ತಾವು ವರ್ಷವಿಡಿ ಕಷ್ಟಪಟ್ಟು ಬೆಳೆಸಿದ ಭತ್ತದ ಬೆಳೆಗೆ ಭಕ್ತಿ ಭಾವಗಳಿಂದ ಪೂಜೆ ಸಲ್ಲಿಸಿ, ನಿಗದಿಪಡಿಸಿದ ಸಮಯದಲ್ಲಿ ಭತ್ತದ ಪೈರನ್ನು ಕತ್ತರಿಸಿ ಅಲ್ಲಿ ಸೇರಿರುವ ಜನರ ಕೈಗಳಿಗೆ ಒಂದೊಂದು ಹಿಡಿಯಷ್ಟು ಫೈರನ್ನು ಕೊಟ್ಟು ಸಂಭ್ರಮಿಸುವ ಕೊಡಗಿನ ಹುತ್ತರಿ ಹಬ್ಬದ ಆಚರಣೆಯ ಕುರಿತು ಕೊಡಗಿನ ಕುವರ ಹೇಮಂತ್ ಪಾರೇರಾ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಳೆಗಾಲ ಮುಗಿದು ಚಳಿಗಾಲದ ಪ್ರಾರಂಭದಲ್ಲಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ವೃಶ್ಚಿಕ ಮಾಸದ ಹುಣ್ಣಿಮೆಯ ಹನ್ನೊಂದನೆಯ ದಿನದಂದು ರೋಹಿಣಿ ನಕ್ಷತ್ರದಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಹುತ್ತರಿ ಹಬ್ಬ ಕೊಡಗಿನಲ್ಲಿ ಆಚರಿಸುವ ಸಡಗರದ ಹಬ್ಬಗಳಲ್ಲಿ ಪ್ರಮುಖವಾದದ್ದು. ಭೌಗೋಳಿಕವಾಗಿ ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯು ವಿಭಿನ್ನವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಕರ್ನಾಟಕದ ಸಣ್ಣ ಜಿಲ್ಲೆ.
ಕೊಡಗು ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಫಿ ಕಿತ್ತಳೆ ಕರಿಮೆಣಸು ಬೆಳೆಗಳು ಹೆಚ್ಚಾಗಿ ಬೆಳೆಯಲ್ಪಟ್ಟರೂ, ಭತ್ತದ ಕೃಷಿಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ.

ಫೋಟೋ ಕೃಪೆ : ಪ್ರತೀಕ ಮುದ್ದಯ್ಯ
ತಮ್ಮ ಗದ್ದೆಗಳಲ್ಲಿ ಭತ್ತದ ನಾಟಿ ಕೆಲಸ ಮುಗಿದ ನಂತರದಲ್ಲಿ, ಗದ್ದೆ ಕೆಲಸಗಳಿಗೆ ಉಪಯೋಗಿಸಿದ ನೇಗಿಲು, ನೊಗಗಳನ್ನು ಶುಚಿಗೊಳಿಸಿ ತೊಳೆದಿಟ್ಟು ಅವುಗಳಿಗೆ ಪೂಜಿ ಸಲ್ಲಿಸಿ ವಿಶ್ರಾಂತಿಯನ್ನು ನೀಡುವ ಸಲುವಾಗಿ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ. ಕೈಲ್ ಮುಹೂರ್ತ ಹಬ್ಬಕ್ಕೂ , ಹುತ್ತರಿ ಹಬ್ಬಕ್ಕೂ ಭತ್ತದ ಬೆಳೆಗೂ ಸಂಬಂಧವಿದೆ.
ಗದ್ದೆಗಳಲ್ಲಿ ನಾಟಿ ಕೆಲಸಗಳು ಮುಗಿದ ನಂತರ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಿದರೆ, ಸೊಂಪಾಗಿ ಬೆಳೆದ ಭತ್ತದ ಬೆಳೆಯು ಕೈಸೇರುವ ಸಂಭ್ರಮವನ್ನು ಆಚರಿಸುವ ಹಬ್ಬವೇ ಹುತ್ತರಿ.
ಕಕ್ಕಬ್ಬೆಯಲ್ಲಿರುವ ಪಾಡಿ ಇಗ್ಗುತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಮತ್ತು ಜ್ಯೋತಿಷಿಗಳು ಹುತ್ತರಿ ಹಬ್ಬದ ದಿನವನ್ನು ಮತ್ತು ಕದಿರು ತೆಗೆಯುವ ಸಮಯವನ್ನು ನಿಗದಿ ಪಡಿಸುತ್ತಾರೆ. ಪ್ರತಿ ಗ್ರಾಮದಲ್ಲಿ ಕದಿರು ತೆಗೆಯಲು ಯಾವುದಾದರೂ ಒಂದು ಭತ್ತದ ಗದ್ದೆಯನ್ನು ಗ್ರಾಮಸ್ಥರು ಆಯ್ಕೆ ಮಾಡಿಕೊಂಡಿರುತ್ತಾರೆ. ನಂತರದಲ್ಲಿ ಊರಿನ ಪ್ರತಿ ಮನೆಯಿಂದ ಮಹಿಳೆ ಮಕ್ಕಳಾದಿಯಾಗಿ ಗ್ರಾಮದ ಮುಖ್ಯ ದೇವಾಲಯದಲ್ಲಿ ಸೇರಿಕೊಂಡು, ವಾದ್ಯ ಮೇಳಗಳೊಂದಿಗೆ ಭತ್ತದ ಗದ್ದೆಯತ್ತ ತೆರುಳುತ್ತಾರೆ.

ಫೋಟೋ ಕೃಪೆ : ಪ್ರತೀಕ ಮುದ್ದಯ್ಯ
ತಾವು ವರ್ಷವಿಡಿ ಕಷ್ಟಪಟ್ಟು ಬೆಳೆಸಿದ ಭತ್ತದ ಬೆಳೆಗೆ ಭಕ್ತಿ ಭಾವಗಳಿಂದ ಪೂಜೆ ಸಲ್ಲಿಸಿ, ನಿಗದಿಪಡಿಸಿದ ಸಮಯದಲ್ಲಿ ಭತ್ತದ ಪೈರನ್ನು ಕತ್ತರಿಸಿ ಅಲ್ಲಿ ಸೇರಿರುವ ಜನರ ಕೈಗಳಿಗೆ ಒಂದೊಂದು ಹಿಡಿಯಷ್ಟು ಫೈರನ್ನು ಕೊಡಲಾಗುತ್ತದೆ. “ಪಾಡಿ ಇಗ್ಗುತಪ್ಪನ ಪಾದಾರವಿಂದಕ್ಕೆ ಪೊಲಿ ಪೊಲಿಯೆ ಬಾ” ಎನ್ನುವ ಘೋಷಣೆಯೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
ಹಲಸು, ಮಾವು, ಕೂಳಿ ಮರದ ಎಲೆಗಳನ್ನು ಬೆಸ ಸಂಖ್ಯೆಯ ಪೈರಿಗೆ ಸುತ್ತಿ ತಡಸಿಲು ಮರದ ನಾರಿನಿಂದ ಕಟ್ಟುತ್ತಾರೆ. ನಂತರದಲ್ಲಿ ಮನೆ ಮನೆಗೆ ಕೊಂಡೊಯ್ದು ತಮ್ಮ ವಾಹನಗಳಿಗೆ, ಮನೆಯಲ್ಲಿರುವ ದೇವರ ಗುಡಿಗೆ, ಮತ್ತು ತಮಗೆ ಇಷ್ಟವಾದ ಸ್ಥಳಗಳಲ್ಲಿ ಕಟ್ಟುತ್ತಾರೆ. ಆ ದಿನ ಹೊಸ ಅಕ್ಕಿಯಲ್ಲಿ ಅನ್ನ ,ಪಾಯಸ ಮಾಡಿ ಊಟ ಮಾಡುತ್ತಾರೆ.
ದೂರದ ಊರುಗಳಲ್ಲಿ ನೆಲೆಸಿರುವ ಕೊಡಗಿನವರು ಈ ಹಬ್ಬದಲ್ಲಿ ತಪ್ಪದೇ ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಾರೆ. ತಮ್ಮ ಕುಟುಂಬದೊಂದಿಗೆ ಸೇರಿ ಹಬ್ಬದ ಸಡಗರಕ್ಕೆ ಸಾಕ್ಷಿಯಾಗುತ್ತಾರೆ. ಕದಿರು ತೆಗೆದ ಮಾರನೇ ದಿನ ಮಾಂಸ ಆಹಾರವನ್ನು ಮಾಡುವ ಪದ್ಧತಿ ಇದೆ. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಹಬ್ಬವು ಇಂದಿಗೂ ವಿಜೃಂಭಣೆಯಿಂದ ನಡೆಯಲ್ಪಡುತ್ತದೆ. ಕುಟುಂಬಗಳನ್ನು ಒಗ್ಗೂಡಿಸುತ್ತಾ, ಮನ ಮನಗಳನ್ನು ಬೆಸೆಯಲ್ಪಡುವುದರ ಜೊತೆಗೆ ಕುಟುಂಬಸ್ಥರು ಸ್ನೇಹಿತರು ಬಂಧು ಬಳಗವನ್ನು ಒಂದೆಡೆ ಸೇರಿಸಿ ಸಂಭ್ರಮಿಸುವ ಈ ಹಬ್ಬ ವಿಶೇಷವೆನಿಸುತ್ತದೆ.
ನಾಡಿನ ಸಮಸ್ತರೆಲ್ಲರಿಗೂ ಹುತ್ತರಿ ಹಬ್ಬದ ಶುಭಾಶಯಗಳು.
- ಹೇಮಂತ್ ಪಾರೇರಾ
