‘ಹೊಸ ಬೆಳಕು ಮತ್ತು ಇತರ ಕಥೆಗಳು’ ಪುಸ್ತಕ ಪರಿಚಯ

“ಹೊಸ ಬೆಳಕು” ಹಿರಿಯ ಲೇಖಕಿ ರಾಜೇಶ್ವರಿ ಕುಮಾರ್ ರಾವ್ ಅವರ ಚೊಚ್ಚಲ ಪ್ರಕಟನೆ. ಈ ಕಥಾಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಕೃತಿಯ ಕುರಿತು ಲೇಖಕಿ ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಹೊಸ ಬೆಳಕು ಮತ್ತು ಇತರ ಕಥೆಗಳು
ಲೇಖಕಿ : ರಾಜೇಶ್ವರಿ ಕುಮಾರ್ ರಾವ್
ಬೆಲೆ : ೧೦೦.00
ಪುಟಗಳು :೧೦೪
ಪ್ರಕಾಶಕರು : ಸಾನ್ವಿಕಾ ಪ್ರಕಾಶನ
ಮುದ್ರಣ: ರಾಜೇಶ್ ಪವರ್ ಪ್ರೆಸ್, ಪುತ್ತೂರು
ಖರೀದಿಗಾಗಿ : 9448481696

ಈ ಕಥಾಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಸುಮಾರು ನಲವತ್ತು ವರ್ಷಗಳಿಂದ ಅವರ ಕಥೆಗಳು ವಿವಿಧ ದಿನ ಪತ್ರಿಕೆ, ಮಾಸ ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರು ಈಗಲೂ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಈ ಪುಸ್ತಕವು “ಮನಮಂಥನ” ಎಂಬ ಸರಣಿಯ ಮೊದಲ ಪ್ರಕಟನೆಯಾಗಿ ಹೊರಹೊಮ್ಮುತ್ತಿದೆ. ಈ ಸರಣಿಯಲ್ಲಿ ಇನ್ನಷ್ಟು ಕಥಾಪುಂಜಗಳನ್ನು ಮುದ್ರಿಸುವ ಆಶಯ ಪ್ರಕಾಶಕರಿಗೆ ಇದೆ. ಪುಸ್ತಕಕ್ಕೆ ಶ್ರೀ ತೇಜಶಂಕರ ಸೋಮಯಾಜಿ ಅವರ ಬೆನ್ನುಡಿ ಇದ್ದರೆ, ಡಾ. ಅರವಿಂದ ರಾವ್ ಮಂಗಳೂರು ಅವರ ಮುನ್ನುಡಿ ಇದೆ. ಹಾಗೆಯೇ ಲೇಖಕಿಯ ಮರೀಚಿಕೆ ಎಂಬ ಕಥೆಯನ್ನು ಪ್ರಕಟಿಸಿದ ‘ಮಲ್ಲಿಗೆ’ ಮಾಸ ಪತ್ರಿಕೆಯ ಸಂಪಾದಕರಾದ ಗಂಡಸಿ ವಿಶ್ವೇಶ್ವರ ಅವರ ಮೆಚ್ಚುಗೆಯ ನುಡಿಗಳಿವೆ.

ಲೇಖಕಿಯವರ ಹುಟ್ಟೂರು ದಕ್ಷಿಣ ಕನ್ನಡದ ಕಲ್ಲಡ್ಕ. ಪತಿ ಕುಮಾರ್ ರಾವ್ ಅವರನ್ನು ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ್ದರು. ಹಳ್ಳಿಯಿಂದ ಮಹಾನಗರಕ್ಕೆ ಹೋದ ಈ ವಲಸೆ ಅವರಲ್ಲಿ ಹುಟ್ಟಿಸಿದ ಮನೋಪಲ್ಲಟಗಳು ಮತ್ತು ಅಲ್ಲಿನ ವೇಗದ ಬದುಕಿನ ರೀತಿ ಮೂಡಿಸಿದ ಅಚ್ಚರಿಗಳಿಂದ ಉಂಟಾದ ಪ್ರೇರಣೆ ಅವರಿಂದ ಕೈಯಲ್ಲಿ ನೂರಾರು ಕಥೆಗಳನ್ನು ಬರೆಸಿತು. ನನಗೆ ಅವರ ಪರಿಚಯ ಅಕಸ್ಮಾತ್ ಎಂಬಂತೆ ಪ್ರತಿಲಿಪಿ ಎಂಬ ಡಿಜಿಟಲ್ ವೇದಿಕೆಯಲ್ಲಿ ಆಗಿದ್ದು ಈ ಚಂದ ಚಂದದ ಅರ್ಥಪೂರ್ಣ ಕಥೆಗಳ ಮೂಲಕವೇ. ಮುಂದೆ ನಾನೂ ಅವರೂ ಕೆಲ ವರ್ಷ ಮಾಮ್ಸ್ಪ್ರೆಸೋ ಕನ್ನಡ ಎಂಬ ವೇದಿಕೆಯಲ್ಲಿ ಅಕ್ಷರ ಒಡನಾಡಿಗಳಾಗಿದ್ದೆವು. ಆಗ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೆ. ಹಾಗೆಯೇ ಅವರು ನನ್ನ ತಾಯಿಯ ತವರಿನ ಕುಟುಂಬ ಎಂಬ ವಿಚಾರ ತಿಳಿದದ್ದು ಖುಷಿ ನೀಡಿತ್ತು. ಬಿ.ಎ. ಎಂ.ಎ., ಬಿ.ಎಡ್ ಮಾಡಿದ ಅವರು ಸುಮಾರು ಮೂವತ್ತು ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಉದ್ಯೋಗ ಮಾಡಿದ್ದರು. ಅವರು ಪ್ರಸ್ತುತ ತಮ್ಮ ಪುತ್ರ ಹಾಗೂ ಕುಟುಂಬದೊಡನೆ ಬೆಂಗಳೂರಿನ ಹೆಚ್.ಎಸ್.ಆರ್. ಬಡಾವಣೆಯಲ್ಲಿ ವಾಸವಿದ್ದಾರೆ.

ಹೊಸ ಬೆಳಕು, ಇರುವುದೆಲ್ಲವ ಬಿಟ್ಟು, ಕಣ್ಕಟ್ಟು, ಋಣಾನುಬಂಧ, ಪಟ ಹರಿದ ಹಾಯಿದೋಣಿ, ಕಾಲಚಕ್ರ, ಯಾರ ತಪ್ಪು?, ನೋಡಿದ್ದು ಸುಳ್ಳಾಗಬಹುದು, ಬದುಕ ಬದಲಿಸಬಹುದೇ?, ಎಲ್ಲೂ ಸಲ್ಲದವರು, ಹೀಗೊಂದು ಸಂಸಾರ, ಇಲ್ಲೇ ಸ್ವರ್ಗ, ಅನಾವರಣ, ಚಕ್ರವ್ಯೂಹ, ಸ್ವಲ್ಪ ನಮ್ಮಿಂದ… ಸ್ವಲ್ಪ ನಿಮ್ಮಿಂದ, ಬದುಕು-ಬಂಗಾರ… ಎಂಬ ಕಥೆಗಳಿವೆ. ಇಲ್ಲಿನ ಹೆಚ್ಚಿನ ಕಥೆಗಳು ಎಲ್ಲಿಂದಲೋ ಹೆಕ್ಕಿ ತಂದ ಕಾಲ್ಪನಿಕ ಜಗತ್ತಿನ ಕಥನಗಳಲ್ಲ ಎನ್ನಿಸುತ್ತದೆ. ಬದಲಾಗಿ ದಿನನಿತ್ಯದ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಲೇಖಕಿಯು ಗ್ರಹಿಸಿ ನಿರೂಪಿಸಿದ ರೀತಿಯಲ್ಲಿ ಸೊಗಸಿದೆ. ಕೌಟುಂಬಿಕ ಮತ್ತು ಸಾಮಾಜಿಕ ಚಿತ್ರಣಗಳು ಕಥೆಗಳನ್ನು ಆಪ್ತವಾಗಿಸುತ್ತವೆ. ಕೆಲವು ಕಥೆಗಳು ಹೆಚ್ಚು ಇಷ್ಟವಾದವು. ಉದಾಹರಣೆಗೆ ಪಟ ಹರಿದ ಹಾಯಿ ದೋಣಿ ಕಥೆ. ಇಲ್ಲಿಯ ಯೋಧನಾದ ನಾಯಕ ತನ್ನ ಹೆಂಡತಿ ಮಾಡಿದ ನಂಬಿಕೆ ದ್ರೋಹವನ್ನು ಸಮಚಿತ್ತತೆಯಿಂದ ತೆಗೆದುಕೊಂಡು, ವಿಷಯ ತಿಳಿದು ಆಘಾತಕ್ಕೊಳಗಾದ ಮಗಳ ಎದುರು ವಿವರಿಸುವ ಮತ್ತು ಸಮಾಧಾನಿಸುವ ರೀತಿ ಬಹಳ ಆರ್ದ್ರವಾಗಿದೆ. ಆ ಯೋಧನ ವ್ಯಕ್ತಿತ್ವದ ಬಗ್ಗೆ ಅಭಿಮಾನ ಮೂಡುತ್ತದೆ.

ಈ ಪುಸ್ತಕದಲ್ಲಿ ಆರು ಪುಟ್ಟ ಕಥೆಗಳೂ ಇವೆ. ಸಂಕಲನದ ಎಲ್ಲ ಕಥೆಗಳೂ ಬದುಕಿನ ಹಲವಾರು ಏರಿಳಿತಗಳನ್ನು ಪ್ರತಿಬಿಂಬಿಸುತ್ತವೆ. ಲೇಖಕಿಯ ಮುಂಬೈ ಜೀವನ ಅವರ ಕಥೆಗಳನ್ನು ಗಾಢವಾಗಿ ಪ್ರಭಾವಿಸಿದೆ. ಅದು ‘ಹೀಗೊಂದು ಸಂಸಾರ’ ಮತ್ತು ‘ಇಲ್ಲೇ ಸ್ವರ್ಗ’ ಎಂಬ ಕಥೆಗಳಲ್ಲಿ ಉತ್ತಮವಾಗಿ ಅನಾವರಣಗೊಂಡಿದೆ. ಅದರಲ್ಲೂ ಇಲ್ಲೇ ಸ್ವರ್ಗ ಕಥೆ ನನಗೆ ಬಹಳ ಹಿಡಿಸಿತು. ಮುಂಬೈಯ ಕಡಿಮೆ ವರಮಾನದ ಜನತೆಯು ಪುಟ್ಟ ಅಪಾರ್ಟ್ಮೆಂಟುಗಳಲ್ಲಿ ಬದುಕುವ ರೀತಿ, ಅದರಲ್ಲಿ ಕಥಾ ನಾಯಕಿ ಅನುಭವಿಸುವ ಕಿರಿಕಿರಿ, ನೆರೆಕರೆಯವರಿಂದ ಅಸಹನೀಯ ತೊಂದರೆಗಳು, ಕೊಳಕು ಜೀವನಶೈಲಿ, ತಮ್ಮ ಮಗ ಕೆಟ್ಟ ಮಾತುಗಳನ್ನು ಕಲಿಯುವ ಆತಂಕ… ಇವೆಲ್ಲವೂ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಲ್ಪಟ್ಟಿವೆ. ರೋಸಿದ ನಾಯಕಿ ಅಲ್ಲಿಂದ ಒಮ್ಮೆ ದೂರ ಹೋದರೆ ಸಾಕು ಎಂದು ಬಯಸುತ್ತಿರುತ್ತಾಳೆ.ಆದರೆ ಇವೆಲ್ಲವನ್ನೂ ಮೀರಿ ಅವರಲ್ಲಿ ಇರುವ ಮಾನವೀಯ ಅಂತಃಕರಣದ ಮುಖ ತುರ್ತು ಸಂದರ್ಭದಲ್ಲಿ ಕಾಣಲು ಸಿಕ್ಕಾಗ ಆಕೆಯ ಕಣ್ಣು ತೆರೆಯುತ್ತದೆ. ಅದು ಏನು ಮತ್ತು ಹೇಗೆ ಎನ್ನುವುದನ್ನು ನೀವೇ ಓದಿ ನೋಡಿ.

‘ಹೊಸ ಬೆಳಕು’ ಕಥೆಯಲ್ಲಿ ಉತ್ತಮ ಪುರುಷದಲ್ಲಿದ್ದ ನಿರೂಪಣೆ ಮೂರನೇ ಪುಟಕ್ಕೆ ಬರುವಾಗ ಪ್ರಥಮ ಪುರುಷವಾಗಿ ಬದಲಾಗಿ, ಮತ್ತೆ ಮೊದಲಂತೆ ಮುಂದುವರೆಯಿತು. ಮತ್ತು ಮನಃಶಾಸ್ತ್ರಆಧಾರಿತ ‘ಮಾನ್ಯತೆಯ ಹಸಿವು’ ಎಂಬ ಎರಿಕ್ ಬರ್ಗ್ ಅವರ ಪರಿಕಲ್ಪನೆಯಡಿ ಮೂಡಿ ಬಂದ ‘ಬದುಕ ಬದಲಿಸಬಹುದೇ?’ ಎಂಬ ಕಥೆಯನ್ನು ತಾರ್ಕಿಕವಾಗಿ ಸೂಕ್ತವಾಗಿ ಅಂತ್ಯವಾಗಿಸದೇ ಒಂದಿಷ್ಟು ಅವಸರದಲ್ಲಿ ಮುಗಿಸಿದಂತೆ ಅನ್ನಿಸಿತು. ಆದರೆ ಇವು ಅಂತಹ ದೊಡ್ಡ ಸಂಗತಿಗಳಲ್ಲ. ಓದಿನ‌ ಮುದಕ್ಕೇನೂ ಕೊರತೆ ಉಂಟು ಮಾಡುವುದಿಲ್ಲ.
ಇಲ್ಲಿರುವ ಎಲ್ಲ ಕಥೆಗಳ ನಿರೂಪಣೆ ಸುಂದರ ಶೈಲಿಯಲ್ಲಿದೆ. ಬರವಣಿಗೆ ಪಳಗಿದ ಕೈಯಿಂದಲೇ ಬಂದಿದೆ ಎನ್ನುವುದನ್ನು ಸಾರಿ ಹೇಳುತ್ತವೆ. ಕಥಾ ಬರವಣಿಗೆ ಮಾಡಲು ಇಷ್ಟಪಡುವವರಿಗೆ ಕಥನ ಕ್ರಮವನ್ನು ಅರ್ಥಮಾಡಿಕೊಳ್ಳಲು ಸಹಾಯವೂ ಆಗುತ್ತದೆ ಎನ್ನುವುದು ಕಥೆಗಳನ್ನು ಬರೆಯುವ ರೀತಿಯನ್ನು ಅಷ್ಟಿಷ್ಟು ಗಮನಿಸುವ ನನ್ನೊಳಗಿನ‌ ಬರಹಗಾರ್ತಿಯ ಭಾವನೆ. ಪುಸ್ತಕಕ್ಕಾಗಿ ಲೇಖಕಿಯವರನ್ನು ಸಂಪರ್ಕಿಸಬಹುದು.


  • ರಶ್ಮಿ ಉಳಿಯಾರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading