#ಜಯದೇವಿತಾಯಿ ಗಡಿನಾಡ ಕನ್ನಡಿಗರ ಏಕೀಕರಣಕ್ಕಾಗಿ ಟೊಂಕಕಟ್ಟಿ ನಿಂತವರು. ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಮತ್ತು ಅವರನ್ನು ಕನ್ನಡದ ತಾಯಿ ಎಂದೇ ಖ್ಯಾತರಾದವರು. ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದವರು ಇವರೊಬ್ಬರೇ. ಲೇಖಕರಾದ #ರಘುರಾಂ ಅವರು ಓದುಗರಿಗೆ ಉತ್ತಮ ಲೇಖನವನ್ನು ನೀಡಿದ್ದಾರೆ.
ಇವರು ಹುಟ್ಟಿದ್ದು ಸೊಲ್ಲಾಪುರದಲ್ಲಿ ೧೯೧೨ ರಲ್ಲಿ. ಮರಾಠಿ ಶಾಲೆಯಲ್ಲಿ ಶಿಕ್ಷಣ ಪ್ರಾರಂಭವಾಯಿತು. ಆರನೇಯ ತರಗತಿಯವರೆಗೆ ಮಾತ್ರ ಓದಿದ್ದು, ಹದಿನಾಲ್ಕನೇಯ ವಯಸ್ಸಿನಲ್ಲಿ ಮದುವೆಯಾದ ಇವರು ನಂತರ ಕನ್ನಡ ಕಲಿತರು.
ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಬರೆದು, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹ ಕೊಡಲು ತಮ್ಮ ಜೀವನವನ್ನು ಮೀಸಲಿಟ್ಟರು. ಇಂದಿನ ಸೊಲ್ಲಾಪುರ, ಬೀದರ್, ಬೆಳಗಾವಿ, ಸಾಂಗ್ಲಿ ಮುಂತಾದ ಕಡೆ ಕನ್ನಡ ಶಾಲೆಗಳನ್ನು ಪ್ರಾರಂಭ ಮಾಡಿದರು. ತಮ್ಮ ಸ್ವಂತ ಹಣದಲ್ಲಿ ಕನ್ನಡದ ನಾಲ್ಕು ನೂರು ಶಿಕ್ಷಕರನ್ನು ನೇಮಿಸಿದ್ದರು. ಮಹಿಳೆಯರಿಗೆ ವಿದ್ಯಾಭ್ಯಾಸ ಕಲಿಸಲು ೨೭ ಕನ್ನಡ ಮಹಿಳಾ ಶಾಲೆಗಳನ್ನು ತೆರೆದರು. ಮನೆ ಮನೆಗಳಿಗೆ ತೆರಳಿ ಹೆಣ್ಣು ಮಕ್ಕಳನ್ನು ವಿಧ್ಯಾಭ್ಯಾಸಕ್ಕೆ ಕಳುಹಿಸಿಕೊಡಲು ಮನವೊಲಿಸುತ್ತಿದ್ದರು. ಇವರ ಹಲವಾರು ಸಾಹಿತ್ಯಗಳಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಬಹು ದೊಡ್ಡ ರೀತಿಯಲ್ಲಿ ಭಾಗಿ ಆಗಿದ್ದರು.

ಜಯದೇವಿತಾಯಿ ಲಿಗಾಡೆ.
ಜಯಗೀತ, ತಾಯಿಯ ಪದಗಳು, ತಾರಕ ತಂಬೂರಿ ಇವು ಇವರು ಬರೆದ ಕೆಲವು ಕನ್ನಡದ ಕೃತಿಗಳು. ಸಿದ್ದರಾಮ, ಸಿಧ್ಧವಾಣಿ, ಬಸವದರ್ಶನ, ಬಸವ ವಚನಾಮೃತ ಇತ್ಯಾದಿ ಮರಾಠಿ ಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಸಿದ್ಧರಾಮೇಶ್ವರ ಪುರಾಣ ಕನ್ನಡದ ಮಹಾಕಾವ್ಯಗಳಲ್ಲಿ ಒಂದಾಗಿದೆ.
ಇಬ್ಬರು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು ಜೊತೆ ಸುಂದರವಾದ ಸಂಸಾರ ಇದ್ದರೂ ತಮ್ಮ 34ನೇರ ವಯಸ್ಸಿನಲ್ಲಿ ತಮ್ಮ ಪತಿಯನ್ನು ಕಳೆದುಕೊಂಡರು. ಆದರೂ ತಮ್ಮ ಸಮಾಜ ಸೇವೆಯನ್ನು ಮುಂದುವರಿಸಿದರು.
೧೯೫೦ ರಲ್ಲಿ ಮುಂಬಯಿಯಲ್ಲಿ ನಡೆದ ೩೮ ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾಗೋಷ್ಟಿಯ ಅಧ್ಯಕ್ಷೆ ಆಗಿದ್ದರು. ಮಂಡ್ಯದಲ್ಲಿ ೧೯೭೪ ರಲ್ಲಿ ನಡೆದ ೪೮ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷಿಣಿ ಎಂಬುದು ಈಕೆಯ ಹೆಗ್ಗಳಿಕೆ ಆಗಿದೆ.
ಕುಟುಂಬ ವತ್ಸಲೆ, ಸಾಹಿತ್ಯ ಸಾಧಕಿ, ಸಮಾಜ ಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈಕೆ ಕನ್ನಡ ನಾಡು, ನುಡಿಗಾಗಿ ಸೇವೆಗೈದರು. ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದವರು ಇವರೊಬ್ಬರೇ.
ಅದು ೧೯೬೦ ರ ದಶಕ. ಆಗ ಗಡಿ ಸಮಸ್ಯೆಯ ಕಾವು ತಾರಕಕ್ಕೇರಿತ್ತು. ಸೊಲ್ಲಾಪುರದ ವಿಷಯವಾಗಿ ಮಹಾರಾಷ್ಟ್ರ-ಮೈಸೂರು ಮಧ್ಯೆ, ಕಾಸರಗೋಡು ವಿಷಯವಾಗಿ ಮೈಸೂರು-ಕೇರಳ ಮಧ್ಯೆ ಸಂಘರ್ಷ ಸಾಗಿತ್ತು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಸಮಸ್ಯೆ ಅರಿಯಲು ಎಕಸದಸ್ಯ ಆಯೋಗ ರಚನೆಗೆ ಅಂದು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ ಎಸ್. ನಿಜಲಿಂಗಪ್ಪನವರು ಸಮ್ಮತಿ ಸೂಚಿಸಿದ್ದರು. ಆಗ ಅದರ ವಿರುದ್ಧ ಕನ್ನಡಿಗರ ಪ್ರತಿಭಟನೆಯ ಸಾರಥ್ಯವನ್ನು ಜಯದೇವಿ ತಾಯಿ ಲಿಗಾಡೆ ವಹಿಸಿಕೊಂಡಿದ್ರು. ಪರಿಣಾಮ ೧೯೬೬ಅಕ್ಟೋಬರ್ 25ರಂದು ಜಯದೇವಿ ನೇತೃತ್ವದಲ್ಲಿ ಬೆಂಗಳೂರಿನ ಕೆಂಪೇಗೌಡ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಆಗ ಮುಖ್ಯಮಂತ್ರಿಗಳು ಇವರ ಬಳಿಗೆ ಬಂದು ಆಯೋಗದಿಂದ ವ್ಯತಿರಿಕ್ತ ಶಿಫಾರಸು ಬಂದರೆ ಮಂತ್ರಿ ಮಂಡಲದ ರಾಜೀನಾಮೆ ಕೊಡುವ ಆಶ್ವಾಸನೆ ನೀಡಿದರು. ಆಗಿನಿಂದ ಇವರಿಗೆ ಗಡಿನಾಡ ಸಿಂಹಿಣಿ ಎಂದು ಕರೆಯಲಾಯಿತು. ಅಯೋಗ ಕರ್ನಾಟಕದ ಪರವಾಗಿ ವರದಿ ಕೊಟ್ಟರೂ ಕೂಡ ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕೆಂಬ ಇವರ ಆಸೆ ಈಡೇರಲಿಲ್ಲ. ೧೯೮೦ ರಲ್ಲಿ ಸೊಲ್ಲಾಪುರ ತೊರೆದು ಕರ್ನಾಟಕದ ಗಡಿಭಾಗ ಬಸವಾದಿ ಶರಣರ ಕಾಯಕಭೂಮಿ ಬಸವಕಲ್ಯಾಣದಲ್ಲಿ ಭಕ್ತಿ ಭವನ ಕಟ್ಟಿಕೊಂಡು ನೆಲೆಸಿದರು. ೧೯೮೬ ರ ಜುಲೈ ೨೪ ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು
ಇವರಿಗೆ ನಾಡಿನ ನೂರರು ಸನ್ಮಾನ, ಗೌರವ, ಪುರಸ್ಕಾರಗಳು ಸಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳು ಜಯದೇವಿತಾಯಿ ಲಿಗಾಡೆ ಅವರ ಅನೇಕ ಕೃತಿಗಳನ್ನು ಪ್ರಕಟಿಸಿ ಗೌರವಿಸಿದೆ. ಇವರ ‘ಹಿಗ್ಗುತಿದೆ ವಿಶ್ವ’ ಕವನವನ್ನು ಸಾಹಿತ್ಯ ಅಕಾಡೆಮಿಯು೧೪ ಭಾಷೆಗಳಿಗೆ ಭಾಷಾಂತರಿಸಿ ಪ್ರಕಟಿಸಿ ಗೌರವ ನೀಡಿವೆ.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
