ಮಲೆನಾಡಿನ ಗಾನ ಕೋಗಿಲೆ ‘ನಮ್ಮ ರಾಘಣ್ಣ’ ಅವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿದೆ. ಅವರ ಸಾಧನೆ ಕುರಿತು ಖ್ಯಾತ ಲೇಖಕ ಗಜಾನನ ಶರ್ಮಾ ಅವರ ಲೇಖನಿಯಲ್ಲಿ ಮೂಡಿ ಬಂದ ಲೇಖನವಿದು. ಮುಂದೆ ಓದಿ…
#ಗರ್ತಿಕೆರೆ ರಾಘಣ್ಣನವರು ಕಳೆದ ಆರೇಳು ದಶಕಗಳ ಕಾಲ ಮಲೆನಾಡು – ಕರಾವಳಿ ಮಾತ್ರವಲ್ಲದೆ ಬಹುತೇಕ ಇಡೀ ನಾಡಿನ ರಂಗಭೂಮಿ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ತನ್ನನ್ನು ತನ್ಮಯತೆಯಿಂದ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ಪ್ರತಿಬಾವಂತರು. ಸೌಜನ್ಯ, ಸರಳತೆ ಹಾಗೂ ಸಭ್ಯತೆಗಳ ಕಾರಣದಿಂದ ಇಡೀ ಸಮುದಾಯದಿಂದ ‘ನಮ್ಮವ’ ಎಂದು ಕರೆಸಿಕೊಂಡ ಒಬ್ಬ ಸಾಂಸ್ಕೃತಿಕ ಪರಿಚಾರಕರು.
ಇತಿಹಾಸವನ್ನು ಕಾಲದ ಆತ್ಮಕಥೆ ಎನ್ನುತ್ತಾರೆ. ರಾಘಣ್ಣನಂತಹ ವ್ಯಕ್ತಿಗಳ ಆತ್ಮಕಥನವೇ ಒಂದು ಪ್ರದೇಶದ ಒಂದು ಕಾಲಘಟ್ಟದ ಇತಿಹಾಸ. ಕಳೆದ ಏಳೆಂಟು ದಶಕಗಳ ಅವಧಿಯಲ್ಲಿ ಮಲೆನಾಡು ಹಾಗೂ ಕರಾವಳಿಯ ಸಾಮುದಾಯಿಕ ಬದುಕಿಗೆ, ಅಲ್ಲಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ತುಡಿತ ಮಿಡಿತಗಳ ಚರಿತ್ರೆಗೆ ಇವರ ಬದುಕೊಂದು ಜೀವಂತ ಕೈಪಿಡಿ.
ಇಂತವರು, ಹಿಮಾಲಯದಂತಹ ಮಹಾ ಪರ್ವತದಲ್ಲಿ ಹುಟ್ಟಿ, ಕಣಿವೆ ಕೊಳ್ಳಗಳಲ್ಲಿ ಕುಣಿದು ಕುಪ್ಪಳಿಸಿ ಭೋರ್ಗರೆಯುತ್ತಾ, ತನ್ನೆರಡೂ ದಂಡೆಗಳ ಹತ್ತು ಹಲವು ಸ್ಥಳಗಳನ್ನು ಪಾವನಗೊಳಿಸುತ್ತಾ ಸಾವಿರಾರು ಮೈಲುಗಳ ದೂರ ಹರಿದು ಭಕ್ತರ ಪಾಪಗಳನ್ನು ತೊಡೆದು ಹಾಕುವ ದೇವನದಿಗಳೆಂದು ಹೆಸರಾದ ಗಂಗೆ ಯಮುನೆಯರಂತಲ್ಲ! ತನ್ನೊಡಲ ಜಲವನ್ನು ಇಕ್ಕೆಲದ ಹೊಲಗಳಿಗೆ ಹರಿಸಿ ನೆಲಕ್ಕೆ ಸಮೃದ್ಧ ನೀರುಣಿಸಿ, ಲಕ್ಷಾಂತರ ಎಕರೆಗಳಲ್ಲಿ ಹುಲುಸಾದ ಬೆಳೆ ಬೆಳೆಯಲು ಕಾರಣವಾದ ಸುವಿಖ್ಯಾತ ನದಿಗಳೆನ್ನಿಸಿದ ನರ್ಮದಾ ಸಿಂಧು ಕಾವೇರಿಯರಂತಲ್ಲ.

ಬದಲಿಗೆ ಇವರ ಬದುಕು, ಮಲೆನಾಡಿನ ಕಣಿವೆ ಕೋವುಗಳ, ಹೊಲಗದ್ದೆಗಳ, ಬ್ಯಾಣ ತೋಟಗಳ ಪಕ್ಕದಲ್ಲಿ ಸದಾ ಕಲಕಲ ಹರಿಯುವ ನಿಗಿನಿಗಿ ತಿಳಿನೀರ ಹಳ್ಳದಂತೆ. ನಿತ್ಯ ಹರಿದ್ವರ್ಣದ ಹಸಿರು ಮತ್ತು ಉಸಿರಳಿಯದಂತೆ, ವರ್ಷವಿಡೀ ನೆಲದ ಒಳಪಸೆ ಆರದಂತೆ, ಬೆಟ್ಟದ ಮಗ್ಗುಲಿನ ಕಣಿವೆಯಾಳದಲ್ಲಿ ಒಸರುವ ಸಿಹಿನೀರ ಒರತೆಗಳನ್ನು ಪರಿಪೋಷಿಸುವ ಸಣ್ಣ ಹೊಳೆಯಂತೆ. ಇಂತಹ ಸಣ್ಣ ಪುಟ್ಟಹೊಳೆಗಳೇ ಎಲ್ಲ ಬೃಹತ್ ಜೀವನದಿಗಳ ಒಡಲು ಬರಿದಾಗದಂತೆ, ಅವುಗಳೆದೆಯ ಆರ್ದ್ರತೆ ಹಿಂಗದಂತೆ ಕಾಪಿಡುವ ಅಮೃತ ಸೆಲೆಗಳಾದರೂ ಹೆಸರು ನದಿಗಳಿಗೇ ಹೊರತು ಇಂತಹ ಹೊಳೆಗಳಿಗಲ್ಲ.
ಹಾಗಾಗಿ ಹೆಸರು ಕೇಳುತ್ತಿದ್ದಂತೆ ಒಡಲು ಪುಳಕಗೊಳ್ಳುವ ಗ್ಲಾಮರ್ ಇವರಿಗಿಲ್ಲ. ನಿತ್ಯವೂ ಪತ್ರಿಕೆಗಳಲ್ಲಿ ಇವರ ಬಣ್ಣಬಣ್ಣದ ಚಿತ್ರಗಳು ರಾರಾಜಿಸುವುದಿಲ್ಲ! ಹತ್ತು ಹಲವು ಮಾಧ್ಯಮಗಳು ಮತ್ತೆ ಮತ್ತೆ ಇವರ ಹೆಸರು ಬಿತ್ತರಿಸಿ, ನಿಮ್ಮ ಚಿತ್ತಭಿತ್ತಿಯಲ್ಲಿ ಇವರ ಹೆಸರನ್ನು ಕೆತ್ತಿ ನಿಲ್ಲಿಸುವುದಿಲ್ಲ. ಯಾವುದೇ ಬಹುರಾಷ್ಟ್ರೀಯ ಕಂಪನಿಯೂ ಇವರ ಕಾರ್ಯಕ್ರಮವನ್ನು ಪ್ರಾಯೋಜಿಸುವಷ್ಟು ಕಾರ್ಪೋರೇಟ್ ಜಗತ್ತಿಗೆ ಇವರು ಪರಿಚಿತರಲ್ಲ. ದೊಡ್ಡ ದೊಡ್ಡ ರೆಕಾರ್ಡಿಂಗ್ ಕಂಪನಿಗಳು ಬಣ್ಣಬಣ್ಣದ ಬೇಗಡೆಗಳನ್ನು ಹೊದೆಸಿ ಇವರ ಕ್ಯಾಸೆಟ್‌ಗಳನ್ನು ಬಿತ್ತಿ ಬೀಗುವುದಿಲ್ಲ. ಸಾವಿರಾರು ವಾಹನಗಳಲ್ಲಿ ಇವರ ಹಾಡಿನ ಸಿ.ಡಿ ಪಯಣಿಗರ ನಡುವಿನ ಮೌನ ಮುರಿಯುವುದಿಲ್ಲ. ದೊಡ್ಡ ದೊಡ್ಡ ನಗರಗಳ ವೃತ್ತಗಳಲ್ಲಿ ಇವರ ಬಣ್ಣದ ಕಟೌಟುಗಳು ಕಣ್ಣಿಗೆ ರಾಚುವುದಿಲ್ಲ; ಯಾವುದೇ ದರ್ಶನಿಗಳಲ್ಲಿ ಇವರ ಕಾರ್ಯಕ್ರಮದ ತೂಗು ಫಲಕ ನೇತು ಬೀಳುವುದಿಲ್ಲ. ಟಿ.ವಿ ವಾಹಿನಿಗಳ, ವರ್ಷದ ವ್ಯಕ್ತಿಗಳ ಯಾದಿಯಲ್ಲೂ ಇವರ ಹೆಸರು ಸೇರ್ಪಡೆಗೊಳ್ಳುವುದಿಲ್ಲ.
ಇವರಿಗೆ ನಿತ್ಯ ಸನ್ಮಾನಗಳಿಲ್ಲ. ಅಪರೂಪಕ್ಕೊಮ್ಮೆ ಯಾರಾದರೂ ಸನ್ಮಾನಕ್ಕೆ ಆಹ್ವಾನಿಸಿದರೂ ಇವರಿಗೆ ಅದು ಅಪಥ್ಯ. ಒಂದು ಸನ್ಮಾನದ ಬದಲು ನಾಲ್ಕು ಹಾಡುಗಳನ್ನು ಹೇಳಲು ಅವಕಾಶ ನೀಡಿದರೆ ಅದೇ ಇವರಿಗೆ ತೃಪ್ತಿ. ನಾಲ್ಕು ಜನ ಕೇಳಿ ತಣಿದರೆ ಅದೇ ಸಂತಸ. ಇವರಿಗಿನ್ನೂ ಕೀರ್ತಿಶನಿಯ ಕಾಟ ಮೆತ್ತಿಕೊಂಡಿಲ್ಲ. ಹೆಸರಿನ ವಾಂಛೆ ಸುತ್ತಿಕೊಂಡಿಲ್ಲ. ಹಣದಾಹದ ಹುಚ್ಚು ಹತ್ತಿಲ್ಲ. ಬಿರುದುಗಳಿಗೆ ಜೋತು ಬೀಳುತ್ತಿಲ್ಲ; ದಾಖಲೆಗಳ ನಿರ್ಮಾಣದ ನಶೆ ಏರಿಲ್ಲ.
ಅನ್ನ, ವಿದ್ಯೆ, ಕಲೆಗಳೆಲ್ಲವೂ ವ್ಯಾಪಾರೀಕರಣದ ದ್ರವ್ಯಗಳಾಗಿ ಸಹಜತೆಯನ್ನು ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲೂ ಯಾವುದೇ ಪ್ರಲೋಭನೆಗಳಿಗೆ ಪಕ್ಕಾಗದೆ, ತಮ್ಮ ತಲೆಮಾರಿನ ಸಹಜತೆಯನ್ನು ಉಳಿಸಿಕೊಂಡು, ಮಲೆನಾಡು, ಕರಾವಳಿ ಅಷ್ಟೇ ಯಾಕೆ, ಇಡಿಯ ನಾಡಿನ ಸಹೃದಯರಿಂದ ನಮ್ಮ ರಾಘಣ್ಣ ಎನ್ನಿಸಿಕೊಂಡ ಸುಗಮ ಸಂಗೀತ ಕ್ಷೇತ್ರದ ವನಸುಮ – ಗರ್ತಿಕೆರೆ ರಾಘಣ್ಣ

ಯಾಕೆ ಇವರು ‘ನಮ್ಮ ರಾಘಣ್ಣ’ ?
ವ್ಯಕ್ತಿಯೊಬ್ಬ ನಾಡಿನ ಬಹುತೇಕ ಎಲ್ಲರಿಂದ ‘ನಮ್ಮವ’ ಎನ್ನಿಸಿಕೊಳ್ಳುವುದು ಯಾವುದರಿಂದ? ತನ್ನ ಸ್ನೇಹ -ಸೌಜನ್ಯದಿಂದಲೇ? ಸಚ್ಚಾರಿತ್ರ್ಯ-ಸದ್ಗುಣಗಳಿಂದಲೇ? ತನ್ನ ಅಭಿಜಾತ ಪ್ರತಿಭೆ ಮತ್ತು ಗಳಿಸಿದ ಖ್ಯಾತಿಯಿಂದಲೇ? ಸದ್ವರ್ತನೆ ಹಾಗೂ ಸತತ ಸಂಪರ್ಕದಿಂದಲೇ? ಸಮುದಾಯ ತನ್ನಲ್ಲಿಟ್ಟ ನಿರೀಕ್ಷೆಗಳನ್ನು ಹುಸಿಯಾಗಿಸದೇ ತನ್ನ ಕ್ಷೇತ್ರದಲ್ಲಿ ತಾನು ತನ್ಮಯನಾಗುವುದರಿಂದಲೇ ಅಥವಾ ಸಮುದಾಯದ ಮನೋಧರ್ಮಕ್ಕೆ ಹೊಂದಿಕೆಯಾಗುವಂತೆ ತನ್ನನ್ನು ಒಡ್ಡಿಕೊಳ್ಳುವುದರಿಂದಲೇ? ಜಾತಿ,ಮತ,ಲಿಂಗ,ವಯಸ್ಸುಗಳನ್ನು ಮೀರಿ, ಗಡಿ-ಗದ್ದಲಗಳನ್ನು ದಾಟಿ, ಇಡೀ ನಾಡಿನಲ್ಲಿ ಎಲ್ಲರಿಂದಲೂ ನಮ್ಮವ ಎನ್ನಿಸಿಕೊಳ್ಳುವ ಸಾರ್ಥಕ್ಯ ದಕ್ಕುವುದಾದರೂ ಹೇಗೆ? ಗೊತ್ತಿಲ್ಲ. ಆದರೆ ಈ ವ್ಯಕ್ತಿಯನ್ನಂತೂ ನಾಡಿನ ಉದ್ದಗಲಕ್ಕೂ ಹುಡುಗರು, ಹೆಂಗಸರು ಗಂಡಸರೆಂಬ ಬೇಧವಿಲ್ಲದೆ ಎಲ್ಲರೂ “ನಮ್ಮ ರಾಘಣ್ಣ” ಎಂದೇ ಕರೆಯುತ್ತಾರೆ. ಘಟ್ಟದ ಮೇಲಿನವರು “ಅವರೇ ಅಲ್ವೇನಾ? ನಮ್ಮ ಗರ್ತಿಕೆರೆ ರಾಘಣ್ಣ” ಎಂದರೆ, ಘಟ್ಟದ ಕೆಳಗಿನವರು “ಗೊತ್ತಿಲ್ಯಾ, ಅವರು ನಮ್ಮ ರಾಘಣ್ಣ ಅಲ್ದನಾ ಮಾರಾಯಾ” ಎನ್ನುತ್ತಾರೆ. ಶಿವಮೊಗ್ಗದ ವಿದ್ವತ್ ಸಭೆಯಲ್ಲೂ “#ಮಲೆನಾಡಿನ_ಗಾನ_ಕೋಗಿಲೆ – ನಮ್ಮ ರಾಘಣ್ಣ” ಎಂದರೆ, ಬೆಂಗಳೂರಿನ ಕನ್ನಡಾಭಿಮಾನಿಗಳೂ, “ಕನ್ನಡ ಸುಗಮ ಸಂಗೀತದ ಅಭಿಜಾತ ಕಲಾವಿದ – ನಮ್ಮ ರಾಘಣ್ಣ” ಎಂದು ಹೊಗಳುತ್ತಾರೆ. ದಾವಣಗೆರೆಯ ಸಭೆಯಲ್ಲೂ ನಿರೂಪಕ, “ನಮ್ಮವರೇ ಆದ ರಾಘಣ್ಣ” ಎಂದು ಉದ್ಘೋಷಿಸಿದರೆ, ದೂರದ ಬೆಳಗಾವಿಯಲ್ಲೂ “ಕನ್ನಡದ ಹೆಸರಾಂತ ಗಾಯಕ, ನಮ್ಮ ರಾಘಣ್ಣ” ಎಂದೇ ಕರೆಯುತ್ತಾರೆ. ಹೀಗೆ, ನಾಡಿನುದ್ದಗಲಕ್ಕೂ, ಅಷ್ಟೇ ಯಾಕೆ ನಾಡಿನಾಚೆ ಕನ್ನಡ ಪಸರಿಸಿದ ಎಲ್ಲೆಡೆಯಲ್ಲೂ ‘ನಮ್ಮ ರಾಘಣ್ಣ ‘ಎಂದೇ ಹೆಸರಾದ ಈ ”ರಾಗಣ್ಣ” ಎಲ್ಲರಿಗೂ ನಮ್ಮವನಾದದ್ದು ಹೇಗೆ ಎಂಬುದೊಂದು ದೊಡ್ಡ ವಿಸ್ಮಯ!
ಅವರವರ ಭಾವಕ್ಕೆ, ಅವರವರ ಆಶಯಕ್ಕೆ, ಅವರವರ ನಿರೀಕ್ಷೆಗಳಿಗೆ ಹೊಂದಿಕೊಂಡು, ಎಲ್ಲಿಯೂ ತನ್ನತನವನ್ನು ಬಿಟ್ಟುಕೊಡದೇ, ಎಂದೂ ಅನ್ಯರನ್ನು ಮೀರಿಸಬೇಕೆಂಬ ಹಟವಿಲ್ಲದೇ, ಎಲ್ಲೆಡೆಯೂ ತಾನೇ ಸಲ್ಲಬೇಕೆಂಬ ಸ್ವಾರ್ಥವಿಲ್ಲದೆ , ಸರಳತೆ ಸೌಜನ್ಯತೆ ಸಭ್ಯತೆಗೆ ಮೂರ್ತ ರೂಪವಾದ ಈ ಹಾಡುಗಾರ, ಕರಾವಳಿಯ ನಾದ ಜಂಗಮ. ಮಲೆನಾಡಿನ ಕಾಡು ಕಣಿವೆಯ ಹಾಡು ಹಕ್ಕಿ.
ಇವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆಯ ಹೊ.ನಾ ರಾಘವೇಂದ್ರರಾಯರು ಎಂದರೆ, ಯಾರೋ ಹೊಸಬರನ್ನು ಕುರಿತು ಹೇಳುತ್ತಿದ್ದಂತೆ ಅನ್ನಿಸುತ್ತದೆ. ಹಾಡುವವರು ಹಲವು ಮಂದಿ ಇದ್ದಾರೆ. ಹಾಡು ಕೇಳುವವರಂತೂ ಅಸಂಖ್ಯ. ಆದರೆ ಹಾಡುಗಾರರನ್ನು ಬೆಳೆಸುವ, ಇಡೀ ಜನ ಸಮುದಾಯದಲ್ಲಿ ಸುಗಮ ಸಂಗೀತದ ಪ್ರೀತಿ ಒಳಪ್ರವಾಹವಾಗಿ ಹರಿಯುವಂತೆ ಸಂಗೀತಾಸಕ್ತಿಯ ಆರ್ದ್ರತೆಯ ನಿರಂತರತೆಯನ್ನು ಕಾಪಾಡುವವರು ಎಷ್ಟು ಮಂದಿ? ಹಾಡುಗಾರಿಕೆಯನ್ನೇ ವೃತ್ತಿಯಾಗಿಸಿಕೊಂಡವರು, ಪ್ರವೃತ್ತಿಯಾಗಿಸಿಕೊಂಡವರು ಹಲವರು ಸಿಗುತ್ತಾರೆ. ಆದರೆ ಹಾಡುಗಾರಿಕೆಯನ್ನೇ ಬದುಕಾಗಿಸಿಕೊಂಡವರು, ಉಸಿರಾಗಿಸಿಕೊಂಡವರು ಎಷ್ಟು ಮಂದಿ ಸಿಕ್ಕಾರು?
ಮಲೆನಾಡಿನ ಮನೆಗಳಲ್ಲೋ, ಶಾಲಾ ಕಾಲೇಜು ಸಮಾರಂಭಗಳಲ್ಲೋ ಅಥವಾ ಇತರ ಯಾವುದಾದರೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೋ ಯಾರಾದರೂ ಹುಡುಗನೋ, ಹುಡುಗಿಯೋ, ಹಾಡಿದ್ದನ್ನು ಕೇಳಿ, ‘ಈ ಹಾಡು ಎಲ್ಲಿ ಕಲಿತೆ?’ ಎಂದು ಕೇಳಿರಿ. ಅದಕ್ಕೆ ಆ ಹುಡುಗನ, ಹುಡುಗಿಯ ಉತ್ತರ, “ಇದು… ಮೊದಲು ನಮ್ಮ ಗರ್ತಿಕೆರೆ ರಾಘಣ್ಣ ಹಾಡಿದ್ದು ಕೇಳಿದ್ದೆ… ಆಮೇಲೆ… ಅವರೇ ಒಂದ್ಸಾರಿ ಹೇಳಿಕೊಟ್ಟಿದ್ದರು.” ಎಂದೇ ಮಾತು ಮುಂದುವರೆಯುವುದು! ಕಲೆಗಳಿಗಾಗಿ ಕಲೆಗಳ ಆರಾಧನೆ ಹೊಸತಲ್ಲ. ಆದರೆ ಬದುಕಿನಲ್ಲೇ ಕಲೆ, ಕಲೆತು ಹೋದಂತೆ ಬಾಳುವವರು ಅಪರೂಪ. ಸುಮಾರು ಆರೇಳು ದಶಕಗಳಿಂದ, ಅರ್ಥ ಕೆಡದಂತೆ ಸಾಹಿತ್ಯ ಶುದ್ಧವಾದ, ಸ್ಫುಟವಾದ ಉಚ್ಚಾರ, ಹಾಗೂ ಪದ್ಯದ ಭಾವಕ್ಕೊಪ್ಪುವ ರಾಗದ ಅನುಸಂಧಾನದ ಮೂಲಕ ಕನ್ನಡದ ಎಲ್ಲ ಕವಿಗಳ ರಚನೆಗಳನ್ನು ಲೀಲಾಜಾಲವಾಗಿ ಸಂಗೀತಕ್ಕೆ ಅಳವಡಿಸಿಕೊಂಡು ತುಂಬು ಕಂಠದಿಂದ ಹಾಡುತ್ತಾ, ಇತರರಿಗೂ ಹಾಡಲು ಪ್ರೋತ್ಸಾಹಿಸುತ್ತಾ ಸಾಗಿದ ಈ ವ್ಯಕ್ತಿ, ತ್ರಿವಿಕ್ರಮ ಗುಣ ತನ್ನೊಳಗೆ ಅವಿತಿದ್ದರೂ, ಜಗತ್ತಿಗೆ ತನ್ನನ್ನು ವಾಮನಮೂರ್ತಿಯಾಗಿಯೇ ಒಡ್ಡಿಕೊಂಡವರು. ಎಲ್ಲ ಸತ್ವಗಳನ್ನೂ ಮೈಗೂಡಿಸಿಕೊಂಡಿದ್ದರೂ ಅದನ್ನು ಅಗತ್ಯ ಕಂಡಷ್ಟೇ ಹೊರಜಗತ್ತಿಗೆ ಪ್ರಕಟಿಸುತ್ತಾ ತಾನು ಹತ್ತರೊಳಗೊಬ್ಬನಾಗಿಯೇ ಉಳಿದ ಸರಳ ವ್ಯಕ್ತಿ. ಈ ವಯಸ್ಸಿನಲ್ಲೂ ನೂರಾರು ಹಾಡುಗಳನ್ನು ಪುಸ್ತಕದ ನೆರವಿಲ್ಲದೇ ಕೇವಲ ನೆನಪನ್ನಾಶ್ರಯಿಸಿಯೇ ಉಲಿಯಬಲ್ಲ ಅಪರೂಪದ ಕಲಾವಿಧ.
ಈತ ಯಶಸ್ಸನ್ನರಸಿ ನಗರಕ್ಕೆ ವಲಸೆ ಹೋಗಿದ್ದರೆ ಶ್ರೀಮಂತ ಗಾಯಕರಾಗಬಹುದಿತ್ತೇನೋ, ಬೆಂಗಳೂರಿನಂತಹ ಮಹಾನಗರದಲ್ಲಿ ಸುಖವಾಗಿ ನೆಲಸಿ, ತಮ್ಮ ಕಾರಿನ ಹಿಂಬದಿಯ ಗಾಜಿನ ಮೇಲೆ ‘ಗರ್ತಿಕೆರೆ’ ಎಂದು ಬರೆಸಿಕೊಂಡು ಜುಮ್ಮೆಂದು ಓಡಾಡಬಹುದಿತ್ತೇನೋ. ಆದರೆ ಕೆ.ವಿ.ಸುಬ್ಬಣ್ಣ ಹೆಗ್ಗೋಡು ಸುಬ್ಬಣ್ಣರಾಗಿಯೇ ಉಳಿದಂತೆ, ರಾಘಣ್ಣ ಗರ್ತಿಕೆರೆ ರಾಘಣ್ಣರಾಗಿಯೇ ಉಳಿದರು, ಬೆಳೆದರು.
(ಗರ್ತಿಕೆರೆ ರಾಘಣ್ಣ ಅವರು ಹಾಡಿನ LIVE ಕಾರ್ಯಕ್ರಮ )
ಈ ಸಂದರ್ಭದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕ ಹಾಗೂ ನಿರ್ದೇಶಕ ಮೈಸೂರು ಅನಂತಸ್ವಾಮಿಯವರ ಮಾತೊಂದನ್ನು ಜ್ಞಾಪಿಸಿಕೊಳ್ಳುವುದು ಅಪ್ರಸ್ತುತವಲ್ಲವೆಂದು ಭಾವಿಸುತ್ತೇನೆ. ೧೯೯೪ರಲ್ಲಿ ಬೆಂಗಳೂರಿನಲ್ಲಿ #ಜಿ_ವಿ_ಅತ್ರಿಯವರು ಸಂಯೋಜಿಸಿದ ಸುಗಮ ಸಂಗೀತ ಸಮ್ಮೇಳನದಲ್ಲಿ ಆಗಷ್ಟೇ ರಾಘಣ್ಣನವರ ಹಾಡನ್ನು ಮೊದಲ ಬಾರಿಗೆ ಕೇಳಿದ ಮೈಸೂರು ಅನಂತಸ್ವಾಮಿ, ‘ಈ ಮಹಾಶಯ ಕೆಲವು ವರ್ಷಗಳ ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರೆ ನಮ್ಮನ್ನು ಕೇಳುವವರೇ ಇರುತ್ತಿರಲಿಲ್ಲ”ಎಂದು ಉದ್ಘರಿಸಿದ್ದು ಅತಿಶಯೋಕ್ತಿಯಲ್ಲವೆಂಬುದು ಹಲವರ ಅಂಬೋಣ.
ಶ್ರೀಮಂತಿಕೆಯ ಕನವರಿಕೆಯಿಲ್ಲದೆ ಬದುಕನ್ನು ಅದು ಬಂದಂತೆಯೇ ಸ್ವೀಕರಿಸುತ್ತಾ ಬಿಗುಮಾನವಿಲ್ಲದೇ ಎಲ್ಲರೊಳಗೊಂದಾಗಿ ಬದುಕಿದವರು ರಾಘಣ್ಣ. ಅವರೆಂದೂ ಪ್ರಸಿದ್ಧಿಗಾಗಿ ತುಡಿಯಲಿಲ್ಲ. ಯಾವುದೇ ಬಗೆಯ ಆರ್ಥಿಕ ವಿಕಾರಗಳಿಗೆ ವಶವಾಗದೆ, ಶ್ರೇಷ್ಠತೆಯ ವ್ಯಸನಗಳಿಗೆ ಈಡಾಗದೇ, ಪ್ರಚಾರ ಪ್ರಸಿದ್ದಿಗಳಿಗೆ ಪಕ್ಕಾಗದೇ ಬಾಳ ಹಾದಿಯನ್ನು ಕ್ರಮಿಸಿದವರು. ಎಂದೂ ಸೌಜನ್ಯ ಮತ್ತು ಸಂತೃಪ್ತಿಯ ಪರಿಧಿಯನ್ನು ದಾಟಿದವರಲ್ಲ. ಎಂದೂ ತಮಗೆ ದಕ್ಕದಿದ್ದುದಕ್ಕೆ ಕೈಚಾಚಿ ನೊಂದವರಲ್ಲ. ಹಾಗಾಗಿಯೇ ಈ ಸೌಜನ್ಯದ ಸೌಶೀಲ್ಯದ ಸರಳ ವ್ಯಕ್ತಿತ್ವವನ್ನು ಸಮಾಜ ಸಹೃದಯತೆಯಿಂದ ಸ್ವೀಕರಿಸಿತು. ಮಲೆನಾಡ ನಡುವಿನ ಪುಟ್ಟ ಹಳ್ಳಿಯಲ್ಲಿ “ಘನನು ತಾನೆಂದೆಂಬ” ಗರ್ವವಿಲ್ಲದೆ ಅರಳಿ ಪರಿಮಳ ಚೆಲ್ಲಿದ ವನಸುಮದಂತೆ, ಬದುಕಿ ಬಾಳಿದರು; ಅಂಟಿಕೊಂಡೂ ಅಂಟಿಕೊಳ್ಳದೆಯೇ ಬದುಕಿದರು. ಎಲ್ಲರನ್ನೂ ತನ್ನವರೆಂದೇ ಭಾವಿಸಿದರು. ಎಲ್ಲರೂ ಇವರನ್ನೂ ಹಾಗೆಯೇ ಭಾವಿಸಿದರು ಕೂಡ.

ತಮ್ಮ ಚೀಲದಿಂದ ಹಾಡನ್ನು ಹೆಕ್ಕಿ ಹೆಕ್ಕಿ, ಮಲೆನಾಡು ಕರಾವಳಿಗಳ ಉದ್ದಗಲಕ್ಕೂ ಮನೆ ಮನೆಗಳಲ್ಲಿ ಹಂಚಿ ಹರಡುತ್ತಾ ಹೋದರು. ಆತ ಎಂದೂ ಕೇವಲ ಪಂಡಿತರನ್ನು , ವಿಮರ್ಶಕರನ್ನು ಮೆಚ್ಚಿಸಲು ಹಾಡಲೂ ಇಲ್ಲ; ಕಲಿಸಲೂ ಇಲ್ಲ. ಆತ ಸಂಗೀತ ಗೊತ್ತಿದ್ದವರಿಗೆ ಮಾತ್ರ ಹಾಡನ್ನು ಕಲಿಸಲಿಲ್ಲ. ಅವರವರ ಯೋಗ್ಯತೆಗೆ, ಸಾಮರ್ಥ್ಯಕ್ಕೆ ತಕ್ಕ ಹಾಗೆ, ಅವರವರ ವಯಸ್ಸು, ವಿದ್ಯೆ, ಭಾಷೆ ಹಾಗೂ ಶಾರೀರ ಸಾಮರ್ಥ್ಯಕ್ಕೆ ಅನುಗುಣವಾಗಿ ಹಾಡು ಕಲಿಸುತ್ತಾ ಹೋದರು. ಯಾರಿಗೂ “ನಿನಗೆ ಹಾಡಲು ಬಾರದು ಎನ್ನಲಿಲ್ಲ. ನಿನಗೆ ಇದು ಕಷ್ಟ” ಎನ್ನಲಿಲ್ಲ. “ಅದು ಬಾರದಿದ್ದರೆ ಇದು ಬರುತ್ತೆ ನೋಡು” ಎಂದು ಒಂದರ ಬದಲು ಇನ್ನೊಂದನ್ನು ಆಯ್ದುಕೊಟ್ಟರು. ಒಟ್ಟಿನಲ್ಲಿ ತನ್ನ ಪ್ರತಿಭೆಯ ಕಾವಿನಲ್ಲಿ ಸಮುದಾಯದ ಸಂಗೀತಾಸಕ್ತಿ ಬಡವಾಗದೆ ಚಿಗುರಿ ಹೂಬಿಡುವುದನ್ನು ಕಂಡು ಖುಷಿ ಪಟ್ಟ ಋಷಿ ಇವರು. ಹಳ್ಳಿ ಹಳ್ಳಿಗಳಲ್ಲಿ ರಾಘಣ್ಣನ ಹಾಡುಗಳು ಹರಿದಾಡಿವೆ. ಒಂದು ಮನೆಯಲ್ಲಿ ಇಂದು ಹಾಡಿದರೆ ಪಕ್ಕದ ಮನೆಯಲ್ಲಿ ನಾಳೆ ಹಾಡಿದರು. ಅಲ್ಲಿದ್ದವರೆಲ್ಲಾ ಕಲಿತರು. ಅವರಷ್ಟೇ ಅಲ್ಲ; ಅವರ ಮಕ್ಕಳು ಮೊಮ್ಮಕ್ಕಳೂ ಕಲಿತರು. ನೆಂಟರಿಷ್ಟರೂ ಕಲಿತರು. ಹಾಡು ಕೇಳಿದವರೆಲ್ಲಾ ಅದರ ಪಕಳೆ ಪಕಳೆಗಳನ್ನು ಹೊತ್ತೊಯ್ದರು. ತಮ್ಮ ತಮ್ಮ ಊರುಕೇರಿಗಳಲ್ಲಿ ಬಿತ್ತಿದರು. ರಾಘಣ್ಣನ ಹಾಡಿನ ಹೂವು ಚೆಂಡು ಹೂವಿನಂತೆ. ಅದಕ್ಕೆ ಪ್ರತ್ಯೇಕ ಬೀಜಗಳಿಲ್ಲ, ಹೂವಿನ ಎಸಳು ಎಸಳುಗಳೇ ಬೀಜ. ಹಾಗಾಗಿ ಎಸಳನ್ನೆಸೆದಲ್ಲೆಲ್ಲಾ ಹೊಸ ಗಿಡ ಹುಟ್ಟಿ ಬೆಳೆದು ಹೂವರಳಿ ನಾಡೆಲ್ಲಾ ಹಾಡಿನ ಹೂವಿನಿಂದ ಝೇಂಕರಿಸಿತು. ಕನ್ನಡದ ನುಡಿ ತೇರು ಹೊಸ ಹೊಸ ಹಾಡುಹೂಗಳಿಂದ ಅಲಂಕರಿಸಲ್ಪಟ್ಟು ಅಂದ ಗಂಧ ಚೆಲ್ಲಿತು.

(ಧರ್ಮಪತ್ನಿಯೊಂದಿಗೆ ರಾಘಣ್ಣ)
ಬಡತನಕ್ಕೆ ಬೀಳುವ ಭಯವಿಲ್ಲ, ಶ್ರೀಮಂತಿಕೆಗೆ ತಾನೆ ಪತನಗೊಳ್ಳುವ ಭಯ? ವ್ಯಾಪಕ ಕೀರ್ತಿ ಪಡೆದು ಹೆಸರು ಗಳಿಸಿದವರಿಗೆ ತಾನೇ ಕೀರ್ತಿ ಮಸಳಿ ಹೋಗುವ ಭಯ? ಹಾಗಾಗಿ ರಾಘಣ್ಣ ನಿತ್ಯ ನಿರ್ಭಯಿ. ವಯೋಭಾರದಿಂದ ಸೊಂಟ ಕುಸಿಯುತ್ತಿದ್ದರೂ, ಕಂಠದ ಕಸು ಕುಸಿಯುತ್ತಿಲ್ಲ. ಹಾಡುತ್ತಲೇ ಇದ್ದಾರೆ; ಹಾಡುತ್ತಲೇ ಇರುತ್ತಾರೆ. ಪ್ರಾಯಶಃ ಅವರ ನಂತರವೂ ಅವರ ಹಾಡಿನ ಗುಂಗು ಕಾಡು ಕಣಿವೆಗಳ ಕಾಲು ಹಾದಿಗಳ ಜಾಡು ಹಿಡಿದು ನಾದಗಂಧ ಬೀರುತ್ತ ಸಾಗುತ್ತಲೇ ಇರುತ್ತದೆ.
ಇವರು ಸಭೆಗಳಲ್ಲಿ ಹಾಡಿದ್ದಕ್ಕಿಂತ ಜಗುಲಿಗಳಲ್ಲಿ ಹಾಡಿದ್ದು ಹೆಚ್ಚು. ಸಮಾರಂಭಗಳಲ್ಲಿ ಹಾಡಿದ್ದಕ್ಕಿಂತ, ಮನೆಯಂಗಳದಲ್ಲಿ ಹಾಡಿದ್ದು ಹೆಚ್ಚು. ನಾವು ನಾವೇ ಕೂಡಿ ಕಲೆತು ಕುಳಿತಾಗ ಹಾಡಿದ್ದು ಹೆಚ್ಚು. ಮೈಕಾಸುರನ ಮುಂದೆ ಹಾಡಿದ್ದಕ್ಕಿಂತ ನಮ್ಮೊಳಗೊಬ್ಬರಾಗಿ ಹಾಡಿದ್ದು ಹೆಚ್ಚು. ಕಾವ್ಯದ ಸತ್ವ ಕುಸಿಯದಂತೆ, ಕವಿಯ ಭಾವ ಹುಸಿಯಾಗದಂತೆ, ಕೇಳುಗರ ಒಳ ಮನಸ್ಸಿನ ತಳಮುಟ್ಟಿ ಸಾಹಿತ್ಯ ಹಾಗೂ ಸಂಗೀತವೆರಡನ್ನೂ ಕೇಳುಗನಿಗೆ ದಕ್ಕಿಸಿಕೊಡಬಲ್ಲ ಗಾಯಕ ಈತ. “ಗೀತೆಗೆ ಪ್ರತ್ಯೇಕ ವ್ಯಾಖ್ಯಾನ ಅಗತ್ಯವಿಲ್ಲ; ಗಾಯನವೇ ಅದರ ವ್ಯಾಖ್ಯಾನ ಎಂಬಂತೆ ಹಾಡಬೇಕು, ಗಾಯನ ಗೀತೆಯ ಭಾವವನ್ನು ಧ್ವನಿಸಬೇಕು” ಎನ್ನುತ್ತಾರೆ ಬಲ್ಲವರು. ಗೀತೆಯ ಭಾವ ಸಹೃದಯರಲ್ಲಿ ಅನುರಣಿಸಿದಾಗ ಮಾತ್ರ ಗಾಯನ ಯಶಸ್ವಿಯಂತೆ. ರಾಘಣ್ಣನ ಹಾಡು ಕೇಳಿ ಮತ್ತು ಈ ಮಾತು ಹೌದೋ ಅಲ್ಲವೋ ಹೇಳಿ.
ಅವರು ಹಾಡುತ್ತಾ ಕುಳಿತರೆ ಬೇರೆ ಯಾರೋ ಹಾಡುತ್ತಿದ್ದಂತೆ ಅನ್ನಿಸುವುದಿಲ್ಲ. ಬದಲಿಗೆ ಹಾಡು ನಮ್ಮೊಳಗಿಳಿದು, ನಮಗರಿವಾಗದಂತೆ ನಾವೇ ಹಾಡಿನೊಳಗೊಂದಾಗಿ ಕಳೆದು ಹೋಗುತ್ತೇವೆ, ಕರಗಿ ಹೋಗುತ್ತೇವೆ.
ರಾಘಣ್ಣನ ಹಾಡು ಕೇಳುತ್ತಿದ್ದರೆ, ನಮಗೆ ಹೆಸರಾಂತ ಸಿಹಿ ಅಂಗಡಿಯ ಸವಿಸವಿ ಜಾಮೂನು, ಜಿಲೇಬಿ, ಜಹಾಂಗೀರುಗಳನ್ನು ಸವಿದಂತೆ ಎನ್ನಿಸುವುದಿಲ್ಲ. ಅವರ ಹಾಡು, ಹಳ್ಳಿಯ ಮಬ್ಬುಗತ್ತಲೆಯ ಅಡುಗೆ ಕೋಣೆಯಲ್ಲಿ, ಮಣೆಹಾಕಿ, ಎಳೆಬಾಳೆಯೆಲೆಯ ಸೀಳಿನಲ್ಲಿ, ಹೆರೆದುಪ್ಪದೊಡನೆ ನಮ್ಮ ನಮ್ಮ ಅಮ್ಮಮ್ಮ ಬಡಿಸುವ ಹಲಸಿನಹಣ್ಣಿನ ಕೊಟ್ಟೆಕಡುಬಿನಂತೆ. ಕೊಟ್ಟೆಕಡುಬಿನ ರುಚಿಯೊಂದಿಗೆ ನಮ್ಮನೆ ಮಾಣಿಯೆಂಬ ಅಮ್ಮಮ್ಮನ ವಾತ್ಸಲ್ಯವೂ ಬೆರೆತು, ಒಳಗೆಷ್ಟು ಕಡುಬು ಇಳಿಯಿತೆಂಬ ಅರಿವು ಬಡಿಸಿದ ಅಮ್ಮಮ್ಮನಿಗೂ ಇರುವುದಿಲ್ಲ; ತಿಂದ ಮಾಣಿಗೂ ಇರುವುದಿಲ್ಲ! ರಾಘಣ್ಣನ ಹಾಡು ಕೂಡಾ ಹೀಗೆಯೇ. ಸವಿದಷ್ಟೂ ರುಚಿ. ಹಳ್ಳಿಮನೆಯ ನೆಳಲು-ಬೆಳಕಿನ ನಡುಮನೆಯ ಬೆಚ್ಚನೆಯ ವಾತ್ಸಲ್ಯವೇ ರಾಘಣ್ಣನವರ ಹಾಡಿನ ಗಮ್ಮತ್ತು. ನೀವು ಬೇಕಾದರೆ ಕುಳಿತು ಕೇಳಿ; ಇಲ್ಲ ಬೆಚ್ಚನೆಯ ಕಂಬಳಿ ಹೊದ್ದು, ಕಾಲು ನೀಡಿ ಕೇಳಿ!
ಹರಿಕತೆಯಿಂದ ಹಿಡಿದು, ರಂಗ ಗೀತೆ, ರಂಗ ನಿರ್ದೇಶನದವರೆಗೆ… ಸುಗಮ ಸಂಗೀತ ಗಾಯನದಿಂದ ಹಿಡಿದು ರಾಗಸಂಯೋಜನೆಯವರೆಗೆ.. ದಾಸರ ಪದಗಳಿಂದ ಹಿಡಿದು ಶಿಶುಪ್ರಾಸದವರೆಗೆ, ಹಾರ್ಮೋನಿಯಂನಿಂದ ಹಿಡಿದು ಕೊಳಲಿನವರೆಗೆ ಸಂಗೀತ ಬ್ರಹ್ಮಾಂಡವನ್ನು ಬಾಯಲ್ಲೇ ಬಚ್ಚಿಟ್ಟುಕೊಂಡರೂ, ಮುಗ್ಧತೆಯನ್ನಿನ್ನೂ ಕಳೆದುಕೊಳ್ಳದ ೮೫ರ ಹರೆಯದ ಈ ಜೀವ, ಈಗಲೂ ಮಕ್ಕಳೊಂದಿಗೆ ಮಗುವಾಗಿ, ವಯಸ್ಕರೊಂದಿಗೆ ಯಜಮಾನನಾಗಿ, ಯುವಕರೊಂದಿಗೆ ಹಾಸ್ಯ ಚಟಾಕಿ ಹಾರಿಸುವ ಪಡ್ಡೆ ಹುಡುಗನಾಗಿ ಬೆರೆಯಬಲ್ಲ ಅಪರೂಪದ ಚೇತನ.
(ಫೋಟೋ ಕೃಪೆ : facebook)
- ಡಾ.ಗಜಾನನ ಶರ್ಮಾ (ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೇಖಕರು)
