ಇಂದಿನ ಪ್ರಸಿದ್ಧ ಮನಃಶಾಸ್ತ್ರಜ್ಞರಲ್ಲಿ ಒಬ್ಬರಾದ ಮಲ್ಲಪ್ಪ ಬಸವಣ್ಣ ಅವರ ಆತ್ಮ ಚರಿತ್ರೆಯೇ ಇದು ನಾನು.ಎಂ.ಬಸವಣ್ಣ ಕೃತಿ. ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಚಾಮರಾಜನಗರ ಮೂಲದ ಇವರ ಶಿಕ್ಷಣ, ಅವರು ನಗರ ಎಂದು ಕರೆಯುವ ಚಾಮರಾಜನಗರದಲ್ಲಿ, ಪ್ರೌಢ ಶಿಕ್ಷಣ ಮೈಸೂರಿನ ಪ್ರಸಿದ್ಧ ಮಹಾರಾಜ ಕಾಲೇಜಿನಲ್ಲಿ, ಹಾಗೂ ಉನ್ನತ ಅಧ್ಯಯನ ಮುಂದೆ ಅವರು ಅಧ್ಯಾಪಕರಾಗಿ ಸೇರಿದ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಪಡೆದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರ ಇಡೀ ಶಿಕ್ಷಣ , ಅವರಿಗೆ ದೊರೆತ ವಿದ್ಯಾರ್ಥಿ ವೇತನದಲ್ಲಿ ನಡೆಯಿತು.
ಮೈಸೂರು ಆಕಾಶವಾಣಿಗೆ ಕಾರಣಕರ್ತರಾದ ಮಹಾರಾಜಾ ಕಾಲೇಜಿನ ಪ್ರಾಂಶುಪಾಲ ಎಂ. ವಿ.ಗೋಪಾಲ ಸ್ವಾಮಿ ಇವರ ಬದುಕಿನ ತಿರುವಿಗೆ ಕಾರಣಕರ್ತರು. ಅವರೇ ಕರೆದು ಆಗತಾನೆ ಅವರು ಪ್ರಾರಂಭಿಸಿದ ಮನಃಶಾಸ್ತ್ರದ ಅಧ್ಯಯನಕ್ಕೆ ಇವರಿಗೆ ಪ್ರವೇಶ ದೊರಕಿಸಿಕೊಟ್ಟರು. ಮುಂದಿನ ಉನ್ನತ ಅಧ್ಯಯನಕ್ಕೆ ಪ್ರೇರಣೆ ನೀಡಿದವರು ಅಲ್ಲಿನ ಪ್ರಾಧ್ಯಾಪಕರಾಗಿದ್ದ ಡಾ.ಕುಪ್ಪುಸ್ವಾಮಿ.ಅವರೇ ತಿರುಪತಿ ವೆಂಕಟೇಶ್ವರ ವಿಶ್ವ ವಿದ್ಯಾಲಯದಲ್ಲಿ, ಇವರನ್ನು ಅಧ್ಯಾಪಕರಾಗಿ ಆಯ್ಕೆ ಮಾಡಿದರು.( ನಾನು ಅಲ್ಲಿಗೆ ಒಮ್ಮೆ ಸಂಶೋಧನಾ ಸಹಾಯಕನಾಗಲು ಹಾಜರಾಗಿದ್ದ ನೆನಪು ಮರುಕಳಿಸಿತು)

ಮುಂದಿನ ಮೂರೂವರೆ ದಶಕಗಳ ಕಾಲ, ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಭಾಗದ ಸ್ಥಾಪನೆಗೆ, ಬೆಳವಣಿಗೆಗೆ ಭದ್ರವಾದ ಬುನಾದಿಯನ್ನು ಹಾಕಿದರು. ವಿದ್ಯಾರ್ಥಿಗಳ, ಅಧ್ಯಾಪಕರ ಪ್ರೀತಿಗೆ ಗೌರವಕ್ಕೆ ಪಾತ್ರರಾದರು. ಇದಕ್ಕೆ ಕಾರಣ ಇವರು ಪಾಠ ಮಾಡುವ ವಿಧಾನ.
ವಿವಾಹಿತರಾಗಿ ಅಲ್ಲಿಗೆ ಹೋದ ಇವರು ಐದು ಮಕ್ಕಳನ್ನು ಪಡೆದು, ಅದರಲ್ಲಿ ಇಬ್ಬರನ್ನು ಕಳೆದುಕೊಂಡು ,ಪುತ್ರ ಶೋಕವನ್ನು ಅನುಭವಿಸಿ, ಉಳಿದ ಮೂವರು ಮಕ್ಕಳು ಇಂದು ಅವರವರ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ.
ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಈಚೆಗೆ ಕೊರೊನಾದಿಂದಾಗಿ ತಮ್ಮ ಸಂಗಾತಿಯನ್ನು ಕಳೆದುಕೊಂಡ ಇವರು, ಏಕಾಂಗಿಯಾಗಿ ತಮ್ಮ ತೊಂಭತ್ತರೆಡರ ಹರೆಯದಲ್ಲಿ ಕೂಡ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವರು. ದೇಶ ವಿದೇಶಗಳಲ್ಲಿ ನೆಲೆಸಿರುವ ಇವರ ವಿದ್ಯಾರ್ಥಿಗಳು, ಆಗಾಗ ಬಂದು ಇವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತಾರೆ. ಬೆಂಗಳೂರು ಕರ್ನಾಟಕ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶ ವಿದೇಶಗಳ ವಿಚಾರ ಸಂಕಿರಣಗಳಲ್ಲಿ ಭಾಷಣಕಾರರಾಗಿ, ಉದ್ಘಾಟಕರಾಗಿ, ಭಾಗವಹಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮನಃಶಾಸ್ತ್ರ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಈಡಿಪಸ್ ಕಾಂಪ್ಲೆಕ್ಸ್, ಸೈಕಲಾಜಿಕಲ್ ಕಾಂಪ್ಲೆಕ್ಸ್ ಗಳು, ಸಿಗ್ಮಂಡ್ ಫ್ರಾಯ್ಡ್ ಕುರಿತ ಪುಸ್ತಕಗಳು ಹೆಚ್ಚು ಜನಪ್ರಿಯವಾಗಿ ಮರುಮುದ್ರಣ ಕಂಡಿವೆ. ತಮ್ಮ ಅಭ್ಯುದಯಕ್ಕೆ ಕಾರಣಕರ್ತರಾದ ಪ್ರಾಧ್ಯಾಪಕರನ್ನು, ಡಾ.ಸಿ.ಡಿ.ಎನ್. ಗೋಪಾಲ ಸ್ವಾಮಿ, ಕುಪ್ಪುಸ್ವಾಮಿ ತಮ್ಮ ಪ್ರೀತಿಗೆ ಪಾತ್ರರಾದ ವಿದ್ಯಾರ್ಥಿಗಳನ್ನು ನೆನಪು ಮಾಡಿಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.


ಅವರ ಪ್ರಕಾರ, ಯಾರೂ ನಿಜವಾದ ಆತ್ಮಕಥೆಯನ್ನು ಬರೆಯುವುದಿಲ್ಲ. ಅವರನ್ನು ಸಮಾಜ ಹೇಗೆ ಗ್ರಹಿಸಬೇಕು ,ಎಂಬ ತಮ್ಮ ಅಪೇಕ್ಷೆಯಂತೆ ಮಾತ್ರ ಬರೆಯುತ್ತಾರೆ. ಆದ್ದರಿಂದ ತಮ್ಮ ಈ ಕೃತಿ ಕೂಡ ಅದಕ್ಕೆ ಹೊರತಲ್ಲ, ಎಂದು ಕೃತಿಯ ಪ್ರಾರಂಭದಲ್ಲೆ ಸ್ಪಷ್ಟಪಡಿಸಿದ್ದಾರೆ.ಇದು ಅವರ ಪ್ರಾಮಾಣಿಕತೆಯ ದ್ಯೋತಕವಾಗಿದೆ. ಅವರ ಬಹುತೇಕ ಕನ್ನಡ ಕೃತಿಗಳನ್ನು ಪ್ರಕಟಿಸಿರುವ ಅಭಿನವದವರೇ ಇದನ್ನು ಕೂಡ ಪ್ರಕಟಿಸಿದ್ದಾರೆ. ಅವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಇದನ್ನು ಕಳಿಸಿಕೊಟ್ಟ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
- ರಘುನಾಥ್ ಕೃಷ್ಣಮಾಚಾರ್
