ಕತೆಗಾರರಾದ ಭಾರತಿ ಬಿ ವಿ ಅವರ ‘ಇಷ್ಟಕ್ಕೂ ಎಲ್ಲರೂ ಮನುಷ್ಯರೇ’ ಕೃತಿಯ ಕುರಿತು ಶ್ರೀಪಾದ್ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ‘ಇಷ್ಟಕ್ಕೂ ಎಲ್ಲರೂ ಮನುಷ್ಯರೇ
ಲೇಖಕರು : ಭಾರತಿ ಬಿ ವಿ
ಪ್ರಕಾಶಕರು : ಸಾವಣ್ಣ ಪ್ರಕಾಶನ
ಪ್ರಕಾರ : ಕಥಾ ಸಂಕಲನ
ಬೆಲೆ : 180.00
ಇತ್ತೀಚಿನ ದಿನಗಳಲ್ಲಿ ಕತೆ, ಕಾದಂಬರಿಯಂತಹ ಫಿಕ್ಷನ್‍ಗಳನ್ನು ಓದುವುದನ್ನು ನಾನು ಕಡಿಮೆ ಮಾಡಿದ್ದೇನೆ. ಉದ್ದೇಶ ಪೂರ್ವಕವಾಗಿಯಲ್ಲ. ಬಹುಶಃ ಕತೆ, ಕಾದಂಬರಿ, ಕಾವ್ಯಗಳನ್ನೇ ಬಹಳ ಕಾಲ ಓದುತ್ತಾ ಬಂದದ್ದರಿಂದ ಜಗತ್ತಿನ ಹಲವು ಹತ್ತು ಇನ್ನಿತರ ವಿಷಯಗಳ ಬಗೆಗೆ ಹೆಚ್ಚಿನ ತಿಳುವಳಿಕೆಯನ್ನು ಪಡೆಯುವ ವ್ಯಾಮೋಹ ಬೆಳೆದಿರುವುದು ಕಾರಣವಾಗಿರಬಹುದು ಎಂದೆಣಿಸಿದ್ದೇನೆ.
ಕೋವಿಡ್ ಮುಂಚಿನ ಕಾಲದವರೆಗೂ ಆಗಾಗ ಪುಸ್ತಕ ಬಿಡುಗಡೆಯ ಕೆಲವು ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ ಮತ್ತು ಆ ಸಂದರ್ಭಗಳಲ್ಲಿ ಫಿಕ್ಷನ್‍ಗಳನ್ನು ತಂದು ಓದುವ ಅಭ್ಯಾಸವಿತ್ತು. ಕೋವಿಡ್ ನಂತರದ ಕಾಲದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಹೋಗುತ್ತಿಲ್ಲ. ’ಹಾಡಿದ್ದೇ ಹಾಡೊ ಕಿಸಬಾಯಿ ದಾಸ’ ಅನ್ನುವ ಹಾಗೆ ವೇದಿಕೆಗಳ ಮೇಲಿಂದ ಬರುವ ಅದೇ ಅದೇ ಸಾಹಿತ್ಯ ಮಾನ ದಂಡಗಳ ಮಾತುಗಳು ಅದಾಗಲೇ ನನಗೆ ಬೋರ್ ಹೊಡೆಸಿತ್ತಾದ್ದರಿಂದ ಕೋವಿಡ್ ಕಾಲದಲ್ಲಿ ಅವುಗಳೆಲ್ಲದರ ಕೊಂಡಿ ಕಳಚಿದ್ದು ವರ ಪ್ರದಾನವಾಗಿ ಪರಿಣಮಿಸಿತು. ಸುಮ್ಮನೆ ಪುಸ್ತಕದ ಅಂಗಡಿಗಳಿಗೆ ಹೋಗಿ ಟೆಂಪ್ಟ್ ಆಗಿ ಯಾವ್ಯಾವುದೋ ಪುಸ್ತಕ ಕೊಂಡು ತಂದು ಓದಲಾಗದೆ ’ಅಯ್ಯೋ ಸುಮ್ಮನೆ ದುಡ್ಡು, ಕಾಲ ಎರಡೂ ಹಾಳಾಯಿತಲ್ಲ’ ಎನ್ನುವ ಕೊರಗುಂಟಾಗಬಾರದೆಂದು ಪುಸ್ತಕದ ಅಂಗಡಿಗಳಿಗೂ ಆಗಾಗ ಭೇಟಿ ಕೊಡುವುದನ್ನು ನಿಲ್ಲಿಸಿದ್ದೇನೆ. ಹಾಗಾಗಿ ಈಗ ನಾನು ವಾನಪ್ರಸ್ತದ ಕಾಲದಲ್ಲಿದ್ದೇನೆ. ವಾನ ಪ್ರಸ್ತವೆಂದರೆ ಅಡವಿಯಲ್ಲಿಯೇ ಹೋಗಿ ಇರಬೇಕೆಂದೇನಿಲ್ಲ. ನಾವಿದ್ದಲ್ಲಿಯೇ ಅದನ್ನು ನಿರ್ಮಿಸಿಕೊಳ್ಳಬಹುದು. ಅಲ್ಲದೆ ಇತ್ತೀಚಿನ ನನ್ನ ಚಿಂತನೆಗಳಿಗೆ ಒದಗಿ ಬರುವ ಕಚ್ಚಾ ಸಾಮಗ್ರಿಗಳು ಅಂತರ್ಜಾಲದಲ್ಲಿ ಹೇರಳವಾಗಿ ಸಿಗುವುದರಿಂದ ಮತ್ತು ನನ್ನದು ಸೀಮಿತ ಓದಾದ್ದರಿಂದ ಡಿಜಿಟಲ್ ಓದಿಗೆ ಬಲವಾಗಿ ಅಂಟಿಕೊಂಡಿದ್ದೇನೆ. ಆದರೂ ಅಪರೂಪಕ್ಕೊಮ್ಮೆ ಯಾವುದದರೂ ಫಿಕ್ಷನ್ ಪುಸ್ತಕವನ್ನು ತರಿಸಿಕೊಂಡು ಓದುತ್ತೇನೆ. ಭಾರತಿ ಬಿ ವಿ ಯವರ “ಇಷ್ಟಕ್ಕೂ ಎಲ್ಲರೂ ಮನುಷ್ಯರೇ ” ಎನ್ನುವ ಕಥಾ ಸಂಕಲನ ಹಾಗೆ ತರಿಸಿಕೊಂಡು ಇಂದಷ್ಟೆ ಓದಿ ಮುಗಿಸಿದ ಅಂತಹ ಒಂದು ಪುಸ್ತಕ.

ಎರಡು ವಾರಗಳ ಹಿಂದೆ ಭಾರತಿಯವರಿಗೆ ಪುಸ್ತಕ ಕಳಿಸಿಕೊಡಲು ಕೇಳಿದ್ದೆ. ಅವರು ಕಳಿಸಿ ಕೊಟ್ಟರು. ಆದರೆ ನಾನು ಪುಸ್ತಕ ಬಂದು ತಲುಪಿದೆಯೆಂದಾಗಲಿ ಅಥವಾ ಓದಿ ಮೆಚ್ಚುಗೆಯನ್ನೋ, ಅಮೆಚ್ಚುಗೆಯನ್ನೋ ಚುಟುಕಾಗಿಯಾದರೂ ಅವರಿಗೆ ಮೆಸ್ಸೇಜ್ ಮೂಲಕ ತಿಳಿಸದಿದ್ದ ಕಾರಣ ಪುಸ್ತಕ ತಲುಪಿಲ್ಲವೇನೊ ಎನ್ನುವ ಅನುಮಾನ ಬಂದು ’ಪುಸ್ತಕ ತಲುಪಿದೆಯಲ್ಲವೇ ’ ಎಂದು ಕೇಳಿ ಮೆಸ್ಸೇಜ್ ಮಾಡಿದರು. ಆಗಲೆ ಒಂದೆರಡು ಕತೆಗಳನ್ನು ಓದಿದ್ದೆ. ಆದರೆ ಕರ್ಟೆಸಿಗೋಸ್ಕರವಗಿಯಾದರೂ ಪುಸ್ತಕ ಬಂದು ತಲುಪಿದ್ದರ ಬಗ್ಗೆ ಅವರಿಗೆ ತಿಳಿಸಲಿಲ್ಲವಲ್ಲ ಎನ್ನುವ ಗಿಲ್ಟ ಉಂಟಾಗಿ, ಅದನ್ನು ಕಂಪೆನ್ಸೇಟ್ ಮಾಡುವ ಸಲುವಾಗಿ ಓದಿ ಸಣ್ಣ ಟಿಪ್ಪಣಿ ಬರೆಯುತ್ತೇನೆ ಎಂದು ಬಿಟ್ಟೆ. ನನಗಿಷ್ಟ ಬಂದದ್ದನ್ನು, ನನಗಿಷ್ಟ ಬಂದ ಕಾಲದಲ್ಲಿ ಓದುತ್ತಾ ಬರೆಯುತ್ತಾ ಇರುವ ನನಗೆ ಕಮಿಟ್ ಮಾಡಿಕೊಂಡ ತಕ್ಷಣ ಎರಡು ವಾಕ್ಯ ಬರೆಯುವುದು ಕಷ್ಟವಾಗಿ ಬಿಡುತ್ತದೆ. ಇನ್ನು ಸೈದ್ದಾಂತಿಕ, ತಾತ್ವಿಕ ಸಂಗತಿಗಳಾದರೆ ಮಂಡನೆಯನ್ನೋ, ಖಂಡನೆಯನ್ನೋ ಮಾಡಿ ಬೀಗಿ ಬಿಡಬಹುದು. ಇದು ಹಾಗಲ್ಲ, ಅದರಲ್ಲೂ ಇವರ ಕತೆಗಳು ಸೈದ್ದಾಂತಿಕತೆಯ ಹಂಗಿಲ್ಲದ, ನಮ್ಮ ಒಳಗನ್ನು ಬೆಳಗುವ, ಕೌಟುಂಬಿಕ ನೆಲೆಯ ಮನುಷ್ಯ ಸಹಜ ಬದುಕಿನ ಕತೆಗಳು. ಸಂಬಂಧಗಳನ್ನು ಖಾಸಗಿಯಾಗಿ ಅವು ಇರುವಂತೆ ಮತ್ತು ಆಪ್ತವಾಗಿ ಕಟ್ಟಿ ಕೊಡುವ ಬರಹಗಳು. ಇವುಗಳ ಬಗ್ಗೆ ಮೆಚ್ಚುಗೆಯನ್ನಲ್ಲದೆ ಮತ್ತಾವ ಕೊಂಕನ್ನೂ ತೆಗೆಯಲು ಸಾಧ್ಯವಾಗದು. ಮೆಚ್ಚುಗೆಯಾದರೆ ಮೆಚ್ಚುಗೆಯಾಯಿತೆಂದು ಹೇಳುವುದು ಬಹು ಸುಲಭ, ಏಕೆ ಎಂದು ಹೇಳುವುದು ಬಲು ಕಷ್ಟ. ಮೆಚ್ಚುಗೆಯಾಗದಿದ್ದರೆ ಕಾರಣಗಳ ಪಟ್ಟಿಯನ್ನೇ ಕೊಟ್ಟು ಬಿಡಬಹುದು.
ಭಾರತಿಯವರು ವೈವಿಧ್ಯಮಯ ಬರಹಗಳನ್ನು ಬರೆದಿರುವರಾದರೂ ಫೇಸ್ಬುಕ್ಕಿನಲ್ಲಿ ಅವರ ತಿಳಿಯಾದ ಹಾಸ್ಯ ಬರಹಗಳಿಗೆ ಮೌಲ್ದ್ ಆದವರು. ತಮ್ಮನ್ನೇ ತಾವು ಗೇಲಿ ಮಾಡಿಕೊಳ್ಳುವ ಇವರ ಅನೇಕ ಬರಹಗಳು ನಗಿಸಲಿಕ್ಕೆಂದು ಇರುವುದಕ್ಕಿಂತ, ಇವರಲ್ಲಿ ಹಾಸು ಹೊಕ್ಕಾಗಿರುವ ಸೆನ್ಸ್ ಆಫ್ ಹ್ಯೂಮರ್ ನಿಂದ ಬಂದವಾಗಿದ್ದು ಅವುಗಳಿಗೆ ಬೇರೆ ಬೇರೆ ಆಯಾಮಗಳು ಇರುವುದು ವಿಶೇಷ ಮತ್ತು ಅವರ ಅಂತಹ ಬರಹಗಳನ್ನು ನಾನೂ ಆಗಾಗ ಓದಿ ಆಸ್ವಾದಿಸಿದ್ದೇನೆ. ಇವರ ಈ ಕಥಾ ಸಂಕಲನ ಪ್ರಕಟವಾದಾಗ ಬಹುಶಃ ಇವರ ಛಾಪಿನ ವಿನೋದದ ಕತೆಗಳೇ ಇವಾಗಿರಬಹುದೆಂದು ಭಾವಿಸಿದ್ದೆ. ಆದರೆ ತೀರ ಇತ್ತೀಚೆಗೆ ಇದು ಅವರ ವಿನೋದ ಬರಹಗಳಲ್ಲ ಬದಲಾಗಿ ತಮ್ಮ ವ್ಯಕ್ತಿತ್ವದ ಬೇರೆಯದೇ ಆಯಾಮ ಒಂದನ್ನು ಇವರು ತೆರೆದಿಟ್ಟಿದ್ದಾರೆ ಎನ್ನುವ ಸುಳಿವು ಸಿಕ್ಕಿತು. ಅಂದೇ ಅವರಿಗೆ ಪುಸ್ತಕ ಕಳಿಸಿ ಕೊಡುವಂತೆ ಕೇಳಿದ್ದೆ. ಪುಸ್ತಕ ಬಂದಾಗ ತೆರೆದು ಕಣ್ಣಾಡಿಸಿದಾಗ ತಮ್ಮ ಮೊದಲ ನುಡಿಯಲ್ಲಿ (ಮುನ್ನುಡಿ?) ಉದ್ದೇಶ ಪೂರ್ವಕವಾಗಿಯೇ ತಮ್ಮ ಯಾವ ಹಾಸ್ಯ ಕತೆಗಳನ್ನು ಇದರಲ್ಲಿ ಸೇರಿಸಿಲ್ಲವೆಂದು ಅವರು ಬರೆದ ಮಾತುಗಳನ್ನೂ ಓದಿದೆ.

ಈ ಕತೆಗಳನ್ನು ಓದಿ ಮುಗಿಸಿದಾಗ ಇದರಲ್ಲಿರುವ ಕಥಾ ವಸ್ತು ವೈವಿಧ್ಯ ಮತ್ತು ಪಾತ್ರ ವೈವಿಧ್ಯಗಳು ನನ್ನ ಗಮನ ಸೆಳೆದವು. ಬೇಜವಾಬ್ದಾರಿಯ ಬದುಕು, ಅಷ್ಟೊಂದು ಅಮಾಯಕರಾಗಿರದಿದ್ದರೂ ಹಳ್ಳಿ ಬದುಕಿನಲ್ಲಿ ಇನ್ನೂ ಉಳಿದಿರಬಹುದಾದ ಮುಗ್ದತೆ, ದ್ವೇಷ, ತಣ್ಣನೆಯ ಕ್ರೌರ್ಯ, ಅಸಹಾಯಕತೆ ಇವೆಲ್ಲವೂ ವಸ್ತುಗಳಾಗಿ ಇಲ್ಲಿನ ಕತೆಗಳು ಮೈದಳೆದಿವೆ. ಬಹುತೇಕ ಕತೆಗಳು ಸ್ತ್ರೀ ಕೇಂದ್ರಿತವಾದವು ಮತ್ತು ಇವುಗಳಲ್ಲಿನ ಎಲ್ಲ ಸ್ತ್ರೀ ಪಾತ್ರಗಳು ಸಶಕ್ತವಾದವು. ಸಾಂಪ್ರದಾಯಿಕ, ಅಸಂಪ್ರದಾಯಿಕ, ಮುಗ್ದ, ಜಗಳಗಂಟಿತನದವು ಹೀಗೆ ಒಂದೊಂದೂ ಅನನ್ಯ. ಕತೆ ಮತ್ತು ಕಥಾನಕ ಎರಡನ್ನೂ ಒಂದು ಹದದಲ್ಲಿ ಬೆರೆತಂತಿರುವ ಕತೆಗಳು ಹೆಚ್ಚಿನ ಪಾಲಿನವಾದರೆ ’ಅರ್ಥವಾಗದವರು’ ಮತ್ತು ’ಮನೆ’ ಇವೆರಡು ಕತೆಗಳಲ್ಲಿ ಕತೆ ಗೌಣವಾಗಿ ತಮ್ಮ ಸೊಗಸಾದ ಕಥಾನಕಗಳ ಮೂಲಕವೇ ಇವು ಗೆದ್ದಿವೆ ಅನಿಸುತ್ತದೆ. ಮೊದಲನೇಯದು ಟೈಮ್ ಟೆಸ್ಟೆಡ್ ಮಾದರಿಯ ಶೈಲಿಯಲ್ಲಿ ಹಳ್ಳಿಯ ಒಬ್ಬ ಮುಗ್ದ ಬಾಲಕನ ಕಣ್ಣುಗಳ ಮೂಲಕ ಹಳ್ಳಿಯ ಬದುಕನ್ನು ತೆರೆದಿಟ್ಟರೆ, ಎರಡನೇಯದು ವಿಭಿನ್ನ ಮಾದರಿಯದು. ಮರೆವಿನ ಕಾಯಿಲೆಯ ಮೊದಲ ಹಂತ ಉಂಟು ಮಾಡಬಹುದಾದ ಗೊಂದಲವನ್ನು ಕನಸು – ಎಚ್ಚರಗಳ ನಡುವಿನ ಒಂದು ಅವಸ್ಥೆಯ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಭಾರತಿಯವರು ವಿಡಂಬನೆ ಮತ್ತು ವಿನೋದ ಇವು ತಮ್ಮ ಈ ಕತೆಗಳ ನಿರೂಪಣಾ ಶೈಲಿಯಲ್ಲಿ ಮೇಲು ಗೈ ಪಡೆಯದಂತೆ ಬಹು ಎಚ್ಚರ ವಹಿಸಿದ್ದಾರೆಯಾದರೂ ಹಿನ್ನೆಲೆಯಲ್ಲಿ ಇವು ಸೂಕ್ಷ್ಮವಾಗಿ ಕೆಲಸ ಮಾಡಿರುವುದನ್ನು ಎಲ್ಲ ಕತೆಗಳಲ್ಲಿಯೂ ಕಾಣಬಹುದಾಗಿದೆ. ಸ್ವಲ್ಪವೂ ವಿಡಂಬನೆ ಇಲ್ಲದ ಸಾಹಿತ್ಯ ಒಂದೋ ತೀರ ಭಾವುಕವಾಗಿ ಸುಳ್ಳಾಗುತ್ತದೆ ಅಥವಾ ವೈಚಾರಿಕ ಭಾರ ಹೊತ್ತು ಬಳಲುತ್ತದೆ ಎನ್ನುವ ನವ್ಯ ಪಂಥದ ಸೈದ್ದಾಂತಿಕ ಹಿನ್ನೆಲೆಯಲ್ಲಿ ನನ್ನ ಸಾಹಿತ್ಯದ ಬಹು ಪಾಲು ಓದನ್ನು ಮಾಡಿರುವ ನನಗೆ ಈ ಕತೆಗಳು ಏಕ ಪಕ್ಷೀಯವಾಗಿ (one sided) ಮುಂದುವರಿಯದಂತೆ ಅಗತ್ಯವಿದ್ದಲ್ಲೆಲ್ಲ ಪಾತ್ರವನ್ನು ವಿಡಂಬಿಸಿ other point of view ವನ್ನು ಬಹಳ ಸೂಕ್ಷ್ಮವಾಗಿ ತೋರಿಸುತ್ತಾ ಹೋದ ಇವರ ಬರವಣಿಗೆ ತುಂಬ ಮೆಚ್ಚುಗೆಯಾಯಿತು. ಸಮತೋಲನ ಕಾಯುವದಕ್ಕೆ ಬೇಕಾದಷ್ಟು ಮಾತ್ರ ವಿಡಂಬನೆ ಬಳಸಿ ಈ ಕತೆಗಳ ಮೂಲಕ ಬರವಣಿಗೆಯ ಹೊಸ ಪಾಕ ಒಂದನ್ನು ಇವರು ಸಿದ್ದಿಸಿಕೊಂಡಿದ್ದಾರೆ.
ಭಾರತಿಯವರಲ್ಲಿ ಹುದುಗಿರಬಹುದಾದ ಇನ್ನಷ್ಟು ಕತೆಗಳು ಇಷ್ಟೇ ಮನೋಜ್ಞವಾಗಿ ಹೊರ ಬರುತ್ತಿರಲಿ ಎನ್ನುವ ಹಾರೈಕೆಗಳು.
- ಶ್ರೀಪಾದ್ ಹೆಗಡೆ
