‘ಇದು ಮೊದಲ ರಾತ್ರಿ’ ಕವನ – ಅಲ್ಲಾಗಿರಿರಾಜ್ ಕನಕಗಿರಿ

‘ನನಗೂ ನಿನಗೂ ಇದು ಮೊದಲ ರಾತ್ರಿ….ಮುಡಿದ ಗುಲಾಬಿ ಬಣ್ಣ ಬದಲಿಸಲಿ… ಹಚ್ಚಿದ ಮದರಂಗಿ ಇನ್ನಷ್ಟು ರಂಗೇರಲಿ’…ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಡವಿ ತುಂಬ ಗೋಧೂಳಿ ಬಣ್ಣ
ದವನದ ಮಡುವಲ್ಲಿ
ಮೈ ಮಿಂದು ಬಂದವನೆ.
ಬಾ ಬಾರೋ ಸಖ.
ಕತ್ತಲೊಳಗೆ ಸಂಜೆ ಕರಗಿ.
ಹಾಸಿದ ಹಾಸಿಗೆ ತುಂಬ
ಮಲ್ಲಿಗೆಯ ಘಮ ಘಮ.

ಎರೆದ ನೀಳ ಕೂದಲು ಸುತ್ತ
ಬಿಸಿಗಾಳಿಯ ಹಾಡು ಪಾಡು.
ಬೆಳಗಿದ ದೀಪ ದಣಿವು
ಆರಿಸಿಕೊಳ್ಳಲು ಕಾಯುತಿದೆ.
ಉಸಿರಿಗೆ ಉಸಿರು ಸೇರಿದರೆ
ಗಂಧಗಾಳಿ ತೀಡಿದಂತೆ.
ನೆನಪುಗಳಿಗೆ ನೆನಪಾಗಿ ಉಳಿಯಲಿ
ಇದು ಮೊದಲ ರಾತ್ರಿ……

ಎಂಥಾ ಸಡಗರ ಸಂಭ್ರಮ
ತಲಬಾಗಿಲ ತೋರಣವಿನ್ನು ಪಳಪಳ
ಜಗುಲಿ ಮೇಲಿನ ದೇವರು
ಕೂಡಾ ನಿದ್ದೆಗೆ ಜಾರಿದಂತೆ.
ಬಿಗಿದ ಕುಪ್ಪಸದೊಳಗೆ
ಚಕ್ಕುಲಿಗಿಲಿ ಇಟ್ಟಂತೆ.
ಗಲ್ಲ ಅದರ ನಡುಕ ಮನಸಲಿ ಮನಸಿಲ್ಲ ಈಗ.
ಬಾ ಬಾರೋ “ಗಿರಿರಾಜ”
ಸೆರಗ ಗಾಳಿಗೆ ದೀಪವಾರಿತು.

ಮತ್ತೆ ಮತ್ತೆ ನೆನಪಾಗಿ ಉಳಿಯಲಿ
ನನಗೂ ನಿನಗೂ ಇದು
ಮೊದಲ ರಾತ್ರಿ….
ಮುಡಿದ ಗುಲಾಬಿ ಬಣ್ಣ ಬದಲಿಸಲಿ.
ಹಚ್ಚಿದ ಮದರಂಗಿ ಇನ್ನಷ್ಟು ರಂಗೇರಲಿ.
ಏಕೆಂದರೆ ಇದು ಮೊದಲ ರಾತ್ರಿ.

  • ಅಲ್ಲಾಗಿರಿರಾಜ್ ಕನಕಗಿರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading