‘ಶ್ರೀ ಸದ್ಗುರು ಚರಿತ್ರೆ’ ಕೃತಿ ಪರಿಚಯ

ಡಾ. ಎಂ.ಜಿ ದೇಶಪಾಂಡೆ ಅವರು ಬರೆದ ಶ್ರೀ ಮುರುಲಿ ಮಹಾರಾಜರ ಜೀವನ ಚರಿತ್ರೆಯ ಕುರಿತಾದ ‘ಶ್ರೀ ಸದ್ಗುರು ಚರಿತ್ರೆ’ ಕೃತಿಯ ಕುರಿತು  ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಶ್ರೀ ಸದ್ಗುರು ಚರಿತ್ರೆ( ಶ್ರೀ ಮುರಲಿ ಮಹಾರಾಜರ ಜೀವನ ಚರಿತ್ರೆ )
ಲೇಖಕರು : ಡಾ. ಎಂ. ಜಿ. ದೇಶಪಾಂಡೆ.
ಪ್ರಕಾಶಕರು: ಶ್ರೀ ಹರಿ ಪ್ರಕಾಶನ ಬೀದರ.
ಬೆಲೆ :೧೫೦

ಬೀದರ್ ಜಿಲ್ಲೆ ಶರಣರ ನಾಡು, ಸಾಧು ಸತ್ಪುರುಷರ ಬೀಡು, ಕ್ರಿ.ಶಕ ೧೨ನೇ ಶತಮಾನದಲ್ಲಿ ಬಸವಾದಿ ಶರಣರಾದಿಯಾಗಿ, ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಚನ್ನಬಸವಣ್ಣ, ಮಡಿವಾಳ ಮಾಚಿ ತಂದೆ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಾರಯ್ಯ ಮುಂತಾದ ಅನೇಕ ಶರಣರು ಕಾಯಕ ದಾಸೋಹದ ಮಹತ್ವ ವನ್ನು ಅರುಹಿದರು. ಮೂಡನಂಬಿಕೆ, ಅನ್ಯಾಯ, ಅತ್ಯಾಚಾರ ಶೋಷಣೆ, ಜಾತೀಯತೆ ಮೇಲು ಕೀಳು ಅನ್ನುವ ಬೆರನ್ನು ಕಿತ್ತೂ ತಮ್ಮ ವಚನ ಅನುಭಾವಗಳ ಮೂಲಕ ಸಮಾನತೆ ಸಾಮರಸ್ಯ ತತ್ವದ ಬೀಜವನ್ನು ಬಿತ್ತುವ ಮೂಲಕ ಜನರಿಗೆ ಹೊಸದೊಂದು ಬದುಕಿನ ಮಾರ್ಗ ತೋರಿಸಿಕೊಟ್ಟರು.

ಹೊಲೆಗoಡಲ್ಲದೆ ಪಿಂಡದ
ನೆಲೆಗಾಶ್ರಯವಿಲ್ಲ,
ಜಲಬಿಂದುವಿನಲ್ಲಾ ಕುಲ,
ಅಗ್ನಿ ಬಿಂದುವಿನಲ್ಲಾ ಮತಿ
ಅರಿದು ಬಾಳುವವನೇ ಕುಲಜನು,
ಅರಿದು ಬಾಳುವವನೇ ಕುಲಜನು,
ನಮ್ಮ ಕೂಡಲ ಸಂಗಮದೇವಾ
ಲಿಂಗಸ್ಥಲವನರಿದವನೇ
ಕುಲಜನು,

ಕಾಯದಲ್ಲಿ ಮೇಲು ಕೀಳುಗಳಿಲ್ಲ, ವ್ಯಕ್ತಿಯ ಶ್ರೇಷ್ಠತೆ ಅವನ ಹುಟ್ಟಿನಿಂದಲ್ಲ ನಡತೆಯಿಂದ ನಿರ್ಧಾರವಾಗುತ್ತದೆ ಎಂದು ಬಸವಣ್ಣನವರು ಲಿಂಗಸ್ಥಲವರಿದವನೇ ಕುಲಜನು ಎಂದು ಸಮಾನತೆಯ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟಿರುವರು.

ಹೀಗೆ ೧೨ನೇ ಶತಮಾನದ ಶರಣರ ಅನುಭಾವ ತತ್ವಗಳನ್ನು ವಚನಗಳ ಅಧ್ಯಯನ ಮಾಡಿ ಅನೇಕ ಶರಣರು ಮಹಾಪುರುಷರು ಸಂತರು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬೀದರ ಜಿಲ್ಲೆಯಲ್ಲಿ ಅಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತ ಜ್ಞಾನದ ಬೆಳಕನ್ನು ಪಸರಿಸುತ್ತ ಹೋದರು.ಅವರಲ್ಲಿ ನಾವದಗಿ ರೇವಪ್ಪಯ್ಯನವರು, ಅಲಿಯಂಬರದ ಶ್ರೀ ವೀರಭದ್ರೇಶ್ವರರು, ರೇಖುಳಗಿಯ ಶಂಭು ಲಿಂಗೇಶ್ವರರು, ಬಾವಗಿ ಶ್ರೀ ಭದ್ರೇಶ್ವರರು, ಪಂಥಾನಂದ ಸ್ವಾಮೀಜಿ, ಕರಕನಳ್ಳಿ ಬಕ್ಕಪ್ರಭು, ಹುಡುಗಿಯ ಕರಿಬಸವೇಶ್ವರರು, ಮಾಣಿಕ ನಗರದ ಶ್ರೀ ಮಾಣಿಕ್ ಪ್ರಭುಗಳು, ಹೀಗೆ ಹಲವಾರು ಮಹಾತ್ಮರು ಕಲ್ಯಾಣ ನಾಡಿನಲ್ಲಿ ಜನಿಸಿ ತಮ್ಮ ಧರ್ಮ ಆದರ್ಶ ಉತ್ತಮ ನಡೆ ನುಡಿ ಶರಣರ ತತ್ವದ ವಚನದ ಮೂಲಕ ಕಲ್ಯಾಣ ನಾಡನ್ನು ಅಧ್ಯಾತ್ಮಿಕತೆಯ ಬೀಡನ್ನಾಗಿ ಪರಿವರ್ತಿಸಿದ ಇಂತಹ ಅದ್ವೈತ ಶ್ರೀಗಳ ಸಾಲಿಗೆ ಸೇರಿದವರು ಬೀದರ್ ತಾಲೂಕಿನ ವಿಲಾಸಪುರ ಗ್ರಾಮದ ಸಂತರಾದ ಶ್ರೀ ಮುರಲಿ ಮಹಾರಾಜರು.

ಡಾ. ಎಂ ಜಿ ದೇಶಪಾಂಡೆ ಅವರು ಬೀದರ್ ಜಿಲ್ಲೆಯ ಖ್ಯಾತ ಸಾಹಿತಿಗಳು, ಇದುವರೆಗೆ ಸುಮಾರು ನೂರಕ್ಕೂ ಹೆಚ್ಚು ಕಾದಂಬರಿ ಲೇಖನಗಳು, ಕವನ ಸಂಕಲನಗಳು, ಸಂತರ ಚರಿತ್ರೆಗಳನ್ನು ಬರೆದಿರುತ್ತಾರೆ. ಅವುಗಳಲ್ಲಿ ಶ್ರೀ ಸದ್ಗುರು ಚರಿತ್ರೆ ( ಶ್ರೀ ಮುರಲಿ ಮಹಾರಾಜರ ಜೀವನ ಚರಿತ್ರೆ )ಅನ್ನುವ ಶ್ರೀಗಳ ಬಾಲ್ಯ ಮತ್ತು ಅವರ ಪವಾಡಗಳ ಸಮಗ್ರ ಜೀವನ ದರುಶನ, ಶ್ರೀಗಳ ಧಾರ್ಮಿಕ ಸೇವೆಯನ್ನು ಸಮಗ್ರವಾಗಿ ಸವಿಸ್ತಾರವಾಗಿ ಆದ್ಯಯನ ಮಾಡಿ ಶ್ರೀಗಳ ಬದುಕಿನ ರೀತಿ ನೀತಿ ಆದರ್ಶ ತತ್ವಗಳನ್ನು ತಮ್ಮ ಲೇಖನೀಯ ಮೂಲಕ ಓದುಗರ ಸಾರಸತ್ವ ಲೋಕಕ್ಕೆ ಕೊಡಗೆಯಾಗಿ ನೀಡಿದ್ದಾರೆ.

ಡಾ. ಎಂ.ಜಿ ದೇಶಪಾಂಡೆ ಅವರು ಬರೆದ ಈ ಕೃತಿಯನ್ನು ಅರ್ಥೈಸಿಕೊಂಡು ಓದಿರುವ ನಾನು ಕೆಲವು ನನ್ನ ಅನಿಸಿಕೆಯನ್ನು ತಮ್ಮಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಶ್ರೀಗಳು ಸಂಸಾರಿಯಾಗಿ ಪಾರಮಾರ್ಥಿಕ ಬದುಕನ್ನು ಸಾಗಿಸಿದವರು, ಭಗವಂತನ ಧ್ಯಾನ,ಭಜನೆ, ಕೀರ್ತನೆಗಳಲ್ಲಿಯೇ ಸಮಯವನ್ನು ಕಳೆಯುತ ಹಾಗು ತನ್ನ ಅಪಾರ ಶಿಷ್ಯ ಬಳಗದೊಂದಿಗೆ ಅನೇಕ ಕಡೆ ತೀರ್ಥ ಪ್ರವಾಸಗಳ ಮೂಲಕ ಊರೂರು ಸುತ್ತಿ ಆದ್ಯಾತ್ಮಿಕ ಆಚಾರ ಅನುಭಾವ ನೀಡುವವರು, ತಮ್ಮ ಪವಾಡಗಳ ಮೂಲಕ ಭಕ್ತರ ಕಷ್ಟಗಳಿಗೆ ಸ್ಪಂದಿಸಿ ಕಾಮಧೇನು ಕಲ್ಪವೃಕ್ಷದಂತೆ ಅವರಿಗೆ ಆಸರೆಯಾಗುವವರು.

ಕೃತಿಯ ಲೇಖಕರಾದ ದೇಶಪಾಂಡೆ ಅವರು ಶ್ರೀಗಳ ಕುರಿತು ಬರೆದ ಕೃತಿ ಅತೀ ಮೌಲ್ಯಯುತ ಕೃತಿಯಾಗಿದ್ದು ಈ ಕೃತಿಯು ಓದುತ್ತಾ ಹೋದರೆ ಬದುಕಿನ ಕಳೆದುಕೊಂಡ ಯಾವುದೋ ಒಂದು ಅಮೂಲ್ಯ ರತ್ನ ಸಿಕ್ಕಿದ ಭಾಸವಾಗುತ್ತದೆ. ಓದುಗರ ಮನಸು ಹಗುರವಾಗಿ ಒಂದಿಷ್ಟು ಧನಾತ್ಮಕ ಚಿಂತನೆಗೆ ಕೊಂಡೊಯ್ಯುವ ಮನುಷ್ಯನ ಬದುಕು ಸಾರ್ಥಕ ಗೊಳಿಸುವ ಕೃತಿಯಾಗಿದ್ದು ಲೇಖಕರ ಲೇಖನಿಯಿಂದ ಇನ್ನೂ ಹಲವಾರು ಮೌಲಿಕ ಪುಸ್ತಕಗಳು ಹೊರಬರಲಿ, ಓದುಗರ ಕೈ ತಲುಪಲೆಂದು ಶುಭ ಹಾರೈಸುವೆ.


  • ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್,  ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading