ಕಾಡಿನ ಸುತ್ತ – ಭಾಗ ೭

ನಾವು ಗಮ್ ಬೂಟ್ಗಳನ್ನು ಧರಿಸಿದೇ ಕಾಡೊಳಗೆ ಮಿಕಾಗಳ ಥರಾ ಹಂದಾಡುತ್ತಿದ್ದರಿಂದ ಜಿಗಣೆಗಳು ಕಂದಾಯ ರೂಪದಲ್ಲಿ ದೇಹದ ತುಸು ರಕ್ತ ಬಸಿದುಕೊಂಡವು. ರಕ್ತ ಹೀರುತ್ತಿದ್ದ ಜಿಗಣೆಗಳನ್ನ ಕಿತ್ತು ಬೀಸುಡುತ್ತಾ ಮುಂದೆ ನಡೆದೆವು, ಗಿರಿವಾಲ್ಮೀಕಿ ಅವರ ಅನುಭವದ ಕಾಡಿನ ಕತೆಯನ್ನು ತಪ್ಪದೆ ಮುಂದೆ ಓದಿ…

ಅರಣ್ಯ ಬಂಗಲೆಯಿಂದ ನಾನು ಜೊತೆಗಾರ ವಿಶಾಲ್, ವಾಚರ್ ಮಂಜಪ್ಪಣ್ಣನ ಜೊತೆ ಹೊರ ಬಿದ್ದಾಗ ಬೆಳಗಿನ ಸಮಯ 5:30, EPT (Elephent proof trench) ಮಾರ್ಗವಾಗಿ ಸುಮಾರು “10,000” ಹೆಕ್ಟೇರ್ ಕಾಡಿನ ಸುತ್ತಳತೆಯನ್ನು ಗುರುತಿಸುವ ಕಾರ್ಯದಲ್ಲಿ ಪಶ್ಚಿಮ ಘಟ್ಟದ ಕಾಡುದಾರಿ ಹಿಡಿದಿದ್ದೆವು. ಬೆಳಗಿನಿಂದ ಮಧ್ಯಾಹ್ನದವರೆಗಿನ ಅಲೆದಾಟದಿಂದ ಒಂದೇ ಸಮನೆ ಸುರಿಯುತ್ತಿದ್ದ ಜಿನುಗು ಮಳೆಗೂ ಸುತ್ತಲೂ ಆವರಿಸಿದ ಮಂಜಿಗೂ ನಾವು ತೊಟ್ಟಿದ್ದ ಬಟ್ಟೆಗಳೂ ಬಹುಪಾಲು ತೇವವಾಗಿದ್ದವು.

ಆ ಮಳೆ ಗಾಳಿಯಿಂದ ಸಣ್ಣಗೆ ನೆಗಡಿ ಶುರುವಾಗಿತ್ತು ನನಗೆ. ಆ ಸಣ್ಣ ಚಳಿಯ ಚಳುವಳಿಯಲ್ಲಿ ಮಂಜಪ್ಪಣ್ಣಾ ಆನೆಗಳ ಬಗ್ಗೆ ಆತನಿಗಿದ್ದ ಅನುಭವದ ಕೌತುಕದ ಕಥೆಗಳನ್ನ ಹೇಳಿ ದೇಹದ ತಾಪಮಾನವನ್ನು ಆ ಸಣ್ಣ ಮಳೆಯಲ್ಲೂ ಬಿಸಿಯಾಗಿಸಿ ಬಿಡುತ್ತಿದ್ದ. ಅರಣ್ಯ ಗೃಹದಿಂದ ನಾವು ಹೊರಡುವಾಗ ಬೇಗನೇ ಹಿಂದುರುಗುತ್ತೇವೆಂದು ಭಾವಿಸಿ ನಾವು ಗಮ್ ಬೂಟ್ಗಳನ್ನು ಧರಿಸಿದೇ ಕಾಡೊಳಗೆ ಮಿಕಾಗಳ ಥರಾ ಹಂದಾಡುತ್ತಿದ್ದರಿಂದ ಜಿಗಣೆಗಳು ಕಂದಾಯ ರೂಪದಲ್ಲಿ ದೇಹದ ತುಸು ರಕ್ತ ಬಸಿದುಕೊಂಡವು.ರಕ್ತ ಹೀರುತ್ತಿದ್ದ ಜಿಗಣೆಗಳನ್ನ ಕಿತ್ತು ಬೀಸುಟುತ್ತಾ ಕಾಡಿನ ಎತ್ತರ ಪ್ರದೇಶದ ಹಿನ್ನೆಲೆಯಲ್ಲಿ ಬೀಸುತ್ತಿದ್ದ ಕುಳಿರ್ಗಾಳಿಗೆ ಈ ಬಯಲು ಸೀಮೆಯ ಮನಸ್ಸು ಮಾತ್ರ ಕೆಳಗೆ ಚೆಕ್ ಪೋಸ್ಟಿನ ಬಳಿ ಮಾರುತ್ತಿದ್ದ ಗೂಡಂಗಡಿಯ ಬಿಸಿ- ಬಿಸಿ ಶುಂಠಿ ಚಹಾಕ್ಕಾಗಿ ಹಂಬಲಿಸುತ್ತಿತ್ತು.

ಪಶ್ಚಿಮ ಘಟ್ಟದ ಮಳೆಕಾಡುಗಳ ಮೇಲ್ಚಾವಣಿ(Tree canopy)ಯನ್ನು ಸವರಿಕೊಂಡು ಸುರಿಯುತ್ತಿದ್ದ “ಆಶ್ಲೇಷ ಮಳೆ”ಯ ಗೋಲಕಾರದ ಹನಿಗಳು ಮರಗಳ ಕೆಳಗೆ ಕುಕ್ಕುರುಗಾಲಿನಲ್ಲಿ “ಟೀ” ಗಾಗಿ ಹಪ ಹಪಿಸುತ್ತಿದ್ದ ನನ್ನನ್ನು ಸಂತೈಸುವಂತೆ ಭಾಸವಾಗುತ್ತಿತ್ತು. ಸುತ್ತಲೂ ಮಂಜು ಮುಸುಕಿದ ಹಸಿರು ಮಿಶ್ರಿತ ಶ್ವೇತ ವಾತಾವರಣದವದೂ ಅಲ್ಲಿಂದ ಎದ್ದು ಬೆಟ್ಟದ ನಡುಭಾಗದ ಕಿಬ್ಬಿಯ ನೆತ್ತಿಯ ಮೇಲೆ ನಾವು ಬಂದು ನಿಂತಾಗ ಆಗ ತಾನೇ ಮಬ್ಬುಗತ್ತಲು ಹರಿದು ನಿಧಾನವಾಗಿ ಬೆಳಗು ಮೂಡಿತ್ತು. ಅದೊಂದು ಉಜ್ವಲ ಮುಂಜಾನೆ. ಜೀವನದಲ್ಲಿ ನಿರಕಾರಣ ವೈರಾಗ್ಯ,ನಶ್ವರತೆ ಮೈಗೂಡಿಸಿಕೊಂಡ ನಿರಶಾವಾದಿಯೂ ಜೀವನೋತ್ಸಾಹಿಯಾಗುವಂಥ ದೇದೀಪ್ಯಮಾನವಾದಂಥಹ ಎಳೆಯ ಬೆಳಗದು. ಸವಿಸ್ತಾರವಾದ ಮಳೆಕಾಡು ಮೋಡದ ನೆರಳಿನಲ್ಲಿ ಕಪ್ಪಾಗಿ ಕಾಣುತ್ತಿದ್ದರೆ ಒಂದು ಕಡೆ ಮಾತ್ರ ಮೋಡದ ನೆತ್ತಿಯನ್ನು ಸೀಳಿಕೊಂಡು ಬಂದ ಸೂರ್ಯನ ಕಿರಣಗಳು ಸ್ಥಿರವಾಗಿ ಒಂದೇ ಕಡೆ ಕಾಡಿನ ಮೇಲೆ ಬೆಳಕನ್ನು ನಿರ್ದಿಷ್ಟ ಪ್ರದೇಶದ ಮೇಲೆ ಕೋಲ್ಮಿಂಚಿನಂಥ ಬೆಳ್ಳಿ ಬೆಳಕನ್ನು ಚೆಲ್ಲಿ ಇಡೀ ಕಪ್ಪಾದ ಅಡವಿಗೆ ದೃಷ್ಟಿ ಬೊಟ್ಟು ಇಟ್ಟಂತೆ ಕಂಗೂಳಿಸುತ್ತಿತ್ತು. ಆ ಕ್ಷಣದಲ್ಲಿ ಸೃಷ್ಟಿಸಿದ ಅನೂಹ್ಯವಾದ ಕಣ್ಣು ಕೋರೈಸುವ ನಿಸರ್ಗದ ಚೆಲುವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಸದ್ಯಕ್ಕೆ ನನ್ನಿಂದಾಗದು.!

ಫೋಟೋ ಕೃಪೆ : google

ತಲೆಯ ಮೇಲೆ ಓಡುವ ಮೋಡಗಳು ಮಳೆ ನೆರಳಿನ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಮಾಯಕ ಲೋಕವನ್ನು ಸೃಷ್ಠಿಸಿದ್ದವು. ಕೂಗಳತೆಯ ದೂರದ “ಭೂತನ ಕಾಡಿ”ನ ಮೇಲೆ ವ್ಯೋಮ ಮಾರ್ಗದ ನಿರ್ಮಾನುಷ ಬೀದಿಗಳಲ್ಲಿ ಮೋಡಗಳು ಸಂಚರಿಸುತ್ತಾ ಮಳೆಕಾಡಿನ ಚೆಲುವಿಗೆ ಮನಸೋತು ಅಲ್ಲೇ ಶಾಶ್ವತವಾದ ನಿಲ್ದಾಣ ಮಾಡಿಕೊಂಡಿದ್ದವು. ಆ ಮೋಡದ ಗುಂಪುಗಳು ನನಗೆ ಮಾಂತ್ರಿಕ ‘ಜೀನಿ’ಯ ಚಾಪೆಯಂತೆ ಭಾಸವಾಗುತ್ತಿತ್ತು. ನೆಲೆ ನಿಂತ ಆ ಮೋಡಗಳ ಅನುಮತಿ ಪಡೆದು ಅದರ ದೇಹದ ಮೇಲೆ ಹತ್ತಿ ಸವಾರಿ ಮಾಡುತ್ತ ಎತ್ತಲಾದರೂ ಆಕಾಶಯಾನಿಯಾಗಿ ಪ್ರೇಯಸಿಯ ಜೊತೆ ಸಂಚರಿಸುವ “ಅಲ್ಲಾವುದ್ದೀನ”ನಂತೆ ಪಶ್ಚಿಮ ಘಟ್ಟಗಳ ನೆತ್ತಿಯ ಮೇಲೆ ತೇಲಿ ಹೋಗಬೇಕೆನಿಸುತ್ತಿತ್ತು.!

ಇಲ್ಲಿ ಸಂಚರಿಸುವವರು ಯಾರು ಈ ನಿಸರ್ಗದ ರಮ್ಯ ಸೌಂದರ್ಯೋಪಾಸನೆಯನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ ರುದ್ರ ರಮಣೀಯ ಸೂಜಿಗಲ್ಲಿನಂಥಹ ಸಹ್ಯಾದ್ರಿ ಮಲೆಯ ಸೌಂದರ್ಯಕ್ಕೆ ತೃಣರೂಪಿ ಮನುಷ್ಯ ತಲೆಬಾಗದೇ ಇರಲಾಗುವುದಿಲ್ಲ. ದಿಗ್ದಿಗಂತವಾಗಿ ಗಾಂಭೀರ್ಯದಿಂದ ಹಬ್ಬಿದ ಈ ಘನ ಮಲೆಯೊಳಗೆ ಹೊರ ಜಗತ್ತಿಗೆ ಬಿಟ್ಟು ಕೊಡದ ಕಡು ಮೌನದ ನೀರವತೆ ಇದೆ,ಗಾಢ ವಿಷಾದವಿದೆ, ಎಷ್ಟೋ ಕೌತುಕಗಳು ಶತ- ಶತಮಾನಗಳಿಂದ ಅಡಗಿ ಕೂತಿವೆ. ಈ ಅನನ್ಯ ಸೌಂದರ್ಯ ರಾಶಿಯ ಮಡಿಲಿನಲ್ಲೂ ನಿಗೂಢತೆಯನ್ನು ಇಂದಿಗೂ ಕಾಪಿಟ್ಟುಕೊಂಡ ಮನುಷ್ಯ ಜಗತ್ತಿಗೆ ಇನ್ನೂ ಬಿಟ್ಟುಕೊಡದ ಕುತೂಹಲವಿದೆ, ತಣ್ಣನೆಯ ಕ್ರೌರ್ಯವಿದೆ.

ನಮ್ಮನ್ನು ಪೊರೆಯುವ ಈ ಜೀವ ಕಾರುಣ್ಯದ ಪ್ರಕೃತಿಯ ಮುಂದೆ ಮನುಷ್ಯ ಸಂಕುಲ ಯಾವತ್ತಿದ್ದರೂ ತೃಣಕ್ಕೆ ಸಮಾನವೆಂಬ ಸಾರ್ವಕಾಲಿಕ ಜ್ಞಾನೋದಯ ಶಾಶ್ವತವಾಗಿ ಮನದಲ್ಲಿ ಮೂಡಿತು. ವಿಶಾಲ್ ಮತ್ತು ಮಂಜಪ್ಪಣ್ಣ ಅಲ್ನೋಡಿ ಹಸುರು ಕೇಕನ್ನು ಕತ್ತರಿಸಿದಂತೆ ಅಲ್ಲಿ ಬೆಟ್ಟದ ಬುಡದಲ್ಲಿ ಕಾಣಿಸುತ್ತಿದೆಯಲ್ಲಾ ಅದು “ಕೆಳಗೂರು” ಈಗ ಕೆಳಗಿಳಿದು ಬಿಸಿ “ಟೀ” ಕುಡಿಯೋಣಾ ನಡಿರೀ ಎಂದು ಹೆಗಲ ಮೇಲೆ ಕೈ ಹಾಕಿ ಹೊರಟರು ಎಂದಿನಂತೆ ಮೋಡ ಬೆನ್ನ ಹಿಂದೆ ಮತ್ತೆ ಘನೀಕರಣಗೊಳ್ಳತೊಡಗಿತು.

ಮುಂದುವರೆಯುತ್ತದೆ…

ಹಿಂದಿನ ಸಂಚಿಕೆಗಳು :


  • ಗಿರಿವಾಲ್ಮೀಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW