ಒಲೆಯಲ್ಲಿ ಒಂದು ಬಿಸಿ ನೀರು ಕುಡಿದು, ಒಂದು ಮೂಟೆಯಲ್ಲಿ ತನ್ನ ಬಟ್ಟೆ ಕಟ್ಟಿ, ನಾಯಿಯೊಂದಿಗೆ ಸಂದೇಶನ ಮನೆಗೆ ನಡೆ. ಅಲ್ಲಿ ಅವರ ದನಗಳ ಹಾಲು ಕರೆಯುವುದು, ದನಗಳನ್ನು ದೂರದ ಹುಲ್ಲಿರುವ ಸ್ಥಳದಲ್ಲಿ ಕಟ್ಟಿ ಬರುವುದು, ನಂತರ ಕೊಟ್ಟಿಗೆಯನ್ನು ಸ್ವಚ್ಛ ಮಾಡಿ, ನೆರಳಲ್ಲಿ ಕಟ್ಟಿದ ಕರುಗಳಿಗೆ ಹುಲ್ಲು ಹಾಕುವುದು.
ಕೊನೆಗೆ ಕೈ ಕಾಲು ಚೆನ್ನಾಗಿ ತೊಳೆದು, ಮನೆಯ ಹಿಂದಿನ ಅಡುಗೆ ಕೋಣೆಯ ಹೊರ ಮೆಟ್ಟಿಲಲ್ಲಿ ತನಗೆ ಇಟ್ಟ ತಿಂಡಿ ತಿನ್ನುತ್ತಾ, ತನ್ನ ನಾಯಿಗಳಿಗೆ ಅದರಿಂದ ತುಂಡುಗಳನ್ನು ಎಸೆಯುತ್ತಾ, ಸಂದೇಶನ ತಾಯಿ ರುಕ್ಮಮ್ಮನೊಂದಿಗೆ “#ಹರಟೆ“. ಅಷ್ಟೊತ್ತಿಗೆ ತಿಂದ ಕೈ ಒಣಗಿದ್ದು ಗೊತ್ತಾದಾಗ, ಕೈತೊಳೆದು, ಎಲ್ಲರೂ ತಿಂದ ಪಾತ್ರೆಗಳನ್ನು ತೊಳೆಯುವುದು. ಅದನ್ನು ಒಂದು ಬುಟ್ಟಿಯಲ್ಲಿ ಸೇರಿಸಿ, ರುಕ್ಮಕ್ಕನಿಗೆ ಕೊಡುವುದು.
ಅಕ್ಕಿ ತೊಳೆದು ಬಿಸಿ ನೀರಿಗೆ ಹಾಕಲು, ತರಕಾರಿ ಹಚ್ಙಲು ಹೀಗೆ ಅಡುಗೆ ಕೆಲಸದಲ್ಲಿ ಸಹಾಯ.
ಇಲ್ಲಾಂದ್ರೆ. ಅಲ್ಲೇ ಮೆಟ್ಟಿಲಲ್ಲಿ ಕೂತು ” ಅತ್ತ್ ಯೇ ರುಕ್ಮಕ್ಕಾ….(ಅಲ್ಲ ವೇ ರುಕ್ಮಕ್ಕಾ)…..” ಎಂದು ಒಂದೊಂದು ಕಥೆಗಳು ಉರುಳಿಸುವುದು ರುಕ್ಮಕ್ಕನನ್ನು ಕೆಲವೊಮ್ಮೆ ನಗಿಸುವುದು, ಅಳುಬರಿಸುವುದು, ಮಾತಿನ ಭರದಲ್ಲಿ ರುಕ್ಮಕ್ಕ ಉಪ್ಪು ಹಾಕುವಲ್ಲಿ ಸಕ್ಕರೆ… ಹೀಗೆ ರುಕ್ಮಕ್ಕನ ನ್ಯಾಷನಲ್ ನ್ಯೂಸ್, ಜೀಯೋಗ್ರಾಫಿಕ್, ಎಂಟರ್ರ್ಟೈನ್ಮೆಂಟ್ ಚಾನೆಲ್ ಮಾತ್ರವಲ್ಲ
