ಹೆಣ್ಣೆಂದರೆ ಬರಿಯ ಹೆಣ್ಣಲ್ಲ, ಮೂದಲಿಕೆಯ ನುಡಿ ಎಂದಿಗೂ ಸಲ್ಲ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಹೆಣ್ಣೆಂಬರೇ ನಿನ್ನ
ಹಮ್ಮಿನಲಿ ಪುರುಷರು
ಬರಿಯ ಹೆಣ್ಣಲ್ಲ ನೀ ಜಗನ್ಮಾತೆ
ನವಮಾಸ ಧರಿಸಿದೆ ನೀ
ಹೆಣ್ಣುಗಂಡೆಂಬ ತರತಮಗಳಿಲ್ಲದೆ
ತಾಯಿ ನೀನೇ ಅಭಯದಾತೆ
ಋಷಿಮುನಿ ಪುಂಗವರು,ಜ್ಞಾನಿ ವಿಜ್ಞಾನಿಗಳು ಗುರುವರೇಣ್ಯರು, ರಾಜಾಧಿರಾಜರು
ಜನಿಸಿ ಬಂದರು ಇಲ್ಲಿ
ಬಾಳಿದರು ವಿಭವದಲಿ
ಮಾತೆ ನೀನೇ ..ಅವರ ಜನ್ಮದಾತೆ
ಶಿಕ್ಷಣ, ಸಂಸ್ಕಾರ, ಆಚಾರ, ನೀತಿಸಂಹಿತೆ ಎಲ್ಲವೂ ನಿನ್ನ ಉದರದಲೇ
ರೂಪಿಸಿ ಕಳುಹಿಸಿದೆ ಈ ಧರೆಯ ಕಾರ್ಯಕ್ಷೇತ್ರಕೆ
ಬಾಳು, ಬಲ್ಲಿದನಾಗು ಎಂದು ಹರಸಿ,ಹಾರೈಸಿ…
ನಿನ್ನ ಬೆವರಿನ ಹನಿಗೆ
ನಿನ್ನ ನಿಟ್ಟುಸಿರ ಬಿಸಿಗೆ
ನೀನೇ ಲೆಕ್ಕವಿಡಲಾರದಷ್ಟು
ಕರ್ತವ್ಯಬಾಹುಳ್ಯ
ತಂದೆ ಮಕ್ಕಳ ತಬ್ಬಿ,
ಬಂಧುಬಾಂಧವವರ
ಹಂದರದಿ ಹಬ್ಬಿ
ಪ್ರೀತಿ ಸುಮವನು ಬಿರಿಸಿ
ನೀ ಸಂಚಲನೆ ತಂದೆ
ಸೇವೆಗಾಗಿಯೆ ನೀನು
ಯಜ್ಞದೀಕ್ಷಿತಳಾದೆ
ಎಡರು ತೊಡರಿನ ಬಿರುಗಾಳಿಗೆ
ಎದೆಯೊಡ್ಡಿ ನಿಂತೆ
ತನ್ನನಾಧರಿಸಿದ ಜೀವ ಜಗವನು
ಅಪ್ಪಿ..
ಶಕ್ತಿ ಸಾಕಾರತೆಯ ಮೂರ್ತಿ ನೀನಾದೆ
ವಿಶ್ರಮಿಸದೇ ಬಾಳ ಕಡಲನು ಈಸಿ
ನಂಬಿದವರ ಭರವಸೆಯಾಗಿ
ಬಾಳಸಾಗರದಾಳದಿಂದ
ಯಶಸ್ಸಿನ
ಮುತ್ತು ರತ್ನಗಳ ತಂದೆ
ಹೆಣ್ಣೆಂದರೆ ಬರಿಯ ಹೆಣ್ಣಲ್ಲ
ಮೂದಲಿಕೆಯ ನುಡಿ ಎಂದಿಗೂ ಸಲ್ಲ
ಹೆಣ್ಣಿವಳು ಜಗದ ಕಣ್ಣು…
ಬಾಳ ಹಸಿವು ನೀಗುವ
ಬೆಳುವೊಲದ ಸಂಪನ್ನ ಮಣ್ಣು
ಅಂಜದೆಯೇ ಮುನ್ನುಗ್ಗಿ
ಓ ದಿಟ್ಟ ಹೆಣ್ಣುಗಳೆ
ಶಿಕ್ಷಣದ ಖಡ್ಗವನ್ನು ಝಳಪಿಸುತ ಮುಂದೆ
ಮುಂದಿರುವ ಸವಾಲುಗಳ ದಿಟ್ಟವಾಗಿ ಎದುರಿಸಿ
ತೆರೆದಿರುವುದು ಎಲ್ಲಾ ಕ್ಷೇತ್ರಗಳ ದ್ವಾರ ಮುಕ್ತವಾಗಿ
ವೈದ್ಯಳೊ ಶಿಕ್ಷಕಿಯೊ,ವಿಜ್ಞಾನಿಯೊ ಸಂಶೋಧಕಿಯೊ
ಸೇನಾಧಿಕಾರಿಯೊ ವಿಮಾನ ಚಾಲಕಿಯೊ,ಬಾಹ್ಯಾಕಾಶ
ಯಾನಿಯೊ
ರಾಜಕಾರಣಿಯೋ, ವಕೀಲೆಯೋ,
ಆರಕ್ಷಕಿಯೋ, ಕೃಷಿಕಳೋ
ಏನಾದರೂ ಆಗು ನೀ ಸರಿಗಟ್ಟಬಲ್ಲೆ ಪುರುಷ ಪರಾಕ್ರಮವ…
ಪುರುಷನಿಗೆ ಹೆಗಲೆಣೆಯಾಗಿ ವಾತ್ಸಲ್ಯನಿಧಿಯಾಗಿ
ಬಾಂಧವ್ಯಸುಧೆಯಾಗಿ
ಜಗನ್ಮಿತ್ರೆಯಾಗಿ
ಬೆಳಗು ಜಗದಲಿ
ನೀ ಧ್ರುವತಾರೆಯಾಗಿ…
- ಶಿವದೇವಿ ಅವನೀಶಚಂದ್ರ – ಕವಿಯತ್ರಿ, ಕೊಡಗು.
