ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಮೂಲತ: ಗೋಕರ್ಣದವರು. ಕವಿ,ಕಥೆಗಾರ, ವಿಮರ್ಶಕ ಹಾಗೂ ಪ್ರಬಂಧಕಾರರು. ಬಾಣಾವರ ಶಿವಕುಮಾರ್ ಅವರು ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಸಾಧನೆಯ ಕುರಿತು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಧಾರವಾಡದಲ್ಲಿ ಬಿ.ಎಸ್. ಸಿ. ಪದವಿ, ತಿರುವನಂತಪುರದಲ್ಲಿ ಟೆಲಿಕಮ್ಯುನಿಕೇಶನ್ಸ್’ನಲ್ಲಿ ಇಂಜನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದಿರುತ್ತಾರೆ. ತಮ್ಮ ಸಂಶೋಧನಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುತ್ತಾರೆ. ಬಿ.ಎಸ್.ಎನ್.ಎಲ್.ನಲ್ಲಿ ಡಿವಿಜನಲ್ ಇಂಜನಿಯರ್ ಆಗಿ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿ ಮುಂದೆ ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಬರೆದ ಅಂಕಣ, ಕಥೆ, ಕವನಗಳಿಗೆ ಬಹುಮಾನವನ್ನು ಪಡೆದಿರುತ್ತಾರೆ.
ಈ ಜಗತ್ತು, ಭೂಮಧ್ಯರೇಖೆ, ಗೋವಿನ ಹೆಜ್ಜೆ, ಮುಂತಾಗಿ ಏಳು ಕವನ ಸಂಕಲನಗಳನ್ನು, ಸಿಂಡ್ರೆಲಾ ಅಂಬ್ರೆಲಾ, ಮತ್ತು ಓಕೆ ಮೇಕೆ, ಎಂಬ ಮಕ್ಕಳ ಕವನ ಸಂಕಲನಗಳನ್ನು ಪ್ರಕಟಿಸಿರುತ್ತಾರೆ. ಮಕ್ಕಳಿಗಾಗಿ ರಮಣ ಮಹರ್ಷಿ, ರವೀಂದ್ರನಾಥ ಠಾಕೂರ್, ನಾರಾಯಣ ಗುರು, ಗೌರೀಶ ಕಾಯ್ಕಿಣಿ, ವಿನೋಬಾ ಭಾವೆ ಇವರ ಜೀವನ ಚಿತ್ರಗಳನ್ನು ಬರೆದಿದ್ದಾರೆ. ಗಂಗಾ ನದಿಯ ಗುಂಟ ಕಾಶಿ, ಪ್ರಯಾಗ, ಗಯಾ, ಅಯೋಧ್ಯೆ, ಚಿತ್ರಕೂಟ, ವಿಂದ್ಯಾಚಲ ವಾಸಿನಿ ಮುಂತಾದ ಊರುಗಳಲ್ಲಿ ಓಡಾಡಿ ಬರೆದ ಪ್ರವಾಸ ಕಥನ, ಗಿಂಡಿಯಲ್ಲಿ ಗಂಗೆ, ಚಂದ್ರದೀಪ ಇವರ ಆಯ್ದ ಕವನ ಸಂಕಲನಗಳು. ಭರತದ ಮಧ್ಯಾಹ್ನ ಇವರ ಪ್ರಸಿದ್ಧ ಕಥಾ ಸಂಕಲನವಾಗಿರುತ್ತದೆ.

ಇವರ ಉಪ್ಪಿನ ಗೊಂಬೆ ಕವನ ಸಂಗ್ರಹಕ್ಕೆ ಪುತಿನ ಕಾವ್ಯ ಪ್ರಶಸ್ತಿ, ಮಾಯಾವಿ ಮಾಂಗಿ ಕಥಾ ಸಂಕಲನಕ್ಕೆ ಮಾಸ್ತಿ ಪುಸ್ತಕ ಬಹುಮಾನ ಹಾಗೂ ಟಪಾಲು ಬಸ್ಸು ಪ್ರಬಂಧ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸಂದಿದೆ. ಇತ್ತೀಚಿನ ಮೈಮರೆತು ಕುಣಿವೆ ಕವಿತಾ ಸಂಕಲನದ ಹಸ್ತಪ್ರತಿಗೆ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿ, ಬಿ.ಹೆಚ್. ಶ್ರೀಧರ್ ಪ್ರಶಸ್ತಿಗಳು ದೊರಕಿವೆ. ಇವರಿಗೆ ಎರಡು ಬಾರಿ ರತ್ನಾಕರ ವರ್ಣಿ ಮುದ್ದಣ ಅನಾಮಿಕ ಪ್ರಶಸ್ತಿ, ಆರ್. ಬಿ.ಐ.ನ ಬೆಳ್ಳಿಹಬ್ಬದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದಿವೆ.
ಗೋಕರ್ಣದಲ್ಲಿ ೨೦೧೪ ರಲ್ಲಿ ನಡೆದ ಕುಮಟಾ ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಂದಿದೆ. ದೇಶದ ವಿವಿಧ ಕಡೆಗಳಲ್ಲಿ ಅನೇಕ ಕವಿ ಗೋಷ್ಟಿಗಳಲ್ಲಿ ಶ್ರೀಯುತರು ಭಾಗವಹಿಸಿರುತ್ತಾರೆ. ಹಿಂದಿ, ತಮಿಳು, ತೆಲುಗು, ಇಂಗ್ಲಿಷ್ ಮುಂತಾದ ಭಾಷೆಗಳಿಗೆ ಇವರ ಕೆಲವು ಬರಹಗಳು ಅನುವಾದಗೊಂಡಿವೆ.
- ಬಾಣಾವರ ಶಿವಕುಮಾರ್ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು
