ಅಲ್ಲಾಗಿರಿರಾಜ್ ಕನಕಗಿರಿ ಅವರು ಅದ್ಬುತ ಕನ್ನಡ ಗಜಲ್ ಕವಿ. ಅವರ ಬರವಣಿಗೆಯ ಸಾಕಷ್ಟು ಕೃತಿಗಳು ಹೊರಕ್ಕೆ ಬಂದಿವೆ. ಇತ್ತೀಚಿಗೆ ಅವರಿಗೆ ‘ಕನಕ – ಶರೀಫ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರ ಎರಡು ಗಜಲ್ ಗಳು ಆಕೃತಿ ಕನ್ನಡದಲ್ಲಿ ಓದಬಹುದು…
ಆ ಕಡಲಿಗೆ ಇನ್ನೂ ಗೊತ್ತೇ ಇಲ್ಲ.
ಚಿಪ್ಪುಗಳು ದಡಕ್ಕೆ ಬಂದು ಬಿದ್ದ ಲೆಕ್ಕ.
ಈ ಊರ ಹುಡುಗರಿಗೆ ನಿದ್ದೇ ಇಲ್ಲ.
ಅವಳ ನೆರಳ ರೂಪ ಭಂಗಿ ಬದಲಿಸಿದ ಲೆಕ್ಕ.
ಆ ಮನೆಯ ಬೆಳಕಿಂಡಿಗೆ ಕತ್ತಲ ಪರಿವೇ ಇಲ್ಲ.
ಹಗಲು ಬೆಳದಿಂಗಳೊಂದಿಗೆ ಹೊಂದಿಕೊಂಡ ಲೆಕ್ಕ.
ಈ ಮಧುಶಾಲೆಯಲ್ಲಿ ಜ್ಞಾನದ ಹಸಿವಿಗೆ ಮಿತಿಯೇ ಇಲ್ಲ.
ಯಾರೂ ಕೇಳುತ್ತಿಲ್ಲ ಪ್ರತಿ ಕೂಟಕ್ಕೆ ಬಟ್ಟಲೊಡೆದ ಲೆಕ್ಕ.
ಆ ಪರದೆ ಹಿಂದೆ ಕಥೆ ಕಟ್ಟುವುದು ನಿಂತೇ ಇಲ್ಲ.
ಸಾವಿನೊಂದಿಗೆ ಹುಟ್ಟಿದವರು ನಾವು”ಗಿರಿರಾಜ”, ಹೇಗೆ ನೀಡಬೇಕು ಮುಟ್ಟಿನ ಲೆಕ್ಕ.
****
ಅವನ ಸೋಲು

ಅವನ ಸೋಲಿಗೆ
ನನ್ನ ನೆಲದ ಗೋಡೆ ನಗುತ್ತಿದೆ.
ಬಡತನ ಹಸಿವು
ಮುಚ್ಚಿಡಲು ಕಟ್ಟಿದ ಗೋಡೆ ಹಿಂದೆ
ಸಾವಿರಾರು ಬೆತ್ತಲೆಯ ಬದುಕು ಈಗ
ಗೋಡೆ ಕೆಡವಲು ಕಾಯುತ್ತಿವೆ.
ಜನರಿಲ್ಲದೆ ಜನ ನಾಯಕರಿಲ್ಲ.
ಬಡವರನ್ನು ಬಡವರನ್ನಾಗಿಸಿದ
ದೇಶವೂ ದೊಡ್ಡದಲ್ಲ ನೆನಪಿರಲಿ.
ಯಾರೋ ಬಿಳಿ ಚರ್ಮದವರ ಆಟಕ್ಕೆ
ಈ ನೆಲದ ಕಪ್ಪು ಮಕ್ಕಳಿಗೆ ಕರಿ ನೆರಳ ಶಿಕ್ಷೆ,
ಇದು ಯಾವ ನ್ಯಾಯ ?
ಈಗ ನೋಡಿ ಅವನ ಸೋಲಿಗೆ
ನನ್ನ ನೆಲದ ಗೋಡೆ ನಗುತ್ತಿದೆ.
ಅದಕ್ಕೆ ಜೀವ ನೊಂದು ಹೇಳಿದ್ದು.
ಪ್ರೀತಿ ಇಲ್ಲದೆ ಏನೂ ಇಲ್ಲವೆಂದು.
ಮತ್ತೊಂದು ಗೋಡೆ ಕಟ್ಟಬೇಡಿ.
ಬಡವರ ಬೆವರು ಕಣ್ಣೀರು ಎಲ್ಲವನ್ನೂ
ಕೆಡುವುತ್ತವೆ ಏಕೆಂದರೆ ನಾವು ಈ ನೆಲದ ಮಕ್ಕಳು.
- ಅಲ್ಲಾಗಿರಿರಾಜ್ ಕನಕಗಿರಿ