ಆಲಾಹಳ ಹೆಣ್ಣುಮಕ್ಕಳು ಕೃತಿ ಪರಿಚಯ

ಲೇಖಕಿ ಹಾಗೂ ಅನುವಾದಕರಾದ ಪ್ರೊ.ಡಾ.ಪಾರ್ವತಿ ಜಿ. ಐತಾಳ್ ಅವರು ಪಂಚಭಾಷೆ ಬಲ್ಲವರು. ಅವರು ೩೫ ಕ್ಕಿಂತ ಅಧಿಕ ಅನುವಾದಿತ ಕೃತಿಗಳನ್ನು ಹಾಗೂ ಸ್ವತಂತ್ರವಾಗಿ ಕೆಲವು ಕಥಾ / ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಅನುವಾದಿತ ಕೃತಿ ‘ಆಲಾಹಳ ಹೆಣ್ಣುಮಕ್ಕಳು’ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಆಲಾಹಳ ಹೆಣ್ಣುಮಕ್ಕಳು
ಮೂಲ ಲೇಖಕರು: ಸಾರಾ ಜೋಸೆಫ್.
ಕನ್ನಡಕ್ಕೆ ಅನುವಾದ: ಡಾ. ಪಾರ್ವತಿ ಜಿ ಐತಾಳ್.
ನವ ಕರ್ನಾಟಕ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦0೯.
ಪುಟಗಳು: ೧೬೦.
ಬೆಲೆ: ರೂ. ೧೦೦.

ನಮ್ಮ ಬಳಗದ ಸದಸ್ಯರೂ ಆಗಿರುವ ಪ್ರೊ.ಡಾ.ಪಾರ್ವತಿ ಜಿ. ಐತಾಳ್ ಅವರು ಎಲ್ಲರ ಬರಹಗಳಿಗೂ ತಮ್ಮ ಅಮೂಲ್ಯ ಪ್ರತಿಕ್ರಿಯೆಗಳಿಂದ ಸದಸ್ಯರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರು ಮಲೆಯಾಳದ ಮಹಾನ್ ಲೇಖಕಿ ಸಾರಾ ಜೋಸೆಫ್ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದ” ಆಲಾಹಯುಡೆ ಪೆಣ್ ಮಕ್ಕಳ್ ” ಎಂಬ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.


ಇದು ಕಿತ್ತು ತಿನ್ನುವ ಬಡತನದಲ್ಲೂ ತಲೆಯೆತ್ತಿ ಬದುಕುವ ಹೆಣ್ಣು ಮಕ್ಕಳ ಸಾಹಸದ ಕಥೆ.ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಧಾಳಿ ನಡೆಸಿ ಸ್ವಾರ್ಥ ಸಾಧಿಸುವ ದುಷ್ಟರ ಪ್ರವೃತ್ತಿಯ ನಡೆಯನ್ನು ಬಯಲಿಗೆಳೆದ ಸ್ತ್ರೀವಾದಿ ಧೋರಣೆಯನ್ನು ಹೊಂದಿದ ಕಾದಂಬರಿಯೂ ಹೌದೆಂದು ಲೇಖಕಿ ಮುನ್ನುಡಿಯಲ್ಲಿ ಹೇಳಿದ್ದಾರೆ.

ಕೋಕ್ಕಾಂಚರ ಎಂದರೆ ಕತ್ತೆ ಕಿರುಬ ಓಡಾಡುವ ಒಂದು ಕೊಳಕು ಪ್ರದೇಶ. ಸಮಾಜದಿಂದ ಬದಿಗೆ ತಳ್ಳಲ್ಪಟ್ಟ ಕೆಳವರ್ಗದ ಸಮುದಾಯವೊಂದರ ಹಿರಿಯ ತಲೆ “ಕೋಕ್ಕಾಂಚರ ಮರಿಯ” ಎಂಬ ಅಜ್ಜಿಯಾದರೆ ,ಆ ಮನೆಯ ಕಿರಿಯ ಸದಸ್ಯೆ ಅವಳ ಮೊಮ್ಮಗಳು ಆನಿ. ಈ ವಯಸ್ಸಿನಲ್ಲೂ ಚಟುವಟಿಕೆಯಿಂದ ಇರುವ ತನ್ನ ಅಜ್ಜಿಯ ಧೈರ್ಯ ಸಾಹಸ,ಹಾಗೂ ಸಾಧನೆಯ ಬಗ್ಗೆ ಆನಿಗೆ ಬಹಳ ಹೆಮ್ಮೆ.

ಆ ಪುಟ್ಟ ಹುಡುಗಿಯ ನಿರೂಪಣೆಯಲ್ಲಿ ಇಡೀ ಕಾದಂಬರಿ ಬರೆಯಲ್ಪಟ್ಟಿದೆ.

ಅವರ ಕುಟುಂಬದ ಎಲ್ಲಾ ಹೆಣ್ಣು ಮಕ್ಕಳದ್ದೂ ಒಂದೊಂದು ದುರಂತ ಕಥೆ.ಅಜ್ಜಿಯ ಗಂಡ ಸಂಸಾರದ ಯಾವುದೇ ಜವಾಬ್ದಾರಿಯನ್ನೂ ಹಚ್ಚಿ ಕೊಳ್ಳದೇ ಹಗಲೂ ರಾತ್ರಿ ಪೀಪಿ ಊದುತ್ತಾ, ಒಂದೂ ಕಾಸನ್ನು ಸಂಪಾದಿಸವ.ಹಿರಿಯ ಮಗಳು ಕುಂಜಿಲೆಯನ್ನು ಶ್ರೀಮಂತನಾದ ರೋಗಿಷ್ಠನೊಬ್ಬನಿಗೆ ಮದುವೆಮಾಡಿ ವಾರವೆನ್ನುವಷ್ಟರಲ್ಲಿ ಆತ ತೀರಿ, ಮಗಳು ವಿಧವೆಯಾಗಿ ಮರಳಿ ಬಂದಿದ್ದಳು. ‘ ಒಬ್ಬ ಪಾದ್ರಿಯ ಪತ್ನಿಯಾಗಿ ಬಾಳುವುದು ಶಿಲುಬೆಯ ಮೇಲೆ ಮಲಗಿದಂತೆ’ ಎಂದು ನೋಯುವ ಇನೊಬ್ಬ ಮಗಳು ಚೆರಿಚ್ಚಿಯ ಜೀವನದಲ್ಲೂ ಸುಖವಿಲ್ಲ. ಕಿರಿಯ ಮಗ ಪ್ರಾನ್ಸಿಸ್ ಕ್ಷಯರೋಗಿ. ಮನೆಯಲ್ಲಿ ‘ಕುಟ್ಟಿಪಾಪ ‘ ಎಂದು ಕರೆಸಿಕೊಳ್ಳುವ ,ಸದಾ ಕೆಮ್ಮುತ್ತಾ ಹಾಸಿಗೆಯ ಮೇಲೆ ಮಲಗಿರುವ ಆತ ಒಂದು ಕಾಲದಲ್ಲಿ ಚರಕದಿಂದ ನೂಲು ತೆಗೆದ ದೇಶಭಕ್ತ.! ಅಜ್ಜಿಯ ಹಿರಿಯಮಗ ತಲೆ ಮರೆಸಿಕೊಂಡು ಹೋದವನು ಇಷ್ಟು ವರ್ಷವಾದರೂ ಪತ್ತೆಯಾಗಿಲ್ಲ!.

ಅವನ ಹೆಂಡತಿಯೇ ಆನಿಯ ಅಮ್ಮ.ಆಕೆಗೆ ಚಿನ್ನಮ್ಮ, ಚಿಯ್ಯಮ್ಮ ಹಾಗೂ ಆನಿ ಎಂಬ ಮೂರು ಹೆಣ್ಣುಮಕ್ಕಳು.ಹಿರಿಯ ಇಬ್ಬರೂ ಹುಡುಗಿಯರು ಅತ್ಯಲ್ಪ ಸಂಬಳಕ್ಕೆ ಬಟನ್ ಕಾರ್ಖಾನೆಗೆ ದುಡಿಯಲು ಹೋಗುತ್ತಿದ್ದಾರೆ. ಅವರ ದೊಡ್ಡತ್ತೆ ಕುಂಜಿಲೆ ಮೊದಲು ಬೆಳ್ತಿಗೆ ಅಕ್ಕಿಯನ್ನು ಹಾಕಿ,ಕಾವಲಿಯಲ್ಲಿ ಬಿಳಿಯಪ್ಪವನ್ನು ತಯಾರಿಸುತ್ತಿದ್ದಳು. ಸೊಸೆ ಅದನ್ನು ಬುಟ್ಟಿಯಲ್ಲಿ ಹೊತ್ತು ಮಾರಿ ಹಣ ಹೊಂದಿಸುತ್ತಿದ್ದಳು.

ಕುಟ್ಟಿಪಾಪನ ಕೆಮ್ಮು, ಅಮ್ಮನ ನಿಟ್ಟುಸಿರುಗಳು, ಅಜ್ಜಿಯ ‘ಯೇಸುವೇ ರಕ್ಷಿಸು ‘ ಗೊಣಗಾಟ, ದೊಡ್ಡತ್ತೆ ಇದ್ದರೆ ಅವಳು ನಿದ್ದೆಯಿಲ್ಲದೆ ಮಗ್ಗುಲು ಬದಲಾಯಿಸುತ್ತಾ ಹೊರಳಾಡುವ ಶಬ್ಧಗಳನ್ನು ಕೇಳಿ ಬೆಳೆಯುತ್ತಿರುವ ಆನಿಗೆ ಮನೆಯ ಪರಿಸ್ಥಿತಿ ತಕ್ಕ ಮಟ್ಟಿಗೆ ಅರ್ಥವಾಗುತ್ತಿದೆ.

‘ಹಸಿವಿಗಿಂತ ದೊಡ್ದ ಪಿಶಾಚಿ ಇಲ್ಲ’ ಎಂದು ಗೊತ್ತಿರುವ ,ಸಂಸಾರವನ್ನು ನಿಭಾಯಿಸುವುದು ತಮ್ಮ ಕರ್ತವ್ಯವೆಂದು ಭಾವಿಸುವ ಅರಿವು ಇಲ್ಲಿನ ಎಲ್ಲಾ ಸ್ತ್ರೀಯರಿಗೂ ಇದೆ. ಸಾಕಷ್ಟು ವರದಕ್ಷಿಣೆ ಕೊಡಲು ಸಾಧ್ಯವಿಲ್ಲದೆ ಮಾರಾಟವಾಗದೆ ಮೂಲೆ ಸೇರಿದ ಹೆಣ್ಣು ಮಕ್ಕಳ ದುರಂತದ ಚಿತ್ರಣವೂ ಇಲ್ಲಿದೆ.

ಕಾಲಾಂತರದಲ್ಲಿ ವಾಸಕ್ಕೆ ಯೋಗ್ಯವಲ್ಲದ ಇಂತಹ ಪ್ರದೇಶವೊಂದು ವಾಸಕ್ಕೆ ಯೋಗ್ಯವಾದ ಪ್ರದೇಶವಾಗಿ ಪ್ರಗತಿಯೆಂಬ ಹೆಸರು ಪಡೆಯುತ್ತಿರುವ ಹೊತ್ತಲ್ಲಿ ಅಲ್ಲಿನ ಜನರ ಪರಿಸ್ಥಿತಿ ಪೂರ್ತಿಯಾಗಿ ಬುಡ ಮೇಲಾಗುತ್ತದೆ.ಕೆಳವರ್ಗದ ಮಂದಿಯ ಮೇಲೆ ಅಧಿಕಾರರೂಢ ಜನರ ದಬ್ಬಾಳಿಕೆಯ ಮುಂದೆ ಬಡ ಜನರ ರೋಧನ ಯಾರಿಗೂ ಕೇಳಿಸುವುದೇ ಇಲ್ಲ.!!

ಕತೆಯುದ್ದಕ್ಕೂ ಬರುವ ಅವರೆಬಳ್ಳಿಯ ಚಪ್ಪರ ಎಲ್ಲದಕ್ಕೂ ಸಾಕ್ಷಿಯಾಗಿ ನಿಲ್ಲುತ್ತದೆ. ಕಷ್ಟಗಳನ್ನೆದುರಿಸುತ್ತಲೇ ಮನೆಯ ಅಂಗಳದಲ್ಲಿ ತಲೆಯೆತ್ತಿ ನಿಂತ ಅವರೆಬಳ್ಳಿಯ ಬಳಿ ಕುಳಿತು ಮಹತ್ವವಾದ “ಆಲಾಹಳ ನಮಸ್ಕಾರ ‘ವನ್ನು ತಾನು ಕಲಿತರೆ ಏನೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಬಹುದು? ಎಂಬ ಉದಾತ್ತವಾದ ಆಸೆಯೊಂದು ಆನಿಯಲ್ಲಿ ಮೂಡಿದೆ. ಹಾಗಾದರೆ ಅದೇನು?.

ಆದರೆ ಕೊನೆಯಲ್ಲಿ ಆನಿಯ ನೋವು ಮತ್ತು ಅಸಮಾಧಾನಗಳು ಜೋರಾಗಿ ಬಂದ ಕೆಮ್ಮು ಮತ್ತು ರಕ್ತದ ಗಟ್ಟಿಯ ಮೂಲಕ ಹೊರಗೆ ಬರುತ್ತದೆ. ಅಂದರೆ ಅವಳಿಗೂ ಕುಟ್ಟಿಪಾಪನ ಕ್ಷಯ ಅಂಟಿತೆ?.

ಇದನ್ನು ಲೇಖಕಿ ರೋಗಗ್ರಸ್ತ ಭೂಮಿ ಮತ್ತು ರೋಗಗ್ರಸ್ತ ಸ್ತ್ರೀಯ ಪತನದ ಸಂಕೇತವಾಗಿ ಕಾಣಿಸಿದ್ದಾರೆ. ಪರಿಸರ ದುರಂತಗಳ ಪಾರ್ಶ್ವ ಪರಿಣಾಮಗಳು ಸ್ತ್ರೀಯರ ಆರೋಗ್ಯದ ಮೇಲೂ ಹೇಗೆಲ್ಲಾ ಪರೋಕ್ಷವಾಗಿ ಕಾರಣವಾಗುತ್ತವೆ ಎಂಬುದನ್ನು ವೈಜ್ಞಾನಿಕವಾಗಿಯೂ ಇಲ್ಲಿ ಸಮೀಕರಿಸಿದ್ದಾರೆ. ಬಹಳ ಸೊಗಸಾದ ಈ ಕಥೆಯನ್ನು ಕೆಲವೇ ಸಾಲುಗಳಲ್ಲಿ ನನಗೆ ಪರಿಚಯಿಸುವುದು ಸಾಧ್ಯವಿಲ್ಲದ ಮಾತು.

ಈ ಕಾದಂಬರಿಯಲ್ಲಿ ಬರುವ ಹಲವು ಪಾತ್ರಗಳ ಮೂಲಕ ಅಂದಿನ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ರೀತಿ -ರಿವಾಜುಗಳು, ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಮನಮಿಡಿಯುವಂತೆ ಲೇಖಕಿ ಅಕ್ಷರ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ನೀವೂ ಒಮ್ಮೆ ಓದಿ ನೋಡಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW