ಕರ್ನಾಟಕದ ಹಾಗೂ ಭಾರತದ 8 ರಾಜ್ಯಗಳ ಕಾಡುಗಳನ್ನ ಮೂಲೆ-ಮೂಲೆ ತಿರುಗಾಡಿದರೂ ಇಂಥ ಸೌಂದರ್ಯದ ನೆಲವನ್ನು ನಾ ಇದುವರೆಗೂ ಕಂಡಿಲ್ಲ. ಮಾತಂಗ ಪರ್ವತದ ನೆತ್ತಿಯ ಮೇಲಿನ ಸೂರ್ಯಸ್ತವನ್ನ ವರ್ಣಿಸಲು ಕೂತರೆ ಅಕ್ಷರಗಳು ಕೂಡಾ ಅಕ್ಷರಶಃ ಸೋಲುತ್ತವೆ.! ಗಿರಿ ವಾಲ್ಮೀಕಿ ಅವರ ‘ಕಾಡಿನ ಸುತ್ತ’ ಕತೆಗಳನ್ನು ತಪ್ಪದೆ ಓದಿ…
ಕಾರ್ಯ ನಿಮಿತ್ತ ಆಂಧ್ರದ ನಲ್ಲಮಲ್ಲದ ಕಾಡುಗಳಲ್ಲಿ ತಿರುಗಿ, ಊರಿಗೆ ಹಿಂದಿರುವಾಗ, ಭಾರತದ “Grand canyon”ಎಂದೇ ಕರೆಸಿಕೊಳ್ಳುವ ಕಡಪ ಜಿಲ್ಲೆಯ ಜಮ್ಮಲಮಡುಗುವಿನ “ಪೆನ್ನಾ” ನದಿಯ ಶಾಂತವಾಗಿರುವ ಕಣಿವೆಯೊಳಗಿನ ಮೌನ, ನಿರ್ಲಿಪ್ತತೆಯನ್ನು ನೋಡಿ ಪೆನ್ನಾ ನದಿಯ ಗರ್ಭದಲ್ಲಿ ಅದ್ಯಾವ ಪರಿ ಸೆಳೆವು ಅಗಾಧವಾಗಿ ಅಡಗಿ ಕೂತಿರಬಹುದೆಂದು ಹೆದರಿದ್ದೆ. ಅಲ್ಲಿಂದ ರಾತ್ರಿ ನಾನು ಗಾರ್ಡ್ ಸಂತೋಷ್ ಹೊರಟು ಹಂಪಿಯ ಸೂರ್ಯಾಸ್ತ ನೋಡುವುದೆಂದು ನಿರ್ಧರಿಸಿದೆವು. ಅಲ್ಲಿಂದ ರಾತ್ರಿ ಹೊರಟು ಸುಧೀರ್ಘ 6 ತಾಸುಗಳ ಪ್ರಯಾಣಿಸಿ, ಮುಂಜಾನೆ ಹಂಪಿಗೆ ಬಂದಿಳಿದು “ಮಾತಂಗ” ಪರ್ವತದ ನೆತ್ತಿಯ ಮೇಲೆ ಕುಳಿತು ಮಂಜಿನ ಪರದೆ ಸರಿಸಿ ಬರುವ ಸೂರ್ಯಾಸ್ಸ್ತ ನೋಡುತ್ತಿದ್ದರೆ ಆ ಅನುಭೂತಿ ವರ್ಣಿಸಲಸದಳ.
ಈ ಡೆಕ್ಕನ್ ಬಯಲು 2.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಹಾಗೂ ಭೂಮಿಯ ಮೇಲಿನ ಅತ್ಯಂತ ಹಳೆಯ ಭೂ ವೈಜ್ಞಾನಿಕ ರಚನೆಗಳು. ಇದರ ಮೇಲೆ ಸೂರ್ಯ ಬಂಗಾರದ ಕೌದಿ ಹೊದಿಸುತ್ತಿದ್ದರೆ, ನನ್ನೊಳಗೆ 500 ವರ್ಷಗಳ ಹಿಂದಿನ ಗತ ಇತಿಹಾಸದ ಅರಬ್ ಕುದುರೆಗಳ, ಬರ್ಮಾ, ಸಿಲೋನಿನ ಆನೆಗಳ ಕುರಪುಟದ ಸುವರ್ಣಯುಗದ ಸದ್ದು ಮಾರ್ದನಿಸುತ್ತಿತ್ತು.

ಊಫ್..! ಕರ್ನಾಟಕದ ಹಾಗೂ ಭಾರತದ 8 ರಾಜ್ಯಗಳ ಕಾಡುಗಳನ್ನ ಮೂಲೆ-ಮೂಲೆ ತಿರುಗಾಡಿದರೂ ಇಂಥ ಸೌಂದರ್ಯದ ನೆಲವನ್ನು ನಾ ಇದುವರೆಗೂ ಕಂಡಿಲ್ಲ. ಮಾತಂಗ ಪರ್ವತದ ನೆತ್ತಿಯ ಮೇಲಿನ ಸೂರ್ಯಸ್ತವನ್ನ ವರ್ಣಿಸಲು ಕೂತರೆ ಅಕ್ಷರಗಳು ಕೂಡಾ ಅಕ್ಷರಶಃ ಸೋಲುತ್ತವೆ.!
ಅದೆಂಥಾ ಸೌಂದರ್ಯ, ಅಗಾಧತೆ,ರಮಣೀಯತೆಯನ್ನ ಯಾರೋ ಕಿನ್ನರರು ಕೂತು ಚಿತ್ರ ಬಿಡಿಸಿಟ್ಟಂಥ ಹೊನ್ನ ಬಣ್ಣದ ದೃಶ್ಯ ಆ ಬೆಳಕಿನೊಳಗೆ ಲಾಗ ಹಾಕುತ್ತಿರುವ ಹಕ್ಕಿಗಳು, ಹಾವಿನಂತೆ ಆಲಾಸಿಯಾಗಿ ಮಲಗಿರುವ ಕೆಂಧೂಳಿನ ಬಂಡಿಜಾಡು,ಕಮಲಾಪುರದ ಬಾಳೆ ತೋಟಗಳು,ರಾಗಿ,ಕಬ್ಬಿನ ಹೊಲಗಳು ಭಗ್ನ ಅವಶೇಷಗಳು,ಈಚಲು ಮರಗಳು,ತುಂಗಭದ್ರೆ ಮಾಗಿಯ ಚಳಿಯ ಬೆಳಕಿನಲ್ಲಿ ಬಯಲು ಸೀಮೆಯ ಜೋಗತಿಯ ಹಣೆಯ ಕುಂಕುಮದಂತೆ ಹೊಳೆಯುತ್ತಿದ್ದರೆ ನನ್ನೊಳಗೆ ಡೊಮಿಂಗೋ ಫಯಾಜ್, ಅಬ್ದುಲ್ ರಜಾಕ್ , ನಿಕೊಲೋ ಕೌಂಟಿಯಂಥ ,ಇಟಲಿ, ವೆನಿಸ್, ಅರಬ್ಬ ದೇಶದ ಅಲೆಮಾರಿ ಪ್ರವಾಸಿಗರು ನನ್ನ ತವರು ವಿಜಯ ನಗರದ ಬಗ್ಗೆ ದಾಖಲಿಸಿದ ಸುವರ್ಣಯುಗ ಕಲ್ಪನೆಗೆ ನಿಲುಕುತ್ತಿತ್ತು.
ಆಗಾಗ ಮನುಷ್ಯ ಇಂಥಾ ಪ್ರಕೃತಿಯ ರೋಮಾಂಚನಗಳಿಗೆ ಸಾಕ್ಷಿಯಾಗಬೇಕು.ಯಾವ ಲಾಭ,ಸ್ವಾರ್ಥವಿಲ್ಲದ ಅನುಭೂತಿಯೊಂದು ಎಲ್ಲರನ್ನೂ ಒಂದು ಕ್ಷಣ ಮುಟ್ಟಿರುತ್ತದೆ.
ಅಗಾಧತೆಯನ್ನ,ಕಣಿವೆಯನ್ನ,ಸಾಗರದ ದಿಗಂತತೆಯನ್ನ ನೋಡಿದಾಗ ನಮ್ಮ ಪದವಿ,ಹುದ್ದೆ,ಅಧಿಕಾರ,ಶ್ರೀಮಂತಿಕೆ ನಮಗೆ ಅರಿವಿಲ್ಲದೇ ನಮ್ಮನ್ನು ಅರೆಕ್ಷಣ ತೊರೆದುಹೋಗಿ ನಾವು ನಾವಾಗಿ ಮಾತ್ರ ಇರುತ್ತೇವೆ.ಪ್ರಕೃತಿಯ ಸಾಗಂತ್ಯದಲ್ಲೇ ಬದುಕು ಕಟ್ಟಿಕೊಂಡ ನನಗೆ ಪದೇ ಪದೇ ಇದು ಅನುಭವಕ್ಕೆ ಬಂದಿದೆ.
ಹರಿವ ನದಿಗೆ ಮೈಯೆಲ್ಲಾ ಕಾಲು ಇರುವ ಹಾಗೇ ಈ ಹಂಪೆ ಒಂದೊಂದು ಋತುಮಾನದಲ್ಲಿ ಒಂದೊಂದು ಬಣ್ಣ ,ಒಂದೊಂದು ಬದುಕಿನ ವಿಸ್ತರಾದ ಕ್ಯಾನ್ವಾಸ್. ಹಾಗಾಗಿ ಕಣ್ಣಿದವನು ಓದಬೇಕು,ಅಲೆಮಾರಿಯಾಗಬೇಕು ಅಲ್ಲಿಗೆ ಬದುಕಿನ ಕತ್ತಲೆ ಹರಿದು ಬೆಳಕು ಮೂಡುತ್ತದೆ.
ಹಿಂದಿನ ಸಂಚಿಕೆಗಳು :
- ಗಿರಿವಾಲ್ಮೀಕಿ
