ಗಜಲ್ ಕಾರ ಅಲ್ಲಾಗಿರಿರಾಜ್ ಕನಕಗಿರಿ ಅವರ ಹುಟ್ಟುಹಬ್ಬಕ್ಕೆ ಅವರದೇ ರಚನೆಯ ಸುಂದರ ಕವಿತೆಯನ್ನು ಪ್ರಕಟಿಸುವುದರ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಆಕೃತಿಕನ್ನಡ ಕೋರುತ್ತದೆ.
ಒಂದು ಕವಿತೆ ಹುಟ್ಟಬೇಕಾಗಿತ್ತು.
ಹಸಿದ ಗರೀಬರ ಒಡಲ ಹಾಡಾಗಿ.
ಅನ್ನ ಬೆಳೆದವರ ನೆಲದ ಧ್ವನಿಯಾಗಿ.
ಅಮಾಯಕ ಹೆಣ್ಣು ಮಕ್ಕಳ
ನೋವು ಸಾವಿಗೆ ಹೋರಾಟದ ನದಿಯಾಗಿ.
ಒಂದು ಕವಿತೆ ಹುಟ್ಟಬೇಕಾಗಿತ್ತು.
ಧರ್ಮದ ಅಮಲಿಗೆ ನೆತ್ತರು ಕುಡಿದ ನೆಲಕ್ಕೆ
ಒಂದಿಷ್ಟು ಕಾಲ ಸಾಂತ್ವನ ಹೇಳಲು.
ದೇವರ ಹೆಸರಿನಲ್ಲಿ ಬೆತ್ತಲಾದ ಮೈ ಮನಸ್ಸುಗಳಿಗೆ
ಮನುಷ್ಯತ್ವದ ಮನವರಿಕೆ ಮಾಡಲು.
ಸತ್ತವರಿಗೆ ಒಂದು ಸ್ವರ್ಗವಿದೆ ಎಂದ್ಹೇಳುವವರಿಗೆ
ಗರ್ಜಿಸಿ ಬದುಕೇ ಸ್ವರ್ಗವೆಂದು ಸಾರಲು.
ಮಂದಿರ ಮಸೀದಿ ಹೆಸರಲ್ಲಿ ಜೀವ ಬೇಡುವ
ಚಾಕು ಚೂರಿ ತಲ್ವಾರ್ ಬಂದೂಕುಗಳಿಗೆ ತುಕ್ಕು ಹಿಡಿಸಲು.
ಸಮಾನತೆ ಸಾಯಿಸಿ ಭಿನ್ನ ಬೇಧ ಮಾಡುವ
ಧರ್ಮ ರಾಜಕಾರಣಕ್ಕೆ ತಿದ್ದಿ ಬುದ್ಧಿ ಹೇಳಲು
ಹುಟ್ಟಬೇಕಾಗಿತ್ತು ಒಂದು ಕವಿತೆ
ಮನುಷ್ಯರು ದೇವರಾಗುವ ಬದಲು
ಮನುಷ್ಯರಾಗಿ ಜೀವನ ಮುಗಿಸಲು.
ಒಂದು ಕವಿತೆ ಹುಟ್ಟಬೇಕಾಗಿತ್ತು.
- ಅಲ್ಲಾಗಿರಿರಾಜ್ ಕನಕಗಿರಿ
