ವಿಶ್ವ ಮಾತೃಭಾಷಾ ದಿನ : ಶಿವದೇವಿ ಅವನೀಶಚಂದ್ರ

ಪ್ರಪಂಚಾದ್ಯಂತ ಫೆಬ್ರವರಿ ೨೧ ರಂದು ವಿಶ್ವ ಮಾತೃ ಭಾಷೆ ದಿವಸವಾಗಿ ಆಚರಿಸಲಾಗುತ್ತಿದೆ. ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆಯನ್ನು ಮಾಡಲಾಗುತ್ತಿದೆ. ಈ ವಿಶೇಷ ದಿನದ ಕುರಿತು ಕೊಡಗಿನ ಲೇಖಕರಾದ ಶಿವದೇವಿ ಅವನೀಶಚಂದ್ರ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

“ಅಮ್ಮಾ….” ಎದೆಯ ಖುಷಿಯೆಲ್ಲ ಪ್ರಾಣವಾಗಿ ತುಂಬಿ ಎರಕಗೊಂಡ ಪ್ರೀತಿಯ ಕರೆ ಇದಕ್ಕೆ ಸಾಟಿ ಎಲ್ಲಿದೆ ?, ಧನಕನಕ, ಅಷ್ಟೈಶ್ವರ್ಯ ಸುರಿದರೂ ಬೆಲೆ ಕೊಟ್ಟು ಕೊಳ್ಳಲಾಗದ ಈ ಬಾಳಿಗೆ ಇದು ಅನುಪಮ ಅಮೃತತ್ವ ನೀಡುವ ಜೀವ ಸುಗ್ಗಿ…ವಾತ್ಸಲ್ಯದ ಹುಗ್ಗಿ…
*
ನೂರು ಸಂಬಂಧಗಳಿರಲಿ ನೋವಾದಾಗ ಮೊದಲು ನಾಲಿಗೆಗೆ ಬರುವ ಕರೆ..ಮೊದಲು ಅಮ್ಮಾ… ಖುಷಿಯ ಬುಗ್ಗೆ ಗಗನಕೇರಿದಾಗ ಬಳಿ ಸಾರುವುದು ಆ ಆಕಾಶಬಿತ್ತರದ ಹೃದಯ ಸಂಪನ್ನೆ ಅಮ್ಮನಲ್ಲಿಗೆ ಬಿಂಬ ಪ್ರತಿಬಿಂಬದಂತೆ ಈ ವಾತ್ಸಲ್ಯ ಪ್ರತಿಫಲಿಸುತ್ತಾ ಬಾಳಿನ ಹಂದರದ ಮೇಲೆ ದಾಂಗುಡಿಯಿಟ್ಟು ಹೂ ಹಣ್ಣುಗಳ ಫಲ ನೀಡಿ ಸಂಪನ್ನವಾಗುವುದು ಮಾತೆಯ ಮಡಿಲಲ್ಲಿ ಸವಿದ ಈ ಅಮೃತತ್ವದಿಂದ.

ಅಮ್ಮನ ಮಡಿಲಲ್ಲಿ ಬೆಳೆಯುತ್ತಾ ಮೊದಲು ಕಲಿಯುವ ತೊದಲು ಮಾತೃಭಾಷೆ.ಅವಳ ತುಟಿಯುಲಿದ ಒಂದೊಂದು ಪದವೂ ಮುತ್ತಾಗಿ ಬಾಲರೆದೆಯಲ್ಲಿ ನುಡಿದೀಪ ಹಚ್ಚುವುದು ಇದೇ ಕರೆಯಿಂದ. ಅದು ಜಗಬೆಳಗುವುದೂ ಇವಳು ಅದರ ಮೂಲಕ ಪ್ರಪಂಚವನ್ನು ಪರಿಚಯಿಸಿದ ರೀತಿಯಿಂದ.

ಮಾತೃಭಾಷೆ ಜೀವಭಾಷೆ. ಕಲಿಕೆಗೆ ಇನಿತೂ ತೊಡಕಾಗದ ಭಾಷೆ. ಬಂಧುಗಳ, ಗೆಳೆಯರ ಪರಿಸರವನ್ನು ,ಬದುಕನ್ನು ಪರಿಚಯಿಸುವ ಆಪ್ತ ಭಾಷೆ.

“ಸುಲಿದ ಬಾಳೆಯ ಹಣ್ಣಿನಂದದಿ
ಅಳಿದ ಉಷ್ಣದ ಹಾಲಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ”

ನಿತ್ಯವೂ ಲಲಿತವಾಗಿಹ ಭಾಷೆ
*
“ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು”
*

“ಕನ್ನಡದ ಪುಲ್ಲೆನಗೆ ಪರಮಪಾವನ ತುಳಸಿ”

ಇಂತಹ ಉಪಾಸನಾ ಭಾವವನ್ನು ಉದ್ದೀಪಿಸುವ ಸವಿಚಪ್ಪರಿಕೆಯನ್ನು ಉಂಟುಮಾಡುವ ಅಮೃತಮಯ ಭಾಷೆ. ಮಾತೃಭಾಷೆ. ಅದು ನಮ್ಮ ಕನ್ನಡ. ಅವರವರಿಗೆ ಅವರವರ ಮಾತೃಭಾಷೆಯೇ ಸ್ವರ್ಗದೇರು. ಅಲ್ಲಿಂದಲೇ ಕೈಚಾಚಿ ಇತರ ಭಾಷೆಗಳ ಅರಿವನ್ನು ಹೊಂದುವ ಏಣಿ. ಅದಕ್ಕೇ ವಿಶ್ವಕವಿ ರವೀಂದ್ರನಾಥ ಠಾಗೋರರು, ಮಹಾತ್ಮಾಗಾಂಧೀಜಿ, ಕವಿ ವಿಶ್ವಮಾನವಕುವೆಂಪು ಮುಂತಾದ ಕೋವಿದರು ಮಕ್ಕಳಿಗೆ ಆರಂಭಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕೆಂದು ಕರೆಕೊಟ್ಟರು.ಮಕ್ಕಳನ್ನು ಸ್ವಯಂಸಿದ್ಧಗೊಳಿಸುವ ಬೀಜಗಳು ಇವು.ಇವುಗಳ ಬಿತ್ತನೆ ಯಿಂದ ಅರಿವಿನ ಫಸಲು ವಿಶ್ವವ್ಯಾಪಕವಾಗುತ್ತದೆ.ತನ್ನ ಅಭಿವ್ಯಕ್ತಿಗೆ ಒಂದು ವಿಶಿಷ್ಟ ಆಯಾಮವನ್ನು ಕಂಡುಕೊಳ್ಳುವ ವೇದಿಕೆಯಾಗುತ್ತದೆ.

‘ಅಮ್ಮಾ’… ಕರೆಯ ಲಾಲಿತ್ಯದಂತೆ ನಾವಾಡುವ ಮಾತೃಭಾಷೆ ವ್ಯಕ್ತಿಯ ಬಾಳನ್ನು ಸಂಪನ್ನಗೊಳಿಸಲಿ .ಆ ನುಡಿದೇವಿಯ ಗುಡಿಯಲ್ಲಿ ನಿತ್ಯಾರ್ಚನೆಗೈಯುವ ಸಂಪನ್ನತೆಯನ್ನು ದಯಪಾಲಿಸಲಿ ಎಂದು ಆಶಿಸುವೆ.
*
ವಿಶ್ವ ಮಾತೃಭಾಷಾ ದಿನದ ಉದ್ದೇಶ ಪ್ರತಿ ಮಾನವನ ಹೃದಯವನ್ನೂ ತಟ್ಟಲಿ ಎಂದು ಹಾರೈಸುವೆ.


  •  ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಅಂಕಣಕಾರ್ತಿ, ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading