‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ

ಕಥೆಗಾರ್ತಿ ವಸುಮತಿ ಉಡುಪ ಅವರು ಈಗಾಗಲೇ ಕನ್ನಡ ಸಾಹಿತ್ಯಲೋಕದಲ್ಲಿ ಜನಪ್ರಿಯರಾದವರು. ಅವರ ಅನೇಕ ಕಾದಂಬರಿ ಹಾಗೂ ಸಣ್ಣ ಕತೆಗಳನ್ನು ಓದಿ ಇಷ್ಟಪಟ್ಟವಳು ನಾನು. ಇಲ್ಲಿ ಕಲ್ಪನೆಗಿಂತ ವಾಸ್ತವಕ್ಕೆ ಒತ್ತು ಕೊಟ್ಟು ಬರೆದ ಒಂಬತ್ತು ಚೆಂದದ ಕತೆಗಳು ಸೇರಿ ‘ಇದು ಕತೆಯಲ್ಲ ಜೀವನ’ ಸಂಕಲನವಾಗಿದೆ. ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ ಹೆಸರು: ಇದು ಕತೆಯಲ್ಲ ಜೀವನ.
ಲೇಖಕರು: ವಸುಮತಿ ಉಡುಪ.
ಅಂಕಿತ ಪುಸ್ತಕ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ:೨೦೨೫.
ಪುಟಗಳು: ೧೧೨.
ಬೆಲೆ: ರೂ. ೧೩೦.

ಇಳಿವಯಸ್ಸಿನಲ್ಲಿ ಎಲ್ಲರೂ ಒಂದಲ್ಲಾ ಒಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವುದನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಎಷ್ಟೋ ಹಿರಿಯರು ಅಭದ್ರತೆಯ ಆತಂಕದಲ್ಲಿ ತೊಳಲಾಡುತ್ತಾ, ದಿನದೂಡುತ್ತಿದ್ದಾರೆ. ಅಂತಹವರ ತವಕ -ತಲ್ಲಣಗಳನ್ನು ಲೇಖಕಿ ಇಲ್ಲಿ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.

  • ನಂಜು

ಅಂತಸ್ತಿನ ಸಮಾನತೆ ಇಲ್ಲದಿದ್ದರೂ ಬಾಲ್ಯದಿಂದಲೂ ಜೊತೆಯಾಗಿ ಬೆಳೆದ ಕುಮುದಾ ಮತ್ತು ಚಂಪಕ ಆತ್ಮೀಯ ಗೆಳತಿಯರು. ದೊಡ್ಡ ಜಮೀನುದಾರ ಸದಾನಂದನ ಮನೆ ಸೇರಿದ ಕುಮುದಾ ತನ್ನ ಮದುವೆಯಾದ ಎರಡು ವರ್ಷದಲ್ಲಿ ಗೆಳತಿ ಚಂಪಕಾಳಿಗೂ ತಮ್ಮ ಊರಿನಲ್ಲೇ ಗಂಡು ಹುಡುಕಿ ಕೊಟ್ಟಿದ್ದಳು. ಊರು ತಿರುಗುವ ಹುಚ್ಚಿನ ಅಷ್ಟೇನೂ ಜವಾಬ್ದಾರಿ ತೆಗೆದು ಕೊಳ್ಳದ ಗಂಡನಿಗೆ ಸ್ವಲ್ಪ ಜಮೀನಿತ್ತು. ಜೀವನಕ್ಕೇನೂ ತೊಂದರೆಯಿರಲಿಲ್ಲ.ಬಾಲ್ಯದ ಗೆಳತಿಯರು ಮತ್ತೆ ಒಂದೇ ಊರಲ್ಲಿ ಜೊತೆಯಾಗಿದ್ದರು.

ಕುಮುದಾಳಿಗೊಬ್ಬ ಮಗ ಪ್ರಸನ್ನ. ಚಂಪಕಳಿಗೂ ಒಬ್ಬಳೇ ಮಗಳು ರೇವತಿ. ಇಬ್ಬರೂ ಬೆಳೆದು ದೊಡ್ಡವರಾಗುತ್ತಾ ಬಂದಂತೆ ಅಷ್ಟು ವರ್ಷಗಳಿಂದ ನಿಕಟವರ್ತಿಯಾಗಿದ್ದ ಕುಮುದಾಳ ವರ್ತನೆಯಲ್ಲಿ ಇರುಸು ಮುರುಸು. ಅದಕ್ಕೆ ಕಾರಣ ಚಂಪಕ ಊಹಿಸಿದ್ದಳು. ಎಷ್ಟೇ ಸ್ನೇಹವಿದ್ದರೂ ಅದು ‘ಸಂಬಂಧ’ದಲ್ಲಿ ಮಾರ್ಪಾಟಾಗುವುದು ಕುಮುದಾಳಿಗೆ ಹಿತವಿಲ್ಲ ಎಂದು.

ಆದರೆ ಪ್ರಸನ್ನ ರೇವತಿಯನ್ನೇ ಮದುವೆಯಾಗುವುದಾಗಿ ಹೇಳಿದಾಗ ವಿಧಿಯಿಲ್ಲದೆ ಅವಳು ಒಪ್ಪಿ, ಮದುವೆಯೂ ವಿಜೃಂಭಣೆಯಿಂದ ನಡೆದು ಅವರೀಗ ಅಮೇರಿಕಾದಲ್ಲಿ ನೆಲೆಸಿದ್ದರು. ಅತ್ತ ಮಕ್ಕಳು ವಿದೇಶ ಸೇರುತ್ತಿದ್ದಂತೆ, ಇತ್ತ ಎಲ್ಲೋ ಸಣ್ಣ ಅಸಮಾಧಾನದ ಎಳೆ ಮೂಡಿದ್ದ ಗೆಳತಿಯರ ಸಂಬಂಧ ಮತ್ತೆ ಮೊದಲಿನ ಸ್ಥಿತಿಗೆ ಮರಳಿತು. ಚೊಚ್ಚಿಲ ಬಾಣಂತನಕ್ಕೆ ಕುಮುದಾ ಮಗನ ಮನೆಗೆ ಹೊರಟಾಗ ನಾಲ್ಕಾರು ತಿಂಗಳು ಮನೆ ಜಮೀನು ಬಿಟ್ಟು ಹೋಗಲು ಅವಳ ಗಂಡ ಸಿದ್ಧನಾಗಲಿಲ್ಲ. ಆಗಲೂ ಅವರ ಊಟ ಮನೆವಾರ್ತೆಯ ಜವಾಬ್ದಾರಿ ತಾವು ನೋಡಿ ಕೊಳ್ಳುವ ಭರವಸೆ ಕೊಟ್ಟು ಚಂಪಕ ಗೆಳತಿಯನ್ನು ವಿದೇಶಕ್ಕೆ ಕಳಿಸಿಕೊಟ್ಟು ಹೇಳಿದಂತೆ ನಡೆದು ಕೊಂಡಿದ್ದಳು.

ಆದರೆ ಅದೊಂದು ದಿನ ಸದಾನಂದನ ಬೇಡಿಕೆ ಬೇರೆಯೇ ಇತ್ತು!! ‘ ಹನಿಟ್ರ್ಯಾಪ್’ ಎನ್ನುವ ಪದಪುಂಜ ವ್ಯಾಪಕವಾಗಿದ್ದ ದಿನಗಳವು.ಹೇಗೋ ಅವರ ಮನೆಯಿಂದ ವಾಪಸು ಬಂದ ಚಂಪಕ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿ ಕೊಳ್ಳುತ್ತಾಳೆ? ಎನ್ನುವುದು ಈ ಕಥೆಯ ವಸ್ತು. ಅದನ್ನಿಲ್ಲಿ ಲೇಖಕಿ ನಿರೂಪಿಸಿ ಬರೆದ ರೀತಿ ಅತ್ಯಂತ ಪ್ರಬುದ್ಧವಾಗಿದೆ.

  • ಹೇಳಲಿಲ್ಲ ಕಾರಣ

ಇಷ್ಟು ದಿನ ಒಂದೇ ಮನೆಯಲ್ಲಿದ್ದರೂ…ತಾವು ಒಂದು ‘ಹೊಸ ಫ್ಲ್ಯಾಟ್’ ತಗೊಂಡ ವಿಷಯವನ್ನು ಹೆತ್ತವರಿಂದ ಮುಚ್ಚಿಟ್ಟ ಮಗ -ಸೊಸೆ ‘ಗೃಹ ಪ್ರವೇಶದ’ ಆಮಂತ್ರಣ ನೀಡಿದಾಗ ಅವರದು ದಂಗಾಗುವ ಸರದಿ! . ಹೀಗೇಕೆ? ಪ್ರಶ್ನಿಸಿದರೆ… ಅರ್ಜೆಂಟಾಗಿ ವ್ಯವಹಾರ ನಡೆಯಿತೆಂದು ಹಾರಿಕೆಯ ಉತ್ತರ ಬೇರೆ.!!

ವಯಸ್ಸಾದ ಮೇಲೆ ತಂದೆ- ತಾಯಿಗಳನ್ನು ನೋಡಿಕೊಳ್ಳ ಬೇಕಾದ ಮಗನೇ ಪ್ಯಾಕ್ ಮಾಡಿಕೊಂಡು ಹೊರಟಾಗ ತಾಯಿ “ಅವರು ತಮ್ಮನ್ನೂ ಅಲ್ಲೇ ಬಂದಿರಲು
ಹೇಳುತ್ತಾರೇನೋ..” ಎಂದು ಕಾದರು. ಆದರೆ ಹಾಗೇನೂ ಆಗಲಿಲ್ಲ… ಬೇರೆ ಹೋಗಲು ಕಾರಣವೇ ಬೇಕಿಲ್ಲ. ಮೊಮ್ಮಗನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅಜ್ಜಿಯ ‘ಕೆಮ್ಮಿನ ಭಯ’ ಮಗ ಸೊಸೆಗಿತ್ತೇ?…ಯಾವುದೂ ‘ನಮ್ಮದು’ ಎಂಬ ಭ್ರಮೆ ಇಟ್ಟು ಕೊಳ್ಳಬಾರದು ಎಂಬ ಗಂಡನ ಮಾತು ಅಂಬುಜಮ್ಮನ ತಲೆಗೆ ಹೋಯಿತೆ?…

  • ಐನೂರು ರೂಪಾಯಿ ನೋಟು.

ವಯಸ್ಸಾದಂತೆ ಮರೆವಿನ ಕಾಯಿಲೆಯಿಂದಲೂ ಸಾಕಷ್ಟು ಜನ ತೊಂದರೆ ಅನುಭವಿಸುವವರಿದ್ದಾರೆ. ಕಳೆದು ಹೋದ ೫೦೦ ರೂಪಾಯಿ ಬಗ್ಗೆ ಮಗಳ ಜೊತೆ ಪದೇ ಪದೇ ಹಲುಬಿ ತಲೆ ಕೆಡಿಸುವ ವಯಸ್ಸಾದ ಮುದುಕಿಯೊಬ್ಬಳ ಕಥೆ. ಏನೂ ಗಂಭೀರ ವಿಷಯವಿಲ್ಲದಿದ್ದರೂ ಚೆಂದದ ಸಂಭಾಷಣೆಯ ಮೂಲಕ ಗಮನ ಸೆಳೆಯುವಂತೆ ಲೇಖಕಿಯ ಬರವಣಿಗೆಯ ಕಥೆಯಿಲ್ಲಿದೆ.

  • ಹೊಟ್ಟೆಯೊಳಗಿನ ಗುಟ್ಟು.

ಎನ್ನುವ ಇದೇ ಪ್ರಕಾರಕ್ಕೆ ಹೋಲುವ ಇನ್ನೊಂದು ಕಥೆಯಲ್ಲಿ ವೃದ್ಧ ದಂಪತಿಗಳ ಹುಸಿ ಜಗಳ ವಿನೋದಮಯವಾಗಿದೆ. ಅವರಿಗೆ ಒಬ್ಬಳೇ ಮಗಳು. ಮದುವೆಯಾಗಿ ಸುಖವಾಗಿದ್ದಾಳೆ. ಬದುಕಲ್ಲಿ ಎಂತೆಂತಹ ಅಗ್ನಿದಿವ್ಯಗಳು ಎದುರಾಗುತ್ತವೆ ಅಂದರೆ ಕೆಲವನ್ನು ಯಾರಲ್ಲಿಯೂ ಹಂಚಿ ಕೊಳ್ಳಲೂ ಆಗುವುದಿಲ್ಲ. ಹಾಗಾದರೆ ಅವರು ಗುಟ್ಟಾಗಿಟ್ಟಿದ್ದಾದರೂ ಏನನ್ನು?…

  • ಇದು ಕತೆಯಲ್ಲ ಜೀವನ

ಇಷ್ಟ ಪಟ್ಟು ಕಷ್ಟ ಪಡುವುದು ಎಂದರೆ ಬಹುಶಃ ಇದೇನಾ?ಇಳಿವಯಸ್ಸಿನಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತಾ ಸಂಭ್ರಮ ಪಡುವುದು ಸುಖವೇ?… ಆದರೆ ಸಂಧ್ಯಾ ತನ್ನ ಕೆಲಸಕ್ಕೆ ಹೋಗುವ ಮಗಳಿಗೆ ಸಹಾಯವಾಗಲೆಂದು ಮೊಮ್ಮಗುವಿನ ಜವಾಬ್ದಾರಿಯನ್ನು ಹೊತ್ತು ಕೊಂಡಳು. ಆಗವಳು ಅನುಭವಿಸಿದ ಪಾಡು ಅವಳಿಗಷ್ಟೇ ಗೊತ್ತು. ಅಷ್ಟಾದರೂ ಟಿ.ವಿ -ಫೋನ್ ನೋಡುವ ಮೊಮ್ಮಗನ ಸಲುವಾಗಿ ಕೆಲವೊಮ್ಮೆ ಮಗಳು ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭಗಳೂ ಇತ್ತು.ವರ್ಗಾವಣೆಯಾಗಿ ದೆಹಲಿಗೆ ಹೊರಟ ಮಗಳು ಶಾಲೆಗೆ ಹಾಕಬೇಕೆಂದು ಮೊಮ್ಮಗನನ್ನೂ ಕರೆದುಕೊಂಡು ಹೊರಟಾಗ ಸಂಧ್ಯಾ ಕಣ್ಣೀರಿಟ್ಟಿದ್ದೇಕೆ?. ಮೊಮ್ಮಕ್ಕಳು ಇರುವ ಅಜ್ಜಿಯರ ಮನಕ್ಕೆ ನಾಟುವ ಕಥೆಯನ್ನು ಓದುವಾಗ ನಿಜವೇ ಎನಿಸುತ್ತದೆ .

  • ನೀಲದ ಉಂಗುರ.

ನಗರಗಳಲ್ಲಿ ಉದ್ಯೋಗ ಮಾಡುವ ಹೆಂಗಸರು ಮನೆ ಕೆಲಸಕ್ಕೆ ಕೆಲಸದವಳನ್ನು ಅದೆಷ್ಟು ಅವಲಂಬಿಸಿರುತ್ತಾರೆ ಎಂದರೆ..ಅವರೇನು ಮಾಡಿದರೂ ಸುಮ್ಮನಿರುತ್ತಾರೆ.
ಇದರ ಲಾಭ ಪಡೆದ ಕೆಲಸದಾಕೆ ಮಾಡಿದ ದ್ರೋಹವೇನು? ಎಂಬುದನ್ನು ಓದಿಯೇ ತಿಳಿಯಬೇಕು. ಮನೆಯ ಯಜಮಾನಿಯಾದವಳಿಗೆ ಒಂದು ಎಚ್ಚರಿಕೆಯ ಪಾಠವೂ ಇಲ್ಲಿದೆ.

  • ಸ್ವೀಕೃತಿ.

ಮಕ್ಕಳಿಲ್ಲದ ದಂಪತಿಗಳ ಆಸ್ತಿಯ ಮೇಲೆ ಬಂಧುಗಳಿಗೆ ಕಣ್ಣಿತ್ತು. ಇದನ್ನು ತಿಳಿದ ಆ ವೃದ್ಧರು ತಮ್ಮ ಆಸ್ತಿಗೆ ವಾರಸುದಾರರನ್ನಾಗಿ ಸ್ವೀಕರಿಸಿದ್ದು ಯಾರನ್ನು? ಆ ಮಗು ಯಾರದ್ದು?
ಬಹಳ ಕುತೂಹಲಕಾರಿಯಾದ ಕಥೆ.

  • ಕಾದಿರುವಳು ಶಬರಿ.

ದೇವಸ್ಥಾನಕ್ಕೆ ಹೋಗೋಣವೆಂದು ನಂಬಿಸಿ ವೃದ್ಧಾಶ್ರಮಕ್ಕೆ ಕರೆ ತಂದು ಬಿಟ್ಟು ಹೋದ ಮಗ.. ಇಂದಲ್ಲಾ ನಾಳೆ ಬಂದು ತನ್ನ ಕರೆದೊಯ್ಯುತ್ತಾನೆ ಎಂದು, ಶಬರಿಯಂತೆ ಕಾಯುವ ಮುದುಕಿಯ ಬಗ್ಗೆ ಮರುಕವಾಗುತ್ತದೆ. ಎಷ್ಟು ಸ್ವಾರ್ಥ ಮಕ್ಕಳು! ದ್ವಿಚಕ್ರ ವಾಹನದಲ್ಲಿ ಕುಳಿತ ಅಜ್ಜಿಯ ಭಯವಂತೂ ಇಲ್ಲಿ ಓದುವಾಗ ನಮ್ಮಜ್ಜಿಯ ನೆನಪಾಗಿ ನಕ್ಕೂ ನಕ್ಕು ಸಾಕಾಯಿತು.

ಇಲ್ಲಿನ ಎಲ್ಲಾ ಕಥೆಗಳು ಸಮ್ಮಿಶ್ರ ಭಾವಗಳನ್ನು ನಮ್ಮಲ್ಲಿ ತುಂಬುತ್ತವೆ. ಕಾಣದ ಮುಂದಿನ ವೃದ್ದಾಪ್ಯದ ಭವಿಷ್ಯದ ಬಗ್ಗೆ ಚಿಂತನೆಗೆ ಒರೆ ಹಚ್ಚುತ್ತವೆ.ಆಡಂಬರದ ಅಬ್ಬರವಿಲ್ಲದ ಮನಮುಟ್ಟುವ ಕಥನಗಾರಿಕೆ ಇವರದು. ಇದು ‘ಕಥೆಯಲ್ಲ ಜೀವನ’ ಸತ್ಯವೆನೋ ಎಂಬಷ್ಟು ಆಪ್ತ ಭಾವ ತುಂಬುವುದು.
ಚೆಂದದ ಮತ್ತಷ್ಟು ಕಥೆಗಳಿಗಾಗಿ ಪುಸ್ತಕ ಓದಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW