ವಾರ್ತೆಯಲ್ಲಿ ವೈಭೀಕರಣ ಬೇಡ – ಪ್ರೊ.ರೂಪೇಶ್ ಪುತ್ತೂರು



ಸುದ್ದಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿತು, ಅವಶ್ಯಕತೆ ಇರುವ ಸುದ್ದಿಯನ್ನು ಮಾತ್ರ ಪ್ರಸಾರ ಮಾಡಬೇಕು. ಅದನ್ನು ಬಿಟ್ಟು ಎಲ್ಲವನ್ನು ಬಿಡಿ ಬಿಡಿಯಾಗಿ ‘ನಮ್ಮಲ್ಲೇ ಮೊದಲು’ ಎಂದು ವೈಭವೀಕರಿಸಿ ಹೇಳುವ ಆತುರದಲ್ಲಿ ಸಮಾಜವನ್ನು ತಪ್ಪು ದಾರಿಯ ಕಡೆ ಸೆಳೆಯುತ್ತಿರುವುದು ಸರಿಯಲ್ಲ. ಇದು ಚಿಂತನೆಯ ವಿಷಯ. ಮುಂದೆ ಓದಿ…

ಶಾಲೆಯಲ್ಲಿ ಮಕ್ಕಳನ್ನು ಸೇರಿಸುವುದು, ಶಿಕ್ಷಕರಿಂದ ಅರಿವು ತನ್ನ ಮಕ್ಕಳಿಗೆ ಲಭಿಸಿ, ಮುಂಬರುವ ಸತ್-ಸಮಾಜದ ಒಂದು ಭಾಗವಾಗಲಿ ಎಂದು. ಅಲ್ಲಿ ಅದೇ ಶಿಕ್ಷಕ ದ್ವೇಷ, ಪಿಕ್ ಪಾಕೆಟ್,ದರೋಡೆ…. ಮುಂತಾದುವುಗಳನ್ನು ಹೇಳಿಕೊಟ್ಟರೆ? ಶಿಕ್ಷಕ ಕೂಡ ಮುಂದಿನ ಪೀಳಿಗೆಗೆ ಹಿಂದಿನ ಪೀಳಿಗೆಯೊಂದಿಗಿನ ಜ್ಞಾನದ ಸೇತುವೆಯಂತಿನ ಒಂದು ಮಾಧ್ಯಮ ಮಧ್ಯವರ್ತಿ.

ಒಬ್ಬ ವೈದ್ಯ ತಾನು ಕೊಟ್ಟ ಮಾತ್ರೆಯನ್ನು ಒಂದು ಗ್ಲಾಸು ಕೊಳಚೆ ನೀರಿನೊಂದಿಗೆ ಸೇವಿಸಲು ಹೇಳಿದರೆ? ವೈದ್ಯ/ಡಾಕ್ಟರ್ ಅನಾರೋಗ್ಯದಿಂದ ಆರೋಗ್ಯದ ಕಡೆ ನಮ್ಮನ್ನು ಕರೆದು ಕೊಂಡು ಹೋಗುವ ಮಾಧ್ಯಮ ಮಧ್ಯವರ್ತಿ. ಆದರೆ ಸಮಾಜವನ್ನು ಒಳ್ಳೆಯ ಸ್ಥರದಲ್ಲಿಡಬೇಕಾದ ವಾರ್ತಾ ಮಾಧ್ಯಮಗಳು ಹೀಗಾದರೆ ಸಮಾಜದ ಗತಿ ಏನಾಗಬೇಕೋ ಅದೇ ಆಗುತ್ತದೆ.

ವಿದ್ಯೆ, ಆರೋಗ್ಯ, ರಸ್ತೆ, ಆದಾಯ-ಕೆಲಸ ಮುಂತಾದ ಜನರ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಿ, ಪರಿಹಾರ ಜನರಿಗೆ ತಲುಪಿಸುವ, ದೇಶದ ಪ್ರಬುದ್ಧತೆಯ ಬೆಳವಣಿಗೆಯ ಆಸ್ಪದವಾಗಬೇಕಿದ್ದ ಖಾಸಗೀ #ವಾರ್ತಾ ಸಂಸ್ಥೆಗಳು, ಜನರ ಮನ-ಮೆದುಳುಗಳಲ್ಲಿ ತ್ಯಾಜ್ಯ ಚಿಂತನೆ ತುಂಬಿಸುವ ಆತುರದ ಸೋಜಿಗತೆ ತರುತ್ತಿದೆ.

ಫೋಟೋ ಕೃಪೆ : bates-communications

ಒಬ್ಬ ಹಳ್ಳಿಯ ಗವಾರ, ಶಂಭು ಮೊತ್ತ‌ ಮೊದಲು ನಮ್ಮೂರಿಗೆ ಬಂದು, ಮಣ್ಣು ಹೋರುವ ಕೆಲಸ ಮಾಡುತ್ತಿದ್ದ. ಪ್ರಪ್ರಥಮವಾಗಿ ಒಂದು ಚಲನಚಿತ್ರ ನೋಡಿ, ಅದರಲ್ಲಿರುವ ಕೊಲೆ – ರಕ್ತ ಕಂಡು , ಸತ್ಯವೆಂದು ಹೆದರಿ ಕಂಗಾಲಾಗಿ ಜ್ವರ ಬಂದಿತ್ತು. ಅಂತಹಾ ಎರಡ್ಮೂರು ಚಲನಚಿತ್ರ ನೋಡಿದರೆ ಧೈರ್ಯ ಬರುತ್ತದೆಂದು ಕೆಲವರು ಬುದ್ದಿ ಹೇಳಿದರು. ಐದಾರು ವರುಷದ ನಂತರ, ಅವನು ಒಂದು ಕೋಳಿ ಮಾರಾಟದ ಅಂಗಡಿಯಲ್ಲಿ ಒದೆ ತಿಂದು ಪೋಲೀಸು ಠಾಣೆ ಸೇರಿದ್ದ. ಅಲ್ಲಿಯ ಪೋಲೀಸ್ ಅಧಿಕಾರಿ ಶ್ರೀ ಆದಿಮಣಿ ತುಂಬಾ ಪ್ರಬುದ್ಧರಾಗಿದ್ದರು. ಕೇಸು ದಾಖಲಿಸದೆ ಅವನನ್ನು ಕಂಕನಾಡಿಯ ಮಾನಸಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದರು.



ಕಾರಣ – ರಕ್ತ ಸುರಿಯುವ ಕೆಲ ಚಲನಚಿತ್ರ ನೋಡಿದ ನಂತರ, ಅವನಿಗೆ ಅಂತಹಾ ದೃಶ್ಯ “ಮಾತ್ರ” ನೋಡುವುದರಲ್ಲಿ ಸುಖ ಕಾಣತೊಡಗಿತು. ನಿರಂತರ ಅಂತಹಾ ಚಲನಚಿತ್ರ ನೋಡುವ ರೂಢಿ ಮಾಡಿದ. ಏತನ್ಮಧ್ಯೆ ಕಾಕತಾಳೀಯವಾಗಿ ಅವನಿಗೆ ಕೋಳಿ ಅಂಗಡಿಯಲ್ಲಿ ಕೆಲಸ ಸಿಕ್ತು. ಕೋಳಿಯನ್ನು ಕೊಂದು ಚಿಮ್ಮುವ ರಕ್ತ ಅವನಿಗೆ ಏನೋ ಉನ್ಮಾದ ತರುತ್ತಿತ್ತು. ಎಲ್ಲಾ ದಿನವೂ ಅಷ್ಟೊಂದು ಕೋಳಿ ಖರೀದಿಯಾಗುತ್ತಿರಲಿಲ್ಲ. ವ್ಯಾಪಾರ ಇಲ್ಲವಾದ ಸಮಯ , ಅವನೇ ಸುಮ್ಮನೆ ಒಂದು ಕೋಳಿಯನ್ನು ಕೊಂದು, ಅದರ ರಕ್ತ ಹರಿಯುವುದು ನಿಂತ ನಂತ್ರ…..ಮತ್ತೊಂದು ಕೋಳಿಯನ್ನು ಕೊಯ್ಯುತ್ತಿದ್ದ. ವ್ಯಾಪಾರವಾಗದ ಐದಾರು ಕೋಳಿಯನ್ನು ಸರಾಗವಾಗಿ ಎರಡ್ಮೂರು ದಿನ ಕೊಯ್ದು ಹಾಕಿದ ಶಂಭುವನ್ನು , ಅಂಗಡಿಮಾಲೀಕ ಪೋಲಿಸರಿಗೆ ಹಸ್ತಾಂತರಿಸಿದರು.

#ಚಲನಚಿತ್ರ ನೋಡಿ ಯಾರೂ ಅಷ್ಟೊಂದು ಹಾಳಾಗಲ್ಲ ನಿಜ. ಆದರೆ ಕೆಲವು ಮುಗ್ದರಲ್ಲಿ ಮುಗ್ದರು ಅಚಾತುರ್ಯ ಸೃಷ್ಟಿಸಬಹುದು. ಇಂತಹಾ ಜನರು ಸಮಾಜದ ಒಂದು ಭಾಗ. ವಾರ್ತಾ ಮಾಧ್ಯಮದವರು ಕೆಲಸಕ್ಕೆ ಬಾರದ , ಸಾರ್ವಜನಿಕ ಹಿತದೃಷ್ಟಿ ಇಲ್ಲದ ಒಂದೇ ಸುದ್ದಿ ಸಾವಿರಾರು ಬಾರಿ ಬಿತ್ತರಿಸುವುದರಿಂದ , ನೋಡುವ ಜನರೊಳಗೆ ಅಪ್ರಭುದ್ದತೆಯ ವೇಗ ಯಾವ ಸಂಚಕಾರಿ ಆಘಾತದ ಪಘಾತ ತಂದಿಡಬಹುದೋ ? ಎಂಬುದು ಭೀಭತ್ಸತೆಯ ಕಾರ್ಮೋಡವಾಗಿ ಕಾಣುತ್ತಿದೆ.

ನಿಮ್ಮವ ನಲ್ಲ
ರೂಪು

( ಈ ವಿಷಯ FBತುಣುಕಿನಿಂದ ಸಿಕ್ಕಿತು. ನಾನು 2002ರಿಂದ ಯಾವುದೇ ಕನ್ನಡ ಖಾಸಗಿ ವಾರ್ತಾ ಮಾಧ್ಯಮ ನೋಡಲ್ಲ. ಬರೇ ಚಂದನ ವಾರ್ತೆ ನೋಡುವೆ)


  • ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading