ಮೆಸ್ಸೆಂಜರ್ ನಲ್ಲಿ ನಾನೆಷ್ಟು ಉದಾಸೀನ ಮಾಡಿದರು ಬೆನ್ನು ಹತ್ತಿದ ಬೇತಾಳನಂತೆ ಮೇಡಂ ಮೇಡಂ ಎನ್ನುತ್ತಾ ಮೆಸೇಜುಸುತ್ತಿದ್ದ. ಅವನ ಉದ್ದೇಶ ಏನಿರಬಹುದೆಂದು ತಿಳಿಯಲು ನಾನು ಉತ್ತರಿಸಿದೆ, ಮುಂದೇನಾಯಿತು. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಏನೆಂದು ಹೆಸರಿಡಲಿ ಈ ಚಂದ ಅನುಬಂಧಕೆ’,ತಪ್ಪದೆ ಮುಂದೆ ಓದಿ…
ಎಲ್ಲೋ ದೂರದ ಮಹಾರಾಷ್ಟ್ರದಲ್ಲಿರುವಾತ ಫೇಸ್ಬುಕ್ ನಲ್ಲಿ ಫ್ರೆಂಡ್ ಆಗಿ ಮೆಸೆಂಜರ್ ನಲ್ಲಿ ಆಗಾಗ ಇಣುಕಿ… ‘ಹಾಯ್ ಮೇಡಂ, ಊಟ ಆಯ್ತಾ, ತಿಂಡಿ ಆಯ್ತಾ, ಗುಡ್ ಮಾರ್ನಿಂಗ್, ಗುಡ್ ನೈಟ್ …ಹೀಗೆ ಮೆಸೇಜ್ ಮೇಲೆ ಮೆಸೇಜ್ ಮಾಡುತ್ತಿದ್ದ. ನಾನು ಸಾಮಾನ್ಯವಾಗಿ ಯಾರ ಮೆಸೇಜಿಗೂ ಉತ್ತರಿಸುವುದಿಲ್ಲ. ನನಗೆ ಸಮಯವಿದ್ದರೆ ತಾನೆ ಮೆಸೇಜು ಓಪನ್ ಮಾಡಿ ನೋಡುವುದು. ಬೆಳಗ್ಗೆಯಿಂದ ಸಂಜೆವರೆಗೂ ಶಾಲಾ ಕೆಲಸ. ಆ ಸಮಯದಲ್ಲಂತೂ ಮೊಬೈಲ್ ಆನ್ ಮಾಡುವುದೇ ಮಧ್ಯಾಹ್ನದ ಮೇಲೆ. ಅದೂ ಊಟದ ವಿರಾಮದಲ್ಲಿ ಹತ್ತು ನಿಮಿಷ ಮೊಬೈಲ್ ನೋಡಲು ಸಮಯ ಸಿಕ್ಕುತ್ತದೆ ಅಷ್ಟೇ. ಅದರ ನಡುವೆ ಯಾವುದಾದರೂ ಕರೆ ಬಂದಾಗ ಐದು ನಿಮಿಷ ಮಾತನಾಡುವುದಷ್ಟೇ. ಹೆಚ್ಚಾಗಿ ನನಗೆ ಪೋಷಕರ ಕರೆಗಳೇ ಬರುವುದು. ಬೆಳಗಿನ ಅವಧಿಯಲ್ಲಂತು ವಿಪರೀತ ಫೋನ್ ಕರೆಗಳ ಕಿರಿಕಿರಿ. ಮನೆಯಲ್ಲಿ ಬೆಳಗ್ಗೆ ಕಾಫಿ, ತಿಂಡಿ, ಸ್ನಾನ, ಪೂಜೆ ಇವೆಲ್ಲವುಗಳ ನಡುವೆ ಫೋನ್ ಕಾಲ್ ಅಟೆಂಡ್ ಮಾಡಲೇಬೇಕು. ಯಾಕೆಂದರೆ ತರಗತಿ ಶಿಕ್ಷಕರು ಇಡೀ ತರಗತಿಯ ಮಕ್ಕಳ ಜವಾಬ್ದಾರಿ ಹೊತ್ತಿರುತ್ತಾರೆ. ಮಕ್ಕಳು ಶಾಲೆಗೆ ತಪ್ಪಿಸಿದರೂ ಅದಕ್ಕೆ ನಾವೇ ಹೊಣೆ. ಅವರು ಶಾಲೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಅವರೇನಾದರೂ ಒಂದು ವೇಳೆ ಶಾಲೆಗೆ ಗೈರುಹಾಜರಿಯಾಗುವುದಾದರೆ ಅದಕ್ಕೆ ಸೂಕ್ತ ಕಾರಣವನ್ನು ಪೋಷಕರು ಹೇಳಬೇಕು. ಅದಕ್ಕೆಂದೇ ಬೆಳಗಿನ ಅವಧಿಯಲ್ಲಿ ಪೋಷಕರ ಕರೆಗಳು ಹೆಚ್ಚು. ನಾವು ಅವುಗಳನ್ನು ನಿರ್ಲಕ್ಷ ಮಾಡುವಂತಿಲ್ಲ. ಹೀಗಿರುವಾಗ ವಾಟ್ಸಪ್, ಮೆಸೆಂಜರ್ ಗಳ ಮೆಸೇಜುಗಳನ್ನು ಓದಲು ರಿಪ್ಲೈ ಮಾಡಲು ಸಮಯವೆಲ್ಲಿ ಸಿಗುವುದು. ಸಂಜೆ ಶಾಲಾ ಕೆಲಸ ಮುಗಿಸಿ ಮನೆಗೆ ಬಂದರೆ ಅಡುಗೆ ಮನೆಯ ಕೆಲಸಗಳು ಸ್ವಾಗತ ಕೋರುತ್ತವೆ. ಹೀಗಿರುವಾಗ ಮೆಸೇಜ್ ಗಳಿಗೆ ಉತ್ತರಿಸುವುದೆಲ್ಲಿ.
ಸಾಮಾನ್ಯವಾಗಿ ಎರಡು ಮೂರು ದಿನ ನಿರಂತರವಾಗಿ ಮೆಸೇಜ್ ಮಾಡಿದಾಗಲೂ ನಾನು ಉತ್ತರಿಸದೆ ಹೋದರೆ ಯಾರು ನಮ್ಮ ತಂಟೆಗೆ ಬರುವುದಿಲ್ಲ. ಹಾಗಾಗಿ ಅಂತಹ ಮೆಸೇಜ್ ಗಳನ್ನು ಅವಾಯ್ಡ್ ಮಾಡುತ್ತೇನೆ. ಆದರೆ ಈತನ ವಿಚಾರದಲ್ಲಿ ಹಾಗಾಗಲಿಲ್ಲ. ಅವನು ಕುಂದಾಪುರ ಮೂಲದ ಯುವಕ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಬ್ಯಾಂಕ್ ಉದ್ಯೋಗಿ. ಬೆಳಿಗ್ಗೆ ಸಂಜೆ ಪ್ರತಿನಿತ್ಯ ಮೆಸೇಜ್ ಮಾಡುವುದು, ಗುಡ್ ನೈಟ್ ,ಗುಡ್ ಮಾರ್ನಿಂಗ್ ಹೇಳುವುದು, ನಿಮ್ಮ ವಾಟ್ಸಪ್ ನಂಬರ್ ಕೊಡಿ ಎಂದು ದುಂಬಾಲು ಬೀಳುವುದು. ಪ್ರತಿನಿತ್ಯ ಇವನ ಮೆಸೇಜ್ಗಳಿಗೆ ರಿಪ್ಲೈ ಮಾಡದಿದ್ದರೂ ಕೂಡ ಮೆಸೇಜ್ ಬರುವುದು ನಿಲ್ಲಲಿಲ್ಲ. ನಾನೆಷ್ಟು ಉದಾಸೀನ ಮಾಡಿದರು ಬೆನ್ನು ಹತ್ತಿದ ಬೇತಾಳನಂತೆ ಮೇಡಂ ಮೇಡಂ ಎನ್ನುತ್ತಾ ಮೆಸೇಜುಸುತ್ತಿದ್ದ. ನಾನಂತೂ ಇವನ ಅಭಿಮಾನಕ್ಕೆ ಸೋತು ಹೋದೆ. ಕೊನೆಗೆ ರಿಪ್ಲೈ ಮಾಡೋಣ ಎಂದು ಮೆಸೇಜ್ ಓಪನ್ ಮಾಡಿದೆ. ಬರೀ ಗುಡ್ ಮಾರ್ನಿಂಗ್ ಮೇಡಂ….. ಗುಡ್ ನೈಟ್ ಮೇಡಂ…. ಊಟ ಆಯ್ತಾ ಮೇಡಂ….. ಹೀಗೆ ಗೌರವ ಪೂರ್ವಕವಾಗಿಯೇ ಮೆಸೇಜಿಸಿದ್ದ . ನಾನು ಪ್ರತಿಯಾಗಿ ಮೆಸೇಜ್ ಮಾಡಿದೆ. ಅವನಿಗಂತೂ ಖುಷಿಯೊ ಖುಷಿ. ಇದೆ ಖುಷಿಯಲ್ಲಿ ಅವನು ಇದ್ದಾಗ ನಾನು ಒಂದು ಷರತ್ತು ವಿಧಿಸಿದೆ. ನೀನು ನನ್ನನ್ನು ಅಕ್ಕ ಎಂದು ಒಪ್ಪಿಕೊಂಡಾಗ ಮಾತ್ರ ವಾಟ್ಸಪ್ ನಂಬರ್ ಕೊಡುವೆ ಅಂದೆ. ಅದ್ಯಾಕೋ ಏನೋ ಅವನು ತುಂಬಾ ಖುಷಿ ಪಟ್ಟ. ಇದಕ್ಕಿಂತ ಸೌಭಾಗ್ಯ ಇನ್ನೇನಿದೆ ಅಕ್ಕ. ನಿಮ್ಮ ತಮ್ಮನಾಗುವ ಅದೃಷ್ಟ ನನಗೆ ಒಲಿದಿದೆ. ಅಕ್ಕನಾದರೂ ಸರಿಯೇ ಒಟ್ಟಿನಲ್ಲಿ ನಿಮ್ಮ ಸ್ನೇಹ ನನಗೆ ಬೇಕು ಅಂದ. ತಮ್ಮ ಅಂತ ವಿಶ್ವಾಸ ಇಟ್ಟು ವಾಟ್ಸಪ್ ನಂಬರ್ ಕೊಡ್ತಾಯಿದ್ದೀನಿ. ಈ ನಂಬಿಕೆಯನ್ನು ನೀನು ದುರುಪಯೋಗ ಪಡಿಸಿಕೊಳ್ಳಬೇಡ ಎಂದೆ. ಖಂಡಿತ ಅಕ್ಕ ಆ ವಿಶ್ವಾಸ ನಾನು ಉಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನಂಬಿ ಎಂದ. ನಾನು ನಂಬರ್ ಕೊಟ್ಟೆ. ಆದರೆ ಆ ಕ್ಷಣಕ್ಕೆ ಆತ ಕಾಲ್ ಮಾಡಲಿಲ್ಲ. ಬದಲಾಗಿ ವಾಟ್ಸಪ್ ನಲ್ಲಿ ಧನ್ಯವಾದಗಳು ಅಕ್ಕ ಎಂದು ತಿಳಿಸಿದ. ನನಗಂತೂ ಸಂಪೂರ್ಣ ವಿಶ್ವಾಸ ಬಂತು.

ಇನ್ನು ಕೆಲವರು ಅಣ್ಣ ಅಂತಲೋ… ತಮ್ಮ ಅಂತಲೋ… ಕರೆದರೆ ಹಾವು ತುಳಿದವರಂತೆ ಮಾರುದ್ದ ಎಗರಿ ಹೌಹಾರುತ್ತಾರೆ. ನೀವೇನಾದರೂ ಅನ್ನಿ ಮೇಡಂ ಬ್ರದರ್ ಅಂತ ಮಾತ್ರ ಕರೀಬೇಡಿ ದಯವಿಟ್ಟು ಅಂತ ಮೆಸೇಜ್ ಮಾಡುತ್ತಾರೆ. ಯಾಕೆ ಅಂತ ಕೇಳಿದರೆ ಎಲ್ಲಾ ಕಡೆ ಬ್ರದರ್… ಬ್ರದರ್… ಎಂಬ ಹಣೆಪಟ್ಟಿ ಕೇಳಿ ಕೇಳಿ ಸಾಕಾಗಿ ಹೋಗಿದೆ. ಮೇಡಂ ಪ್ಲೀಸ್ ಬ್ರದರ್ ಅಂತ ಕರೆದು ನಮ್ಮನ್ನು ಕೊಲ್ಲಬೇಡಿ, ಅಂತಾರೆ. ನಾನಂತೂ ನಕ್ಕು ನಕ್ಕು ಸುಸ್ತಾಗುತ್ತೇನೆ.
ಅಂತದ್ರಲ್ಲಿ ಈ ಹುಡುಗ ಅವಿವಾಹಿತ,ಬ್ಯಾಂಕ್ ಉದ್ಯೋಗಿ, ನೋಡಲು ಸುಂದರವಾದ ಹುಡುಗ ನನ್ನನ್ನು ಅಕ್ಕ ಎಂದು ಬಾಯಿ ತುಂಬಾ ಕರೆಯಲು ಶುರು ಮಾಡಿದ. ನನಗಂತೂ ಒಬ್ಬ ಆತ್ಮೀಯ ತಮ್ಮ ಸಿಕ್ಕನೆಂಬ ಖುಷಿ. ತನ್ನೆಲ್ಲ ಖುಷಿ ನೋವುಗಳನ್ನು ಆಫೀಸ್ ನಲ್ಲಿ ನಡೆದ ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ. ಅಂದಿನಿಂದ ಅವನ ಮೇಲಿನ ವಿಶ್ವಾಸ ಇಮ್ಮಡಿ ಆಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಸ್ನೇಹವೂ ಭ್ರಾತೃತ್ವದ ಬಂಧನವಾಯಿತು. ಅವನು ನಿಜವಾಗಿಯೂ ನನಗೆ ತಮ್ಮನೇ ಆಗಿಬಿಟ್ಟ. ನೇರವಾಗಿ ಎಂದಿಗೂ ಮುಖಾಮುಖಿ ಭೇಟಿಯಾಗದ ವ್ಯಕ್ತಿ ಯೊಬ್ಬನು ಭ್ರಾತೃತ್ವದ ಮಧುರ ಬಾಂಧವ್ಯದ ಅನುಭೂತಿ ನೀಡಿದ.
ಅಕ್ಕ ಅಕ್ಕ ಎಂದು ಹಿಂದೆ ಬಿದ್ದು ಎಷ್ಟೇ ನಿರ್ಲಕ್ಷಿಸಿದರೂ ಪಟ್ಟು ಬಿಡದೆ ನನ್ನ ವಿಶ್ವಾಸ ಗಳಿಸಿ ನನ್ನ ಮನಸ್ಸಿನಲ್ಲಿ ತಮ್ಮನ ಸ್ಥಾನ ಗಿಟ್ಟಿಸಿದ. ಈ ವಿಷಯದಲ್ಲಿ ಫೇಸ್ಬುಕ್ನ ಒಡೆಯ ಮಾರ್ಕ್ ಜುಕರ್ ಬರ್ಗ್ ಗೆ ಧನ್ಯವಾದಗಳನ್ನು ಹೇಳಲೇಬೇಕು. ಏಕೆಂದರೆ ಫೇಸ್ಬುಕ್ ಎಂಬ ಮಾಯ ಲೋಕದಲ್ಲಿ ಎಲ್ಲಾ ಭ್ರಮೆಯ ಲೋಕವನ್ನು ಸೃಷ್ಟಿಸುವವರೇ ಇರುವಾಗ ಇಂತಹ ಅಪ್ಪಟ, ನಿಷ್ಕಲ್ಮಶ ಮನಸ್ಸಿನ ಆತ್ಮೀಯ ತಮ್ಮ ದೊರೆತದ್ದು ಅದೃಷ್ಟ ವೆಂದೇ ಹೇಳಬಹುದು. ಸ್ವತಃ ತನ್ನ ವಿಳಾಸ ನೀಡಿ ಆತ್ಮೀಯತೆಯಿಂದ ಅಕ್ಕ ರಾಖೀ (ರಕ್ಷಾಬಂಧನ) ಕಳಿಸಿ ಅಕ್ಕ ಎಂದಾಗ ಮಾತನಾಡಲು ನನ್ನಲ್ಲಿ ಪದಗಳೇ ಇರಲಿಲ್ಲ. ಅವನ ಆಸೆಯಂತೆ ಅಷ್ಟೇ ಪ್ರೀತಿಯಿಂದ ಎರಡೆಳೆ ನೂಲನ್ನು ರಕ್ಷಾಬಂಧನದ ಹಿಂದಿನ ದಿನವೇ ತುಲುಪುವಂತೆ ಕಳಿಸಿದೆ.
ಅಂದು ಸುದರ್ಶನ ಚಕ್ರ ಹಿಡಿದು ತನ್ನ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಕೃಷ್ಣನಿಗೆ ಸಹೋದರಿ ದ್ರೌಪದಿ ಕ್ಷಣವೂ ಯೋಚಿಸದೆ ತನ್ನ ಸೀರೆ ಸೆರಗಿನ ತುದಿಯನ್ನು ಹರಿದು ಕೃಷ್ಣನ ಕೈ ಬೆರಳಿನ ಗಾಯಕ್ಕೆ ಕಟ್ಟಿ ಪೂರ್ತಿ ಬದುಕಿಗಾಗುವಷ್ಟು ಪುಣ್ಯ ಕಟ್ಟಿಕೊಂಡಿದ್ದಳು.
ಅದೇ ಋಣ ಅವಳನ್ನು ಧೂರ್ತ ಮೈದುನಂದಿರು ಸೆರಗಿಗೆ ಕೈ ಹಾಕಿ ಅವಮಾನಿಸಲು ನೋಡಿದಾಗ ಕಾಪಾಡಿದ್ದು. ರಕ್ಷೆಯ ಬಗೆಗಿನ ಮನ ಮುಟ್ಟುವ ಕಥೆ ಇದು. ಹೀಗೆ ರಕ್ಷಾ ಅಥವಾ ರಾಖೀ ಎಂದು ಕರೆಯಲಾಗುವ ಒಂದಷ್ಟು ಎಳೆಗಳ ದಾರ ಬದುಕನ್ನು ಕಾಯುವ, ಸಂರಕ್ಷಿಸುವ ವಿಶ್ವಾಸದ ಪ್ರತೀಕವಾಗಿದೆ .ಅಲ್ಲಿ ಒಡನಾಟದ ಹರಕೆ ಇದೆ. ಸುರಕ್ಷಿತವಾಗಿ ಬದುಕು ನಡೆಯಲಿ ಎಂಬ ಸದಾಶಯವಿದೆ. ಜನ್ಮ ಜನ್ಮಕ್ಕೂ ಬೆಸೆಯುವ ಭ್ರಾತೃತ್ವದ ಬಾಂಧವ್ಯವಿದೆ.
ನಾಲ್ಕೆಳೆಯ ದಾರವೊಂದು ಪೂರ್ತಿ ಬದುಕಿಗಾಗುವಷ್ಟು ಮಮತೆಯನ್ನು ತುಂಬುತ್ತದೆ. ಸೋದರ ಸ್ನೇಹದ ಮಜಲನ್ನು ವಿಸ್ತರಿಸುತ್ತದೆ. ಆ ಮೂಲಕ ಬದುಕಿಗೊಂದು ಭರವಸೆಯನ್ನು ಮೂಡಿಸುತ್ತದೆ. ಮನಸ್ಸಿನಿಂದ ಮನಸ್ಸಿಗೆ ಹರಿಯುವ ಇಂತಹ ಅಮೃತದಂತಹ ಸದ್ಭಾವಗಳು ಎಲ್ಲೆಡೆಗೂ ವ್ಯಾಪಿಸುತ್ತವೆ. ಇಂತಹ ಸದಾಶಯ ಹೊತ್ತ ಬಾಂಧವ್ಯಗಳು ಇರಲಿ ಚಿರಕಾಲ.ನಿತ್ಯ ನೂತನವಾಗಿ…… ಎಂದು ಹರಸುತ್ತ ರಾಖೀ ಕಳಿಸಿಕೊಟ್ಟೆ.
ನಾನು ಕಳಿಸಿದ ಆ ಎರಡೆಳೆ ನೂಲಿಗೆ ಎಷ್ಟೊಂದು ಶಕ್ತಿ, ಪ್ರೀತಿ, ಆತ್ಮೀಯತೆ, ಮಹತ್ವ ಇದೆ ಎಂಬುದು ಸಾಭೀತಾಯಿತು. ರಾಖೀ ಕಳಿಸಿದ್ದಕ್ಕೆ ಪ್ರತಿಯಾಗಿ ತನ್ನ ಅಕ್ಕನಿಗೆ ಅರಿಶಿನ ಕುಂಕುಮ ಬಳೆ ಸೀರೆಯ ಭಾರೀ ಉಡುಗೊರೆ ಕಳಿಸಿದ್ದ. ಒಂದು ಕ್ಷಣ ಮನ ಮೂಕವಾಯಿತು. ಹತ್ತಾರು ವರ್ಷಗಳ ಹಿಂದೆ ಅಪಘಾತದಲ್ಲಿ ಕಳೆದುಕೊಂಡ ಅಣ್ಣನ ನೆನಪಾಗಿ ಕಣ್ಣು ಒದ್ದೆಯಾಯಿತು. ದಸರಾ ಹಬ್ಬದ ಹಿಂದಿನ ದಿನವೇ ತವರು ಮನೆ ಉಡುಗೊರೆ ತಲುಪಿತು. ಎಷ್ಟು ಜನಕ್ಕೆ ಇಂಥ ಅದೃಷ್ಟ ಸಿಗಬಹುದು ನೀವೇ ಹೇಳಿ. ” ಏನೆಂದು ಹೆಸರಿಡಲಿ ಈ ಚಂದ ಅನುಬಂಧಕ್ಕೆ ” ಅನಿಸಿದ್ದು ಸುಳ್ಳಲ್ಲ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ‘ಚೌಚೌ ಬಾತ್’ ಅಂಕಣ (ಭಾಗ – ೨೭) – ಅತಿಮಾನುಷ ಶಕ್ತಿಯ ಅನುಭವ
- ‘ಚೌಚೌ ಬಾತ್’ ಅಂಕಣ (ಭಾಗ – ೨೮) – ಸಬ್ಬಸಿಗೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ – ೨೯) – ಊರ್ ಉಸಾಬರಿ ನಮಗ್ಯಾಕೆ
- ‘ಚೌಚೌ ಬಾತ್’ ಅಂಕಣ (ಭಾಗ – ೩೦) – ಮದುವೆ ಊಟದ ಕಿರಿಕಿರಿ
- ‘ಚೌಚೌ ಬಾತ್’ ಅಂಕಣ (ಭಾಗ – ೩೧) – ‘ಸಂಸ್ಕಾರ ಕಲಿಸಿದ ಪುಸ್ತಕ’
- ‘ಚೌಚೌ ಬಾತ್’ ಅಂಕಣ (ಭಾಗ – ೩೨) – ‘ಭೂತಣ್ಣನ ಹಲಸಿನ ಹಣ್ಣು’
- ‘ಚೌಚೌ ಬಾತ್’ ಅಂಕಣ (ಭಾಗ – ೩೩) – ‘ಕಾಲ್ಗೆಜ್ಜೆಯ ನಾದವಿಲ್ಲ’
- ‘ಚೌಚೌ ಬಾತ್’ ಅಂಕಣ (ಭಾಗ – ೩೪) – ‘ತಾಯಿಯ ಆಶಯ’
- ‘ಚೌಚೌ ಬಾತ್’ ಅಂಕಣ (ಭಾಗ – ೩೫) -‘ಮಿಕ್ಸಿ ಆನ್ ಮಾಡಿದಾಗ’
- ಸರ್ವ ಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.