ಕೆಲವೊಮ್ಮೆ ರುಕ್ಮಮ್ಮ ತನ್ನ ಗಂಡ ತನಗೆ ಬೈದಿದ್ದು , ಹಿಂಸಿಸಿದ್ದು ಹೇಳಿದಾಗ, ಮೊಗ್ಗಮ್ಮ ರುಕ್ಮಮ್ಮನ ತಲೆಯನ್ನು ತನ್ನ ಭುಜದಲ್ಲಿ ಇಡಿಸಿ, ನೆವರಿಸಿ ” ತೂಲಾ(ನೋಡು)…. ನಾವು ಹೆಂಗಸರು ಭೂಮಿಯಂತೆ. ಈ ಗಂಡಸರು ಆಕಾಶದಂತೆ. ತೀವ್ರ ಬಿಸಿಲು, ತೀವ್ರ ಚಳಿ, ಬೀದಿಯಲ್ಲಾದ ಸೋಲು, ಎಲ್ಲವೂ ನಮ್ಮ ಮೇಲೆ ಹಾಕುತ್ತಾರೆ. ದೂರದಲ್ಲಿ ಆಕಾಶ ಸೇರಿದಂತೆ ನಮಗೆ ಕಾಣುತ್ತದೆ ಅಂದರೆ ನಾವು ಅವರನ್ನು ಅರ್ಥಮಾಡುತ್ತೇವೆ. ಆದರೆ ಆಕಾಶ ಮೇಲಿರುವುದರಿಂದ ಮೇಲಿಂದ ನೋಡಿದರೆ ಎಂದೂ ಭೂಮಿ ಆಕಾಶ ದೊಂದಿಗೆ ಸೇರುವುದಿಲ್ಲವೆಂದು ಅವರಿಗೆ ತಿಳಿಯುತ್ತದೆ. ಅದೇ ಆಕಾಶದ ತಿಳುವಳಿಕೆ. ಒಂದಾಗುತ್ತೇವೆ ಎಂಬ ಭರವಸೆ ನಮ್ಮ ತಿಳುವಳಿಕೆ. ಎಂದೆಂದೂ ಭೂಮಿ ಆಕಾಶದ ನೆರಳಲ್ಲಿ ಎಂದು , ಭೂಮಿ ಬಗ್ಗಿ ಕೂತಿದೆ ಎಂದು ಅವರು ಮೇಲಿಂದ ನೋಡುತ್ತಾರೆ….……” ಎನ್ನುವ ಸೈಕಲೋಜಿಕಲ್ ಚಾನೆಲಾಗಿದ್ದರು ಮೊಗ್ಗಮ್ಮ .
ರುಕ್ಮಕ್ಕನಿಗೆ ಯಾವುದಾದರೂ ಸಮಾರಂಭಕ್ಕೆ ಹೋಗಬೇಕೆಂದರೆ, ಮೊಗ್ಗಮ್ಮ , ತನ್ನ ಮನೆಯ ಮುಂದಿನ ತೋಟದ ,ತನ್ನ ಕೈಯಿಂದ ಹಣೆದ ಹೂವಿನ ಮೊಳದ ಹಾರವನ್ನೇ ಮುಡಿಸುತ್ತಿದ್ದರು. ರುಕ್ಮಮ್ಮನ ಪಕ್ಕ ಬ್ಯೂಟೀಷನ್ ಆಗಿದ್ರು ಮೊಗ್ಗಮ್ಮ. ಕನ್ನಡಿಯ ಬದಲು, ಅಲಂಕಾರದ ನಂತರ ಮೊಗ್ಗಮ್ಮನ ಮುಂದೆ ಒಂದು ರಾಂಪಿಗ್ ಮಾಡಿಯೇ ರುಕ್ಮಮ್ಮ ಜೀಪು ಹತ್ತಿ ಹೋಗೋದು. ಅಲ್ಲಿಂದ ಬಂದ ಮೇಲೆ ಆ ಸಮಾರಂಭದ ಸಂಪೂರ್ಣ ವಿವರಣೆ ಅವರ ಮುಂದಿನ ಅಜೆಂಡಾ.
ಮೊಗ್ಗಮ್ಮನಿಗೆ ಮಧ್ಯಾಹ್ನ ಊಟದ ನಂತರ ಮನೆಯ ಹಿಂಭಾಗದ ಜಗಲಿಯಲ್ಲಿ ಒಂದು ನಿದ್ರೆ, ತಲೆ ಗೋಡೆಯ ಕಡೆಯಾದರೆ, ಅವರ ದೇಹದ ಬಲ ,ಎಡ ಹಾಗೂ ಕಾಲಿನ ಭಾಗದ ಹತ್ತಿರ ಮೂರು ನಾಯಿಗಳೂ ನಿದ್ರೆ. ಆ ಸಮಯದಲ್ಲಿ ಯಾರಾದರೂ ಮೊಗ್ಗಮ್ಮನ ಬಳಿ ಬರುತ್ತಿದ್ದರೆ, ನಾಯಿಗಳು ಮೊಗ್ಗಮ್ಮನಿಗೆ ಕೇಳದ ಹಾಗೆ , ನಿದ್ರಾಭಂಗವಾಗದ ಹಾಗೆ, ” ಗುರ್ರ್ ….ರ್ರ್” ಎಂದು ಹತ್ತಿರ ಬರುವವರು ಬಾರದಂತೆ ಸದ್ದು ಮಾಡುತ್ತಿತ್ತು. ಮೊಗ್ಗಮ್ಮನ ನಿದ್ರೆಗೆ ಯಾರೂ ಭಂಗ ತಾರದಂತೆ ಕಾವಲಿರುತ್ತಿತ್ತು.
ಸುಮಾರು ಒಂದುವರೆ ಗಂಟೆ ನಿದ್ದೆಯ ನಂತರ ಹಸುಗಳನ್ನು ಕರೆದುಕೊಂಡು ಬಂದು , ಹಾಲು ಕರೆದು, ರುಕ್ಮಮ್ಮನಿಂದ ಒಂದು ಬಿಸಿ ನೀರು ಕುಡಿದು, ತನ್ನ ಮೂರು ನಾಯಿಗಳನ್ನು ಸ್ನಾನ ಮಾಡಿಸಿ, ತನಗಾಗಿ ಕಟ್ಟಿದ ಪಕ್ಕದ ಒಂದು ಬಚ್ಚಲು ಮನೆಯಲ್ಲಿ ತಾನೂ ಸ್ನಾನ ಮಾಡಿ, ಬಟ್ಟೆ ಬದಲಿಸಿ,ರುಕ್ಮಮ್ಮನಿಂದ ರಾತ್ರಿಯ ಆಹಾರ- ಪಾತ್ರೆಯಲ್ಲಿ ಪಡೆದು. ನಾಯಿಯೊಂದಿಗೆ ಗುಡ್ಡೆ ಹತ್ತುತ್ತಿದ್ದಳು.ಅಲ್ಲಿ ತನ್ನ ಮನೆಯೊಳಗೆ ದೀಪ ಉರಿಸಿ
” ಓ ನನ್ನ ಸೂರ್ಯನೇ ನೀನಿಲ್ಲದೆ
ನನಗೇನೂ ಕಾಣದು ,
ಈ ಸುಂದರ ಭೂಮಿಯೂ
ನೀನಿಲ್ಲದೆ ಕುರುಡಾಗಿದೆ.
ನನಗೂ ನಿನ್ನ ಸ್ಥಿತಿ ಒಂದು ದಿನ
ಬರುವುದು ಆದರೆ ನಿನ್ನಂಗೆ
ಮತ್ತೊಮ್ಮೆ ಉದಯಿಸದ ಸಂಪೂರ್ಣ
ಕುರುಡು ಕತ್ತಲಿಗೆ ಹೋಗಿರುವೆ
ಅಲ್ಲೋಗದಿದ್ದರೆ ನಿನ್ನ ನಾಳಿನುದಯ
ನಾ ನೋಡುವೆ” ಎಂದು ಹೇಳುತ್ತಾ ಮೌನವಾಗುತ್ತಾಳೆ.
ಯಾವಾಗಲೂ ಒಂದು #ತುಳಸಿ_ಎಲೆ ಹಾಗೂ ಮೈಸೂರು ಮಲ್ಲಿಗೆಯ ಎರಡೇ ಎರಡು ಹೂ ಅವರ ತಲೆಯ ಮೇಲೆ ಆಂಟೀನಾ ತರಹ ಇರುತ್ತದೆ.ನನ್ನ ಬದಿಯಲ್ಲಿ ಕೂತು, ಅಡಿಕೆ ಎತ್ತಿ ಶರವೇಗದ ಸುಲಿಗೆ ನೋಡಿ ನಾನು ಚಕಿತನಾದೆ. ಇವರಿದ್ದರೆ ನನಗೆ ಹತ್ತು ರೂಪಾಯಿಯೂ ಸಿಗಲ್ಲ ಎಂದು, ಅವರ ವೇಗ ಕಡಿಮೆ ಮಾಡಲು ಮಾತನಾಡಿಸಿ ವೇಗ ಕಡಿಮೆ ಮಾಡಿಸೋಣ ಎಂದು ಪ್ರಶ್ನಿಸಿದೆ ” ಯಾಕೆ ನೀವು ನಾಲ್ಕು ನಾಯಿ ಸಾಕಿಲ್ಲಾ? ಒಂದು ನಿಮ್ಮ ಮುಂದೆ ನಡೆಯಲು ಬೇಕಲ್ಲವೇ?”
ಮೊಗ್ಗಮ್ಮ ” ನೋಡು ಪುಡಿ(ಹುಡಿ ಅಂತ ಚಿಕ್ಕವರನ್ನು ಅವರು ಕರೆಯುವುದು) ಮೊದಲು ನಾನು ನಾಲ್ಕು ನಾಯಿ ಸಾಕುತ್ತಿದ್ದೆ. ಆದರೆ ನೀ ಹೇಳಿದಂತೆ , ಅದು ಮುಂದೆ ನಡೆವಾಗ ನಾನು ಅದರ ಹಿಂದೆ ವೇಗವಾಗಿ ನಡೆಯಲು ಆಗುತ್ತಿರಲಿಲ್ಲ. ಕೆಲವೊಮ್ಮೆ ನಾನು ನನ್ನ ವೇಗಕ್ಕೆ ಅದನ್ನೇ ತುಳೀತಿದ್ದೆ. ನಂತರ ಅದರಲ್ಲೊಂದು ಸತ್ತ ಮೇಲೆ , ನಾನು ಮೂರು ನಾಯಿ ಸಾಕ ತೊಡಗಿದೆ. ತೆಂಕು(ದಕ್ಷಿಣ), ಬಡಕು (ಉತ್ತರ), ಪಿರಾಕು(ಹಿಂದೆ)ಅಷ್ಟೇ….”
” ಮದುವೆ ಯಾಕೆ ಮಾಡಿಲ್ಲಾ? ಯಾರಾದ್ರೂ ಪ್ರೀಯತಮರಿದ್ದರೇ?”
” ನನ್ನ ಕುಟುಂಬದವರೆಲ್ಲಾ ಮಳೆಯಿಂದ ನೆನೆದ ಭೂಕುಸಿತದಿಂದ ಮರಬಿದ್ದು ಸತ್ತಾಗ, ಇಂದೆಲ್ಲಾ ನಾಳೆ ನಾನೂ ಸಾಯಬಹುದು. ಸುಮ್ಮನೆ ಮದುವೆಯಾಗಿ , ಆ ಮಕ್ಕಳನ್ನೂ ನನ್ನ ಹಾಗೆ ಅನಾಥತೆ….. ಬೇಡಾ ಅಂತ.

ಫೋಟೋ ಕೃಪೆ : byndoor
ಪ್ರಿಯತಮ ಅಂತ ಯಾರೂ ಇರಲಿಲ್ಲ. ಆದರೆ ಅದೇಕೋ ಮರದ ಮೇಲೆ ಅತ್ಯಂತ ಎತ್ತರ ಏರುವ ಗಂಡಸರನ್ನು ನಾನು ತುಂಬಾ ಇಷ್ಟ ಪಡುತ್ತಿದ್ದೆ ಆದರೆ ಪ್ರೀತಿಸಲಿಲ್ಲ. ಅಡಿಕೆ ಮರ ಏರುವವರೇ ನನಗೆ ತುಂಬಾ ಇಷ್ಟ ಯಾಕೆಂದರೆ ಅದೇ ಇಲ್ಲೆಲ್ಲಾ ತುಂಬಾ ಎತ್ತರದ ಮರ”
ನೋಡುತ್ತಿದ್ದಂತೆ ನಾನು ಹತ್ತು ಅಡಿಕೆ ಸುಲಿದಿದ್ದೆ, ಮೊಗ್ಗಮ್ಮ ನೂರು ದಾಟಿದ್ದಳು. ” ಏಯ್ ಪುಡಿ… ಮಾತಾಡು, ಮಾತಾಡಿದಾಗ ನನ್ನ ಕೆಲಸದ ವೇಗ ಜಾಸ್ತಿ ಆಗುತ್ತೆ” ಅಂದಳು. ” ಯಾಕೆ ನೀನು ತುಂಬಾ ಮೆಲ್ಲ ಸುಲೀತಿ? ನೋಡು ಮೊದಲು ಅಡಿಕೆ ಹೀಗೆ ಎತ್ತಿ ಕೈಯಲ್ಲಿ ಗಟ್ಟಿ ಹಿಡಿದಾಗ, ಮೃದುವಾದ ಭಾಗ ಗೊತ್ತಾಗುತ್ತೆ , ಆ ಭಾಗ ಚುಚ್ಚಿದ ಕೂಡಲೇ ಹಿಂಗೆ ಬೇಗ ಸುಲಿಯಬಹುದು” ಎಂದು ತೋರಿದರೂ ನಾನು ಸುಲಿದಿದ್ದು ಬರೇ ಐವತ್ತು!!!!
ಓದಲು ವಿಶ್ವವಿದ್ಯಾಲಯ ಹೋಗಿ, ಕೆಲಸ ಸಿಕ್ಕಿ ಮದುವೆಯಾಗಿ …. ಸುಮಾರು ಇಪ್ಪತ್ತು ವರುಷ ದಾಟಿದ ಮೇಲೆ , ಅಂದರೇ ತುಂಬಾ ವರುಷಗಳ ನಂತರ ಸಂದು ಸಿಕ್ಕಿದ. ಕುಶಲೋಪರಿ ಮಾತನಾಡಿ ಅವನ ದೂರವಾಣಿ ಸಂಖ್ಯೆ ಪಡೆದೆ. ಕೆಲ ದಿನಗಳ ನಂತರ ಅವನಲ್ಲಿ ಮೊಗ್ಗಮ್ಮನ ಬಗ್ಗೆ ಕೇಳಬೇಕೆಂದು ಕರೆ ಮಾಡಿದೆ.
” ಹದಿನೈದು ವರುಷಗಳ ಹಿಂದೆ ಮೊಗ್ಗಮ್ಮ ಅಸುನೀಗಿದರು. ತನ್ನ ಎಲ್ಲಾ ಆಸ್ತಿ ನನ್ನ ಹೆಸರಿಗೆ ವಿಲ್ ಬರೆದಿದ್ರು. ಈ ಹದಿನೈದು ವರುಷದಲ್ಲಿ ಕೆಲವು ಅಪರೂಪದ ಔಷಧೀಯ ಗಿಡ ಬಳ್ಳಿಗಳನ್ನು ನಾನೂ ಅಪ್ಪನೂ ಅಲ್ಲಿ ನೆಟ್ಟು ಬೆಳೆಸಿದೆವು. ಕೆಲವು ಮೌಲ್ಯಾಧಾರಿತ ಮರಗಳನ್ನು ಬೆಳೆಸಿದೆವು. ‘ಮೊಗ್ಗಮ್ಮನ ಕಾಡು’ ಎಂದು ಹೆಸರಿಟ್ಟೆವು. ಕೆಲ ಮರ ಕಡಿದು ಮಾರಿದ ಲಾಭದಲ್ಲಿ ಒಂದು ಅಂಗನವಾಡಿ ಕಟ್ಟಿಸಿ, ಕಾಡಿನ ಹಾಗೂ ಕೊಳೆಗೇರಿ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ. ಹಾಗೂ ಮತ್ತೂ ಬಂದ ಲಾಭದಲ್ಲಿ ಶಿಕ್ಷಕಿಗೆ ಹಾಗೂ ಆಯನಿಗೂ ಸಂಬಳ. ಮಕ್ಕಳಿಗೆ ಊಟ. ನಮ್ಮ ಮನೆಯ ಹಾಲು ಆ ಮಕ್ಕಳಿಗೆ ಕೊಟ್ಟು ಬಾಕಿ ಸೊಸೈಟಿಗೆ. ಮತ್ತೆ ಮೊಗ್ಗಮ್ಮನ ನೆನಪಿಗೆ ನಾನು ಇಂದು ಮೂರು ನಾಯಿ ಸಾಕುತ್ತಿದ್ದೇನೆ. ಒಂದರ ಹೆಸರು ತೆಂಕು, ಮತ್ತೊಂದು ಬಡಕು, ಮಗದೊಂದು ಪಿರಾಕು. ನನ್ನ ಎಡ ಬಲ ಹಾಗೂ ಹಿಂದೆ ಅವುಗಳು ಬಾಲ ಅಲ್ಲಾಡಿಸಿ ನಡೆಯುವಾಗ” ಮೊಗ್ಗಮ್ಮ ಮತ್ತೆ ಮತ್ತೆ ನೆನಪಿಗೆ ಬರುತ್ತಿದ್ದಳು.
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು) ಬೆಂಗಳೂರು.
