‘ಮೋಷನ್ ಸಿಕ್ನೆಸ್’ ಇದೊಂದು ಖಾಯಿಲೆಯೇ ?

ಮೋಷನ್ ಸಿಕ್ನೆಸ್ ಒಂದು ಖಾಯಿಲೆ ಅಲ್ಲ, ಮೋಷನ್ ಸಿಕ್ನೆಸ್ ಸಮಸ್ಯೆ ಉಳ್ಳವರು ಏನು ಮಾಡಬೇಕು ಎನ್ನುವುದನ್ನು ಲೇಖಕ ಸುದರ್ಶನ್ ಪ್ರಸಾದ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…

ಆತ ನನ್ನ ಕಾಲೇಜು ಗೆಳೆಯ. ಅವನಿಗೆ ನಮ್ಮೊಡನೆ ಪ್ರವಾಸ ಬರಬೇಕೆಂಬ ಆಸೆ, ಆದರೆ ಪ್ರತೀಬಾರಿ ಏನೋ ಇರುಸು ಮುರುಸು. ಬಸ್ಸು ಪ್ರಯಾಣ ಅಂದೊಡನೆಯೇ ಒಂದು ಹೆಜ್ಜೆ ಹಿಂದೆ ಇಟ್ಟುಬಿಡುತ್ತಿದ್ದ. ರೈಲು ಪ್ರಯಾಣಕ್ಕೆ ಒಪ್ಪಿದರೂ ಅಲ್ಲಿಯೂ ಕುಗ್ಗಿದ ಮನಸ್ಥಿತಿಯೇ ಅವನದ್ದು. ಇಷ್ಟಕ್ಕೆಲ್ಲಾ ಕಾರಣ ಅವನಿಗಿದ್ದ ‘ಮೋಷನ್ ಸಿಕ್ನೆಸ್’. ಇದೊಂದು ಖಾಯಿಲೆ ಎನ್ನಲಾಗದಿದ್ದರೂ ಅನೇಕರಿಗೆ ಒಂದಲ್ಲಾ ಒಂದು ದಿನ ಅನುಭವಕ್ಕೆ ಬರುವ ಸಮಸ್ಯೆ. ಎಷ್ಟೋ ಜನರ ಪ್ರಯಾಣದ ಕನಸುಗಳನ್ನು ಹುಟ್ಟುವ ಮೊದಲೇ ಮರೆಯಾಗಿಸುವ ಮನೋದೈಹಿಕ ಲಕ್ಷಣ.

ಫೋಟೋ ಕೃಪೆ : google

Motion Sickness ಉಂಟಾಗಲು ಕಾರಣ ನಮ್ಮ ಪಂಚೇಂದ್ರಿಯಗಳು ಮತ್ತು ಮೆದುಳಿನ ನಡುವಿನ ಸಂವಹನದ ತೊಡಕು. ಕಣ್ಣು, ಕಿವಿ, ಮೂಗು ಗ್ರಹಿಸುವ ಪ್ರಚೋದನೆಗಳನ್ನು ಅದೇ ವೇಗದಲ್ಲಿ ಪರಿಷ್ಕರಿಸಲು ಮೆದುಳು ವಿಫಲವಾಗುವುದೇ ಈ ಸಮಸ್ಯೆ. ಕುಟುಂಬ ಸದಸ್ಯರಲ್ಲಿ ಮೋಷನ್ ಸಿಕ್ನೆಸ್ ಉಳ್ಳವರು, ಒಳಕಿವಿಯ ಸಮಸ್ಯೆ ಹೊಂದಿರುವವರು, ಮೈಗ್ರೇನ್ ತಲೆನೋವು ಉಳ್ಳವರು, ಮುಟ್ಟಿನ ದಿನಗಳಲ್ಲಿರುವ ಮಹಿಳೆಯರು, ಗರ್ಭಿಣಿಯರು ಮತ್ತು ಅತಿಯಾಗಿ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವವರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ. ಈ ಸಮಸ್ಯೆ ಕೇವಲ ಪ್ರಯಾಣಕ್ಕೆ ಮಾತ್ರವೇ ಸೀಮಿತವಾಗಿರದೇ ಪುಸ್ತಕ ಓದುವಾಗ, ಚಲನಚಿತ್ರ ನೋಡುವಾಗ, ಎತ್ತರದ ಪ್ರದೇಶದಲ್ಲಿ ನಿಂತಾಗ, ನೀರಿನ ಮಧ್ಯದಲ್ಲಿ ನಿಂತಾಗ ಮುಂತಾದ ಸಂದರ್ಭಗಳಲ್ಲಿ ಸಹಾ ಕಾಣಿಸಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ಇಂತವರಲ್ಲಿ ಕಾಣಸಿಗುವ ಲಕ್ಷಣಗಳು :

*ತಲೆಸುತ್ತು
*ತಲೆನೋವು
*ವಾಕರಿಕೆ ಮತ್ತು ವಾಂತಿ
*ಸುಖಾಸುಮ್ಮನೆ ಬೆವರುವಿಕೆ
*ಮಾನಸಿಕ ಕಿರಿಕಿರಿ
*ಹೊಟ್ಟೆಯ ಸಮಸ್ಯೆ ಜೊತೆಗೆ ಹುಳಿತೇಗು
*ಉಸಿರಾಟದ ಏರಿಳಿತ ಮುಂತಾದವು.

ಮೋಷನ್ ಸಿಕ್ನೆಸ್ ಒಂದು ಖಾಯಿಲೆ ಅಲ್ಲದೇ ಇರುವುದರಿಂದ ಅತಿಯಾದ ಆತಂಕ ಪಡುವ ಅಗತ್ಯವಿಲ್ಲ. ಪ್ರಯಾಣ, ಸಮುದ್ರತೀರ, ಎತ್ತರದ ಪ್ರದೇಶ ಇವುಗಳ ಹೊರತಾಗಿಯೂ ವಾಕರಿಕೆ ವಾಂತಿ ಕಾಣುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ನೀರಿನಂಶ ಇಲ್ಲದೇ ಇರುವಾಗಲೂ ಈ ಸಮಸ್ಯೆ ಕಾಡಬಹುದಾಗಿದ್ದು ಅದರ ಕಡೆಗೆ ಒತ್ತು ನೀಡುವುದು ಅತ್ಯಗತ್ಯ.

ಫೋಟೋ ಕೃಪೆ : google

ಮೋಷನ್ ಸಿಕ್ನೆಸ್ ಸಮಸ್ಯೆ ಉಳ್ಳವರು :

*ಲಿಂಬೆಹಣ್ಣು, ಪುದೀನಾ ಮತ್ತು ಶುಂಠಿಯನ್ನು ಬಳಸುವುದು.
*ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು.
*ಪ್ರಯಾಣದ ಸಂದರ್ಭದಲ್ಲಿ ಮಿತವಾಗಿ ಆಹಾರ ಸೇವಿಸುವುದು.
*ಕೊಬ್ಬು ಮತ್ತು ಹುಳಿಯ ಅಂಶ ಹೆಚ್ಚಿರುವ ಆಹಾರಗಳನ್ನು ದೂರವಿರಿಸುವುದು.
*ಧ್ಯಾನ ಮತ್ತು ಪ್ರಾಣಾಯಾಮದಂತಹಾ ಅಭ್ಯಾಸಗಳನ್ನು ಇಟ್ಟುಕೊಳ್ಳುವುದು.
*ಸುಮಧುರ ಸಂಗೀತ ಆಲಿಸುವುದು.
*ಪ್ರಯಾಣದ ಸಂದರ್ಭದಲ್ಲಿ ಲಕ್ಷಣಗಳು ಉಂಟಾದೊಡನೆ ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯುವುದು.
*ಪ್ರಯಾಣಕ್ಕೆ ಅತ್ಯಂತ ಯೋಗ್ಯ ಸ್ಥಳವನ್ನು ಆಯ್ದುಕೊಳ್ಳುವುದು.
*ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಬಳಕೆ ತಪ್ಪಿಸುವುದು.
*ಅಗತ್ಯವಾಗಿ ಗಾಳಿಗೆ ತೆರೆದುಕೊಳ್ಳುವುದು.
*ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸುವುದು.
*ಮುದ್ರೆಗಳನ್ನು ಅಭ್ಯಸಿಸಿ ಪ್ರಯಾಣದ ಸಂದರ್ಭದಲ್ಲಿ ಬಳಸುವುದು… ಮುಂತಾದ ಕ್ರಮಗಳನ್ನು ಅನುಸರಿಸಿ ಮೋಷನ್ ಸಿಕ್ನೆಸ್ ನಿಂದ ಮುಕ್ತಿ ಪಡೆಯಬಹುದು…


  • ಸುದರ್ಶನ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW