ಆಕಾಶದಲ್ಲಿ ಅಭಿಮನ್ಯು ನಿರ್ಮಲಜಿತ್ ಸಿಂಗ್ ಸೇಖೋನ್



ಜುಲೈ ೧೭,  “ಪರಮ ವೀರ ಚಕ್ರ” ವಿಜೇತ ಫ್ಲೈಯಿಂಗ್ ಆಫೀಸರ್ ನಿರ್ಮಲಜಿತ್ ಸಿಂಗ್ ಸೇಖೋನ್ ರವರ ಜನ್ಮದಿನ. ಆರು ಪಾಕಿಸ್ತಾನಿ ಯುದ್ಧವಿಮಾನಗಳ ವಿರುದ್ಧ ಏಕಾಂಗಿಯಾಗಿ ಹೋರಾಡಿದ ವೀರನ ಸಾಹಸಗಾಥೆ ಇಲ್ಲಿದೆ ಓದಿ…

೨೨ ನವೆಂಬರ್ ೧೯೭೧ ರಂದು ಕನ್ನಡಿಗರಾದ #ಫ್ಲೈಟ್_ಲೆಫ್ಟಿನೆಂಟ್_ಅಪ್ಪಚ್ಚು_ಗಣಪತಿ, ಪಾಕಿಸ್ತಾನದ ಮೊಟ್ಟಮೊದಲ ಸೇಬರ್ ಜೆಟ್ ವಿಮಾನವನ್ನು ಹೊಡೆದುರುಳಿಸುವ ಮೂಲಕ ಭಾರತ ಮತ್ತು ಪಾಕೀಸ್ತಾನದ ವಾಯುಯುದ್ಧಕ್ಕೆ ವೀಳ್ಯಕೊಟ್ಟರು!

‎ಡಿಸೆಂಬರ್ ೩ ಕ್ಕೆ ಭಾರತ ಪಾಕಿಸ್ತಾನದ ಮೇಲೆ ಅಧಿಕೃತವಾಗಿ ಯುಧ್ಧ ಘೋಷಣೆ ಮಾಡಿತು. ೧೯೭೧ ರ ಯುಧ್ಧದ ಮೂಲ ಉದ್ದೇಶವೇನೆಂದರೆ ಪಾಕಿಸ್ತಾನಿ ಸೈನಿಕರು ಅದರಲ್ಲೂ ಪಂಜಾಬಿ ಪಾಕಿಸ್ತಾನಿಗಳು ಅಂದಿನ ಪೂರ್ವ ಪಾಕಿಸ್ತಾನದ ಬಂಗಾಳಿ ನಾಗರೀಕ ಮೇಲೆ ನಡೆಸುತ್ತಿದ್ದ ದೌರ್ಜನ್ಯದಿಂದ ಅವರನ್ನು ಮುಕ್ತಗೊಳಿಸಲು ಮತ್ತು ಇದರಿಂದಾಗಿ ಸಾವಿರಾರು ಬಂಗಾಳಿ ನಿರಾಶ್ರಿತರ ಸಾಗರವೇ ಭಾರತಕ್ಕೆ ಹರಿದು ಬರುವುದನ್ನು ತಡೆಗಟ್ಟಲು. ‎ಯುಧ್ಧ ಪ್ರಾರಂಭವಾಗಿದ್ದು ಪೂರ್ವ ಪಾಕಿಸ್ತಾನದ ಗಡಿಯಲ್ಲಿ. ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಭೂಸೇನೆ, ವಾಯು ಸೇನೆಯನ್ನು ಧ್ವಂಸಗೊಳಿಸಲಾಯಿತು. ೯೩,೦೦೦ ಪಾಕಿಸ್ತಾನದ ಸೈನಿಕರು ಭಾರತದ ಸೈನ್ಯಕ್ಕೆ ಶರಣಾದರು. ವಿಶ್ವದ ಇನ್ನಾವ ದೇಶದಲ್ಲೂ ಇಷ್ಟು ದೊಡ್ಡಮಟ್ಟದ ಯುದ್ದಕೈದಿಗಳನ್ನು ಕೆಲವೇ ದಿನಗಳಲ್ಲಿ ವಶಪಡಿಸಿಕೊಂಡ ಉದಾಹರಣೆಗಳಿಲ್ಲ. ಅವಮಾನದಿಂದ ಕುದ್ದು ಹೋಯಿತು ಪಾಕಿಸ್ತಾನ.

ಯುದ್ಧ ಪಶ್ಚಿಮದ ಗಡಿಯಲ್ಲೂ, ರಾಜಾಸ್ಥಾನ, ಗುಜರಾತಿನ ಗಡಿಪ್ರದೇಶಗಳಲ್ಲಿ ಪ್ರಾರಂಭವಾಯಿತು. ಅಲ್ಲೂ ಪಾಕಿಸ್ತಾನ ಹೀನಾಯವಾಗಿ ಸೋಲನ್ನನುಭವಿಸಿತು. ಕಾಶ್ಮೀರವನ್ನು ಪಡೆದುಕೊಳ್ಳುವುದಂತೂ ಅಸಾಧ್ಯ ಆದರೆ ಅದನ್ನು ಧ್ವಂಸಗೊಳಿಸುವ ಹುಚ್ಚು ಧೈರ್ಯಕ್ಕೆ ಕೈಹಾಕಿತು ಪಾಕಿಸ್ತಾನ. ಇಡಿಯಾಗಿ ಮುಳುಗಿದವನಿಗೆ ಛಳಿ ಏನು ಮಳೆ ಏನು ಎನ್ನುವ ತರ್ಕ..ಆ ದುಷ್ಟರದ್ದು.

‎ಫೋಟೋ ಕೃಪೆ : The Indian Express

ಡಿಸೆಂಬರ ೧೪ರಂದು ಆರು ಪಾಕಿಸ್ತಾನದ ಸೇಬರ್ ಜೆಟ್ ವಿಮಾನಗಳು ಶ್ರೀನಗರದ ವಾಯುನೆಲೆಯ ಕಡೆಗೆ ಬಲವಾದ ಬಾಂಬುಗಳನ್ನು ಹೇರಿಕೊಂಡು ವೇಗವಾಗಿ ಹಾರಿ ಬರುತ್ತಿದ್ದವು. ಇದರ ಸುಳಿವು ಸಿಗುತ್ತಲೇ ಹೇಗೆ ಒಬ್ಬ ಭಾರತೀಯ ವಾಯುಸೇನೆಯ ವೀರ ಪೈಲಟ್ ಏಕಾಂಗಿಯಾಗಿ ಆಕಾಶದಲ್ಲಿ ಅಭಿಮನ್ಯುವಾಗಿ ಪಾಕಿಸ್ತಾನಿ ಪೈಲಟ್ಟುಗಳ ಈ ಷಡ್ಯಂತ್ರವನ್ನು, ಚಕ್ರವ್ಯೂಹವನ್ನು ನಿಷ್ಕ್ರಿಯಗೊಳಿಸಿದ ಎನ್ನುವ ರೋಚಕ ಚಿತ್ರಣವಿದು. ಇತಿಹಾಸದ ಪುಟಗಳಲ್ಲಿ ಅಜರಾಮರವಾದ ಈ ಮೈನವಿರೇಳಿಸುವ ಘಟನೆಯ ಕಥಾನಾಯಕ “ಪರಮವೀರ ಚಕ್ರ” ವಿಜೇತ ಫ್ಲೈಯಿಂಗ್ ಆಫೀಸರ್ ನಿರ್ಮಲಜಿತ್ ಸೇಖೋನ್ ರವರ ಸಾಹಸ ವೃತ್ತಾಂತವಿದು…..

ಆಗ ವಾಯುಸೇನೆಯಲ್ಲಿ MIG-21, Hunter ಮತ್ತು Gnat ಯಧ್ಧವಿಮಾನಗಳಿದ್ದವು. ಇವುಗಳಲ್ಲಿ Gnat ಅತಿ ಚಿಕ್ಕ ವಿಮಾನ. ಅದರ ಗಾತ್ರದಿಂದಾಗಿ ಅದು ನೋಡಲು ಬಲು ಸಾಧು ವಿಮಾನದಂತೆ ಕಾಣುತ್ತಿತ್ತು ಮತ್ತು ಈಗಿರುವ ಯುಧ್ಧ ವಿಮಾನಗಳಿಗಿರುವಂತೆ ಆಧುನಿಕ ತಂತ್ರದ ಬಾಂಬುಗಳು, ಮಿಸೈಲುಗಳು ಮತ್ತು ಜಾಮರ್ ಅಳವಡಿಸಿರಲಿಲ್ಲ. ಸುಮಾರು 2000 ದಷ್ಟು ದೊಡ್ಡಗಾತ್ರದ ಬುಲೆಟ್ಟುಗಳನ್ನು ಹೋಲುವ ರಾಕೆಟ್ಟುಗಳನ್ನು ಲೋಡ್ ಮಾಡಬಹುದಾಗಿತ್ತು, ಫೈರ್ ಮಾಡಿದಾಗ 120 ಬುಲೆಟ್ಟುಗಳು ಪ್ರತಿ ಸೆಕೆಂಡಿಗೆ ಹೊರಬರುತ್ತಿದ್ದವು ಆದರೆ ಆಕಾಶದಲ್ಲಿ ಇದರ ಪ್ರತಾಪ ಅದ್ಭುತ. ಒಂದು ನಿಮಿಷದಲ್ಲಿ ಸುಮಾರು ಇಪ್ಪತ್ತು ಸಾವಿರ ಅಡಿ ಎತ್ತರಕ್ಕೆ ಜಿಗಿಯುವ ಮತ್ತು ಸುಮಾರು ಒಂದು ಸಾವಿರ ಕಿಮೀಗೂ ಹೆಚ್ಚು ವೇಗದಲ್ಲಿ ಹಾರುವ ಈ ಉಕ್ಕಿನ ಹಕ್ಕಿಗೆ ಪಾಕಿಸ್ತಾನದ “ಸೇಬರ್ ಜೆಟ್ಟು” ಗಳು ಹೆದರುತ್ತಿದ್ದುದೇ ಅದರ ವೇಗಕ್ಕೆ ಮತ್ತು ಅದರೊಳಗೆ ಕೂತಿರುವ ಪೈಲಟ್ಟಿಗೆ.

ಚಿಕ್ಕಂದಿನಿಂದಲೂ ಫೈಟರ್ ಏರೋಪ್ಲೇನುಗಳನ್ನು ನೋಡುತ್ತಲೇ ಬೆಳೆದವರು ಸೇಖೋನ್. ಅವರ ತಂದೆ ಏರ್ಫೋರ್ಸಿನಲ್ಲಿ ಎಂಜಿನಿಯರ್, ಹಾಗಾಗಿ ಮಗ ಫೈಟರ್ ಪೈಲಟ್ಟಾಗುವುದು ಸಹಜವೇ ಆದರೆ ಅವರ ತಾಯಿಗೆ ಇದಕ್ಕೆ ಸಮ್ಮತಿ ಇರುವುದಿಲ್ಲ ಏಕೆಂದರೆ ನಿರ್ಮಲ್ಜಿತ್ ತುಂಬಾ ಮೃದು ಸ್ವಭಾವದವನು, ಅಂತರ್ಮುಖಿ, ಪುಸ್ತಕ ಪ್ರೇಮಿ. ತಾಯಿಯ ಪ್ರಕಾರ ಇವನು ಉಪಾಧ್ಯಾಯನಾಗಿದ್ದರೆ ಒಳ್ಳೆಯದು ಅಂತ.

‎ಫೋಟೋ ಕೃಪೆ : yourviews.mindstick

ಸೇಖೋನ್ ಮಾತ್ರ ಹಠಕ್ಕೆ ಬಿದ್ದು ಪೈಲಟ್ಟಾಗಲು ನಿರ್ಧರಿಸಿದ್ದರು. ತಾಯಿ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಲೇ ಬೇಕಾಯಿತು. ಆಯ್ಕೆಯೂ ಆಯಿತು ಮತ್ತು ತರಬೇತಿಯೂ ಪ್ರಾರಂಭವಾಯಿತು. ಇವರ ಅಂತರ್ಮುಖಿ ಸ್ವಭಾವ ಕೆಲವೊಮ್ಮೆ ತರಬೇತಿ ಸಿಬ್ಬಂದಿಗೆ ಅರ್ಥವಾಗುತ್ತಿರಲಿಲ್ಲ. ಇದು ಕೆಲವೊಮ್ಮೆ ಇವರಿಗೇ ತೊಂದರೆ ಕೊಡುತ್ತಿತ್ತು. ಒಮ್ಮೆಯಂತೂ ಫೈಟರ್ ಪೈಲಟ್ಟು ಆಗಲು ನೀನು ಆನರ್ಹ ಎನ್ನುವವರೆಗೂ ಅವರ instructor ಗೆ ಕೋಪ ಬಂದಿತ್ತು. ಆದರೆ ಸ್ವಭಾವವನ್ನರಿತ ಅವರ ಮಿತ್ರರು ಅವರ ನೆರವಿಗೆ ಬಂದರು, ಸ್ವಲ್ಪ ಸಂಕೋಚ ಬಿಟ್ಟು ಮಾತಾಡು,ಇದರಿಂದಲೇ ನಿನಗೆ ತೊಂದರೆಯಾಗುತ್ತಿರುವುದು ಏಂದು ಪ್ರೋತ್ಸಾಹಿಸಿದರು. ಫೈಟರ್ ಪೈಲಟ್ಟಾಗಲು ಇನ್ನೂ ಒಂದು ತೊಂದರೆ ಇತ್ತು. ಸುಮಾರು ಆರೂಕಾಲು ಅಡಿ ಎತ್ತರದ ಸೇಖೋನ್ ಈ ಪುಟ್ಟ ನ್ಯಾಟ್ ವಿಮಾನದಲ್ಲಿ ಹಿಡಿಸಲಿಲ್ಲ. ಅದಕ್ಕೆಂದೇ ಎಲ್ಲಾತರಹದ ಕಸರತ್ತುಗಳನ್ನೂ ಮಾಡಿದರು, ಕೊನೆಗೆ ಕೂದಲನ್ನು ಕತ್ತರಿಸಿ ಪಗಡಿ ಧರಿಸುವುದನ್ನೇ ಬಿಟ್ಟರು. ನಿಧಾನವಾದರೂ ತರಬೇತಿ ಸಿಬ್ಬಂದಿಯವರಿಗೆ ಇವರ ನಿಷ್ಟೆ ಮತ್ತು ಅಸ್ಥೆಗಳ ಅರಿವಾಯಿತು. ಅಂತೂ ಯಶಸ್ವಿಯಾಗಿ ಪೂರ್ಣ ಪ್ರಮಾಣದ ತರಬೇತಿಯನ್ನೆಲ್ಲಾ ಮುಗಿಸಿ Gnat ವಿಮಾನಗಳ ವಾಯುನೆಲೆಗೆ ವರ್ಗಾವಣೆ ಪಡೆದು ಬಂದರು. ಯುದ್ಧದ ಅಲೆಗಳು ಏಳುವ ಮುಂಚೆ ಆವರನ್ನು ಶ್ರೀನಗರಕ್ಕೆ ಕಳುಹಿಸಲಾಯಿತು. ಪೂರ್ವ ಪಾಕಿಸ್ತಾನ ಇನ್ನೇನು ಪಾಕಿಸ್ತಾನದ ಹಿಂಸೆಯಿಂದ ಬಿಡುಗಡೆ ಹೊಂದಿ ಬಂಗ್ಲಾದೇಶವಾಗಿ ಉದಯಿಸುವುದರಲ್ಲೇ ಇತ್ತು, ಹತಾಶಗೊಂಡ ಪಾಕೀಸ್ತಾನ, ಪುನಃ ಕಾಶ್ಮೀರವನ್ನು ಕಬಳಿಸುವ ಅಥವಾ ಅದಾಗದಿದ್ದರೆ ಶ್ರೀನಗರವನ್ನು ನೆಲಸಮಗೊಳಿಸುವ ದುಸ್ಸಾಹಸಕ್ಕೆ ಕೈಹಾಕಿತು.

ಶ್ರೀನಗರಕ್ಕೆ ಬಂದ ಸೇಖೋನರಿಗೆ ಕಾಶ್ಮೀರದ ಛಳಿ ಮತ್ತು ನೆಲದ ಪರಿಚಯವಾಗುವುದರಲ್ಲೇ ಇತ್ತು…ಯುದ್ಧದ ಕರೆ ಬಂದೇಬಿಟ್ಟಿತು. ದಿನಾಂಕ ೧೪ ಡಿಸೆಂಬರ್ ೧೯೭೧. ಆರು ಪಾಕಿಸ್ತಾನ ಯುಧ್ಧವಿಮಾನಗಳು ಶ್ರೀನಗರದ ಕಡೆ ಬರುತ್ತಿವೆ ಎನ್ನುವ ರಡಾರಿನ ಮಾಹಿತಿ ಬಂತು. ಫ್ಲೈಟ್ ಲೆಫ್ಟಿನೆಂಟ್ ಘುಮ್ಮನ್ ಮತ್ತು ಫ್ಲೈಯಿಂಗ್ ಆಫೀಸರ್ ಸೇಖೋನ್ Operational Readiness Platform (ORP) ಕರ್ತವ್ಯ ನಿರ್ವಹಿಸುತ್ತಿದ್ದರು. ಪಾಕಿಸ್ತಾನಿ ವಿಮಾನಗಳು ಗಡಿದಾಟಿದ ವಿಷಯ ತಿಳಿಯುತ್ತಲೇ ಕೆಲವೇ ಸೆಕೆಂಡುಗಳಲ್ಲಿ ವಿಮಾನದಲ್ಲಿ ಕುಳಿತು ರನ್ ವೇಯತ್ತ ದೌಡಾಯಿಸಿದರು. ಮೊದಲು ಫ್ಲೈಟ್ ಲೆಫ್ಟಿನೆಂಟ್ ಘುಮ್ಮನ್ ಟೇಕಾಫ್ ಮಾಡಿದರು. ಅವರ ವಿಮಾನ ಎಬ್ಬಿಸಿದ ಧೂಳು ತೇಲಿಹೋಗುವ ಕೆಲವು ಸೆಕೆಂಡುಗಳ ತನಕ ಸೇಖೋನ್ ಕಾಯಬೇಕಿತ್ತು. ಅಷ್ಟರಲ್ಲೇ ಪಾಕಿಸ್ತಾನ ವಿಮಾನಗಳು ರನ್ ವೇಯ ಮೇಲೆ ಗುಂಡಿನ ಮಳೆಗರೆದವು. ರೋಷದಿಂದ ಅವಡುಗಚ್ಚಿದ ಸೇಖೋನ್ ಆ ದಾಳಿಯ ನಡುವೆಯೇ ಬಾನಿಗೇರಿ ಪಾಕಿಸ್ತಾನಿ ವಿಮಾನಗಳ ಹಿಂದೆ ಬಿದ್ದರು.



ಅದಾದ ಕೆಲವೇ ಸೆಕೆಂಡುಗಳಲ್ಲಿ ಮತ್ತೆ ಆರು ಪಾಕೀಸ್ತಾನಿ ಯುಧ್ಧವಿಮಾನಗಳು ಶ್ರೀನಗರದ ವಾಯುನೆಲೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ರನ್ ವೇ ಮೇಲೆ ಎರಡು ಬಾಂಬುಗಳು ಬಿದ್ದು ಆಳವಾದ ಕಂದರವನ್ನೇ ಸೃಷ್ಟಿಸಿದವು. ಇನ್ನು ಇಲ್ಲಿಂದ ಯಾವ ಏರೋಪ್ಲೇನು ಟೇಕಾಫ್ ಆಗುವುದಿಲ್ಲ ಎನ್ನುವ ಭರವಸೆ ಬಂತು ಪಾಕಿಸ್ತಾನಿ ಪೈಲಟ್ಟುಗಳಿಗೆ. ಅವರ ತಂತ್ರದ ಪ್ರಕಾರ ಶ್ರೀನಗರದ ರನ್ವೇ ನಿಷ್ಕ್ರಿಯ ಗೊಂಡಿದೆ ಅಲ್ಲಿಂದ ಯಾವ ವಿಮಾನಗಳೂ ಹಾರಲಾರವು. ಆಗ ಶ್ರೀನಗರದ ಆಕಾಶದಲ್ಲಿ ನಮ್ಮದೇ ಸಾಮ್ರಾಜ್ಯ, ಯಾವುದೇ ಅಡತಡೆಯಿಲ್ಲದೆ ಶ್ರೀನಗರದ ಮೇಲೆ ದಾಳಿ ನಡೆಸಬಹುದು ಎನ್ನುವ ಗುರಿಯಿಂದ ಬಂದಿದ್ದರು‎ ಆದರೆ ಅವರಿಗೆ ಗೊತ್ತಿರಲಿಲ್ಲ ಸೇಖೋನ್ ಮತ್ತು ಘುಮ್ಮನ್ ಇವರು ಶ್ರೀನಗರದ ವಾಯುನೆಲೆಯ ಮೇಲೆ ಬರುವುದಕ್ಕಿಂತ ಮೊದಲೇ ಆಕಾಶಕ್ಕೆ ಹಾರಿದ್ದರು ಅಂತಾ. ಸೇಖೋನ್ ಪಾಕಿಸ್ತಾನಿ ಜೆಟ್ಟುಗಳು ಕಂಡದ್ದೇ ತಡ ಅವರಿಗೆ ಕಾಣದಂತೆ ಮೇಲಕ್ಕೇರಿ ಆಗಲೇ ಇವರ ಹಿಂದಿನಿಂದ ಬಂದು ತನ್ನ ಗನ್ ಸೈಟ್ ನಲ್ಲಿ ಫೋಕಸ್ ಮಾಡುತ್ತಿದ್ದರು.

“ಎರಡು ಸೇಬರ್ ಜೆಟ್ಟುಗಳ ಹಿಂದೆ ಇದ್ದೇನೆ…ಛೋಡೂಂಗ ನಹೀ”

ಎಂದು ರೇಡಿಯೋದಲ್ಲಿ ಅಬ್ಬರಿಸಿ ಗುಂಡಿನ ಮಳೆ ಸುರಿಸಿದರು. ಕ್ಷಣಾರ್ಧದಲ್ಲಿ ಎರಡು ಜೆಟ್ಟುಗಳಿಗೆ ಬೆಂಕಿ ಹಚ್ಚಿಕೊಂಡು ತತ್ತರಿಸಿ ಧರೆಗೆ ಬಿದ್ದವು. ಇನ್ನುಳಿದ ಸೇಬರ್ ಪೈಲಟ್ಟುಗಳು ಕಕ್ಕಾಬಿಕ್ಕಿಯಾದರು. ಇದಲ್ಲಿಂದ ಬಂದಿತು ಈ Gnat ವಿಮಾನ ಅಂತಾ. ಈ ವಾಯುಯುದ್ಧ ನಡೆಯುತ್ತಿದ್ದದ್ದು ನೆಲದಿಂದ ಸುಮಾರು ನೂರು ಅಡಿ ಎತ್ತರದಲ್ಲಿ, ಕಾಶ್ಮೀರದ ಉದ್ದನೆಯ ಪೈನ್ ಮರಗಳ ಎತ್ತರದಲ್ಲಿ! ದುರದೃಷ್ಟ ಎಂದರೆ ಸೇಖೋನ್ ಜೊತೆ ಇರಬೇಕಿದ್ದ ಘುಮ್ಮನ್ ಅವರ ವೇಗದ ಅಬ್ಬರಕ್ಕೆ ದೂರ ಉಳಿದುಬಿಟ್ಟಿದ್ದರು, ಅಂತಹಾ ಒಂದು ಶರವೇಗದಲ್ಲಿ ಸೇಖೋನ್ ಪಾಕಿಸ್ತಾನಿಯರನ್ನು ಅಟ್ಟಾಡಿಸಿಕೊಂಡು ಬೇಟೆಯಾಡುತ್ತಿದ್ದರು. ಆಕಾಶದಲ್ಲಿ ಗರಗರನೆ ಸುತ್ತಿ ಸುತ್ತಿ ಪಾಕಿಸ್ತಾನಿ ಸೇಬರ್ ಗಳನ್ನು ವಿಚಲಿತಗೊಳಿಸಿ ಅವರ ಮೇಲೆ ಫೈರ್ ಮಾಡುತ್ತಿದ್ದರು. ಅದರಲ್ಲಿ ಒಂದು ಜೆಟ್ ಸೇಖೋನ್ ರ ಹಿಂದೆ ಬಿದ್ದು ಆಕ್ರಮಣ ಮಾಡಿತು. Gnat ವಿಮಾನದಿಂದ ಹೊಗೆ ಬರಲು ಶುರುವಾಯಿತು.

‎ಫೋಟೋ ಕೃಪೆ : swarajyamag

‘ಸೇಖೋನ್ eject… eject’

ಎಂದು ರಡಾರ್ ಕಂಟ್ರೋಲರ್ ರೇಡಿಯೋದಲ್ಲಿ ಕೂಗುವವರೆಗೂ ಇವರು ಸೇಬರ್ ಜೆಟ್ಟುಗಳ ಹಿಂದೆ ಬಿದ್ದಿದ್ದರು. ಕೊನೆಗೆ ಇವರ ವಿಮಾನ ನಿಯಂತ್ರಣ ಕಳೆದುಕೊಂಡಿತು…ಇವರು eject ಆದರು…ಆದರೆ ಭೂಮಿಗೆ ಬಹಳ ಹತ್ತಿರದಲ್ಲಿದ್ದರು, ಪ್ಯಾರಾಚೂಟು ಬಿಚ್ಚಿಕೊಳ್ಳುವಷ್ಟರಲ್ಲೇ ಆ ದಟ್ಟವಾದ ಕಾಶ್ಮೀರದ ಕಾಡಿನ ಮರದ ಮೇಲೆ ಬಿದ್ದರು. ಇಲ್ಲೇ ಇದ್ದ ಕಾಶ್ಮೀರಿ ಮಹಿಳೆಯೊಬ್ಬಳು ಇವರನ್ನು ಕೆಳಗಿಳಿಸಿ, ಬದುಕಿಸಲು ಹರಸಾಹಸ ಮಾಡಿದರು. ಸೇಖೋನ್ ಅವರ ತೊಡೆಯ ಮೇಲೆ ಕೊನೆಯುಸಿರೆಳೆದರು.

ಡಿಸೆಂಬರ್ ೧೪, ಶ್ರೀನಗರದ ಮೇಲೆ ಆರು ಸೇಬರ್ ಜೆಟ್ಟುಗಳ ನಡೆಸಿದ ದಾಳಿಯನ್ನು ಏಕಾಂಗಿಯಾಗಿ ಹಿಮ್ಮೆಟ್ಟಿ ಹೋರಾಡಿದ ಫ್ಲೈಯಿಂಗ್ ಆಫೀಸರ್ ನಿರ್ಮಲ್ಜಿತ್ ಸಿಂಗ್ ಸೇಖೊನ್ ಶ್ರೀನಗರವನ್ನು ರಕ್ಷಿಸಿದ ಸಾಹಸಗಾಥೆಯೊಂದಿಗೆ ಮತ್ತು ಅವರ ವೀರಮರಣದೊಂದಿಗೆ ಯುಧ್ಧಕ್ಕೂ ಸಹ ತೆರೆಬಿದ್ದಿತು.

ನಿರ್ಮಲ್ಜಿತ್ ಸೇಖೋನ್ ರವರಿಗೆ ಮರಣೋತ್ತರ “ಪರಮವೀರ ಚಕ್ರ “ಮತ್ತು ಕೊಡಗಿನ ವೀರ ಗಣಪತಿಯವರಿಗೆ “ವೀರಚಕ್ರ”ಪ್ರಶಸ್ತಿಗಳಿಂದ ಗೌರವಿಸಲಾಯಿತು.


  • ವಿಂಗ್ ಕಮಾಂಡರ್ ಸುದರ್ಶನ

(ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW