ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಪಾತ್ರ ಮಹತ್ತರವಾಗಿದ್ದು, ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ತಟದಲ್ಲಿ ಕಾವೇರಿ ನದಿಯ ಉಗಮ ಸ್ಥಾನವಿದೆ. ಸಂಕ್ರಮಣದ ದಿನದಂದು ಕೊಡಗಿನ ಹೊಲ ಗದ್ದೆಗಳಲ್ಲಿ ಬೆತ್ತು ಬಳ್ಳಿ ಎಂಬ ಬಳ್ಳಿಯನ್ನು ತಂದು ವೃತ್ತಾಕಾರವಾಗಿ ಸುತ್ತಿ ಬಿದಿರಿನ ಕೋಲಿಗೆ ಸಿಕ್ಕಿಸಿ ಆಕಾಶ ಮುಖ ಮಾಡಿ ಇಟ್ಟು ಸಿಂಗರಿಸುತ್ತಾರೆ. ಕಾವೇರಿ ನದಿಯ ಕುರಿತು ಕೊಡಗಿನ ಕುವರ ಹೇಮಂತ್ ಪಾರೇರಾ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಜೀವನದಿ ಕಾವೇರಿ ಎಂದೊಡನೆ ನಮ್ಮ ಮೈಮನಗಳಲ್ಲಿ ಭಕ್ತಿ ಭಾವವೊಂದು ಮೂಡಿ ನಮಗರಿವಿಲ್ಲದಂತೆಯೇ ಕ್ಷಣ ರೋಮಾಂಚನಗೊಳ್ಳುತ್ತೇವೆ . ಕರ್ನಾಟಕ ಸೇರಿದಂತೆ ನಮ್ಮ ಸುತ್ತಮುತ್ತಲಿನ ರಾಜ್ಯದವರು ಕೂಡ ಜಲದೇವತೆಯಾದ ಕಾವೇರಿಯನ್ನು ದೈವಸ್ವರೂಪಿಣಿಯಾಗಿ ಕಾಣುತ್ತಾರೆ. ಕೊಡಗಿನ ಪ್ರತಿ ಮನೆಮನೆಯಲ್ಲೂ ಜಲಸ್ವರೂಪಿಣಿಯಾದ ಕಾವೇರಿಯನ್ನು ಅರಾದಿಸುತ್ತಾರೆ . ಕಾವೇರಿ ಸಂಕ್ರಮಣದಂದು ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯದಿಂದ ಕೂಡ ಬಹಳಷ್ಟು ಭಕ್ತಾದಿಗಳು ಕಾವೇರಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿರುವ ತಲಕಾವೇರಿಯ ಬ್ರಹ್ಮಗಿರಿ ತಪ್ಪಲಿಗೆ ಬಂದು ಸೇರುತ್ತಾರೆ. ಕಾವೇರಿ ತಾಯಿಯನ್ನು ಕಂಡು ಕಣ್ತುಂಬಿಕೊಂಡು ಪುಳಕಗೊಳ್ಳುತ್ತಾರೆ, ಭಕ್ತಿ ಭಾವದಿಂದ ಶುದ್ಧ ಮುದ್ರಿಕೆಯಲ್ಲಿ ತೀರ್ಥೋದ್ಭವದ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ. ಪವಿತ್ರ ಜಲವನ್ನು ಮನೆಮನೆಗಳಿಗೆ ಕೊಂಡೊಯ್ದು ಪವಿತ್ರ ತೀರ್ಥವಾಗಿ ಪೂಜಿಸುತ್ತಾರೆ . ಇಂತಹ ಅಮೃತ ಗಳಿಗೆಯನ್ನು ಕಣ್ತುಂಬಿಕೊಳ್ಳಲು ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಏರುತ್ತಲೇ ಇದೆ.
ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಪಾತ್ರ ಮಹತ್ತರವಾದದ್ದು. ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ತಟದಲ್ಲಿ ಕಾವೇರಿ ನದಿಯ ಉಗಮ ಸ್ಥಾನವಿದೆ. ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳು, ಕುಡಿಯುವ ನೀರು ಮತ್ತು ಕೃಷಿ ಯೋಗ್ಯ ಉಪಯೋಗಕ್ಕಾಗಿ ಕಾವೇರಿಯನ್ನು ಅವಲಂಬಿತವಾಗಿವೆ. ಪರಿಶುದ್ಧವಾದ ಸಿಹಿ ನೀರಿನ ಹರಿವಿನಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಯಥೇಚ್ಛವಾದ ಅರಣ್ಯ ಸಂಪತ್ತು ಮತ್ತು ಮಾನವನ ಸರ್ವಾಂಗಿಣ ಏಳಿಗೆಗೆ ಕಾರಣವಾಗಿರುವುದರ ಜೊತೆಗೆ ಜೀವ ಸಂಕುಲಗಳ ಪ್ರಾಣಿ ವೈವಿಧ್ಯತೆಗಳನ್ನು ಕಾಣಬಹುದು. ರೈತರ ಬದುಕಿನ ಜೀವನಾಧಾರವಾಗಿರುವ ಕಾವೇರಿ ನದಿಯು ಪ್ರಮುಖವಾಗಿ ಬೆಂಗಳೂರಿನಂತಹ ಮಹಾನಗರಿಗೆ ಕುಡಿಯುವ ನೀರಿನ ಜಲಮೂಲವಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಅಣೆಕಟ್ಟೆಯನ್ನು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಿರಿಮೆ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು, ಈ ಅಣೆಕಟ್ಟೆಯಿಂದ ಜಲಾನಯನ ಪ್ರದೇಶದ ಸುತ್ತಮುತ್ತಲಿನ ಸಾವಿರಾರು ಏಕರೆ ಪ್ರದೇಶವು ಹಸಿರು ಕ್ರಾಂತಿಗೆ ಕಾರಣವಾಯಿತು.

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ಶುಭ ಗಳಿಗೆಯಲ್ಲಿ ಕಾವೇರಿ ಸಂಕ್ರಮಣವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಕಾವೇರಿ ಸಂಕ್ರಮಣದಲ್ಲಿ ಕಾವೇರಿ ಮಾತೆಯು ಜಲ ಸ್ವರೂಪಣೆಯಾಗಿ ತಲಕಾವೇರಿಯಲ್ಲಿರುವ ಪುಣ್ಯಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ . ಈ ಸಮಯದಲ್ಲಿ ಭಕ್ತಾದಿಗಳು ಪವಿತ್ರ ಜಲದಲ್ಲಿ ಮಿಂದು ಪಾವನರಾಗುತ್ತಾರೆ. ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಪುಣ್ಯ ಕುಂಡಿಕೆಯಲ್ಲಿ ದರ್ಶನ ನೀಡುವ ಸಮಯದಲ್ಲಿ ಕೊಡಗಿನ ಪ್ರತಿಯೊಂದು ಬಾವಿ ತೋಡು ಕೆರೆಗಳಲ್ಲಿ ಕೂಡ ನೀರಿನ ಚಿಲುಮೆಗಳು ಉಕ್ಕುವವೆಂದು ಪ್ರಾಚೀನ ಕಾಲದಿಂದಲೂ ಇಲ್ಲಿನ ಜನರು ನಂಬಿಕೊಂಡು ಬಂದಿದ್ದಾರೆ.
ಸಂಕ್ರಮಣದ ದಿನದಂದು ಕೊಡಗಿನ ಹೊಲ ಗದ್ದೆಗಳಲ್ಲಿ ಬೆತ್ತು ಬಳ್ಳಿ ಎಂಬ ಬಳ್ಳಿಯನ್ನು ತಂದು ವೃತ್ತಾಕಾರವಾಗಿ ಸುತ್ತಿ ಬಿದಿರಿನ ಕೋಲಿಗೆ ಸಿಕ್ಕಿಸಿ ಆಕಾಶ ಮುಖ ಮಾಡಿ ಇಟ್ಟು ಸಿಂಗರಿಸುತ್ತಾರೆ. ತಮ್ಮ ಹೊಲಗದ್ದೆಗಳಿಗೆ ನೀರುಣಿಸಿದ ಕಾವೇರಿ ಮಾತೆಗೆ ಭಕ್ತಿ ಭಾವದಿಂದ ದೋಸೆ ಕಾಯಿತುರಿ ಜೊತೆಗೆ ಜೇನು ಬಾಳೆಹಣ್ಣು ಹಾಗೂ ಎಲೆ ಅಡಿಕೆ ಇಟ್ಟು ಪ್ರಕೃತಿ ಮಾತೆಗೆ ನಮಿಸುತ್ತಾರೆ . ಕಾವೇರಿಯನ್ನು ಇಲ್ಲಿನ ಕುಲಮಾತೆಯಾಗಿ ಪ್ರಕೃತಿ ಮತ್ತು ಸಿರಿಸಂಪತ್ತಿನ ಸೃಷ್ಟಿಕರ್ತಳಾಗಿ ಕೊಡಗಿನ ಜನರು ಕಾಣುತ್ತಾರೆ . ಪ್ರಕೃತಿ ಮಾತೆಯನ್ನು ಆರಾಧಿಸಿ ಪೂಜಿಸುವ ಈ ವಿಶಿಷ್ಟ ಆಚರಣೆಯಿಂದ ಜಿಲ್ಲೆಯ ಜನರಲ್ಲಿರುವ ಪರಿಸರದ ಬಗೆಗಿನ ಪ್ರೀತಿ ಕಾಳಜಿಯನ್ನು ಕಾಣಬಹುದು.

ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯು ಸಮುದ್ರಮಟ್ಟದಿಂದ 1,341 ಮೀಟರ್ ಎತ್ತರದಲ್ಲಿದೆ. ಇಲ್ಲಿ ಹುಟ್ಟುವ ಕಾವೇರಿಯು ಸಾಗರ ಸೇರುವವರೆಗೂ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಾಗೂ ಕೇರಳದ ಸ್ವಲ್ಪ ಭಾಗದಲ್ಲಿ ಸರಿಸುಮಾರು 800 ಕಿಲೋಮೀಟರ್ ವರೆಗೂ ನದಿ ಪಾತ್ರವನ್ನು ಸೃಷ್ಟಿಸುವಳೆಂದು ಹೇಳಲಾಗುತ್ತದೆ.
ಗಂಗೇ ಯಮುನೇ ಸಿಂಧೂ ನರ್ಮದಾ ಗೋದಾವರಿ ಕೃಷ್ಣಾ ಮತ್ತು ಕಾವೇರಿ ,ಭಾರತ ದೇಶದ ಪವಿತ್ರವಾದ ಏಳು ನದಿಗಳು. ಈ ಪವಿತ್ರ ನದಿಗಳಲ್ಲಿ ಕಾವೇರಿಯು ಕೂಡ ಒಂದು. ಕಾವೇರಿಯು ಕೊಡಗಿನಲ್ಲಿ ಹುಟ್ಟಿ ಹರಿಯುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಕಾವೇರಿ ನದಿಯು ಮುಖ್ಯವಾಗಿ ಕರ್ನಾಟಕ ಮತ್ತು ತಮಿಳುನಾಡಿಗೆ ಜೀವನಾಡಿಯಾಗಿದೆ . ಈ ನದಿಯು ಏಳು ಉಪನದಿಗಳನ್ನು ಹೊಂದಿದ್ದು ಹಾರಂಗಿ, ಹೇಮಾವತಿ ,ಕಬಿನಿ ,ಲಕ್ಷ್ಮಣ ತೀರ್ಥ, ಭವಾನಿ, ಅರ್ಕಾವತಿ ಮತ್ತು ನೋಯಲ್ ಎಂಬ ಉಪನದಿಗಳನ್ನು ಸೇರಿಸಿಕೊಳ್ಳುತ್ತಾ ಹರಿದು ಸಾಗರದತ್ತ ಸಾಗುತ್ತಾಳೆ.
ಕಾವೇರಿಯು ಕರ್ನಾಟಕದಲ್ಲಿ ಹುಟ್ಟಿದ ನದಿಯಾಗಿದ್ದರೂ ಕೂಡ ತಮಿಳುನಾಡಿನಲ್ಲಿ ಹೆಚ್ಚಿನ ಜಲಾನಯನ ಪ್ರದೇಶವನ್ನು ಹೊಂದಿದೆ. 43,868 ಚದರ ಕಿಲೋಮೀಟರ್ ತಮಿಳುನಾಡಿನಲ್ಲಿ 34,273 ಚದರ ಕಿಲೋಮೀಟರ್ ಕರ್ನಾಟಕದಲ್ಲಿ ಮತ್ತು 2,866 ಕಿಲೋಮೀಟರ್ ಕೇರಳದಲ್ಲಿ ಹಾಗೂ 148 ಚದರ ಕಿಲೋಮೀಟರ್ ನಷ್ಟು ಕೇಂದ್ರಾಡಳಿತದ ಪ್ರದೇಶವಾದ ಪುದುಚೇರಿಯಲ್ಲಿ ಹರಿಯಲ್ಪಡುತ್ತಾಳೆ. ನಮ್ಮೆಲ್ಲರ ಜೀವನದಿಯಾಗಿರುವ ಕಾವೇರಿಯು ಕೊನೆಗೆ ತಮಿಳುನಾಡಿನ ಮೈಲಾಡು ತುರೈ ಜಿಲ್ಲೆಯ ಪುಂಪುಹಾರ್ ಎಂಬಲ್ಲಿ ಬಂಗಾಳ ಕೊಲ್ಲಿಯನ್ನು ಸೇರಿ ಸಮುದ್ರದೊಂದಿಗೆ ಲೀನವಾಗುತ್ತಾಳೆ.
- ಹೇಮಂತ್ ಪಾರೇರಾ – ಯಡವನಾಡು, ಕೊಡಗು.
