ನೆಲದ ನಂಟಿನ ಸರಳ ಕಥೆಗಳ “ಅವನಿ”

ಲೇಖಕಿ ಮಾಲತಿ ಹೆಗಡೆ ಅವರ ಚೊಚ್ಚಲು ಕಥಾ ಸಂಕಲನ ‘ಅವನಿ’ ಯ ಕುರಿತು ನೀತಾ ರಾವ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ….

ಪುಸ್ತಕ : ಅವನಿ
ಕಥೆಗಾರ್ತಿ : ಮಾಲತಿ ಹೆಗಡೆ
ಬೆಲೆ : 130.00

ಈಗಾಗಲೇ ಕೃಷಿ, ಪರಿಸರ, ಮಹಿಳಾ ಕೇಂದ್ರಿತ ಲೇಖನಗಳಿಂದ ಮೌನವಾಗಿಯೇ ಮಾತಿಗಿಳಿದು ಓದುಗರೆದೆಯ ಕದವನ್ನು ತಟ್ಟಿದ ಲೇಖಕಿ ಮಾಲತಿ ಹೆಗಡೆ ಇದೀಗ ತಮ್ಮ ಚೊಚ್ಚಲು ಕಥಾಸಂಕಲನ “ಅವನಿ”ಯ ಮೂಲಕ ಸೃಜನಶೀಲ ಕಥೆಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

ಇತ್ತೀಚೆಗಷ್ಟೇ ಪ್ರಕಟವಾಗಿರುವ ಅವರ ಮೊದಲ ಕಥಾಸಂಕಲನ “ಅವನಿ”ಯಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಮಲೆನಾಡಿನ ಶುದ್ಧ, ಸ್ವಚ್ಛ ಹಸಿರಿನಲ್ಲಿ ಬೆರೆತು ಬಾಲ್ಯ, ಯೌವನವನ್ನು ಕಳೆದ ಮಾಲತಿಯವರಿಗೆ ನೆಲದ ನಂಟು ಸಹಜವಾಗಿಯೇ ಸಿದ್ಧಿಸಿದೆ. ಜೊತೆಗೆ ಮಲೆನಾಡಿನ ಹೆಣ್ಣುಮಕ್ಕಳಂತೇ ಅವರಿಗೂ ಕೃಷಿ, ಹೂತೋಟಗಳಲ್ಲಿಯೇ ಖುಷಿಯಿರುವುದರಿಂದ ಅವರ ಹೆಚ್ಚಿನ ಕಥೆಗಳ ಬೇರುಗಳು ನೆಲದಲ್ಲೇ ಇಳಿದು ಬೆಳೆದಿವೆ. ಹಾಗಂತ ಕಥಾವಸ್ತುಗಳ ವೈವಿಧ್ಯಕ್ಕೇನೂ ಬರವಿಲ್ಲವೆನ್ನುವುದು ಕಥೆಗಳನ್ನು ಓದುತ್ತ ಸಾಗಿದಂತೆ ನಮ್ಮ ಅರಿವಿಗೆ ಬರುವುದು.

ಎಲ್ಲ ಕಥೆಗಳಲ್ಲೂ ಹೆಣ್ಣೇ ಪ್ರಧಾನವಾಗಿರುವುದರಿಂದ ಸಹಜವಾಗಿ ಹೆಣ್ಣನೋವಿನ ಸಣ್ಣ ಬಿಕ್ಕಳಿಕೆಗಳ ಸದ್ದಿಗೆ ನಾವೂ ಕಿವಿಯಾಗುತ್ತೇವೆ. ಆದರೆ ನೋವು ನಾವಾಗಿಯೇ ಉಳಿಯದೇ ಹೊಸ ದಾರಿಗೆ ಬೆಳಕಾಗಿ ಸಾಗುವುದನ್ನೂ ಆನಂದಿಸಬಹುದಾಗಿದೆ.

ಇಲ್ಲಿನ ಕಥೆಗಳಲ್ಲಿ ಯಾರ ಮೇಲೂ ಬೇಸರವಾಗಲೀ, ದೂಷಣೆಯಾಗಲಿ ಇಲ್ಲವೇ ಇಲ್ಲ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ದಿಟ್ಟ ಹೆಣ್ಣುಗಳು ಇಲ್ಲಿದ್ದಾರೆ. ಜೀವನದ ವಿಷಮ ಪರಿಸ್ಥಿತಿಗಳನ್ನು ಸಂಯಮದಿಂದ ಸಹಿಸುವ, ಸ್ವತಃ ದಹಿಸುವ ಅಭಿಜಾತ ಗುಣದ ಬಹು ದೊಡ್ಡ ಸ್ತ್ರೀ ಸಮೂಹವೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿದ್ದರೂ ಅವರನ್ನು ನೋಡುವ ವ್ಯವಧಾನ, ಅರಿಯುವ ಆಸೆಯ ಆದ್ರ್ರ ಹೃದಯ, ಎರಡೂ ಇಲ್ಲದ ಧಾವಂತದ ಬದುಕಿನ ಚಿಪ್ಪಿನಲ್ಲಿ ಒಳಸರಿದಿರುವ ನಗರ ಸಮೂಹಕ್ಕೆ “ಅರೇ ಇಂಥ ಪಾತ್ರಗಳನ್ನೆಲ್ಲ ಲೇಖಕಿ ಎಲ್ಲಿಂದ ತಂದಿರಬಹುದು? ತುಂಬ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡುತ್ತ ಬಡತನದಲ್ಲೇ ಹುಟ್ಟಿ ಬೆಳೆದು ಬಡತನದಲ್ಲೇ ಸಾಯುವ ಅನಿವಾರ್ಯತೆಯನ್ನು ಸಹಜವಾಗಿ ಸ್ವೀಕರಿಸಿರುವ ಸಮಾಜದ ಕಟ್ಟಕಡೆಯ ಹೆಣ್ಣನ್ನೂ ಅದೆಷ್ಟು ಸೂಕ್ಷ್ಮವಾಗಿ, ಅದೆಷ್ಟು ಸಂವೇದನಶೀಲರಾಗಿ ಲೇಖಕಿ ನೋಡಿದ್ದಾರೆ ಮತ್ತು ಅವರ ಬವಣೆಗಳನ್ನು ಅಂತರ್ಗತಗೊಳಿಸಿಕೊಂಡಿದ್ದಾರೆ ಎಂದು ಆಶ್ಚರ್ಯವಾಗುತ್ತದೆ ಅಷ್ಟೊಂದು ವಿಧವಿಧ ಜೀವನ, ವೃತ್ತಿಯಿಂದ ಹೆಕ್ಕಿ ತೆಗೆದ ಪಾತ್ರಗಳಿಗೆ ತಮ್ಮ ಲೇಖನಿಯಿಂದ ಜೀವ ಕೊಡುವಲ್ಲಿ ಮಾಲತಿ ಯಶಸ್ವಿಯಾಗಿದ್ದಾರೆ. ಅವರ ಎಲ್ಲ ಹೆಣ್ಣು ಪಾತ್ರಗಳೂ ಎಂಥದೇ ಕಷ್ಟ ಬಂದರೂ ಎದುರಿಸಿ ಜೀವನದತ್ತ ಮುಖ ಮಾಡುವ ಜೀವನ್ಮುಖೀ ಜೀವಗಳು. ಎಂಥ ಕಠಿಣ ಪರಿಸ್ಥಿತಿಯಲ್ಲೂ ಸೋಲನೊಪ್ಪದೇ, ಆದರೆ ಯಾವುದೇ ಗದ್ದಲ, ಗರ್ಜನೆಗಳಾಗಲೀ, ದೊಡ್ಡದನಿಯ ನರಳಾಟ-ಹೊರಳಾಟಗಳಾಗಲೀ, ಉದ್ದುದ್ದ ಉಪದೇಶಗಳಾಗಲೀ ಇಲ್ಲದೇ ಕೇವಲ ಸಾಮಾನ್ಯ ಮನುಷ್ಯರಾಗಿ ತಮ್ಮ ಜೀವನಪ್ರೀತಿಯನ್ನು ತೋರಿಸುತ್ತ ಆ ಮೂಲಕವೇ ಎತ್ತರಕ್ಕೇರಿಬಿಡುತ್ತಾರೆ.

ಸಂಕಲನದ ಮೊದಲ ಕಥೆ “ಮಣ್ಣು”, ಮಣ್ಣನ್ನು ನಂಬಿ ಉದ್ಧಾರವಾದ ಗಟ್ಟಿಗಿತ್ತಿ ಕಲ್ಲವ್ವನ ಕಥೆ ಹೇಳುತ್ತದೆ. ಕೂಲಿ ಮಾಡುವ ಗಂಡನ ವಿರೋಧ ಮತ್ತು ಅನಾಸಕ್ತಿಯ ಮಧ್ಯೆಯೂ, ಹಿರಿಯರು ಬಿಟ್ಟುಹೋದ ಮೂರೆಕರೆ ಜಮೀನಿನಲ್ಲಿ ಹಣ್ಣಿನ ತೋಟ ಬೆಳೆದು ಗೆಲ್ಲುವ ಕಲ್ಲವ್ವ ಊರ ಹೆಂಗಸರಿಗೆಲ್ಲ ಮಾದರಿಯಾಗಿ ನಿಲ್ಲುತ್ತಾಳೆ. ಹಾಳು ಬಿದ್ದ ಜಮೀನನ್ನು ಹಸನು ಮಾಡಿ ಸೊಸೈಟಿಯಲ್ಲಿ ಹಂಚಿದ ಹಣ್ಣಿನ ಗಿಡಗಳನ್ನು ತಂದು ನೆಟ್ಟು ಬೆಳೆಸುವ ಅವಳ ಉತ್ಸಾಹ ನಮ್ಮಲ್ಲೂ ಮಣ್ಣಿನ ಮೇಲಿನ ವ್ಯಾಮೋಹವನ್ನು, ಕೃಷಿಯ ಬಗ್ಗೆ ಪ್ರೀತಿಯನ್ನೂ ಪುಟಿದೆಬ್ಬಿಸುತ್ತದೆ. ಸರಕಾರದ ಯೋಜನೆಗಳು ಕೇವಲ ಕಾಗದದಲ್ಲುಳಿದು ಬಡವರ, ಕೃಷಿಕಾರ್ಮಿಕರ ಬದುಕು ಇನ್ನಷ್ಟೂ ಬಡವಾಗುವ, ಸರಕಾರಿ ಅಧಿಕಾರಿಗಳ ಮೋಸವಂಚನೆಗಳ, ಭ್ರಷ್ಟಾಚಾರದ ವಿಷಚಕ್ರಗಳ ನಡುವೆ ಸಿಲುಕಿ ಮುರುಟಿಹೋಗುವ ಜೀವನದ ದುರಂತ ಕಥೆಗಳನ್ನೇ ಹೆಚ್ಚುಹೆಚ್ಚು ಓದಿ ನಿರಾಸೆಗೊಂಡ ಓದುಗರಿಗೆ ಈ ಕಥೆ ವಿಭಿನ್ನವೆನಿಸುವುದರಲ್ಲಿ ಸಂಶಯವೇ ಇಲ್ಲ. “ಪಲ್ಲಟ” ಕಥೆ ಕೂಡ ಮಣ್ಣಿನ ಮಡಿಕೆ, ಕುಂಡಗಳನ್ನು ಮಾಡುವ ಕುಂಬಾರ ಕುಟುಂಬದ ನಿಂಗಿಯು ಹೊಸ ಸಾಧ್ಯತೆಗಳಿಗೆ ತೆರೆದುಕೊಂಡು ಯಶಸ್ಸು ಕಾಣುವ ಕಥೆಯಾಗಿದೆ. “ಬೇಡವೆಂದರೂ ಕರೆವ ಹಸಿರು”, ಹವ್ಯಕ ಹೆಣ್ಣೊಬ್ಬಳ ಹಸಿರಿನ ಪ್ರೀತಿಯ ಕರೆಯ ಕಥೆಯಾಗಿದೆ. “ಪಯಣ”ದಲ್ಲಿ ಕುರುಬರ ಪಾರು ಊರೂರು ಅಲೆದಾಡುವ ತನ್ನ ಮೂಲವೃತ್ತಿಯನ್ನು ತೊರೆದು ನೆಲವನ್ನು ನಂಬಿ ಊರಿಗೆ ಹಿಂತಿರುಗುವ ನಿರ್ಣಯದ ಕಥಾನಕವಾಗಿದೆ. ಕರೋನಾ ಕಾಲದಲ್ಲಿ ದಿಕ್ಕೆಟ್ಟ ಮಂಗಳಮುಖಿ ಮಾದೇವಿಯ ಕಥೆ “ಸಂಕ್ರಮಣ”. ಬೆಂಗಳೂರಿನ ಮರಿಯಮ್ಮನ ಪಾಳ್ಯದಲ್ಲಿ ಹೊಟೆಲ್ಲು ನಡೆಸುತ್ತ ಹೇಗೋ ಜೀವನ ಸಾಗಿಸುತ್ತಿದ್ದ ಮಾದೇವಿ ಎನ್ನುವ ಮಂಗಳಮುಖಿ ತಾಯಿಯ ಕರೆಗೆ ಓಗೊಟ್ಟು ಹಳ್ಳಿಗೆ ಹಿಂತಿರುಗಿಬಂದು ಕೃಷಿಯಲ್ಲಿ ತೊಡಗಿಕೊಂಡು ಸಂತೃಪ್ತಳಾಗುವ ಮತ್ತು ಅದರಿಂದಲೇ ಊರಿನವರಿಗೆ ಪ್ರಿಯಳಾಗಿ ಒಪ್ಪಿತಳಾಗುವ ಕಥೆ.

“ಜೋಲಿ” ಕಥೆ ಪ್ರೀತಿಯ ಗಂಡ ಬಸಯ್ಯ ಹೆಂಡತಿ ಮಾದೇವಿಯ ಆಸೆ ಪೂರೈಸುವುದಕ್ಕಾಗಿ ತಮ್ಮ ಮಗುವಿಗೆ ಜೋಳಿಗೆಯ ಬದಲಾಗಿ ತೊಟ್ಟಿಲನ್ನು ಕೊಳ್ಳಲು ಪಡುವ ಕಷ್ಟವನ್ನು ವಿವರಿಸುತ್ತದೆ, ಇನ್ನೇನು ಮಗುವಿನ ಅಪ್ಪ ಹಾವು ಕಚ್ಚಿ ಸತ್ತೇಹೋಗುವನೇನೋ ಎಂದು ದುಗುಡ ತುಂಬಿಕೊಂಡು ಓದುವಾಗ ಹಳ್ಳಿಯ ವೈದ್ಯ ಸಿದ್ದಜ್ಜಯ್ಯನ ಮದ್ದಿನಿಂದ ಎಚ್ಚರವಾಗಿ ಕಥೆ ಸುಖಾಂತ್ಯವಾಗಿ ಸಮಾಧಾನ ಕೊಡುತ್ತದೆ. ಉಳಿದ ಕಥೆಗಳಾದ “ಚೌಕಟ್ಟಿನಾಚೆಯ ಚಿತ್ತಾರ”, “ಕಣ್ಣಾ ಮುಚ್ಚೆ ಕಾಡೇಗೂಡೆ”, “ಮುಗುದೆ” ಮುಂತಾದವುಗಳೂ ಹೆಣ್ಣು ಬದುಕಿನ ವಿವಿಧ ರೂಪಗಳನ್ನು, ಸಂಕಟಗಳನ್ನು ಅನಾವರಣಗೊಳಿಸುತ್ತಲೇ ಅವುಗಳನ್ನು ಅವರು ಸಹಜವಾಗಿ ದಾಟಿದ ಪರಿಯನ್ನೂ ನಮಗೆ ಪರಿಚಯಿಸುತ್ತ ಬದುಕಿಗೆ ಹತ್ತಿರವಾಗಿಸುತ್ತವೆ. ಕತೆಗಾರರು ಸುಲಭವಾಗಿ ಒಪ್ಪಿಕೊಳ್ಳುವ ನೈರಾಶ್ಯ ಮನೋಭಾವವನ್ನು ಇಲ್ಲಿನ ಯಾವ ಪಾತ್ರವೂ ತೋರುವುದಿಲ್ಲ. ಬದಲಾಗಿ ಎಂಥ ಪರಿಸ್ಥಿತಿಯಲ್ಲೂ ಮುಂದಿನ ದಾರಿಯನ್ನು ಯೋಚಿಸುವ ದಿಟ್ಟತನವನ್ನು “ಅರ್ಥವಾಗದವಳು” ಕಥೆ ತೋರಿಸಿಕೊಡುತ್ತದೆ.

ಒಟ್ಟು ಎಲ್ಲ ಕಥೆಗಳಲ್ಲೂ ಲೇಖಕಿ ಆಯಾ ಕಥೆಯ ಪರಿಸರ ಮತ್ತು ಪಾತ್ರಗಳಿಗೆ ಸಹಜವಾದ ಭಾಷೆಯ ಸಂಭಾಷಣೆಗಳನ್ನು ಹೆಣೆದು ಕಥೆಗಳಿಗೆ ನೆಲದ ನಂಟನ್ನು ಉಳಿಸಿದ್ದಾರೆ. ಧಾರವಾಡದ ಗಂಡು ಭಾಷೆ ಮತ್ತು ಮಲೆನಾಡಿನ ಹವ್ಯಕ ಭಾಷೆಗಳೆರಡನ್ನೂ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಸಹಜ ನಿರೂಪಣೆ ಮತ್ತು ಸರಳ ಶೈಲಿ ಆದರೆ ಗಟ್ಟಿ ಕಥಾವಸ್ತುಗಳಿರುವ ಈ ಎಲ್ಲ ಕಥೆಗಳು ಬಹಳ ಕಾಲ ಮನದಲ್ಲಿ ಉಳಿಯುತ್ತವೆ.


  • ನೀತಾ ರಾವ್ , ಬೆಳಗಾವಿ. 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW