‘ಜ್ಯೋತಿ ಬೆಳಗಿದಂತೆಲ್ಲ ಭೀತಿ ಅಳಿವಿನಂಚಿಗೆ’…ಕವಿ ಜಯಮಾರುತಿ.ಟಿ.ಹೆಚ್ ಅವರ ರಚನೆಯ ಸುಂದರ ಸಾಲುಗಳು ಓದುಗರ ಮುಂದಿದೆ ತಪ್ಪದೆ ಮುಂದೆ ಓದಿ…
ದೀಪ ಬೆಳಗಿಸೋಣ ಮೌಢ್ಯತೆಯನ್ನ ಪಸರಿಸಲಲ್ಲ!
ಆಂತರ್ಯದ ತಮಾಂಧಕಾರವನ್ನು ಕಿತ್ತೆಸೆಯಬಲ್ಲ,
ಅಂತರ್ಗತದಲ್ಲಿನ ಧನಾತ್ಮಕತೆಯನ್ನುದ್ದೀಪಿಸಬಲ್ಲ,
ವೈಚಾರಿಕತೆಯ ಹಣತೆಯನ್ನಿಂದು ಹಚ್ಚಿರೆಲ್ಲಾ..
ಸುತ್ತಲಿನ ಕತ್ತಲನ್ನು ಓಡಿಸುವ ದೀಪ ಜ್ವಾಲೆ..
ಬಾಳಿನಲ್ಲಿ ಎದ್ದ ಬಿರುಗಾಳಿಗೆ ಬಗ್ಗದಲೇ,
ಪ್ರಜ್ವಲಿಸಬಲ್ಲ ಹೊಂಗಿರಣಗಳ ಪ್ರಕಾಶದಲೆ,
ತನು ಮನವ ಆವರಿಸಿದಾಗಲೇ ಮಹಾಶಕ್ತಿಯ ನೆಲೆ!
ಜ್ಯೋತಿ ಬೆಳಗಿದಂತೆಲ್ಲ ಭೀತಿ ಅಳಿವಿನಂಚಿಗೆ.
ಜಾತಿಮತ ಮರೆತು ಪಣತೆ ಹಚ್ಚಿ ,ದ್ವೇಷಾಸೂಯೆಗಳಿಗೆ
ತಿಥಿ ಮಾಡಿ ಏಕತೆಯ ಬೆಳಗು ಚೆಲ್ಲುವ ಬೆಳಕಿಗೆ
ಅತೀತವಾದ ಪ್ರಭೆಯುಂಟು ತಿಳಿದಚ್ಚಿ ಜ್ಞಾನದೀವಿಗೆ.
ಹಣತೆಯ ಬಳಿ ಕ್ಷಣಹೊತ್ತು ನಿಂತಿರುವೆ..
ಪ್ರಣವ ಶಕ್ತಿಯ ಬಳಿ ಪ್ರಾರ್ಥನೆಗೈದಿರುವೆ..
ದಿವ್ಯ ಪ್ರಭೆಯ ಹಚ್ಚಿಟ್ಟೆ ಎದೆಯ ನಟ್ಟ ನಡುವೆ
ಕಾಣದ ಅಸುರೀ ಶಕ್ತಿ ಅಟ್ಟಹಾಸಕೆ ಜಗವೇ
ಮಣಿವ ಗಾಢಾಂಧಕಾರವ ಸಂಹರಿಸು ಪ್ರಭುವೇ..!
-ಅನರ್ಘ್ಯ
- ಜಯಮಾರುತಿ.ಟಿ.ಹೆಚ್ – ಶಿಕ್ಷಕ, ಚಳ್ಳಕೆರೆ.ತಾ. ಚಿತ್ರದುರ್ಗ ಜಿಲ್ಲೆ.
