ಬಂದ ದಾರಿಗೆ ಸುಂಕವಿಲ್ಲವೆಂದು ಆ ಕತ್ತಲಲ್ಲಿ ಹೊರಡಲು ತಿರುಗಬೇಕೆನ್ನಿಸುವಷ್ಟರಲ್ಲೇ, ಕೈಗೆ ದಪ್ಪನೆಯ ಮೆತ್ತನೆಯ ಉಂಡೆಯಂಥಹ ವಸ್ತು ತಾಕಿದ ಅನುಭವ. ಅದೇನಿತ್ತು ಗಿರಿ ವಾಲ್ಮೀಕಿ ಅವರ ‘ಕಾಡಿನ ಸುತ್ತ’ ಕತೆಗಳನ್ನು ತಪ್ಪದೆ ಓದಿ…
ಇಲ್ಲಿ ಕಾಲಿಟ್ಟಲೆಲ್ಲಾ ದಟ್ಟ ಗಾಢಾಂಧಕಾರ. ಈ ಮಲಯ ಮಾರುತದ ಬಂಗಲೆಯ ಕಾಡಿನಾಚೆಯ ಊರಿನ ಕತ್ತಲೆಲ್ಲವನ್ನು ಈ ಕಾಡೊಳಗೆ ಯಾರೋ ಸುರಿದು ಹೋಗಿದ್ದಾರೆ ಎನ್ನುವ ಗುಮಾನಿ. ಈ ಕತ್ತಲ ಲೋಕದೊಳಗೆ ಈಗ ಇದ್ದದ್ದು ನಾನೊಬ್ಬನೇ.! ಸುತ್ತಲೂ ಹುಡುಕಿದರು ಇನ್ಯಾವ ನರಪಿಳ್ಳೆಯು ಇಲ್ಲಾ . ಇತ್ತ ಸಂಜೆಯು ಅಲ್ಲದ ರಾತ್ರಿಯು ಅಲ್ಲದ ಕಾಡಿನ ಫಾಸಲೆಯು ವಿಚಿತ್ರ ಮಬ್ಬು ಬೆಳಕಿನಲ್ಲಿ ಮಿಣುಕುತ್ತಿತ್ತು. ಕಾಡಿನ ಕ್ರಿಮಿ ಕೀಟಗಳ ಹಿಮ್ಮೇಳದಲ್ಲಿ ಚಾರ್ಮಾಡಿಯ ಅಂಚಿನ ಬೇಸಿಗೆಯ ಕಾನು ಲಹರಿಗೆ ಬಿದ್ದಿತ್ತು.
ಸಾಕಷ್ಟು ಪುಕ್ಕಲನಾಗಿದ್ದ ನಾನು ಕಾಡಿನ ಸಹವಾಸಕ್ಕೆ ಬಂದ ನಂತರ ಕತ್ತಲು ನನಗೆ ಭಯ ಹುಟ್ಟಿಸುತ್ತಿರಲಿಲ್ಲ. ನಟ್ಟ ನಡುರಾತ್ರಿಯಲ್ಲೆಲ್ಲಾ ವನ್ಯ ಪ್ರಾಣಿಗಳಿಗೆ ಮುಖಾಮುಖಿಯಾಗಿ ನಾನು ಒಬ್ಬಂಟಿಯಾಗಿ ಕಾಡುಗಳ,ಘಟ್ಟಗಳ ಹಾದಿ ಕ್ರಮಿಸಿದ್ದಿದೆ. ಆದರೆ ಈ ಘಟ್ಟದ ಹಾದಿ ಹುಟ್ಟಿಸಿದ ಭಯ ಮಾತ್ರ ಸಾಯುವವರೆಗೂ ನೆನಪಿನಲ್ಲಿ ಉಳಿಯುವಂತದ್ದು.

ಮೊಬೈಲ್ ನೆಟ್ವರ್ಕಿಗಾಗಿ ಇದೇ ಕಾಡಿನಲ್ಲಿ ತಿರುಗತೊಡಗಿದ್ದೆ. ನಡೆಯಲು ಎಡಬಲದಲ್ಲಿ ಮರಗಳ ಆಸರೆಗಾಗಿ ಹಿಡಿಯುತ್ತಾ. ಮತ್ತೆ ಮೂಲಸ್ಥಾನಕ್ಕೆ ಹಿಂದಿರುಗಲು ಕೈಗೆ ಸಿಕ್ಕ ಮರಗಳ ಕೊಂಬೆಗಳನ್ನು ಮುರಿಯುತ್ತಾ ಸಾಗುತ್ತಿದ್ದೆ. ಮೆಲ್ಲನೆ ಚಾರ್ಮಾಡಿಯ ಘಟ್ಟದಲ್ಲಿ ಸೂರ್ಯ ಅಸ್ತಂಗತನಾಗತೊಡಗಿದ. ಕತ್ತಲು ಬೆಳಕನ್ನ ಅಪೋಶನ ತೆಗೆದುಕೊಳ್ಳತೊಡಗಿತು.ಬಂದ ದಾರಿಗೆ ಸುಂಕವಿಲ್ಲವೆಂದು ಆ ಕತ್ತಲಲ್ಲಿ ಹೊರಡಲು ತಿರುಗಬೇಕೆನ್ನಿಸುವಷ್ಟರಲ್ಲೇ, ಕೈಗೆ ದಪ್ಪನೆಯ ಮೆತ್ತನೆಯ ಉಂಡೆಯಂಥಹ ವಸ್ತು ತಾಕಿದ ಅನುಭವ. ಅರೇ.. ಏನಿದು ಎಂಬ ಗುಮಾನಿಯಲ್ಲೇ ಮತ್ತೆ ಮತ್ತೆ ಆ ವಸ್ತುವನ್ನು ಮುಟ್ಟಿ ಮುಟ್ಟಿ ಖಾತ್ರಿಪಡಿಸಕೊಳ್ಳತೊಡಗಿದೆ. ಎದೆ ಜೋರಾಗಿ ಬಡಿದಕೊಳ್ಳತೊಡಗಿತು. ಅದೇನೆಂದು ಟಾರ್ಚ್ ಹಚ್ಚಿ ನೋಡಿದರೆ ವಾಮಾಚರ ಮಾಡಲು ಬಳಕೆ ಮಾಡುವ ಕಪ್ಪನೆಯ ಬೊಂಬೆಯನ್ನ ಮರದ ಕಾಂಡಕ್ಕೆ ಮೊಳೆಯಿಂದ ಹೊಡೆಯಲಾಗಿತ್ತು. ಕೆಲವೇ ಸೆಕೆಂಡುಗಳಲ್ಲಿ ಬೆನ್ನು ಹುರಿಯುದ್ದಕ್ಕೂ ಭಯದ ಛಳಕೊಂದನ್ನು ಮೂಡಿಸುವ ಸಣ್ಣ ಸದ್ದು.
ವಾಸ್ತವವಾಗಿ ದೇವರು-ದೆವ್ವವವನ್ನ ನಂಬದ ನನ್ನೊಳಗೆ ಇಷ್ಟು ವರ್ಷಗಳ ಕಾಡಿನ ಕತ್ತಲೆಯ ಸಾಗಂತ್ಯವಿದ್ದರೂ ಈ ಪ್ರಮಾಣದ ಭಯ ನನ್ನೊಳಗೆ ಯಾವತ್ತೂ ಹುಟ್ಟಿರಲಿಲ್ಲ.ಇದೇ ಧ್ವಂಧ್ವದಲ್ಲಿರುವಾಗ ಕಾಡಿನ ಅನತಿ ದೂರದಲ್ಲಿ ಅಪರಿಚಿತ ವಾಹನದ ಹಾರ್ನಿನ ಸದ್ದಿಗೆ ವಾತವರಣ ತಿಳಿಗೊಂಡಿತ್ತು.
ಆಗ ಇದ್ದಕ್ಕಿದ್ದಂತೆ ಸರಿಯಾಗಿ ನನ್ನ ಬಲ ಭಾಗದಲ್ಲಿ ಕಾಣಿಸಿತು ಆ ಚಿಕ್ಕ ಆಕೃತಿ..!
ಮುಂದುವರೆಯುತ್ತದೆ…
ಹಿಂದಿನ ಸಂಚಿಕೆಗಳು :
- ಗಿರೀಶ ವಾಲ್ಮೀಕಿ
