ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಸುಳಿದಾಡಿದಾಗ- (ಭಾಗ – ೧)

ಜಾತ್ರೆಯ ಗೌಜು ಗದ್ದಲದಲ್ಲಿ ಸುಮ್ಮನೆ ತಿರುಗುತ್ತಲಿದ್ದೆ. ಎಲ್ಲಿ ನೋಡಿದರೂ ಜನವೇ ಜನ. ಹಳ್ಳಿಯ ಜನ, ಪೇಟೆಯ ಜನ, ಪಂಚೆ ತೊಟ್ಟವರು, ಜೀನ್ಸ್ ಹಾಕಿದವರು, ಅಪ್ಪಟ ಹಳ್ಳಿಯ ಉಡುಗೆ ಧರಿಸಿದವರು, ಮಾಡ್ ಆಗಿರುವವರು ಒಂದೇ ಎರಡೇ ವಿವಿಧ ವೇಷಭೂಷಣಗಳ ಸಂತೆಯೇ ಅಲ್ಲಿ ನೆರೆದಂತಿತ್ತು. ಸಿದ್ಧರಾಮ ಕೂಡ್ಲಿಗಿ ಅವರ ನೆನಪಿನಂಗಳದಲ್ಲಿ ಜಾತ್ರೆ ಅನುಭವವನ್ನು ತಪ್ಪದೆ ಮುಂದೆ ಓದಿ….

ನಮ್ಮ ಊರು ಕೊಪ್ಪಳ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಪ್ರಸಿದ್ಧವಾದುದು. ಪ್ರತಿ ಸಲವೂ ನಾನು ಜಾತ್ರೆಯಲ್ಲಿ ನನಗೆ ವೈವಿಧ್ಯಮಯ ಚಿತ್ರಗಳು ಸಿಗುವವೆಂದೇ ಹೋಗುತ್ತಿರುತ್ತೆನೆ. ಅಂತೆಯೇ ನಿನ್ನೆ ಮಧ್ಯಾಹ್ನ ಜಾತ್ರೆಗೆ ಹೋಗಿದ್ದೆ. ಜಾತ್ರೆಯಲ್ಲಿ ನನಗೆ ವಿಶೇಷವಾಗಿ ಕಂಡಂತಹವುಗಳನ್ನು ಕ್ಲಿಕ್ ಮಾಡ್ತಾ ಹೋಗ್ತೇನೆ.

ಜಾತ್ರೆಯ ಅಂಗಡಿಗಳಿಗೆ ಕಂಪೌಂಡ್ ರೀತಿಯಲ್ಲಿ ವ್ಯವಸ್ಥೆ ಮಾಡಿ ಅದಕ್ಕೆ ನಾಲ್ಕೈದು ಮುಖ್ಯ ದ್ವಾರಗಳನ್ನು ಮಾಡಲಾಗಿದೆ. ಜನಜಂಗುಳಿಯನ್ನು ನಿಯಂತ್ರಿಸಲಿಕ್ಕೆ. ನಾನು ಅಂಥ ಒಂದು ದ್ವಾರದಿಂದ ಒಳಹೊಕ್ಕೆ.



ಇಲ್ಲಿ ಒಳಗೆ ಪ್ರತಿ ವಿಷಯಕ್ಕೂ ಒಂದೊಂದು ಸಾಲುಗಳನ್ನು ಮಾಡಲಾಗಿದೆ. ಅಂದರೆ ಸ್ಟೇಶನರಿ ವಸ್ತುಗಳ ಅಂಗಡಿಗಳೇ ಪೂರ್ತಿ ಒಂದು ಸಾಲು, ಬಳೆ ಅಂಗಡಿಗಳದು, ಮಕ್ಕಳ ಆಟಿಕೆಗಳದ್ದು, ಪೂಜಾ ಸಾಮಗ್ರಿಗಳದ್ದು, ಮನೆಗೆ ಬೇಕಾಗುವ ಅಡುಗೆ ಸಾಮಗ್ರಿಗಳದ್ದು, ರೈತರ ಬೇಸಾಯಕ್ಕೆ ಸಂಬಂಧಪಟ್ಟ ಸಾಮಗ್ರಿಗಳದ್ದು ಹೀಗೆ.

ನನಗೆ ಅಲ್ಲಿ ಮನಸೆಳೆದದ್ದು ಮುಖವಾಡಗಳದ್ದು. ಸಿಂಹ, ಹುಲಿ ವೇಷಗಳ ರೀತಿಯಲ್ಲಿ ಅಲ್ಲಿ ಮುಖವಾಡಗಳನ್ನು ತೂಗುಬಿಟ್ಟಿದ್ದರು. ನಾವೂ ಸಹ ಮೇಲೆ ಅಲ್ಲ ಒಳಗೆ ಮುಖವಾಡ ತೊಟ್ಟವರೇ ಅಲ್ಲವೇ ? ಈ ಹುಲಿ, ಸಿಂಹದ ಕ್ರೂರತೆ ಆಗಾಗ ಹೊರಗೆ ಬರುತ್ತಿರುತ್ತವೆ. ಸಮಯ ಸಂದರ್ಭ ನೋಡಿ. ಅಲ್ಲಿ ನೋಡಿದಾಗ ನನ್ನ ಮನಸಿನಲ್ಲಿ ಮೂಡಿದ್ದು ಇದು. ಇರಲಿ.



ಅದರ ನಂತರ ಮನಸೆಳೆದದ್ದು ಪ್ಲಾಸ್ಟಿಕ್ ಹೂಗಳ ಅಂಗಡಿ. ಎಷ್ಟೊಂದು ವಿವಿಧ ಬಗೆಯ ಹೂಗಳು. ಕುಗ್ಗಲ್ಲ, ಬಾಡಲ್ಲ, ನೀರು ಬೇಕಿಲ್ಲ, ಬೆಳಕು ಬೇಕಿಲ್ಲ ಏನೂ ಬೇಕಿಲ್ಲ. ಸದಾ ಅದೇ ರೀತಿಯಾಗಿರುತ್ತವೆ. ಮಾಸಿದಾಗ ಒಂದಷ್ಟು ನೀರು ಹಾಕಿ ತೊಳೆದರೆ ಮುಗೀತು. ವಾಸನೆಯೊಂದಿರಲ್ಲ ಅಷ್ಟೇ.

ನಾವೂ ಸಹ ಪ್ಲಾಸ್ಟಿಕ್ ಹೂಗಳಂತೇ ಆಗಿದ್ದೇವೆ. ನಿಜವಾದ ಹೂಗಳಂತೇ ನಮ್ಮ ಮನಸು ಮೃದುವಾಗಿಲ್ಲ, ಮಧುರತೆ ಇಲ್ಲ, ಭಾವನೆಗಳ ಸಂತೆಯಲ್ಲಿ ಕುಗ್ಗುವುದು, ಬಾಡುವುದು ಇಲ್ಲ, ಮೇಲೆ ಬಣ್ಣಬಣ್ಣ ಅಲಂಕರಿಸಿಕೊಂಡು, ಯಾವುದೇ ಮನದಾಳದ ಭಾವನೆಗಳಿರದಂತೆ, ಒಳಗೆ ನೀರಸತೆ ಇದ್ದರೂ ಮೇಲೆ ನಗುವಿನ ಮುಖವಾಡ ಇರುವ ನಾವೂ ಪ್ಲಾಸ್ಟಿಕ್ ಹೂಗಳಂತೇ ಅನಿಸಿಬಿಟ್ಟಿತು.

ಜಾತ್ರೆಯ ಗೌಜು ಗದ್ದಲದಲ್ಲಿ ಸುಮ್ಮನೆ ತಿರುಗುತ್ತಲಿದ್ದೆ. ಎಲ್ಲಿ ನೋಡಿದರೂ ಜನವೇ ಜನ. ಹಳ್ಳಿಯ ಜನ, ಪೇಟೆಯ ಜನ, ಪಂಚೆ ತೊಟ್ಟವರು, ಜೀನ್ಸ್ ಹಾಕಿದವರು, ಅಪ್ಪಟ ಹಳ್ಳಿಯ ಉಡುಗೆ ಧರಿಸಿದವರು, ಮಾಡ್ ಆಗಿರುವವರು ಒಂದೇ ಎರಡೇ ವಿವಿಧ ವೇಷಭೂಷಣಗಳ ಸಂತೆಯೇ ಅಲ್ಲಿ ನೆರೆದಂತಿತ್ತು. ನಾನು ಸುಮ್ಮನೆ ಸುತ್ತಾಡುವಾಗಲೇ ” ಓ ಭಯ್ಯಾ ” ಎಂದು ಯಾರೋ ಕರೆದಂತಾಗಿ ನನ್ನ ಲೋಕದಿಂದ ಎಚ್ಚರಗೊಂಡು ಯಾರಪ್ಪ ಅಂತ ತಿರುಗಿ ನೋಡಿದರೆ ಒಂದು ಅಂಗಡಿಯವನು ಹೊರಗೇ ಬಂದು ” ನಮ್ ಅಂಗಡೀದು ಫೋಟೊ ತೆಗೆದುಕೊಡ್ತೀಯಾ, ವಾಟ್ಸಪ್ ಐತೆ ” ಅಂದ. ನನಗೆ ಥಟ್ಟನೆ ಅರಿವಿಗೆ ಬಂತು. ನಾನೊಬ್ಬ ವೃತ್ತಿನಿರತ ಫೋಟೊಗ್ರಾಫರ್ ನಂತೆಯೇ ಅವನಿಗೆ ಕಂಡಿದ್ದೆ. ನಾನು ಹೆಚ್ಚು ವಿವರಗಳನ್ನು ನೀಡದೇ “ಇಲ್ಲ ಇಲ್ಲ ನಾನು ಸ್ಟುಡಿಯೋ ಫೋಟೊಗ್ರಾಫರ್ ಅಲ್ಲ” ಅಂತ ಮುಗುಳ್ನಕ್ಕು ಮುಂದುವರೆದೆ.



ನನ್ನ ಗಮನ ಯಾವಾಗಲೂ ಮಕ್ಕಳ ಮೇಲಿರುತ್ತದೆ. ಯಾವುದೇ ಬಿಂಕ, ಬಿಗುಮಾನ, ಹೀಗೇ ಇರಬೇಕು, ಹೀಗೇ ನಡೆದುಕೊಳ್ಳಬೇಕು, ಊಹುಂ ಇವಾವ ನಿಯಮಗಳೂ ಮಕ್ಕಳಿಗೆ ಅನ್ವಯಿಸುವುದಿಲ್ಲ. ಇನ್ನು ಜಾತ್ರೆಯಲ್ಲಿ ಕೇಳಬೇಕೆ ? ಅವರದೇ ಕಾರುಭಾರು. ಅವರು ಕೇಳಿದ್ದು ತಾಯಂದಿರು, ತಂದೆ, ಅಕ್ಕ, ಮಾವ ಯಾರೇ ಇರಲಿ ಕೊಡಿಸಲೇಬೇಕು. ಅಂಥ ದಿವ್ಯ ಭಾವಗಳನ್ನು ನಾನು ಹುಡುಕುತ್ತಿರುತ್ತೇನೆ.

ಅಲ್ಲೊಂದು ಪುಟ್ಟ ಹಳ್ಳಿಯ ಹೆಣ್ಣು ಮಗು ನನ್ನ ದೃಷಿಗೆ ಕಂಡೇಬಿಟ್ಟಿತು. ಅದು ಕೈಯಲ್ಲಿ ಹಿಡಿದ ಪ್ಲಾಸ್ಟಿಕ್ ಚಾಳೀಸಿನ ಒಂದು ಭಾಗ ಬಿದ್ದುಹೋಗಿದೆ. ಅದನ್ನು ಏನು ಮಾಡುವುದು ? ಎಂಬ ಚಿಂತೆಯಲ್ಲಿ ಅದು ಮುಳುಗಿತ್ತು. ಸುತ್ತ ಸಾವಿರಾರು ಜನರ ಜಾತ್ರೆ. ಅತ್ತಿಂದಿತ್ತ ತಮ್ಮದೇ ಲೋಕದಲ್ಲಿ ತಿರುಗಾಡುವ ಜನರ ಮಧ್ಯೆ ಈ ಮಗು ತನ್ನ ಚಿಂತೆಯೇ ದೊಡ್ದ ಪ್ರಪಂಚ ಎಂಬ ಭಾವದೊಂದಿಗೆ ನಿಂತಿರೋದು ನನ್ನ ಮನಸೆಳೆಯಿತು. ಪಟ್ಟನೆ ಆ ಮಗುವಿನ ಫೋಟೊಗಳನ್ನು ಕ್ಲಿಕ್ಕಿಸಿದೆ. ಸುತ್ತಲಿದ್ದವರು ’ಇವನೇನೋ ಮಕ್ಕಳ ಫೋಟೊ ತೆಗೀತಿದಾನೆ’ ತಲೆಕೆಟ್ಟವನಿರಬೇಕೆಂದುಕೊಂಡರೇನೋ ನೋಡ್ತಾ ಹೋಗುತ್ತಿದ್ದರು. ನನಗಂತೂ ಆ ಮಗುವಿನ ಲೋಕವೇ ಬೆರಗು ಮೂಡಿಸಿತ್ತು. ಅಂಥ ಮುಗ್ಧತೆ, ಸರಳತೆ, ಭಾವನಾ ಲೋಕ, ತನ್ಮಯತೆ, ಇಡೀ ಜಗತ್ತೇ ಬೇರೆ ನಾನೇ ಬೇರೆ ಎಂಬ ವಿಭಿನ್ನ ಭಾವ ನಮ್ಮಿಂದ ಸಾಧ್ಯವೇ ಇಲ್ಲ.



ಇನ್ನೊಂದು ಕಡೆ ಮಣ್ಣಿನ ಧೂಳೇಳಬಾರದು ಎಂದು ಅದೇ ತಾನೆ ಟ್ಯಾಂಕರ್ ದಾರಿಯುದ್ದಕ್ಕೂ ನೀರು ಹಾಕಿ ಹೋಗಿತ್ತು. ಅಲ್ಲಿ ನಿಂತಿದ್ದ ಸ್ವಲ್ಪವೇ ನೀರಲ್ಲಿ ಇಬ್ಬರು ಪುಟ್ಟ ಮಕ್ಕಳು ಆಡುತ್ತಿದ್ದರು. ಅವರೂ ಹಾಗೇ ಸುತ್ತಲಿನ ಪರಿವೆಯೇ ಅವರಿಗಿರಲಿಲ್ಲ. ತಮ್ಮದೆ ಲೋಕ. ತಮ್ಮ ತಮ್ಮೊಳಗೇ ಮಾತನಾಡುತ್ತ, ನೀರನ್ನು ಕೈಯಿಂದ ಬಡಿಯುತ್ತ, ಕೈಯೆಲ್ಲ ಮಣ್ಣಾದರೂ ಅದೆಲ್ಲ ಸಹಜ ಎಂಬಂತೆ ನಗು ನಗುತ್ತ ಆಡುತ್ತ, ಮಾತನಾಡುತ್ತ ಲಹರಿಯಲ್ಲಿದ್ದರು. ಅಲ್ಲಿಯೂ ಸುತ್ತಲಿನವರ ಗಮನ ಆ ಮಕ್ಕಳ ಮೇಲಿರಲೇ ಇಲ್ಲ. ತಮ್ಮ ಪಾಡಿಗೆ ತಾವು ತಿರುಗಾಡುತ್ತಿದ್ದರೆ, ಜಾತ್ರೆಯ ಲೋಕಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವಂತೆ ನಿರಾಳವಾಗಿ ಕೆಸರು ನೀರಲ್ಲಿ ಆಡುತ್ತಿದ್ದ ಮಕ್ಕಳು. ಮಹಾನಗರಗಳ ಜನ ತಮ್ಮ ಮಕ್ಕಳನ್ನು ಎಂದಾದರೂ ಹೀಗೆ ಬಿಟ್ಟದ್ದುಂಟೇ ? ಸಾಧ್ಯವಿಲ್ಲ. ಮೈ, ಬಟ್ಟೆ ಎಂದಿಗೂ ಕೊಳೆಯಾಗಬಾರದು, ಧೂಳಾಗಬಾರದು, ಕೆಸರಾಗಬಾರದು ತುಂಬಾ ಜಾಗರೂಕರಾಗಿರಬೇಕು ಹಾಗೇ ಹೀಗೇ ಅಂತ ನೂರೆಂಟು ನಿಯಮಗಳು. ಎಲ್ಲ ನಿಯಮಗಳ ಗಾಳಿಗೆ ತೂರಿ, ಬಿಸಾಕಿ ಈ ಮಕ್ಕಳು ಆರಾಮವಾಗಿ ಆಡೋದು ನನಗೆ ಖುಷಿ ಕೊಟ್ಟಿತು.



ಅಲ್ಲಿ ಮತ್ತೊಂದು ಮಗು ಬಹುಶ: ಶಾಲೆಯ ಡ್ರೆಸ್ ನಲ್ಲಿಯೇ ಜಾತ್ರೆಗೆ ಕರೆದುಕೊಂಡು ಬಂದಿರಬಹುದು. ಅವನಿಗೆ ಮನೆಯವರು ಪ್ಲಾಸ್ಟಿಕ್ ವಿಮಾನ ಕೊಡಿಸಿದ್ದಾರೆ. ಅದನ್ನು ಅವನು ಎಷ್ಟು ಆಸಕ್ತಿ, ಕುತೂಹಲ, ಸಂತೋಷದಿಂದ ನೋಡುತ್ತಿದ್ದನೆಂದರೆ, ಅವನಿಗೆ ಪ್ರಪಂಚವೇ ವಿಮಾನದಂತೇ ಕಂಡಿರಬಹುದೇನೋ. ಅದನ್ನು ನೋಡಿದ್ದೇ ನೋಡಿದ್ದು, ಅದನ್ನು ಕೈಯಲ್ಲಿ ಹಿಡಿದುಕೊಂಡೇ ಅದನ್ನು ನೋಡುತ್ತಲೇ ಓಡಾಡುತ್ತಿದ್ದ. ಅವನ ಆಸಕ್ತಿ, ಕುತೂಹಲ ನನ್ನ ಕೆಮರಾದಲ್ಲಿ ಸೆರೆಯಾಯಿತು. ವಿಶೇಷವೇನೆಂದರೆ ಅವನ ಚಡ್ಡಿಯ ಬೆಲ್ಟ್ ಬಿಚ್ಚಿದ್ದೂ ಸಹ ಅವನ ಗಮನಕ್ಕೆ ಬಂದಿರಲಿಲ್ಲ. ಎಷ್ಟು ತನ್ಮಯತೆ ಅಲ್ಲವೆ ?

ಇವೆಲ್ಲ ಹಳ್ಳಿಗಾಡಿನ ಮಕ್ಕಳದಾದರೆ ಅಲ್ಲೊಂದು ಕಡೆ ಸ್ವಲ್ಪ ಸ್ಥಿತಿವಂತರ ಮಕ್ಕಳೂ ಇದ್ದವು. ಅವು ನೀಟಾಗಿ ಡ್ರೆಸ್ ಮಾಡಿಕೊಂಡು ಅಪ್ಪನ ಜೊತೆ ಬಂದಿದ್ದವು. ಅದರ ಕಡೆ ನನ್ನ ಗಮನ ಹರಿಯಿತು. ಆಗಲೇ ಆ ಮಗುವಿನ ಅಪ್ಪ ಆಟಿಕೆಯನ್ನು ಕೊಡಿಸಿದ್ದರು. ಆದರೂ ಮಗುವಿಗೆ ಅಲ್ಲಿರುವ ಥರೇವಾರಿ, ನೂರೆಂಟು ಆಟಿಕೆಗಳ ಮೇಲೇ ಕಣ್ಣು. ಏನು ತೊಗೋಳ್ಳಲಿ ಏನೂ ಬಿಡಲಿ ಎಂಬಂತೆ. ಮಕ್ಕಳ ಲೋಕವೆಂದರೆ ಆಟಿಕೆಗಳದ್ದು. ಅವುಗಳನ್ನು ಬಿಟ್ಟು ಆ ಮಕ್ಕಳಿಗೆ ಬೇರೆ ಯಾವುದೇ ವಿಚಾರಗಳೂ ಇರಲ್ಲ. ಎಂಥ ಮುಗ್ಧ ಮನಸು, ಭಾವ. ಆ ಮಗು ಆಸಕ್ತಿಯಿಂದ ಆಟಿಕೆಗಳನ್ನು ನೋಡುತ್ತಿರುವುದೇ ನನ್ನ ಕಣ್ಣಿಗೆ ಕಟ್ಟಿದಂತಿತ್ತು. ನನ್ನ ಕೆಮರಾ ಆಗಲೇ ಸೆರೆಹಿಡಿದಾಗಿತ್ತು.

(ಒಂದೊಂದೇ ಫೋಟೊ ನೋಡಿದಾಗ ಮಕ್ಕಳ ಲೋಕ ನಿಮ್ಮ ಕಣ್ಣೆದುರು ಅನಾವರಣಗೊಳ್ಳುವದು)

ಮುಂದುವರೆಯುವುದು………..


  • ಸಿದ್ಧರಾಮ ಕೂಡ್ಲಿಗಿ

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading