ಕದ್ದದ್ದೋ?….ಗೆದ್ದದ್ದೋ?… ಸಣ್ಣಕತೆ – ಮಹಾಂತೇಶ ಕುಂಬಾರ

ಮೋಹನ ಶಾಲೆಯಲ್ಲಿ ದಿನ ಒಂದೊಂದು ಸಾಮಾನುಗಳನ್ನು ಕದ್ದಿಯುತ್ತಿದ್ದನು, ಅದನ್ನು ಗಮನಿಸಿದ ಶಿಕ್ಷಕ ಪಾಟೀಲ್ ಸರ್ ಅವನನ್ನು ಶಾಲೆಯಿಂದ ಹೊರಗೆ ಹಾಕಿದರಾ? ಅಥವಾ ಅವನ ಜೀವನಕ್ಕೆ ಪಾಠ ಹೇಳಿಕೊಟ್ಟರಾ? …ಕತೆಗಾರ ಮಹಾಂತೇಶ ಕುಂಬಾರ ಅವರು ಬರೆದಿರುವ ಈ ಕತೆಯನ್ನು ತಪ್ಪದೆ ಮುಂದೆ ಓದಿ…

ಹನುಮನಹಳ್ಳಿ ಒಂದು ಚಿಕ್ಕದಾದ ಹಳ್ಳಿ. ಅಷ್ಟೊಂದು ಸುಧಾರಣೆಯಾಗದ ಹಳ್ಳಿ. ಆ ಹಳ್ಳಿಯಲ್ಲಿ ವೆಂಕಪ್ಪ ಎಂಬ ಕೂಲಿಕಾರ್ಮಿಕನಿದ್ದ, ದಿನವಿಡೀ ದುಡಿಯುತ್ತಿದ್ದ, ಬಂದ ಕೂಲಿಯಿಂದ ರಾತ್ರಿ‌ ಕಂಠಪೂರ್ತಿ ಕುಡಿಯುತ್ತಿದ್ದ. ಅಷ್ಟೇ ಅಲ್ಲದೇ ತಡರಾತ್ರಿ ತೂರಾಡುತ್ತ ಮನೆಗೆ ಬಂದು ರಂಪಾಟ ಮಾಡಿ ಹೆಂಡತಿ, ಮಕ್ಕಳ ಜೊತೆ ಜಗಳವಾಡುತ್ತಿದ್ದ. ಇದು ದಿನನಿತ್ಯ ನಡೆಯುತ್ತಲೇ ಇತ್ತು. ಅವನ ಕೂಲಿಯಿಂದ ಮನೆ ನಡೆಸಲು ಬಿಡಿಗಾಸು ಬರುವುದು ಅನಿಶ್ಚಿತ. ಅವನ ಹೆಂಡತಿ ಸುಬ್ಬಮ್ಮ ಒಂದೆರಡು ಮನೆಯ ಕಸಮುಸುರೆ ಮಾಡಿ ಹೊಟ್ಟೆ ಬಟ್ಟೆಗೆ ದುಡಿದು ಸಂಸಾರ ಸಾಗಿಸುತ್ತಿದ್ದಳು. ಒಬ್ಬನೇ ಮಗ ಮೋಹನ ಹತ್ತು ವರ್ಷದ ಹುಡುಗ, ಈ ವಯಸ್ಸಿನಲ್ಲಿಯೇ ಬಡತನದ ಬವಣೆ ಅವನನ್ನು ಆವರಿಸಿತ್ತು. ಅದೇ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಸೇರಿಸಿದ್ದರು. ಸರ್ಕಾರಿ ಶಾಲೆ ಎಂದ ಮೇಲೆ ಹೆಚ್ಚು ಕಮ್ಮಿ ಎಲ್ಲವೂ ಉಚಿತವಾಗಿತ್ತು. ಆದರೂ ಬ್ಯಾಗು, ನೋಟಬುಕ್, ಜಾಮೆಟ್ರಿ ಬಾಕ್ಸ್, ಪೆನ್ನು ಮುಂತಾದ ವಸ್ತುಗಳಿಗೆ ಹಣ ತೆತ್ತು ತರಲೇ ಬೇಕಿತ್ತು. ಶಾಲೆ ಆರಂಭವಾಗಿ ತಿಂಗಳು ಕಳೆದರೂ ಶಿಕ್ಷಕರು ಎಷ್ಟು ಬಾರಿ ಹೇಳಿದರೂ ಈ ವಸ್ತುಗಳನ್ನು ತೆಗೆದುಕೊಳ್ಳಲು ಮೋಹನನಿಗೆ ಸಾಧ್ಯವಾಗಿರಲಿಲ್ಲ.

ಫೋಟೋ ಕೃಪೆ : google

ದಿನೇ ದಿನ ಶಿಕ್ಷಕರು ತರಲು ಹೇಳಿದಾಗ ಮೋಹನನಿಗೆ ಅವುಗಳನ್ನು ತರುವುದು ಅನಿವಾರ್ಯವಾಯಿತು. ಆದರೂ ಮನೆಯಲ್ಲಿ ಕೊಡಿಸುವ ಸಾಮರ್ಥ್ಯ ಇರಲಿಲ್ಲ. ತಂದೆಗೆ ಹೇಳಬೇಕೆಂದರೆ ತಲೆಕೆಡಿಸಿಕೊಳ್ಳದ ಕುಡುಕ ಬೇಜವಾಬ್ದಾರಿ ತಂದೆ, ಇನ್ನೂ ತಾಯಿಗೆ ಹೇಳಬೇಕೆಂದರೆ ಪುಡಿಗಾಸು ದುಡಿದು ಆವತ್ತಿನ ಅಂಬಲಿಗಷ್ಟೇ ಸಾಲುತ್ತಿತ್ತು. ಹೀಗಾಗಿ ಮೋಹನನಿಗೆ ಏನು ಮಾಡಬೇಕೆಂದು ದಿಕ್ಕು ತೋಚಲಿಲ್ಲ. ಇಂತ ಪರಿಸ್ಥಿತಿಯಲ್ಲಿ ಮೋಹನನ ತಲೆಗೆ ಕಳ್ಳತನವೊಂದೇ ದಾರಿ‌ ಎಂದೆನಿಸಿತು‌. ಒಂದು ದಿನ ಶಾಲೆಯಲ್ಲಿ ಎರಡು ಅವಧಿಯ ನಂತರದ ವಿರಾಮದ ಸಮಯದಲ್ಲಿ ಕ್ಲಾಸರೂಮಿನಲ್ಲಿ ಯಾರೂ ಇರದುದನ್ನು ಖಾತ್ರಿ ಮಾಡಿಕೊಂಡು ಮೋಹನ ಉಳಿದ ವಿದ್ಯಾರ್ಥಿಗಳ ಬ್ಯಾಗುಗಳಲ್ಲಿ ಹುಡುಕಲಾರಂಭಿಸಿದ. ಒಂದೆರಡು ಬ್ಯಾಗುಗಳನ್ನು ಹುಡುಕುವಷ್ಟರಲ್ಲಿ ಯಾವುದೋ ಬ್ಯಾಗಿನಲ್ಲಿ ಪೆನ್ನುಗಳೊಂದೆರಡು ಸಿಕ್ಕವು, ಅವುಗಳನ್ನು ಜೇಬಿಗಿಳಿಸಿದ ಮೋಹನ ಅಲ್ಲಿಂದ ಹೊರಗೆ ವಿರಾಮಕ್ಕೆ ಕಾಲುಕಿತ್ತನು. ಈ ಕೆಲಸ ದಿನೇ ದಿನ ಮುಂದುವರಿಯುತ್ತ ಹೋದಂತೆ ಆ ವರ್ಗಶಿಕ್ಷಕರ ಹತ್ತಿರ ವಿದ್ಯಾರ್ಥಿಗಳು ದೂರನ್ನು ನೀಡಲಾರಂಭಿಸಿದರು. ಶಿಕ್ಷಕರು ಕೂಡ ಎಲ್ಲರಿಗೂ ಕಳ್ಳತನ ಮಾಡಬಾರದೆಂದು ಎಚ್ಚರಿಕೆ ನೀಡುತ್ತಲೇ ಇದ್ದರು. ಆದರೂ ಕಳ್ಳತನವಂತೂ ತಪ್ಪಿರಲಿಲ್ಲ. ಹೀಗೆ ಒಂದು ದಿನ ಮೋಹನ ಕಳ್ಳತನ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದೇ ವರ್ಗ ಶಿಕ್ಷಕರು ಕೋಣೆಯ ಮುಂದೆ ಹಾದು ಹೋಗುವಾಗ ಮೋಹನ ಕದಿಯುತ್ತಿರುವುದನ್ನು ಕಂಡರು. ಆ ಸಮಯಕ್ಕೆ ಕಂಡರೂ ಕಾಣದಂತೆ ದಾಟಿ ಹೋದರು. ಅಂತೂ ಕಳ್ಳರು ಯಾರೆಂದು ಪತ್ತೆಯಾಯಿತು.

ಆ ವರ್ಗಶಿಕ್ಷಕರಾದ ಪಾಟೀಲ ಸರ್ ಮಕ್ಕಳ ಮನಸನ್ನು ಅರಿತು ನಡೆಯುವ ಮತ್ತು ಸರಿಯಾಗಿ ತಿದ್ದುವ ಸ್ವಭಾವದವರಾಗಿದ್ದರು‌.ಈ ಕಳ್ಳತನದ ವಿಷಯವನ್ನು ಅವರು ವರ್ಗಕೋಣೆ, ತಮ್ಮ ಸಿಬ್ಬಂದಿ ಕೋಣೆ, ಉಳಿದ ಯಾರ ಮುಂದೆಯೂ ಹಂಚಿಕೊಳ್ಳಲಿಲ್ಲ. ಮೋಹನನನ್ನು ಕರೆದು ನಾಳೆ ನಿನ್ನ ಮತ್ತು ಪಾಲಕರ ಆಧಾರ ಕಾರ್ಡ ತರುವುದರ ಜೊತೆಗೆ ಪಾಲಕರನ್ನು ಕರೆತರಬೇಕೆಂದು ಹೇಳಿದರು. ಇದು ಬರೀ ನೆಪವಾಗಿತ್ತು. ಮೋಹನ ಮನೆಗೆ ಹೋಗಿ ವಿಷಯ ತಿಳಿಸಿದನು.ತಂದೆಯಂತೂ ಬರುವುದು ದೂರ ಉಳಿಯಿತು, ಮಗನ ಭವಿಷ್ಯದ ಬಗ್ಗೆ ಚಿಂತಿಸುತ್ತಿರಲಿಲ್ಲ. ಅನಿವಾರ್ಯವಾಗಿ ತಾಯಿ ಬರುವುದಾಗಿ ಹೇಳಿ, ಮರುದಿನ ಒಂದೆರಡು ಮನೆಯ ಕೆಲಸ ಮುಗಿಸಿಕೊಂಡು ಶಾಲೆಯತ್ತ ನಡೆದಳು. ವರ್ಗಶಿಕ್ಷಕರಾದ ಪಾಟೀಲ ಸರ್ ಅವರನ್ನು ಕರೆದು ಕುಳಿತುಕೊಳ್ಳಲು ಹೇಳಿ, ಅವರು ತಂದ ಕಾಗದಗಳನ್ನು ಪಡೆದುಕೊಂಡು ಮಾತು ಮುಂದುವರೆಸಿದರು. ಅವರ ಮಗ ಮೋಹನ‌ ಶಾಲೆಯಲ್ಲಿ ಕದಿಯುವ ವಿಷಯ ಪ್ರಸ್ತಾಪಿಸಿ, ಮನೆಯಲ್ಲಿ ಹೇಗಿರುತ್ತಾನೆ? ಇಂತ ವಿಚಾರ ಹೇಗೆ ಅವನಲ್ಲಿ ಬಂತು? ಇಷ್ಟು ಚಿಕ್ಕ ವಯಸ್ಸಿಗೆ ಕಳ್ಳತನ ಮಾಡುವ ಅಗತ್ಯ ಏನಿತ್ತು? ಎಂದು‌ ಸಮಾಲೋಚಿಸಿದಾಗ,ಅವನ ತಾಯಿ ಸುಬ್ಬಮ್ಮ ಮಾತಾಡದೇ ಗಳಗಳನೆ ಅಳಲು ಪ್ರಾರಂಭಿಸಿದರು. ಪಾಟೀಲ ಸರ್ ಅಳಬೇಡಿ ಅಮ್ಮ ಏನು ಸಮಸ್ಯೆ ಹೇಳಿ ಪರಿಹಾರ ಹುಡುಕೋಣ ಎಂದರು. ಆಗ ಸುಬ್ಬಮ್ಮ‌ ತನ್ನ ಜೀವನದ ಕಥೆಯನ್ನು ಸವಿಸ್ತಾರವಾಗಿ ಹೇಳಿದಾಗ ಪಾಟೀಲ ಸರ್ ಕೂಡ ಒಂದು ನಿಮಿಷ ಗದ್ಗದಿತರಾಗಿ ಹೇಳಿದರು. ಈ ವಿಷಯ ನಾನು ಕೂಡ ಯಾರಿಗೂ ಹೇಳಿಲ್ಲ, ಮೋಹನನಿಗೂ ಕೂಡ,ನೀವು ಕೂಡ ಅವನನ್ನು ಈ ವಿಷಯದ ಕುರಿತು ಏನೂ ಕೇಳದೇ ಗೊತ್ತಿಲ್ಲದಂತೆ ಸುಮ್ಮನಿದ್ದುಬಿಡಿ ಎಂದರು.

ಫೋಟೋ ಕೃಪೆ : google

ಮರುದಿನ ಒಂದು ಜಾಮೆಟ್ರಿ ಬಾಕ್ಸನ್ನು ತಂದು ಪಾಟೀಲ ಸರ್ ವಿರಾಮದ ಗಂಟೆ ಬಾರಿಸಿದ ನಂತರ ಐದನೇ ತರಗತಿಯ ಕೋಣೆಯ ಮೊದಲಿನ ಬೆಂಚಿನ ಮೇಲೆ ಇರಿಸಿದರು.ಕೆಲಕಾಲದ ನಂತರ ಮೋಹನ ಬಂದು ಬ್ಯಾಗು ಹುಡುಕಬೇಕೆನ್ನುವಷ್ಟರಲ್ಲಿ ಬೆಂಚಿನ ಮೇಲೆಯೇ ಜಾಮೆಟ್ರಿ ಬಾಕ್ಸ್ ಇರುವುದನ್ನು ಕಂಡು ಕೂಡಲೇ ಅದನ್ನು ಜೇಬಿಗಿಳಿಸಿದ.ಹೀಗೆ ಪಾಟೀಲ ಸರ್ ದಿನ ಕೆಲವು ಅವನಿಗೆ ಅಗತ್ಯವಾದ ಶಾಲಾವಸ್ತುಗಳನ್ನು ತಂದಿಡುತ್ತ ಹೋದರು, ಮೋಹನ ಎತ್ತಿಟ್ಟುಕೊಳ್ಳುತ್ತ ಹೋದ. ಈ ಎಲ್ಲ ವಸ್ತುಗಳು ಯಾವುದೇ ವಿದ್ಯಾರ್ಥಿಗಳದ್ದಾಗಿರಲಿಲ್ಲ,ಯಾವ ದೂರುಗಳೂ ಬರುತ್ತಿರಲಿಲ್ಲ. ಮೋಹನನಿಗೆ ಬೇಕಾದ ವಸ್ತುಗಳೆಲ್ಲ ದೊರೆತ ಮೇಲೆ ಪಾಟೀಲ ಸರ್ ವಸ್ತುಗಳನ್ನು ತಂದಿಡುವುದನ್ನು ಬಿಟ್ಟರು,ಮೋಹನನು ತನಗೆ ಬೇಕಾದ ವಸ್ತುಗಳೆಲ್ಲ ಸಿಕ್ಕ ಮೇಲೆ ಕದಿಯುವ ಯೋಚನೆ ಮಾಡಲಿಲ್ಲ. ಆದರೂ ಮೋಹನ ಮನದೊಳಗೆ ಕಳ್ಳ ಆವರಿಸಿ ಅಣಕಿಸುತ್ತಲೇ ಇದ್ದ,ಇದಕೆಲ್ಲ ಬಡತನವೇ ಮೂಲವಾಗಿತ್ತು. ಪಾಟೀಲ ಸರ್ ಮನಸಲ್ಲೂ ಕೂಡ ಅವರು ಮಾಡಿದ್ದು ಸರಿಯೋ ತಪ್ಪೋ ಎಂಬ ಪ್ರಶ್ನೆ ಮೂಡಿತ್ತು, ಕಾಡಿತ್ತು. ಆದರೂ ಮೋಹ‌ನನು ಮುಂದೆ ಯಾವ ಕಳ್ಳತನ ಮಾಡದೇ ಇರುವುದನ್ನು ಕಂಡುಕೊಂಡು‌ ಅವನು ಬಡತನಕ್ಕಾಗಿ ಮತ್ತು ತನ್ನ ಶಿಕ್ಷಣದ ಅಗತ್ಯಕ್ಕಾಗಿ ಈ ಕೆಲಸ ಮಾಡಿದ್ದನೇ ಹೊರತು ಅವನಲ್ಲಿ ಕಳ್ಳತನ ಮಾಡುವ ಉದ್ದೇಶವಿರಲಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡರು.

ಮೋಹನ ಐದನೇ ತರಗತಿ ಮುಗಿಸಿ ಆರನೇ ತರಗತಿಗೆ ಕಾಲಿಟ್ಟಾಗ ಪಾಟೀಲ ಸರ್ ಮೋಹನನ್ನು ಕರೆದು ಅವನ ಶಿಷ್ಯವೇತನಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ ಮೋಹನನಿಗೆ ಕೆಲವು ಕಡೆಯಿಂದ ಶಿಷ್ಯವೇತನದ ಅನುಕೂಲ ಕಲ್ಪಿಸಿದರು. ಆ ಶಿಷ್ಯವೇತನದಿಂದ ತನ್ನ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳನ್ನು ಪೂರೈಸಿಕೊಳ್ಳುತ್ತ ನಡೆದನು. ಕೊನೆಗೂ ಕಳ್ಳತನದ ಸಂಗತಿ ಸುಳಿಯಲೇ ಇಲ್ಲ,ಅದೊಂದು ಪ್ರಮಾದವೆನಿಸಲೇ ಇಲ್ಲ.

ಈ ಕಥೆಯ ತಾತ್ಪರ್ಯವೇನೆಂದರೆ ಮನುಷ್ಯ ಕೆಲವೊಮ್ಮೆ ಪರಿಸ್ಥಿತಿಯ ಕೈಗೊಂಬೆಯಾಗಬೇಕಾಗುತ್ತದೆ,ಆ ಪರಿಸ್ಥಿತಿಯನ್ನು ಮತ್ತೊಬ್ಬ ಮನುಷ್ಯ ಅರಿತುಕೊಳ್ಳಬೇಕಾಗುತ್ತದೆ.ಆಗ ಪರಿಸ್ಥಿತಿಯು ಒಂದು ಉತ್ತಮ ಬದಲಾವಣೆಗೆ ದಾರಿಯಾಗುತ್ತದೆ.


  • ಮಹಾಂತೇಶ ಕುಂಬಾರ (ಎಮ್ಮಾರ್ಕೆ)

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW