ಕಡಲಲಿರುವ ಚಿಪ್ಪಿನೊಳಗೆ ಮುತ್ತಿನಂತೆ ಸಲಹುವೆ…ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ …
ನೆನಪಿನಲೆಗೆ ನೆನೆದೆನಲ್ಲೆ
ಎಂದು ಬರುವೆ ಮೆಲ್ಲನೆ
ನಿದಿರೆಯಲ್ಲು ಬರುವೆಯಲ್ಲೆ
ಕಾಡಬೇಡ ಸುಮ್ಮನೆ
ತಿರೆಯ ಒಳಗೆ ಸುರೆಯ ರೂಪ
ಬೇಡುತಿರುವೆ ನಿನ್ನನೆ
ಮರೆತು ನಿನ್ನ ಬಾಳಲಾರೆ
ಸೋತ ನಿನಗೆ ಚೆನ್ನನೆ
ಮರಳಿ ಬರುವ ನೆನಪಿಗೊಂದು
ಅಪ್ಪಿ ಮುತ್ತನಿಕ್ಕುವೆ
ತೆರಳದಂತೆ ಉಳಿಯಲೆಂದು
ಒಪ್ಪುವಂತೆ ಸಿಕ್ಕುವೆ
ಉಸಿರು ತರುವ ತರುವಿನಂತೆ
ನಿನಗೆ ನೆರಳು ನೀಡುವೆ
ಹಸಿರು ಪ್ರೀತಿ ಕೊನೆಯವರೆಗು
ಧಾರೆಯಾಗಿ ಹರಿಸುವೆ
ಕಡಲಲಿರುವ ಚಿಪ್ಪಿನೊಳಗೆ
ಮುತ್ತಿನಂತೆ ಸಲಹುವೆ
ದಿನವು ರಾತ್ರಿ ಮೊಲ್ಲೆ ತಂದು
ನಿನ್ನ ಮುಡಿಗೆ ಮುಡಿಸುವೆ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು
