ನಾನು, ಜೋಗಿ ಮತ್ತು ಮರಕಿಣಿಯವರ ಜೊತೆ ಪ್ರತೀ ವಾರ ಜಾನಕಿ ಬಗ್ಗೆ ಚರ್ಚಿಸುತ್ತಿದ್ದೆ. ನನಗೆ ತಿಳಿಯದಂತೆ ಜಾನಕಿಯ ರೂಪ ನನ್ನ ಮನಸ್ಸಿನಲ್ಲಿ ಮೂಡಲು ಶುರುವಾಗಿತ್ತು.ಈ ಪುಸ್ತಕವನ್ನು ನಾನೇಕೆ ಕೊಂಡೆ? ಇನ್ನೂ ಉತ್ತರ ಸಿಕ್ಕಿಲ್ಲ.ಪತ್ರಕರ್ತ ಮಾಕೋನಹಳ್ಳಿ ವಿನಯ್ ಮಾಧವ ಅವರ ಲೇಖನಿಯಲ್ಲಿ ಜೋಗಿಯವರ ಜಾನಕಿ… ಮುಂದೆ ಓದಿ…
ಈ ಪುಸ್ತಕ ಬಿಡುಗಡೆಯಾಗುವ ಹೊತ್ತಿಗೆ ಅಲ್ಲೇ ಜೋಗಿ ಓಡಾಡುತ್ತಿದ್ದರು. ʻನಿಮ್ಮ ಜಾನಕಿ ಪುಸ್ತಕದ ಒಂದು ಪ್ರತಿ ಕೊಡಿʼ ಎಂದು ಕೇಳಿದ್ದರೆ ಕೊಡುತ್ತಿದ್ದರು. ಅಷ್ಟು ಸಲಿಗೆ ಇದೆ. ಅದಕ್ಕೆ ಬೇಕಾದರೆ ಒಂದು ಸಹಿ ಹಾಕಿಸಿಕೊಳ್ಳಬಹುದಿತ್ತು. ರಾಜೇಶ್ ಶೆಟ್ಟಿ ಮತ್ತು ಸಚಿನ್ ತೀರ್ಥಹಳ್ಳಿ ಪುಸ್ತಕಗಳಿಗೆ ಸಹಿ ಹಾಕಿಸಿಕೊಂಡಿದ್ದೆ. ಆದರೆ, ʻಜಾನಕಿʼ ನನಗೆ ಹಾಗೇ ಬೇಕಿತ್ತು ಅಂತ ಅನ್ನಿಸುತ್ತೆ. ಯಾರ ಹಂಗೂ ಇಲ್ಲದೆ…
ಜಾನಕಿ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಇಡೀ ಕರ್ನಾಟಕ ಓದಿ, ವಿಶ್ಲೇಷಿಸಿ, ಅರೆದು ಕುಡಿದಿರುವ ಕೆಲವೇ ಸಾಹಿತ್ಯಗಳಲ್ಲಿ ಇದೂ ಒಂದು. ಮಧ್ಯೆ ನನ್ನದೇನಿದೆ? ಆಕೆಯನ್ನು ಏಕೆ ಇನ್ನೂ ಹಚ್ಚಿಕೊಂಡಿರುವೆ? ಮತ್ತೆ ಓದುತ್ತೇನಾ? ಅದೂ ನನಗೆ ಗೊತ್ತಿಲ್ಲ.
#ಜಾನಕಿ_ಕಾಲಂ ಬರಲು ಆರಂಭವಾದಾಗ ನಾನು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇದ್ದೆ. ನಚ್ಚಿ, ವೈಎನ್ಕೆ, ಜೋಗಿ, ಉದಯ ಮರಕಿಣಿಯವರ ಮಧ್ಯೆ, ಪಿಳಿ ಪಿಳಿ ಕಣ್ಣು ಬಿಡುತ್ತಾ, ಸಾಹಿತ್ಯವನ್ನು ನನಗೆ ತಿಳಿದಂತೆ, ಬಾಯಿಗೆ ಬಂದಂತೆ ಅವರೆದುರು ವಿಶ್ಲೇಷಣೆ ಮಾಡುತ್ತಿದ್ದೆ. ಈ ವಿಶ್ಲೇಷಣೆಗೆ ಹೊಸ ಆಯಾಮ ನೀಡಿದ್ದೇ ಜಾನಕಿ.
ದಿನ ಕಳೆದಂತೆ, ನನ್ನೊಳಗೆ ಜಾನಕಿ ಒಂದು ರೂಪ ತಳೆಯಲು ಆರಂಭಿಸಿದಳು. ಆಗ, ಗುರುವಾರ ರಾತ್ರಿ ಕಡ್ಡಾಯವಾಗಿ #ಹಾಯ್_ಬೆಂಗಳೂರು ಆಫೀಸಿಗೆ ನಾನು, ಪ್ರಕಾಶ್ ಮತ್ತು ಅಶೋಕ್ ರಾಮ್ ಹಾಜರಾಗುತ್ತಿದ್ದೆವು. ಎಡಿಶನ್ ಮುಗಿಯುವವರೆಗೆ ಕಾಯ್ದು, ರವಿ ʻಗೆಟ್ ಔಟ್ʼ ಎಂದು ಹೇಳುವವರೆಗೆ ತಲೆ ತಿಂದು ಬರುತ್ತಿದ್ದೆವು. ಮೆಲ್ಲಗೆ ಕೇಳಿದೆ: ʻಈ ಜಾನಕಿ ಯಾರು?ʼ
ʻಅಯ್ಯೋ… ತಲೆ ಕೆಟ್ಟವಳು ಬಿಡಿ,ʼ ಎಂದು ತೇಲಿಸಿದರು. ಪಟ್ಟು ಬಿಡಲಿಲ್ಲ. ಪ್ರೆಸ್‌ನವನ ಫೋನ್‌ಗಳು, ಬರದಿರುವ ಕಾಲಂಗಳು ಅಂತ ತಲೆ ಕೆಡಿಸಿಕೊಂಡು ಓಡಾಡುತ್ತಿದ್ದ ನಿವೇದೀತಳಿಗೂ ಕೇಳಿದೆ: ನಿವಿ… ಯಾರೆ ಇದು ಜಾನಕಿ?

ʻಗೊತ್ತಿಲ್ಲ ಕಣೋ… ಯಾರೋ ಬಾಸ್ ಫ್ರೆಂಡ್. ಯಾವಾಗಲೂ ಕಾಲಂ ಬರೋದೇ ಲೇಟು,ʼ ಅಂತ ಮುಖ ಸೊಟ್ಟಗೆ ಮಾಡಿದಳು. ಬೆಂಗಳೂರಿಗೆ ಬರುವ ಮುಂಚೆಯೇ ಶಿವಮೊಗ್ಗದ ಡಿವಿಎಸ್ ಕಾಲೇಜಿನ ದಿನದಿಂದ ಗೊತ್ತಿದ್ದ ನಿವೇದೀತಳ ಮಾತನ್ನು ಮೊದಲ ಬಾರಿಗೆ ನಂಬಿರಲಿಲ್ಲ. ಏಕೆಂದರೆ, ಹಾಯ್ ಬೆಂಗಳೂರು ಆಫಿಸನ್ನೇ ಪ್ರಪಂಚ ಮಾಡಿಕೊಂಡಿದ್ದ ನಿವಿಯ ಗಮನಕ್ಕೆ ಬರದೆ, ಆ ಆಫೀಸಿನ ಕಸ ಗುಡಿಸೋಕೂ ಆಗಲ್ಲ ಅಂತ ನನಗೆ ಗೊತ್ತಿತ್ತು.
ಅಲ್ಲಿಂದ ಮುಂದೆ, ನಾನು ಜೋಗಿ ಮತ್ತು ಮರಕಿಣಿಯವರ ಜೊತೆ ಪ್ರತೀ ವಾರ ಜಾನಕಿ ಬಗ್ಗೆ ಚರ್ಚಿಸುತ್ತಿದ್ದೆ. ನನಗೆ ತಿಳಿಯದಂತೆ ಜಾನಕಿಯ ರೂಪ ನನ್ನ ಮನಸ್ಸಿನಲ್ಲಿ ಮೂಡಲು ಶುರುವಾಗಿತ್ತು. ಮುಖ ಅಸ್ಪಷ್ಟವಾಗಿದ್ದರೂ, ಅಪಘಾತಕ್ಕೆ ಮುಂಚೆ ನನ್ನ ಅಮ್ಮನಿಗೆ ಇದ್ದಂತ ದಟ್ಟವಾದ, ನೀಳ ಕೇಶರಾಶಿ ನನ್ನ ಮನಸ್ಸಿಗೆ ಬರುತ್ತಿತ್ತು. ಅಮ್ಮನಿಗೆ ಅಪಘಾತ ಆಗುವವರೆಗೆ ನಾನು ಊರಿಗೆ ಹೋದಾಗಲೆಲ್ಲ ಅಮ್ಮನ ಜಡೆ ಹಿಡಿದುಕೊಂಡೇ ತಿರುಗುತ್ತಿದ್ದೆ.

(ಜೋಗಿಯವರ ‘ಜಾನಕಿ’ ಮುಖಪುಟದ ಹುಡುಗಿ ಮತ್ತು ಜೋಗಿಯವರ ಮಗಳು ಖುಷಿ)
ಪ್ರತಿವಾರದ ಈ ಚರ್ಚೆಯ ನಡುವೆಯೇ ಮರಕಿಣಿ ಜೋಗಿಗೆ ಹೇಳಿದ್ದು: ಇವರು ಇಷ್ಟು ಚೆನ್ನಾಗಿ ವಿಶ್ಲೇಷಣೆ ಮಾಡುವವರು, ಅಷ್ಟೇ ಚೆನ್ನಾಗಿ ಬರೆಯುತ್ತಾರೆ. ಇವರ ಕೈಯಲ್ಲಿ ಬರೆಸಿ ಮಾರಾಯ್ರೆ, ಅಂತ. ಜೋಗಿ ಸಾಪ್ತಾಹಿಕ ಪ್ರಭಕ್ಕೆ ಒಂದು ಲೇಖನ ಬರೆಯಲು ಹೇಳಿದರು. ಅಲ್ಲಿಂದ ಶುರುವಾಯ್ತು, ಇಂಗ್ಲಿಷ್ ಪತ್ರಕರ್ತನ ಕನ್ನಡ ಬರವಣಿಗೆಯ ಪಯಣ.
ಹೀಗೇ #ಜಾನಕಿಯ ವಿಷಯ ಮಾತನಾಡುತ್ತಿದ್ದಾಗ, ʻಜಾನಕಿ ಯಾರೂ ಅಲ್ಲ ಕನ್ಲಾ… ಜೋಗಿನೇ. ಕನ್ನಡ ಪ್ರಭದಲ್ಲಿ ಇದ್ದಾರಲ್ಲ, ಅದಕ್ಕೆ ಈ ಹೆಸ್ರಲ್ಲಿ ಬರೀತ್ತಿದ್ದಾರೆ ಅಷ್ಟೆ,ʼ ಎಂದು ಪ್ರಕಾಶ ಹೇಳಿದಾಗ, ಕುಸಿದು ಬಿದ್ದ ಅನುಭವವಾಗಿತ್ತು. ಆಗ ನನ್ನ ವಯಸ್ಸು ಈಗಿನಕ್ಕಿಂತ ಇಪ್ಪತ್ತು ವರ್ಷ ಕಡಿಮೆ ಇತ್ತು. ಅಮ್ಮನ ಕೂದಲು ಅಪಘಾತವಾದಮೇಲೆ ಬಾಬ್ ಕಟ್ ಆಗಿತ್ತು.
ಆ ಕೇಶರಾಶಿಗೆ ಒಂದು ಮುಖ ನೋಡುವ ಬದಲು, ಸಿಗರೇಟ್ ಸುಡುತ್ತಾ, ತಲೆ ಮೇಲೆ ಒದ್ದೆ ಕರ್ಚೀಫ್, ಟೇಬಲ್ ಮೇಲೆ ಡಾರ್ಟ್ ಮಾತ್ರೆಗಳ ಪಟ್ಟಿ ಇಟ್ಟುಕೊಂಡ ಜೋಗಿಯ ಮುಖ ಹೊಂದಿಸಲು ಸಾಧ್ಯವಾಗಲೇ ಇಲ್ಲ. ಎರಡು ದಿನ ತೊಳಲಾಡಿದೆ. ಆದರೂ, ಆ ವಾರದ ಜಾನಕಿಯನ್ನು ಕರೆದುಕೊಂಡು, ಮತ್ತೆ ಜೋಗಿ-ಮರಕಿಣಿಯವರ ಜೊತೆ ಚರ್ಚೆಗೆ ಕುಳಿತೆ. ಒಂದೆರೆಡು ವಾರದಲ್ಲಿ ಮನಸ್ಸು ಹದಕ್ಕೆ ಬಂತು. ಇನ್ನೊಂದೆರೆಡು ವಾರದಲ್ಲಿ, ನನಗೆ ಜಾನಕಿಯ ಗುಟ್ಟು ರಟ್ಟಾಗಿರುವುದು ರವಿಗೆ ಮತ್ತು ಜೋಗಿಗೆ ಗೊತ್ತಾಯಿತು.
ಇಂಡಿಯನ್ ಎಕ್ಸ್‌ಪ್ರೆಸ್ ಬಿಟ್ಟ ಮೇಲೆ ಜಾನಕಿ ಕಾಲಂ ಓದುವುದು ಕಡಿಮೆಯಾಯಿತು. ಆದರೂ, ಜಾನಕಿ ನನ್ನನ್ನು ಕಾಡುತ್ತಲೇ ಇದ್ದಳು. ಸಂಜೆ ಸೇರಿಕೊಂಡಾಗ, ಜೋಗಿ ಒಮ್ಮೊಮ್ಮೆ ನನಗೆ ಕಾಟ ಕೊಡುವ ಹಾಗೆ……
- ಮಾಕೋನಹಳ್ಳಿ ವಿನಯ್ ಮಾಧವ (ಪತ್ರಕರ್ತರು,ಲೇಖಕರು) ಬೆಂಗಳೂರು
