‘ಈಗಿಲ್ಲಿ ಎಲ್ಲವೂ ಮೆಸ್ಸಿ’ ಕೃತಿಯ ಕುರಿತು…

ಕವಿಯತ್ರಿ, ಲೇಖಕಿ ಎಂ ಆರ್ ಕಮಲಾ ಅವರ ‘ಈಗಿಲ್ಲಿ ಎಲ್ಲವೂ ಮೆಸ್ಸಿ’ ಕೃತಿ ಹಾಗೂ ಲೇಖಕಿಯ ಕುರಿತು ಲೇಖಕಿ ಸುಚೇತಾ ಪೈ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಈಗಿಲ್ಲಿ ಎಲ್ಲವೂ ಮೆಸ್ಸಿ
ಲೇಖಕರು : ಎಂ ಆರ್ ಕಮಲಾ
ಪ್ರಕಾಶನ : ಬಹುರೂಪಿ ಪ್ರಕಾಶನ
ಬೆಲೆ : ೧೫೦ ರೂಪಾಯಿ

ನಾನು ಕಮಲ ಮೇಡಂ ಅವರನ್ನ ಭೇಟಿ ಮಾಡಿದೆ. ಹಿಂದೆ ನೀರಿನ ಕೊಳ, ಮೇಲೆ ಶುಭ್ರ ನೀಲಿ ಆಕಾಶ, ಸುತ್ತ ಜನ ಅತ್ತಿಂದ ಇತ್ತ, ಇತ್ತಿಂದ ಆತ್ತ.. ಬಿರುನಡಿಗೆಯಲ್ಲಿ… ದೂರದಲ್ಲಿ ಸೂರ್ಯ ಓಡಿ ಹೋಗುವ ತಯ್ಯಾರಿಯಲ್ಲಿದ್ದ. ನೀರಿನಲ್ಲಿ ಬಾತುಗಳು. ಮೇಲೆ ಚಿಗುರೊಡೆಯಲು ಕಾಯುತ್ತಿದ್ದ ಹಸಿರು… ಹಕ್ಕಿಗಳ ಕಲರವ.. ಆದರೆ ಇದಾವುದೂ ಕವಿತೆಯಾಗಲಿಲ್ಲ.

ಮೇಡಂ ಮಾತ್ರ ಬೊಗಸೆಯಲ್ಲಿ ಏನೋ ಹಿಡಿದಿದ್ದಾರೆ. ಮರದಿಂದ ಪದಗಳು ಉರುಳುತ್ತ ಅದೆಷ್ಟೋ ರೂಪ ತಾಳಿದವು. ಸೂರಾದವು, ಹಾಡಾದವು, ಗಾಳಿಯಾದವು, ಪಾದವೇ ಇಲ್ಲದೆ ನಡೆದವು. ‘ ಅವುಗಳನ್ನು ಹಿಂತೆಗೆದು ಅಂಟಿಸಲಾಗುವುದಿಲ್ಲ’ ಮೇಡಂ ಹೇಳಿದರು. ಅವರ ಬಣ್ಣ ಬಣ್ಣದ ಕಾಗದಗಳ ಬಾಲಂಗೋಚಿ ದಾರ ಕಳಚಿ ಹಾರಿ ಹೋಗಿದೆಯಂತೆ. ಹುಡುಕಿಕೊಡಲು ಹೇಳಿ ಆಮೇಲೆ ಮತ್ತೆ ಹುಡುಕಬೇಡಿ ಎಂದು ಮತ್ತೆ ಬಣ್ಣದ ಬಾಲಂಗೋಚಿ ಕಟ್ಟುತ್ತಿದ್ದಾರೆ. ( ಇದು ದಿನವೂ ಮೊಗ ಹೊತ್ತಿಗೆಯಲ್ಲಿ ಹಾರುವುದನ್ನು ನಾವು ನೋಡುತ್ತಿದ್ದೇವೆ..)
ಅವರು ಕೈ ಹಿಡಿದು ತಮ್ಮ ತಾಯಿಯ ಮನೆಗೆ ಕರೆದುಕೊಂಡು ಹೋದರು. ಅಭಿಜಿತ್ ರ ಸಿನಿಮಾ ನೆನೆಸುವಂತಹ ಮನೆಯಿಂದ ಯಾರೋ ಬೆಳಕನ್ನೇ ಹೊತ್ತೊಯ್ದು ಬಿಟ್ಟಿದ್ದರು. ಆ ಬೆಚ್ಚಗಿನ ಕೋಣೆಯಲ್ಲಿ ಪಕ್ಕದಲ್ಲೇ ನಿಂತು ಹೇಳಿದರು ‘ ಎದೆಯಲ್ಲಿ ಹುಟ್ಟಿದ ಒಂದು ಪದವನ್ನು ಹಾರಿಬಿಡುವ ಮುನ್ನ ತಡೆಯಿರಿ’. ಅವರದೇ ಕವಿತೆ ಚಹದಲ್ಲಿ ಕುದ್ದು, ಬಣ್ಣ ಕಳೆದುಕೊಂಡು, ಎಲ್ಲೆಲೂ ಹರಿದು, ಒಣಗಿ, ಕಡೆಗೆ ಅನ್ನದ ಹಬೆಯಾಗಿ ಕಣ್ಮರೆಯಾಯಿತಂತೆ. ಅವರು ಒಬ್ಬರೇ ಕುಳಿತಿದ್ದಾಗ ಅದು ನೊಣದಂತೆ ಮುತ್ತುತ್ತದಂತೆ.ಮತ್ತೆ ಮತ್ತೆ ಆ ಅನುಭವ ಹೇಳಿಕೊಂಡರು.

ಇನ್ನು ಅವರು ದೂರದಿಂದ ಪ್ರಶ್ನೆ ಕೇಳುತ್ತಿದ್ದವರನ್ನು ತೋರಿಸಿ ನನ್ನ ಕೈಗೆ ಪುಸ್ತಕ ಕೊಟ್ಟರು. ‘ ನಿನ್ನೊಳಗೆ ಕಾರ್ಮೋಡ ಕವಿಯುವುದಿಲ್ಲವೇ, ನಿನ್ನೊಳಗೆ ಕಹಿಯೇ ಇಲ್ಲವೇ,?’ ಎಂದು ಕೇಳಿದವರಿಗೆ ಮೇಡಂ ಉತ್ತರವಾಗಿ ಮೈ ತುಂಬಾ ಹೊದ್ದ ಪದಗುಚ್ಛಗಳನ್ನು ಇಳಿಬಿಟ್ಟು ನಿಂತ ಬಳ್ಳಿಗಳನ್ನೂ, ಕವಿತೆಯೇ ನದಿಯಾಗಿ ಹರಿಯುವುದನ್ನು, ಭಾವನೆಗಳೆಲ್ಲ ಅಕ್ಷರವಾಗಿ, ಪದಗಳಾಗಿ, ತಾವೇ ಕವಿಗಳಾಗಿ ನಿಂತು ಬೆಟ್ಟವಾದದ್ದನ್ನು ತೋರಿಸಿದರು.

ಅಲ್ಲಿಂದ ಅವರ ಮನೆಯ ರಸ್ತೆ ಬೀದಿಗೆ ನಡೆದೆವು. ಅಲ್ಲಿದ್ದ ನಾಯಿಗಳ ಬಗ್ಗೆ ಹೇಳಿದರು ( ಕಾಳ ಕೂಡಾ ಇನ್ನೂ ನೆನಪಿನಲ್ಲಿದ್ದಾನೆ). ಎತ್ತ ನೋಡಿದರೂ ಅವರಿಗೆ ಕಾಣುವುದು, ಕೇಳಿಸುವುದು, ಭಾವನೆಗಳು, ಮಾತುಗಳು ಎಲ್ಲವೂ ಕವಿತೆಯೇ. ಗಿಡದೊಂದಿಗೆ, ಮರದೊಂದಿಗೆ, ನೀರಿನೊಂದಿಗೆ, ಆಗಸದ ಚುಕ್ಕಿಗಳೊಂದಿಗೆ ಮಾತನಾಡುತ್ತಾ ಬೆಳೆದವರಿಗೆ ಎಲ್ಲಿ ನೋಡಿದರೂ ಅವೇ ಕಾಣಿಸುತ್ತವೆ. ಅವರೇ ನನಗೆ ತೋರಿಸಿದರು ಮಗುವಿನ ಅಂಗಳದಲ್ಲಿ ರುವ ಮಲ್ಲಿಗೆಯ ಬಳ್ಳಿ ಮನುಷ್ಯರಂತೆ ಮಾತನಾಡುವುದನ್ನು.. ಶಿಶಿರ ಎಲೆ ಉದುರಿಸುತ್ತಿರುವುದನ್ನು, ವಸಂತ ಚಿಗುರುತ್ತಿರುವುದನ್ನು, ಅಷ್ಟರಲ್ಲಿ ಅಕಾಲ ಮಳೆ ಯಾಗಬೇಕೆ?. ಮೇಡಂ ಕಡೆ ತಿರುಗಿ ನೋಡಿದರೆ ವೃದ್ಧರಂತೆ ಬದುಕುತ್ತಿರುವ ಯೌವ್ವನಿಗರ ಮಧ್ಯೆ ಅವ್ರು ಸರ್ವಋತು ಬಂದರಾಗಿ ಕುಳಿತುಬಿಟ್ಟಿದ್ದಾರೆ.

ಹೂ ಗಿಡಗಳ ನಡುವೆ ನಿಂತು ನಗುವಿನೊಂದಿಗೆ ಕವಿತೆ ಬೆಸೆದು ದಿನವೂ ಗಾಳಿಗೆ ಸೇರಿಸುತ್ತಾರಂತೆ.. ಅವು ನಕ್ಷತ್ರ ಹೊಳೆಸುತ್ತವೆ, ಹೂ ಅರಳಿಸುತ್ತವೆ, ಬಳ್ಳಿ ತೂಗಿಸುತ್ತವೆ.. ಅವೆಲ್ಲವೂ ಬಂದು ಫೇಸ್ಬುಕ್ ನಲ್ಲಿ ಕೂತಾಗ ನೀವೆಲ್ಲ ಮೇಡಂ ಅವರನ್ನು ಕೇಳುತ್ತೀರಿ ‘ನೀನೇಕೆ ನಗುವ ಚಿತ್ರಗಳನ್ನು ಹಾಕುತ್ತೀಯ? ಬಣ್ಣ ಬಣ್ಣವನ್ನೇ ಹಾಕುತ್ತೀಯ?ನರ್ತನದ ರೀಲು ಹಾಕುತ್ತೀಯ? ತಿಂಡಿಗಳನ್ನು ಪ್ರದರ್ಶಿಸುತ್ತೀಯ? ಕಲಾವಿದೆಯೆಂದು ಹೇಳಿಕೊಳುತ್ತೀಯಾ.?…ಯಾಕೆ ಯಾಕೆ ಸಂಭ್ರಮಿಸುತ್ತೀಯ.. ಅವರಿಗೆಲ್ಲ ಮೇಡಂದು ಒಂದೇ ರೀತಿಯ ಉತ್ತರ- ‘ಎಲ್ಲಾ ಹೆಣ್ಣುಗಳ ಹುಟ್ಟು ‘ ಹಬ್ಬ ‘ ವಾಗುವವರೆಗೂ ಸಂಭ್ರಮಿಸುತ್ತೇನೆ’.

ಅವರೊಂದಿಗೆ ಹೀಗೇ ಮಾತನಾಡುತ್ತ ಸುಸ್ತಾದ ಅವರ ಮನೆಯ ಬೀದಿ ನೋಡುತ್ತಾ ಇದ್ದೆ. ಕೈ ಹಿಡಿದು ಬಾ ಎಂದು ತಮ್ಮ ಕೋಣೆಯಲ್ಲಿ ಕೂಡಿಸಿಕೊಂಡು ಬರೆಯಲಾರಂಭಿಸಿದರು. ಬರೆಯಲು ಪೆನ್ನು ಕೊಡವಿದಾಗ ಅಕ್ಷರಗಳು ಚಿತ್ತಾರಗೊಂಡು ಕತ್ತಲಿಗೆ ಮುತ್ತಿಕ್ಕಿ ವಿದಾಯ ಹೇಳಿದವು. ಅವು ನಿಮ್ಮ ಮನೆ, ಮನದ ಬಾಗಿಲು ತಟ್ಟಿದರೆ ನಿಮಗೇ ಗೊತ್ತಾಗುತ್ತದೆ ಯಾಕೆ ‘ಇಲ್ಲಿ ಎಲ್ಲವೂ ಮೆಸ್ಸಿ..’…

ಹೀಗೇ ನೀವೂ ಕೂಡ ಮೇಡಂ ಅವರನ್ನು ಭೇಟಿ ಮಾಡಬಹುದು..
Madam I finished reading and experiencing your poetry… I have read all your earlier poetry and felt this was far more poetic and richer in the tapestry of imagery……… One can simply immerse oneself in it and see the world through a beautiful lens of positivity, hope, affirmation and celebration.


  • ಸುಚೇತಾ ಪೈ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW